30 Years Of Liberalisation: 2 ಕೋಟಿ ರೂ.ಗೆ ಖರೀದಿಸಲು ಬಂದಿದ್ದ ಇನ್ಫೋಸಿಸ್​​ ಬಂಡವಾಳ ಈಗ 6.5 ಲಕ್ಷಕೋಟಿ ಎಂದು ನೆನಪಿಸಿದ ಎನ್​ಆರ್​ಎನ್

ಜುಲೈ 24, 1991ರಂದು ಭಾರತದಲ್ಲಿ ಉದಾರೀಕರಣ ಘೋಷಣೆ ಆಯಿತು. ಅದಕ್ಕೂ ಮುಂಚಿನ ಮತ್ತು ನಂತರದ ಬೆಳವಣಿಗೆ ಬಗ್ಗೆ ಇನ್ಫೋಸಿಸ್ ಸಹಸಂಸ್ಥಾಪಕರ ಎನ್​.ಆರ್.ನಾರಾಯಣಮೂರ್ತಿ ಮಾತನಾಡಿದ್ದಾರೆ.

30 Years Of Liberalisation: 2 ಕೋಟಿ ರೂ.ಗೆ ಖರೀದಿಸಲು ಬಂದಿದ್ದ ಇನ್ಫೋಸಿಸ್​​ ಬಂಡವಾಳ ಈಗ 6.5 ಲಕ್ಷಕೋಟಿ ಎಂದು ನೆನಪಿಸಿದ ಎನ್​ಆರ್​ಎನ್
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಷನ್ ಚೇರ್ಮನ್ ಸುಧಾಮೂರ್ತಿ ಎರಡನೇ ಹಂತದಲ್ಲಿ ಲಸಿಕೆ ಪಡೆದದ್ದು (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jul 20, 2021 | 6:19 PM

ಇದೇ ಜುಲೈ 24ನೇ ತಾರೀಕಿಗೆ ಭಾರತದಲ್ಲಿ ಉದಾರೀಕರಣ (Liberalisation) ಬಂದು 30 ವರ್ಷ ಪೂರ್ತಿ ಆಗುತ್ತದೆ. ಈ ಅವಧಿಯಲ್ಲಿ ಅನೇಕ ಆರ್ಥಿಕ ಸುಧಾರಣೆಗಳು ಆಗಿವೆ. ಆದರೆ ಅದನ್ನು ಉದಾಹರಣೆ ಸಹಿತ ವಿವರಿಸುವಂಥ ಸಂದರ್ಶನವೊಂದನ್ನು ಇನ್ಫೋಸಿಸ್ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಎನ್​.ಆರ್.ನಾರಾಯಣಮೂರ್ತಿ ಅವರು ಮನಿಕಂಟ್ರೋಲ್ ಜತೆಗೆ ಹೇಳಿಕೊಂಡಿದ್ದಾರೆ. ಈಗ 30ರ ಹರೆಯದಲ್ಲಿ ಇರುವವರಿಗೆ ಕೇಳಿದರೂ ಹೀಗಿತ್ತಾ ಪರಿಸ್ಥಿತಿ ಎಂದು ಉದ್ಗಾರ ತೆಗೆಯುವಂಥ ದಿನಗಳವು ಎಂಬುದು ನಾರಾಯಣಮೂರ್ತಿ ಅವರ ಮಾತುಗಳಲ್ಲೇ ಗೊತ್ತಾಗುತ್ತದೆ. 1981ರಲ್ಲಿ ಆರಂಭವಾದ ಕಂಪೆನಿಯನ್ನು ಖರೀದಿಸುವುದಕ್ಕೆ 1990ನೇ ಇಸವಿಯಲ್ಲಿ 2 ಕೋಟಿ ರೂಪಾಯಿ ಆಫರ್ ನೀಡಲಾಗಿತ್ತಂತೆ. ಆದರೆ ಅದಕ್ಕೆ ಒಪ್ಪಿಕೊಳ್ಳದೆ ಮುಮದುವರಿದ ಕಾರಣಕ್ಕೆ ಇವತ್ತಿಗೆ ಇನ್ಫೋಸಿಸ್ ಮಾರುಕಟ್ಟೆ ಬಂಡವಾಳ ಮೌಲ್ಯ 6.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿದೆ.

