Inflation Down: ಮೇ ತಿಂಗಳ ಹಣದುಬ್ಬರ ಶೇ. 4.25; ಇನ್ನಷ್ಟು ಕಡಿಮೆ ಆಯಿತು ಬೆಲೆ ಏರಿಕೆ ಮಟ್ಟ
2023 May, Inflation 4.25%: ಭಾರತದಲ್ಲಿ ಹಣದುಬ್ಬರ ಸತತ ಮೂರನೇ ತಿಂಗಳೂ ಇಳಿಕೆಗೊಂಡಿದೆ. ಏಪ್ರಿಲ್ ತಿಂಗಳಲ್ಲಿ ಶೇ. 4.7ರಷ್ಟಿದ್ದ ಹಣದುಬ್ಬರ ಮೇ ತಿಂಗಳಲ್ಲಿ ಶೇ. 4.25ಕ್ಕೆ ಇಳಿದಿದೆ. ಆಹಾರ ವಸ್ತುಗಳ ಬೆಲೆ ಇಳಿಕೆಯು ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ.
ನವದೆಹಲಿ: ಮೇ ತಿಂಗಳ ವಾರ್ಷಿಕ ರೀಟೇಲ್ ಹಣದುಬ್ಬರ ದರ (Retail Inflation) ಶೇ. 4.25ರಷ್ಟು ಇದೆ ಎಂದು ಸರ್ಕಾರದ ದತ್ತಾಂಶ ತಿಳಿಸಿದೆ. ಹಿಂದಿನ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಶೇ. 4.7ರಷ್ಟಿತ್ತು. ಏಪ್ರಿಲ್ಗಿಂತಲೂ ಮೇ ತಿಂಗಳಲ್ಲಿ ಹಣದುಬ್ಬರ ಏರಿಕೆ ಮಟ್ಟ ಕಡಿಮೆ ಆಗಿದೆ. ಈ ವಾರ್ಷಿಕ ಹಣದುಬ್ಬರವು ಕಳೆದ ಎರಡು ವರ್ಷದಲ್ಲೇ ಕಡಿಮೆ ಎಂದು ಹೇಳಲಾಗಿದೆ. ಇನ್ನೂ ಮುಖ್ಯ ಸಂಗತಿ ಹಣದುಬ್ಬರ ಇಳಿಕೆಯ ಹಾದಿಯಲ್ಲಿರುವುದು ಇದು ಸತತ ಮೂರನೇ ತಿಂಗಳು. ಮಾರ್ಚ್ ತಿಂಗಳಿಂದ ಹಣದುಬ್ಬರ ಸತತವಾಗಿ ಇಳಿಯುತ್ತಾ ಬರುತ್ತಿದೆ.
ಆರ್ಬಿಐನ ಮೂಲ ಹಣದುಬ್ಬರ ಮಿತಿ ಗುರಿಯಾದ ಶೇ. 4ಕ್ಕೆ ಬಹಳ ಸಮೀಪಕ್ಕೆ ಮೇ ತಿಂಗಳ ಹಣದುಬ್ಬರ ಬಂದು ನಿಂತಿದೆ. ತರಕಾರಿ, ಬೇಳೆ ಕಾಳು, ಇಂಧನ ಬೆಲೆಗಳು ಕಡಿಮೆಗೊಂಡ ಪರಿಣಾಮವಾಗಿ ಹಣದುಬ್ಬರವು ಇಳಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಗ್ರಾಹಕ ಬೆಲೆಗಳ ಅನುಸೂಚಿ ಆಧಾರಿತವಾಗಿ ಹಣದುಬ್ಬರವನ್ನು ಅಳೆಯಲಾಗುತ್ತದೆ. ಇದರಲ್ಲಿ ಗ್ರಾಹಕ ಆಹಾರ ಬೆಲೆ ಸೂಚಿ (ಸಿಎಫ್ಪಿಐ) ಏಪ್ರಿಲ್ನಲ್ಲಿ ಶೇ. 3.84ರಷ್ಟು ಇದ್ದದ್ದು ಮೇ ತಿಂಗಳಲ್ಲಿ ಶೇ. 2.91ಕ್ಕೆ ಇಳಿದಿದೆ. ಇದು ಒಟ್ಟಾರೆ ರೀಟೇಲ್ ಇನ್ಫ್ಲೇಷನ್ ಕಡಿಮೆ ಆಗಲು ಪ್ರಮುಖ ಕಾರಣವಾಗಿದೆ. ಇನ್ನು, ಗ್ರಾಮೀಣ ಭಾಗದ ಹಣದುಬ್ಬರ ಶೇ. 4.17 ಇದ್ದರೆ ನಗರ ಭಾಗದ ಹಣದುಬ್ಬರ ಶೇ. 4.27ರಷ್ಟಿದೆ.
