ಟ್ಯಾರಿಫ್ ಭೀತಿಯಲ್ಲೂ ಸತತ ಏಳನೇ ಬಾರಿ ಏರಿದ ಭಾರತೀಯ ಷೇರುಪೇಟೆ; ಏನು ಕಾರಣ?
Reasons for rise in sensex: ಭಾರತದ ಷೇರುಪೇಟೆಯ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಸತತ ಏಳು ಸೆಷನ್ಸ್ ಏರಿಕೆ ಕಂಡಿವೆ. ಪ್ರಾಫಿಟ್ ಬುಕಿಂಗ್ ಮಧ್ಯೆಯೂ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಬೆಳೆಯುತ್ತಿದೆ. ಟ್ಯಾರಿಫ್ ಭಯ ಕಡಿಮೆ ಆಗಿರುವುದು ಸೇರಿದಂತೆ ಭಾರತದ ಆರ್ಥಿಕತೆಯ ಸಕಾರಾತ್ಮಕತೆ ಅಂಶವು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿರಬಹುದು ಎನ್ನಲಾಗುತ್ತಿದೆ.

ನವದೆಹಲಿ, ಏಪ್ರಿಲ್ 23: ಭಾರತದ ಷೇರು ಮಾರುಕಟ್ಟೆಯ (stock market) ಪ್ರಮುಖ ಸೂಚ್ಯಂಕಗಳು ಸತತ ಏರಿಕೆಯ ಗತಿ ಮುಂದುವರಿಸಿವೆ. ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು (Sensex, Nifty) ಸತತ ಏಳನೇ ಸೆಷನ್ ಗಳಿಕೆ ಕಂಡಿವೆ. ಸತತ ಐದು ತಿಂಗಳು ಕುಸಿತ ಕಂಡಿದ್ದ ಭಾರತದ ಷೇರು ಮಾರುಕಟ್ಟೆ ಏಪ್ರಿಲ್ ದ್ವಿತೀಯಾರ್ಧದಲ್ಲಿ ಹೊಸ ಉತ್ಸಾಹ ಗಿಟ್ಟಿಸಿದಂತಿದೆ. ಇವತ್ತು ಬುಧವಾರದ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕ್ಷೇತ್ರದ ಸ್ಟಾಕ್ಗಳು ಮಾತ್ರವೇ ಹಿನ್ನಡೆ ಕಂಡಿರುವುದು. ಉಳಿದೆಲ್ಲ ಸೆಕ್ಟರ್ಗಳು ಪಾಸಿಟಿವ್ ಆಗಿವೆ.
ಸೆನ್ಸೆಕ್ಸ್ ಕಳೆದ ಹಿಂದಿನ ಏಳು ಟ್ರೇಡಿಂಗ್ ದಿನಗಳಲ್ಲಿ 6,000ಕ್ಕೂ ಅಧಿಕ ಅಂಕಗಳನ್ನು ಗಳಿಸಿದೆ. ನಿಫ್ಟಿ ಕೂಡ ಗಣನೀಯವಾಗಿ ವೃದ್ಧಿಸಿದೆ. ಭಾರತದ ಷೇರು ಮಾರುಕಟ್ಟೆಯ ಈ ಪರಿ ಹೆಚ್ಚಳಕ್ಕೆ ಕೆಲ ಕಾರಣಗಳು ಮೇಲ್ನೋಟಕ್ಕೆ ಕಾಣುತ್ತವೆ.
ಟ್ಯಾರಿಫ್ ಭೀತಿ ಕಡಿಮೆ ಆಗಿದ್ದು…
ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 2ರಂದು ಎಲ್ಲಾ ದೇಶಗಳ ಮೇಲೆ ಆಮದು ಸುಂಕ ಕ್ರಮ ಘೋಷಿಸಿದ್ದರು. ಕೆಲ ದಿನಗಳ ಬಳಿಕ ಅವರು ಚೀನಾ ಹೊರತುಪಡಿಸಿ ಉಳಿದ ದೇಶಗಳಿಗೆ ಈ ಕ್ರಮವನ್ನು 90 ದಿನಗಳ ಅವಧಿಗೆ ನಿಲ್ಲಿಸಿದ್ದಾರೆ. ಅದಾದ ಬಳಿಕ ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ ಒಂದು ವಿಶ್ವಾಸ ಮೂಡಿಸಿದೆ.
ಇದನ್ನೂ ಓದಿ: 2025ರಲ್ಲಿ ಜಾಗತಿಕ ವ್ಯಾಪಾರ ಕುಂಠಿತ; ಗ್ಲೋಬಲ್ ಜಿಡಿಪಿಯೂ ಕುಸಿತ ಸಾಧ್ಯತೆ: ಡಬ್ಲ್ಯುಟಿಒ
ಚೀನಾ ಜೊತೆಗೂ ಮಾತುಕತೆ ನಡೆಸಲು ಟ್ರಂಪ್ ಮುಂದಾಗುವ ಮನಸ್ಸು ಮಾಡಿರುವುದೂ ಕೂಡ ಮಾರುಕಟ್ಟೆಯ ಉತ್ಸಾಹ ಹೆಚ್ಚಿಸಿದೆ.
