ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ (Fianacial Year) ಮೊದಲ ಐದು ತಿಂಗಳುಗಳಲ್ಲಿ ದೇಶದ ಗೋಧಿ ರಫ್ತು (Wheat Exports) ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡಿರುವುದು ಅಧಿಕೃತ ದತ್ತಾಂಶಗಳಿಂದ ತಿಳಿದುಬಂದಿದೆ. ಮೇ ಮಧ್ಯದಲ್ಲಿ ಗೋಧಿ ರಫ್ತಿಗೆ ಸರ್ಕಾರವು ಹಠಾತ್ ನಿಷೇಧ ಹೇರಿತ್ತು. ಆದರೆ ಕೆಲವು ದೇಶಗಳಿಗೆ ಮಾತ್ರ ರಫ್ತು ಮಾಡಲು ಅನುಮತಿ ನೀಡಿತ್ತು. 2022-23ನೇ ಹಣಕಾಸು ವರ್ಷದ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ದೇಶವು 43.50 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರಫ್ತು ಮಾಡಿರುವುದು ವಾಣಿಜ್ಯ ಇಲಾಖೆಯ ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.
ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ಆರಂಭವಾದ ಬಳಿಕ ಗೋಧಿ ರಫ್ತು ಹೆಚ್ಚಳವಾಗಿತ್ತು. ಬೇಡಿಕೆಯಲ್ಲಿಯೂ ಗಣನೀಯ ಹೆಚ್ಚಳವಾಗಿತ್ತು. ಏಪ್ರಿಲ್ನಲ್ಲಿ 14.71 ಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತು ಮಾಡಲಾಗಿತ್ತು. ಇದು ಮೇ ತಿಂಗಳಲ್ಲಿ ರಫ್ತು ನಿಷೇಧ ಹೇರಿದ ಬಳಿಕ 10.79 ಲಕ್ಷ ಮೆಟ್ರಿಕ್ ಟನ್ಗೆ ಇಳಿಕೆಯಾಗಿತ್ತು. ಆದಾಗ್ಯೂ, ಕಳೆದ ವರ್ಷ ಮೇ ತಿಂಗಳ ರಫ್ತಿಗೆ ಹೋಲಿಸಿದರೆ ಶೇಕಡಾ 164ರಷ್ಟು ಹೆಚ್ಚಾಗಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ 4.08 ಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತು ಮಾಡಲಾಗಿತ್ತು.
ಇದನ್ನೂ ಓದಿ: ರೂಪಾಯಿ ಕುಸಿತವಲ್ಲ, ಡಾಲರ್ ಬಲಗೊಳ್ಳುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಮೇ ತಿಂಗಳಲ್ಲಿ ಇಳಿಕೆಯಾಗಿದ್ದ ರಫ್ತು ಪ್ರಮಾಣ ಜೂನ್ನಲ್ಲಿ ಮತ್ತೂ ಕಡಿಮೆಯಾಗಿ 7.24 ಲಕ್ಷ ಮೆಟ್ರಿಕ್ ಟನ್ಗೆ ಬಂದಿತ್ತು. ಜುಲೈಯಲ್ಲಿ 4.94 ಲಕ್ಷ ಮೆಟ್ರಿಕ್ ಟನ್, ಆಗಸ್ಟ್ನಲ್ಲಿ 5.80 ಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತಾಗಿತ್ತು. 2021ರಲ್ಲಿ ಇದೇ ತಿಂಗಳುಗಳಲ್ಲಿ ಕ್ರಮವಾಗಿ 4.57 ಲಕ್ಷ ಮೆಟ್ರಿಕ್ ಟನ್, 3.75 ಲಕ್ಷ ಮೆಟ್ರಿಕ್ ಟನ್, 5.22 ಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತಾಗಿತ್ತು.
ಏಪ್ರಿಲ್ನಲ್ಲಿ ಬಾಂಗ್ಲಾದೇಶ, ಯುಕೆ ಸೇರಿದಂತೆ 44 ದೇಶಗಳಿಗೆ ಗೋಧಿ ರಫ್ತು ಮಾಡಲಾಗಿತ್ತು. ಮೇ ತಿಂಗಳಲ್ಲಿ ರಫ್ತು ನಿಷೇಧದ ಬಳಿಕ ಕೆಲವೇ ದೇಶಗಳಿಗೆ ಮಾತ್ರ ರಫ್ತು ಮಾಡಲಾಗಿತ್ತು. ಜೂನ್ನಲ್ಲಿ ಇಂಡೋನೇಷ್ಯಾ, ಬಾಂಗ್ಲಾದೇಶ, ಕೊರಿಯಾ, ಯುಎಇ ಹಾಗೂ ಅಂಗೋಲ ದೇಶಗಳಿಗೆ ಗೋಧಿ ರಫ್ತು ಮಾಡಲಾಗಿತ್ತು. ಸದ್ಯ ಇಂಡೋನೇಷ್ಯಾ ಭಾರತದಿಂದ ಅತಿಹೆಚ್ಚು ಗೋಧಿ ಆಮದು ಮಾಡಿಕೊಳ್ಳುತ್ತಿದೆ.
ದೇಶದಲ್ಲಿ ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಗೋಧಿ ರಫ್ತಿನ ಮೇಲೆ ನಿಷಧೇ ಹೇರಿತ್ತು. ಆದರೆ, ಬೇರೆ ದೇಶಗಳ ಆಹಾರ ಸುರಕ್ಷತೆಗಾಗಿ ಆಯಾ ದೇಶಗಳ ಮನವಿಯ ಮೇರೆಗೆ ಭಾರತ ಸರ್ಕಾರದ ಅನುಮತಿ ಪಡೆದು ರಫ್ತು ಮಾಡಲು ಅನುಮತಿ ನೀಡಿತ್ತು.