ಮೂರು ದಿನಗಳ ಹಿಂದೆ ರಾಯ್ಟರ್ನ್ಸ್ ನಡೆಸಿದ ಸಮೀಕ್ಷೆಯಲ್ಲಿ 45 ಆರ್ಥಿಕ ತಜ್ಞರು ಮೇ ತಿಂಗಳಲ್ಲಿ ಹಣದುಬ್ಬರ ಶೇ. 4.42ರಷ್ಟು ಇರಬಹುದು ಎಂದು ಶುಭ ಸೂಚನೆ ನೀಡಿದ್ದರು. ಆದರೆ, ಅದನ್ನೂ ಮೀರಿಸಿ ಹಣದುಬ್ಬರ ದರ ಕಡಿಮೆ ಆಗಿರುವುದು ಗಮನಾರ್ಹ.
ಆರ್ಥಿಕತೆಯ ಸ್ವಾಸ್ಥ್ಯ ದೃಷ್ಟಿಯಿಂದ ಹಣದುಬ್ಬರವನ್ನು ನಿರ್ದಿಷ್ಟ ಮಟ್ಟಕ್ಕೆ ಸೀಮಿತಗೊಳಿಸಲು ಪ್ರಯತ್ನಿಸಲಾಗುತ್ತದೆ. ಹಣದುಬ್ಬರ ಶೇ. 4 ರ ಆಸುಪಾಸಿನಲ್ಲಿ ಇರಬೇಕು. ಶೇ. 2ರಿಂದ ಶೇ. 6ರ ತಾಳಿಕೆಯ ಪರಿಮಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆರ್ಬಿಐಗೆ ಗುರಿಕೊಟ್ಟಿದೆ. ಆದರೆ, ಹಣದುಬ್ಬರ ಹಲವು ತಿಂಗಳು ತಾಳಿಕೆಯ ಮಿತಿ ಮೀರಿ ಮೇಲೆ ಹೋಗಿತ್ತು. ಅದಕ್ಕೆ ಕಡಿವಾಣ ಹಾಕಲು ಆರ್ಬಿಐ ಬಡ್ಡಿದರಗಳನ್ನು ಸತತವಾಗಿ ಹೆಚ್ಚಿಸುತ್ತಾ ಬಂದಿತ್ತು. ಕಳೆದ 2 ತಿಂಗಳಿಂದ ಹಣದುಬ್ಬರ ಶೇ. 6ಕ್ಕಿಂತ ಕಡಿಮೆ ಇದೆ. ಆರ್ಬಿಐ ತನ್ನ ಬಡ್ಡಿ ದರ ಏರಿಕೆ ಕ್ರಮಕ್ಕೂ ಅಲ್ಪವಿರಾಮ ಹಾಕಿದೆ. ಹಣದುಬ್ಬರ ಹೀಗೇ ಕೆಳಗೆ ಇಳಿಯುತ್ತಾ ಹೋದರೆ ಆರ್ಬಿಐ ಕೂಡ ಬಡ್ಡಿ ದರ ಇಳಿಕೆಗೆ ಮುಂದಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