Rupee Hits All Time Low: ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ 77.31 ಮುಟ್ಟಿದ ರೂಪಾಯಿ ಮೌಲ್ಯ
ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಮೇ 9, 2022ರ ಸೋಮವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿತು. ಆ ಬಗ್ಗೆ ವಿವರ ಇಲ್ಲಿದೆ.
ಹಣದುಬ್ಬರದ (Inflation) ಆತಂಕದ ಮಧ್ಯೆ ಜಾಗತಿಕ ಷೇರುಗಳಲ್ಲಿನ ನಷ್ಟವನ್ನು ಅನುಸರಿಸಿ ಮೇ 9ನೇ ತಾರೀಕಿನ ಸೋಮವಾರದಂದು ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಕುಸಿತವನ್ನು ಕಂಡಿದೆ. ಬೆಳಿಗ್ಗೆ 9.10ರ ಹೊತ್ತಿಗೆ ರೂಪಾಯಿ ಕರೆನ್ಸಿಯು ಡಾಲರ್ ವಿರುದ್ಧ 77.28ಕ್ಕೆ ವಹಿವಾಟು ನಡೆಸುತ್ತಿತ್ತು. ಅದರ ಹಿಂದಿನ ಮುಕ್ತಾಯದ 76.93ಕ್ಕಿಂತ ಶೇ 0.48ರಷ್ಟು ಮೌಲ್ಯ ಇಳಿಕೆ ಆಗಿದೆ. ಡಾಲರ್ ವಿರುದ್ಧ ರೂಪಾಯಿ ಸೋಮವಾರದಂದು 77.06ರಲ್ಲಿ ಪ್ರಾರಂಭವಾಯಿತು ಮತ್ತು 77.31ಕ್ಕೆ ತಲುಪಿತು. ಕಳೆದ ಬಾರಿ ಮಾರ್ಚ್ 7, 2022ರಂದು ಡಾಲರ್ ವಿರುದ್ಧ ರೂಪಾಯಿ 76.98ರ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಹಣದುಬ್ಬರವನ್ನು ನಿಭಾಯಿಸಲು ಫೆಡರಲ್ ರಿಸರ್ವ್‌ನ (ಅಮೆರಿಕದ ಕೇಂದ್ರ ಬ್ಯಾಂಕ್) ಬಡ್ಡಿದರ ಹೆಚ್ಚಳವು ಸಾಕೆ ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದರಿಂದ ಜಾಗತಿಕ ಮಾರುಕಟ್ಟೆಗಳು ಕುಸಿಯಿತು ಮತ್ತು ಚೀನಾದ ನಾಯಕರು ತಮ್ಮ ಶೂನ್ಯ-ಕೊವಿಡ್ ನಿಲುವನ್ನು ಅನುಮಾನಿಸದಂತೆ ಎಚ್ಚರಿಕೆ ನೀಡಿದ್ದಾರೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಅದರ ಬಡ್ಡಿದರಗಳನ್ನು ಹೆಚ್ಚಿಸುವಾಗ ಆರ್ಥಿಕ ಹಿಂಜರಿತದ ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಸಿದೆ.