ಹಾಗೆಯೇ, ಅಮೆರಿಕದ ಬಡ್ಡಿದರಗಳನ್ನು ನಿರ್ಧರಿಸುವ ಫೆಡರಲ್ ರಿಸರ್ವ್ ಸಂಸ್ಥೆಯ ಮುಖ್ಯಸ್ಥ ಜಿರೋಮ್ ಪೋವೆಲ್ ಅವರನ್ನು ಮೊದಲು ತೆಗೆದುಹಾಕುವುದಾಗಿ ಹೇಳುತ್ತಿದ್ದ ಟ್ರಂಪ್, ಈಗ ತಮ್ಮ ಮಾತನ್ನು ಹಿಂಪಡೆದಿದ್ದಾರೆ. ಇದೂ ಕೂಡ ಷೇರು ಮಾರುಕಟ್ಟೆಗೆ ಸಕಾರಾತ್ಮಕ ಬೆಳವಣಿಗೆ ಎನಿಸಿದೆ.
ಭಾರತೀಯ ಆರ್ಥಿಕತೆಯ ಮೇಲೆ ಇನ್ನೂ ಮಾಸದ ವಿಶ್ವಾಸ
ಜಾಗತಿಕವಾಗಿ ಎಲ್ಲಾ ದೇಶಗಳ ಆರ್ಥಿಕತೆಯ ಬೆಳವಣಿಗೆ ಸ್ವಲ್ಪ ಮಂದಗೊಳ್ಳುತ್ತಿದೆಯಾದರೂ, ಭಾರತದ ಅಗ್ರ ಪಟ್ಟ ಅಬಾಧಿತವಾಗಿರುತ್ತದೆ. ದೊಡ್ಡ ಆರ್ಥಿಕತೆಯ ದೇಶಗಳ ಪೈಕಿ ಭಾರತ ನಂಬರ್ ಒನ್ ಎನಿಸಲಿದೆ. 2025-26ರಲ್ಲಿ ಭಾರತದ ಜಿಡಿಪಿ ದರ ಶೇ. 6ಕ್ಕಿಂತಲೂ ಅಧಿಕ ಇರಬಹುದು. ಹೀಗಾಗಿ, ಭಾರತದ ಮಾರುಕಟ್ಟೆ ಬಗ್ಗೆ ಹೂಡಿಕೆದಾರರಿಗೆ ವಿಶ್ವಾಸ ಇನ್ನೂ ಉಳಿದಿದೆ.
ಇದನ್ನೂ ಓದಿ: ಚಿನ್ನದ ಬೆಲೆ ಎಷ್ಟು ದಿನ ಹೀಗೆ ಏರುತ್ತೆ? ಬೆಲೆ ಕಡಿಮೆ ಆಗೋ ಸಾಧ್ಯತೆ ಎಷ್ಟು? ಇಲ್ಲಿದೆ ಡೀಟೇಲ್ಸ್
ಉತ್ತಮ ಮಳೆ ಬೆಳೆ ಸಾಧ್ಯತೆ…
ಈ ಬಾರಿ ಭಾರತದಲ್ಲಿ ಹೆಚ್ಚಿನ ಕಡೆ ಸಹಜ ಮಳೆ ಬೆಳೆ ಇರಲಿದೆ. ಇದರಿಂದ ಹಣ್ಣು, ತರಕಾರಿ ಇತ್ಯಾದಿ ಆಹಾರವಸ್ತುಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಆಗುವ ಸಾಧ್ಯತೆ ಕಡಿಮೆ. ಹಣದುಬ್ಬರ ಲೆಕ್ಕಾಚಾರದಲ್ಲಿ ಆಹಾರವಸ್ತುಗಳ ಬೆಲೆ ಏರಿಕೆ ಪ್ರಧಾನವಾಗಿರುತ್ತದೆ. ಹೀಗಾಗಿ, ಹಣದುಬ್ಬರವು ನಿಯಂತ್ರಿತ ಸ್ಥಿತಿಯಲ್ಲೇ ಇರುತ್ತದೆ. ಇದು ಮಾರುಕಟ್ಟೆಗೆ ಪಾಸಿಟಿವ್ ಎಫೆಕ್ಟ್ ನೀಡಿದೆ.
ಈ ಮೇಲಿನ ಕಾರಣಗಳಷ್ಟೇ ಅಲ್ಲದೆ, ಭಾರತದ ಕಾರ್ಪೊರೇಟ್ ಗಳಿಕೆ, ಎಫ್ಐಐಗಳ ಹೂಡಿಕೆ ಒಳಹರಿವು ಇತ್ಯಾದಿ ಅಂಶಗಳು ಷೇರು ಮಾರುಕಟ್ಟೆಯನ್ನು ಉಬ್ಬಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Wed, 23 April 25