ಇನ್ಫೋಸಿಸ್​ನಂಥ ಕಂಪೆನಿಗಳಿಗೆ ಈಗ ಸರ್ಕಾರದ ಮೇಲೆ ಆತುಕೊಂಡೇ ಇರಬೇಕು ಎಂಬ ಮರ್ಜಿ ಇಲ್ಲ. ಅಥವಾ ಕಂಪ್ಯೂಟರ್ ಆಮದು ಮಾಡಿಕೊಳ್ಳುವುದಕ್ಕೆ, ವಿದೇಶ ಪ್ರವಾಸಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ಬೇಕಿಲ್ಲ. ಇನ್ನು ಎಂಪ್ಲಾಯೀಸ್ ಸ್ಟಾಕ್ ಆಪ್ಷನ್ ಪ್ಲಾನ್ ಮೂಲಕ ಉದ್ಯೋಗಿಗಳು ಲಕ್ಷಾಧಿಪತಿಗಳು, ಕೋಟ್ಯಧಿಪತಿಗಳಾಗಿದ್ದಾರೆ. ಈ ಸಂದರ್ಶನದಲ್ಲಿ ನಾರಾಯಣಮೂರ್ತಿ ಅವರು ಹೇಳಿರುವಂಥ ಆಯ್ದ ಭಾಗವನ್ನಷ್ಟೇ ಇಲ್ಲಿ ನೀಡಲಾಗುತ್ತಿದೆ.

ನಮ್ಮ ಕನಸು, ಗುರಿ, ಉದ್ದೇಶ, ಭರವಸೆ, ಸಾಧ್ಯತೆಗಳು, ಅವಕಾಶ ಎಲ್ಲವೂ ಸಣ್ಣದಿದ್ದವು. ಬೆಂಗಳೂರು ದಕ್ಷಿಣದಲ್ಲಿ ಇರುವ ಜಯನಗರದಲ್ಲಿ ನಮ್ಮದೊಂದು ಸಣ್ಣ ಕಚೇರಿ ಇತ್ತು. ನಮ್ಮ ಕಂಪ್ಯೂಟರ್​ಗಳು, ಅವುಗಳ ಸಲಕರಣೆಗಳು ಮತ್ತು ಸಾಫ್ಟ್​ವೇರ್​ ಇವುಗಳ ಆಮದಿಗೆ ಲೈಸೆನ್ಸ್​ ಪಡೆಯುವ ಸಲುವಾಗಿ ದೆಹಲಿಗೆ ಪ್ರಯಾಣ ಮಾಡುವುದಕ್ಕೆ ನಮ್ಮ ಹೆಚ್ಚಿನ ಸಮಯ ಹೋಗುತ್ತಿತ್ತು. ಭಾರತದಲ್ಲಿ ಅಗತ್ಯವಾದ ಹಾರ್ಡ್​ವೇರ್​ ಇಲ್ಲದ್ದರಿಂದ ವಿದೇಶಗಳಲ್ಲಿ ಪ್ರಾಜೆಕ್ಟ್ಸ್ ಮಾಡುವ ನಮಗಿಂತ ಕಿರಿಯ ಸಹೋದ್ಯೋಗಿಗಳಿಗೆ ವಿದೇಶೀ ವಿನಿಮಯ (ಫಾರಿನ್ ಎಕ್ಸ್​ಚೇಂಜ್- ವಿದೇಶೀ ಕರೆನ್ಸಿ) ಪಡೆಯುವುದಕ್ಕೆ ಮುಂಬೈನ ಆರ್​ಬಿಐ ಕಚೇರಿಯಲ್ಲಿ ಹೆಚ್ಚು ಸಮಯ ಆಗುತ್ತಿತ್ತು. ಆ ದಿನಗಳಲ್ಲಿ ಕಂಪ್ಯೂಟರ್​ಗಳು ಆಮದು ಮಾಡಿಕೊಳ್ಳುವುದು ಅಂದರೆ ಬಹಳ ಹಿಂಸೆಯಾಗುತ್ತಿತ್ತು. ಬ್ಯಾಂಕ್​ಗಳಿಗೆ ಸಾಫ್ಟ್​ವೇರ್ ಅಂದರೆ ಅರ್ಥವಾಗುತ್ತಿರಲಿಲ್ಲ ಮತ್ತು ಫಿಸಿಕಲ್ (ಭೌತಿಕವಾದ) ಕೊಲ್ಯಾಟರಲ್ ಕೇಳುತ್ತಿದ್ದರು. ನಮಗೆ ಬ್ಯಾಂಕ್​ಗಳಿಂದ ಟರ್ಮ್ ಲೋನ್ ಅಥವಾ ವರ್ಕಿಂಗ್ ಕ್ಯಾಪಿಟಲ್ ಯಾವುದೂ ಸಿಕ್ಕುತ್ತಿರಲಿಲ್ಲ.