ಹೆಚ್ಚಿನ ಕಚ್ಚಾ ತೈಲ ಬೆಲೆಗ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಅವಧಿಯ ಅನಿಶ್ಚಿತತೆಯು ಜಾಗತಿಕವಾಗಿ ನಿರಂತರ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ವಿದೇಶಿ ಹೂಡಿಕೆದಾರರು ಮಾರಾಟ ಮುಂದುವರಿಸಿದ ನಂತರವೂ ಕರೆನ್ಸಿಯ ಕುಸಿತವಾಗಿದೆ. ಈಕ್ವಿಟಿಗಳಲ್ಲಿ ಸುಮಾರು 22.31 ಶತಕೋಟಿ ಯುಎಸ್ಡಿ ಮಾರಾಟ ಮಾಡುವ ಮೂಲಕ ಎಫ್‌ಐಐಗಳು (ವಿದೇಶಿ ಸಾಂಸ್ಥಿಕ ಹೂಡಿಕೆದಾರರು) ಸತತ ಏಳನೇ ತಿಂಗಳಿಗೆ ನಿವ್ವಳ ಮಾರಾಟಗಾರರಾಗಿದ್ದಾರೆ. ದೇಶೀಯವಾಗಿ ಮುಂದಿನ ಆರು ತಿಂಗಳಲ್ಲಿ ಹಣದುಬ್ಬರವು ತನ್ನ ಕಡ್ಡಾಯ ಗುರಿಯನ್ನು ಮೀರುತ್ತದೆ ಎಂಬ ಆತಂಕದ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಹೆಚ್ಚಳವನ್ನು ವಿಸ್ತರಿಸಬಹುದು, ಆದರೆ ಜೂನ್ ಸಭೆಯಲ್ಲಿ ಮೂರು ತ್ರೈಮಾಸಿಕ ಅಂಶಗಳ ಹೆಚ್ಚಳವು ಸಾಧ್ಯವಿಲ್ಲ.
10 ವರ್ಷಗಳ ಬಾಂಡ್ ಇಳುವರಿಯು 3 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿ, ಶೇ 7.484ಕ್ಕೆ ತಲುಪಿದೆ. ಕಳೆದ ವಾರ ಆರ್‌ಬಿಐ ಅನಿರೀಕ್ಷಿತ ದರ ಏರಿಕೆಯ ನಂತರ ಇಳುವರಿ 35 ಬೇಸಿಸ್ ಪಾಯಿಂಟ್ಸ್ ಹೆಚ್ಚಾಗಿದೆ. “ಫೆಡ್‌ನ ನಿರೀಕ್ಷಿತ ಬಡ್ಡಿದರ ಹೆಚ್ಚಳ ಮತ್ತು ಅಮೆರಿಕದ ಆರ್ಥಿಕತೆಗೆ ಅನುಕೂಲಕರ ದೃಷ್ಟಿಕೋನವು ದೇಶೀಯ ಬಂಡವಾಳ ಮಾರುಕಟ್ಟೆಗಳಿಂದ ನಿಧಿಯ ಹೊರಹರಿವನ್ನು ಉತ್ತೇಜಿಸುತ್ತದೆ. ಜನವರಿ 2021ರ ನೀತಿಯಿಂದ, ಫೆಡ್ ದರ ಹೆಚ್ಚಳವನ್ನು ಸೂಚಿಸಿದಾಗ ಮತ್ತು ಅದರ ಆಯವ್ಯಯವನ್ನು ಕುಗ್ಗಿಸುವ ಕಡೆಗೆ ಚಲಿಸಿದಾಗ ನಿವ್ವಳ ಹೊರಹರಿವು ದೇಶೀಯ ಬಂಡವಾಳ ಮಾರುಕಟ್ಟೆಯು 19 ಶತಕೋಟಿ ಯುಎಸ್ಡಿಯಷ್ಟಿದೆ. ಹೆಚ್ಚಿದ ಹೊರಹರಿವು ಮತ್ತು ವ್ಯಾಪಾರ ಕೊರತೆಯು ರೂಪಾಯಿಯನ್ನು ಮತ್ತಷ್ಟು ಒತ್ತಡಕ್ಕೆ ನೂಕಬಹುದು,” ಎಂದು ಹೂಡಿಕೆದಾರರ ಟಿಪ್ಪಣಿಯಲ್ಲಿ ಎಡೆಲ್ವೀಸ್ ವೆಲ್ತ್ ರೀಸರ್ಚ್ ತಿಳಿಸಿದೆ.
