ನವದೆಹಲಿ, ಜನವರಿ 12: ಶತ್ರುವೆಂದು ಪರಿಗಣಿಸಲಾದ ದೇಶಕ್ಕೆ ಹೋಗಿ ನೆಲಸಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಆಸ್ತಿ ಪಾಲನ್ನು (Enemy property shares) ಸರ್ಕಾರ ಮಾರುತ್ತಿದೆ. ಮೊದಲ ಹಂತದಲ್ಲಿ 84 ಕಂಪನಿಗಳಲ್ಲಿರುವ 2.91 ಲಕ್ಷ ಶತ್ರು ಷೇರುಗಳನ್ನು ಹರಾಜಿಗಿಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ 20 ಕಂಪನಿಗಳ 1.88 ಲಕ್ಷ ಷೇರುಗಳನ್ನು ಗುರುತಿಸಿ ಮಾರಲು ಮುಂದಾಗಿದೆ. ಸರ್ಕಾರ ಈಗಾಗಲೇ ಬಿಡ್ಗೆ ಆಹ್ವಾನಿಸಿ ಪಬ್ಲಿಕ್ ನೋಟೀಸ್ ಪ್ರಕಟಿಸಿದೆ.
ಭಾರತದ ನಾಗರಿಕರು ತಮ್ಮ ಆಸ್ತಿಪಾಸ್ತಿಗಳನ್ನು ಬಿಟ್ಟು ಪಾಕಿಸ್ತಾನ ಮತ್ತು ಚೀನಾಗೆ ವಲಸೆ ಹೋಗಿ ಅಲ್ಲಿ ಪೌರತ್ವ ಪಡೆದಿದ್ದರೆ, ಅಂಥವರ ಆಸ್ತಿಯನ್ನು ಎನಿಮಿ ಪ್ರಾಪರ್ಟಿ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ 1947ರಿಂದ 1962ರ ಅವಧಿಯಲ್ಲಿ ವಲಸೆ ಹೋದವರು ವಿವಿಧ ಕಂಪನಿಗಳಲ್ಲಿ ಹೊಂದಿದ್ದ ಷೇರುಪಾಲು ಇದಾಗಿದೆ. ಇಂಥ 2,91,536 ಷೇರುಗಳು ಸದ್ಯಕ್ಕೆ ಕಸ್ಟಡಿಯನ್ ಆಫ್ ಎನಿಮಿ ಪ್ರಾಪರ್ಟೀಸ್ ಆಫ್ ಇಂಡಿಯಾ (ಸಿಇಪಿಐ) ಸಂಸ್ಥೆಯ ಸುಪರ್ದಿಯಲ್ಲಿದೆ. ಇದರಲ್ಲಿ ಮೊದಲ ಹಂತದಲ್ಲಿ 1.88 ಲಕ್ಷ ಷೇರುಗಳನ್ನು ಮಾರಲಾಗುತ್ತಿದೆ. ಇಲ್ಲಿ ಕಂಪನಿಗಳ ಷೇರುಗಳು ಮಾತ್ರವಲ್ಲ ಜಮೀನು, ಕಟ್ಟಡ, ಒಡವೆ ಇತ್ಯಾದಿ ಆಸ್ತಿಯೂ ಸೇರಿರಬಹುದು.
ಸರ್ಕಾರ ಕರೆದಿರುವ ಬಿಡ್ನಲ್ಲಿ ರಿಸರ್ವ್ ಪ್ರೈಸ್ ನಿಗದಿ ಮಾಡಿದೆ. ಇದಕ್ಕಿಂತ ಕಡಿಮೆ ದರ ಕೋಟ್ ಮಾಡುವ ಬಿಡ್ಗಳನ್ನು ತಿರಸ್ಕರಿಸಲಾಗುತ್ತದೆ. ಅತಿ ಹೆಚ್ಚು ಬೆಲೆ ಕೋಟ್ ಮಾಡುವ ಬಿಡ್ಡರ್ಗಳಿಗೆ ಷೇರುಗಳನ್ನು ಕೊಡಲಾಗುತ್ತದೆ.
ನಿರ್ಗತಿಕವಾಗಿ ಬಿದ್ದಿದ್ದ ಈ ಆಸ್ತಿಗಳಿಂದ ಯಾವ ಅನುಕೂಲಗಳು ಆಗುತ್ತಿಲ್ಲ. ಚರಾಸ್ತಿಗಳನ್ನು ಮಾರಿದರೆ ಸರ್ಕಾರಕ್ಕೂ ಆದಾಯ ಬಂದಂತಾಗುತ್ತದೆ. ಈ ಹಿಂದೆ ಕೆಲ ಬಾರಿ ಶತ್ರು ಆಸ್ತಿಗಳನ್ನು ಸರ್ಕಾರ ಮಾರಿ ನೂರಾರು ಕೋಟಿ ರೂ ಹಣ ಆದಾಯ ಪಡೆದಿದೆ. ಇದನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲು ಸಾಧ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