ಟೆಲಿಫೋನ್ ಸಂಪರ್ಕ ಸಿಗುವುದಕ್ಕೂ ಕಷ್ಟದ ದಿನಗಳು ಗ್ರಾಹಕರು ನಮ್ಮಿಂದ ಕಚೇರಿಯಲ್ಲಿ ಟೆಲಿಫೋನ್ ಸಂಪರ್ಕ ಇರಬೇಕು ಎಂದು ಬಯಸಿದ್ದರು. ಆ ಮೂಲಕ ಪ್ರತಿ ದಿನ ನಮ್ಮನ್ನು ಸಂಪರ್ಕಿಸಬಹುದು. ಫ್ಯಾಕ್ಸ್ ಕಳಿಸಬಹುದು ಮತ್ತು ಪ್ರಾಜೆಕ್ಟ್ ಪ್ರಗತಿಯ ಬಗ್ಗೆ ತಿಳಿಯಬಹುದು ಎಂಬ ನಿರೀಕ್ಷೆ ಅವರು. ಆದರೆ ಆಗ ಟೆಲಿಫೋನ್ ಸಂಪರ್ಕ ನೀಡುವುದಕ್ಕೆ ಆದ್ಯತೆ ಏನು ಗೊತ್ತಾ? ಅಧಿಕೃತವಾಗಿ ಕಚೇರಿಗಳಿಗೆ ಅನ್ನೋದು ನಿಜ. ಆ ನಂತರ ಸರ್ಕಾರಿ ಅಧಿಕಾರಿಗಳ ಮನೆಗೆ. ಅದಾದ ಮೇಲಿನ ಪ್ರಾತಿನಿಧ್ಯ ಯಾರಿಗೆ ಗೊತ್ತಾ? ಸರ್ಕಾರದ ನಿವೃತ್ತ ಅಧಿಕಾರಿಗಳ ಮನೆಗಳಿಗೆ. ಆಗ ನಮ್ಮ ಸ್ಥಿತಿ ಹೇಗಿತ್ತು ಅಂದರೆ, ನಮ್ಮ ಯಾವುದೇ ಯುವ ಸಂಸ್ಥಾಪಕ ಸಹೋದ್ಯೋಗಿಗಳ ಬಳಿಯೂ ಮನೆ, ಕಾರು, ಫೋನ್​ಗಳಂಥ ಆರ್ಥಿಕ ಬೆಳವಣಿಗೆ ಆಗಿರಲಿಲ್ಲ.