“ಹಣಕಾಸು ನೀತಿಯ ಮೇಲಿನ ಪರಿಣಾಮಗಳ ಪರಿಭಾಷೆಯಲ್ಲಿ ಹೇಳುವುದಾದರೆ, ಆರ್ಬಿಐನ ವಿತ್ತೀಯ ನೀತಿ ಕ್ರಮವು ಪ್ರಾಥಮಿಕವಾಗಿ ಹಣದುಬ್ಬರ ಮತ್ತು ಬೆಳವಣಿಗೆಯ ದೇಶೀಯ ಪರಿಗಣನೆಗಳಿಂದ ಮುನ್ನಡೆಯುತ್ತದೆ. ಈಚಿನ ಅನಿರೀಕ್ಷಿತ ಬಡ್ಡಿದರ ಹೆಚ್ಚಳದ ಮುಂದುವರಿಕೆಯಲ್ಲಿ ಆರ್‌ಬಿಐ ಮುಂಬರುವ ದಿನಗಳಲ್ಲಿ ದರ ಏರಿಕೆಗಳ ಸರಣಿಯನ್ನು ಕೈಗೊಳ್ಳಲು ಯೋಜಿಸಲಾಗಿದೆ. ಹಣಕಾಸು ವರ್ಷ 2023ಕ್ಕಾಗಿ ನಾವು 60-70 ಬಿಪಿಎಸ್ ದರ ಹೆಚ್ಚಳವನ್ನು ನಿರೀಕ್ಷಿಸುತ್ತೇವೆ. ಮುಂಬರುವ ದರ ಹೆಚ್ಚಳದ ಹೊರತಾಗಿಯೂ ಹಣಕಾಸು ವರ್ಷ 2023ನಲ್ಲಿನ ಸಾಂಕ್ರಾಮಿಕ-ಪೂರ್ವ ಮಟ್ಟವನ್ನು (ಶೇ 5.15) ಮೀರಿದ ದರಗಳ ಸಾಧ್ಯತೆಯು ನಮ್ಮ ದೃಷ್ಟಿಯಲ್ಲಿ ಕಡಿಮೆ ಆಗಿದೆ,” ಎಂದು ಎಡೆಲ್ವೀಸ್ ವರದಿ ಹೇಳಿದೆ.
ಅಂತರರಾಷ್ಟ್ರೀಯ ವ್ಯಾಪಾರ- ವಹಿವಾಟುಗಳು ಅಮೆರಿಕದ ಡಾಲರ್ನಲ್ಲೇ ಆಗುತ್ತವೆ. ಕಚ್ಚಾ ತೈಲ ಖರೀದಿ ಸೇರಿದಂತೆ ಇತರ ವಸ್ತುಗಳನ್ನು ಡಾಲರ್ ಮೂಲಕ ಕೊಳ್ಳಲಾಗುತ್ತದೆ. ಯಾವಾಗ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಕುಸಿಯುತ್ತದೆಯೋ ಆಗ ಖರೀದಿಗೆ ಹೆಚ್ಚು ಮೊತ್ತ ಭರಿಸಬೇಕಾಗುತ್ತದೆ. ಉತ್ಪಾದಕರಿಂದ ಮೊದಲುಗೊಂಡು, ವಿವಿಧ ಸ್ತರದಲ್ಲಿನ ವರ್ತಕರ ತನಕ ಇದರ ಪರಿಣಾಮ ಆಗುತ್ತದೆ. ತಮ್ಮ ಲಾಭದ ಮಾರ್ಜಿನ್ ಕಡಿಮೆ ಆಗುವಂಥ ಈ ಬೆಳವಣಿಗೆಗೆ ಪರಿಹಾರ ಎಂಬಂತೆ, ದರ ಹೆಚ್ಚಳದ ಮೂಲಕ ಸರಿತೂಗಿಸಲು ಯತ್ನಿಸುತ್ತಾರೆ. ಇದರ ಪರಿಣಾಮ ಜನ ಸಾಮಾನ್ಯರ ಮೇಲಾಗುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Mon, 9 May 22