ಆಗ 1 ಮಿಲಿಯನ್​ ಡಾಲರ್​ಗೆ ನಮ್ಮ ಕಂಪೆನಿಯನ್ನು ಖರೀದಿಸುವ ಆಫರ್ ಬಂತು. ಅವತ್ತಿನ ವಿನಿಮಯ ದರಕ್ಕೆ ಹೋಲಿಸಿದರೆ 2 ಕೋಟಿ ರೂಪಾಯಿ. ಈ ಆಫರ್ ಬಂದಾಗ ನನ್ನ ಬಹುತೇಕ ಸಹೋದ್ಯೋಗಿಗಳು ಕಂಪೆನಿ ಮಾರುವುದಕ್ಕೆ ಉತ್ಸುಕರಾಗಿದ್ದರು. ಆದರೆ ಇವತ್ತಿಗೆ ಇನ್ಫೋಸಿಸ್ ಕಂಪೆನಿ ಮಾರುಕಟ್ಟೆ ಬಂಡವಾಳ ಮೌಲ್ಯ 6.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿದೆ. 1986ನೇ ಇಸವಿಯಲ್ಲಿ ಕೆ.ವಿ. ರಮಣಿ ಸಾಫ್ಟ್​ವೇರ್ ರಫ್ತು ವ್ಯವಹಾರದ ಬಗ್ಗೆ ಮಾತನಾಡಲು ಎರಡು ದಿನ ಫ್ರಾಂಕ್​ಫರ್ಟ್​ಗೆ, ಒಂದು ದಿನ ಪ್ಯಾರಿಸ್​ಗೆ ತೆರಳಬೇಕಿತ್ತು. ಅದಕ್ಕೆ ಚೆನ್ನೈ ಕಚೇರಿಗೆ ಅಪ್ಲೈ ಮಾಡಿದ್ದರು. ಆರ್​ಬಿಐನಿಂದ 15 ದಿನಗಳ ನಂತರ ಅನುಮತಿ ಸಿಕ್ಕಿತ್ತು. ಆದರೆ ಒಂದು ರಾತ್ರಿ ಫ್ರಾಂಕ್​ಫರ್ಟ್ ಮತ್ತು ಎರಡು ರಾತ್ರಿ ಪ್ಯಾರಿಸ್​ನಲ್ಲಿ ಕಳೆಯುವ ಪ್ರಸಂಗ ಬಂತು. ಆಗೆಲ್ಲ ವಿದೇಶ ಪ್ರವಾಸಕ್ಕೆ ತೆರಳಿದ ಮೇಲೆ ಅಲ್ಲಿ ಖರ್ಚು ಮಾಡಿದ ಕರೆನ್ಸಿ ಲೆಕ್ಕವನ್ನು ಆರ್​ಬಿಐಗೆ ನೀಡಬೇಕಿತ್ತು. ಆ ಬದಲಾವಣೆ ಬಗ್ಗೆ ಪ್ರಾಮಾಣಿಕವಾಗಿ ಮಾಹಿತಿ ನೀಡಿದರು. ಇದೇ ಕಾರಣಕ್ಕೆ ಆರ್​ಬಿಐನಿಂದ ಶೋಕಾಸ್ ನೋಟಿಸ್ ಪಡೆಯಬೇಕಾಯಿತು ರಮಣಿ.

ಎರಡು ತಲೆಮಾರಿನಷ್ಟು ಹಳೆಯ ವಷ್ತುವಿಗೆ ಹೆಚ್ಚಿನ ದರ ಪಾವತಿಸಬೇಕಿತ್ತು ಆರ್​ಬಿಐ ಮಂಡಳಿಯಲ್ಲಿ ನಾನು 15 ಅಥವಾ 20 ವರ್ಷದ ಹಿಂದೆ ಸದಸ್ಯನಾಗಿದ್ದಾಗ ಈ ಘಟನೆ ಬಗ್ಗೆ ಆಗಿನ ಗವರ್ನರ್ ಬಿಮಲ್ ಜಲಾನ್​ಗೆ ಹೇಳಿದ್ದೆ. ಅವರಿಗೆ ನಗು ತಡೆಯುವುದಕ್ಕೆ ಆಗಿರಲಿಲ್ಲ. ಕಂಪ್ಯೂಟರ್ ಆಮದಿಗೆ ನಾವು ಅಪ್ಲೈ ಮಾಡಿದಾಗ ಅದು ಎರಡರಿಂದ ಮೂರು ವರ್ಷ ತೆಗೆದುಕೊಂಡಿದೆ. 30ರಿಂದ 50 ಸಲ ದೆಹಲಿಗೆ ಭೇಟಿ ನೀಡಿದ್ದೇವೆ. ಆಗೆಲ್ಲ ಪ್ರತಿ ಆರು ತಿಂಗಳಿಗೊಮ್ಮೆ ಅಮೆರಿಕದಲ್ಲಿ ಟೆಕ್ನಾಲಜಿ ಅಪ್​ಡೇಟ್​ ಆಗುತ್ತಿತ್ತು. ನಮಗೆ ಕಂಪ್ಯೂಟರ್, ಡಿಸ್ಕ್ ಡ್ರೈವ್ ಆಮದಿಗೆ ಅನುಮತಿ ಸಿಗುವಷ್ಟರಲ್ಲಿ ಅಮೆರಿಕದಲ್ಲಿ ಆ ಉತ್ಪಾದಕರು ಹೊಸ ವರ್ಷನ್ ಡಿಸ್ಕ್ ಡ್ರೈವ್ ಅನ್ನು ಶೇ 50ರಷ್ಟು ಸಾಮರ್ಥ್ಯದೊಂದಿಗೆ ಉತ್ಪಾದನೆ ಮಾಡಿ, ಶೇ 30ರಷ್ಟು ಬೆಲೆ ಇಳಿಕೆ ಆಗಿರುತ್ತಿತ್ತು. ಅಮೆರಿಕಗಿಂತ ಕನಿಷ್ಠ ಎರಡು ತಲೆಮಾರು ಹಿಂದೆ ಉಳಿಯುತ್ತಿದ್ದ ಭಾರತವು ಹಳೆಯ ಉತ್ಪನ್ನಗಳಿಗೆ ಮೂವತ್ತರಿಂದ ನಲವತ್ತು ಪರ್ಸೆಂಟ್ ಹೆಚ್ಚು ಪಾವತಿ ಮಾಡುತ್ತಿತ್ತು.

ನರಸಿಂಹ ರಾವ್, ಡಾ. ಮನ್​ಮೋಹನ್ ಸಿಂಗ್, ಪಿ. ಚಿದಂಬರಂ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಸೇರಿ 1991ರಲ್ಲಿ ಮಂತ್ರದಂಡವನ್ನು ಬೀಸಿದರು. ನಮ್ಮ ಬಳಿ ಕನಸುಗಳಿದ್ದವು. ಆದರೆ ಸಣ್ಣ- ಸಣ್ಣ ವಿಷಯಗಳಿಗೂ ಸರ್ಕಾರದ ಅನುಮತಿ ಪಡೆಯಬೇಕಿತ್ತು. ಆದರೆ ಉದಾರೀಕರಣದ ನಂತರ ಬಹುತೇ ಅಡೆತಡೆಗಳು ನಿವಾರಣೆ ಆದವು. ದೆಹಲಿಯ ನಾರ್ತ್​ ಬ್ಲಾಕ್​ನ ಕಾರಿಡಾರ್​ಗಳಲ್ಲಿ ಎಲ್ಲಕ್ಕೂ ಎಡತಾಕಬೇಕಿದ್ದ ದಿನಗಳು ದೂರವಾದವು. ಯಾವುದೇ ದೇಶದಲ್ಲಿ ಸಂಪತ್ತು ಸೃಷ್ಟಿಯಾಗಬೇಕು ಅಂದರೆ ಅದು ಸರ್ಕಾರ ಮತ್ತು ಕಾರ್ಪೊರೇಟ್​ನಿಂದ. ಸರ್ಕಾರವು ಎಲ್ಲ ನಿರ್ಬಂಧಗಳನ್ನು ತೆಗೆದು ತಾರತಮ್ಯ ಮಾಡದ ನಿಯಂತ್ರಕ ಆಗಬೇಕು/ 1991ರ ಸುಧಾರಣೆ ಮೂಲಕ ಬಹುತೇಕವಾದ್ದನ್ನು ಭಾರತದ ಕೇಂದ್ರ ಸರ್ಕಾರ ಮಾಡಿತು. ಆ ನಂತರ ಬಂದ ಸರ್ಕಾರಗಳು ಅದೇ ದಾರಿಯಲ್ಲಿ ಮುಂದುವರಿದವು.

ಗುಮಾಸ್ತರು ಬಳಿ 10ರಿಂದ 15 ಕೋಟಿ ರೂ. ಆಸ್ತಿ ಇನ್ಫೋಸಿಸ್ ಕಂಪೆನಿಯಲ್ಲಿ ನಾವು ಮುಖ್ಯವಾಗಿ ಎಂಪ್ಲಾಯೀಸ್ ಸ್ಟಾಕ್ ಆಪ್ಷನ್ ಪ್ಲಾನ್ ತಂದೆವು. ದೀರ್ಘಾವಧಿಯಲ್ಲಿ ಕಂಪೆನಿ ಜತೆ ಇರುವ ಸಿಬ್ಬಂದಿಯನ್ನು ಗೌರವಿಸುವುದಕ್ಕೆ ನಾವು ಕಂಡುಕೊಂಡ ದಾರಿ ಅದು. ಮಹಾತ್ಮ ಗಾಂಧಿ ಅವರ ಮಾತಿನಂತೆಯೇ, ಅತ್ಯಂತ ಬಡ ಸಿಬ್ಬಂದಿಯನ್ನು ಗಮನದಲ್ಲಿ ಇಟ್ಟುಕೊಂಡು ತೆಗೆದುಕೊಂಡ ನಿರ್ಧಾರ ಇದೆ. ಹಲವು ಗುಮಾಸ್ತರು, ಕಂಪೆನಿಯ ಷೇರುಗಳನ್ನು ಹಾಗೇ ಇಟ್ಟುಕೊಟ್ಟಂಡವರು ಕನಿಷ್ಠ 10ರಿಂದ 15 ಕೋಟಿಗೆ ಇದ್ದಾರೆ. ಈ ತನಕ ಇನ್ಫೋಸಿಸ್ ಕಂಪೆನಿ 19 ಪರ್ಸೆಂಟ್ ಈಕ್ವಿಟಿಯನ್ನು ನೀಡಿದ್ದು, ಅದರ ಇವತ್ತಿನ ಮೌಲ್ಯ 1.3 ಲಕ್ಷ ಕೋಟಿ ಆಗುತ್ತದೆ. ಇವರೆಲ್ಲ ಸಹಸಂಸ್ಥಾಪಕ ಸಿಬ್ಬಂದಿ ಅಲ್ಲ. ಸಿಬ್ಬಂದಿ ಸಹ ಸರ್ಕಾರಕ್ಕೆ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಕಟ್ಟಿದ್ದಾರೆ.

ನಮ್ಮ ದೇಶದಲ್ಲಿ ಜನಸಂಖ್ಯೆ ದೊಡ್ಡದಿದೆ. ಆದರೆ ಕೆಲಸಕ್ಕೆ ಸೇರಿಸಿಕೊಳ್ಳುವುದಕ್ಕೆ ಬೇಕಾದ ಕೌಶಲ ಕಡಿಮೆ ಜನರಲ್ಲಿದೆ. ಪ್ರೋಗ್ರಾಮರ್​ಗಳಿರಲಿ, ಎಂಜಿನಿಯರ್​ಗಳು, ವೈದ್ಯರು, ಕೈಗಾರಿಕೆ ಕಾರ್ಮಿಕರು ಅತವಾ ಕುಶಲಕರ್ಮಿಗಳು ಕೌಶಲ ಕಡಿಮೆ ಇದೆ. ಅದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆ. ತರಗತಿಯಲ್ಲಿ ಕಲಿತಿದ್ದನ್ನು ಬಳಸಿ, ನಿಜವಾದ ಜಗತ್ತಿನಲ್ಲಿ ಸಮಸ್ಯೆ ಬಗೆಹರಿಸುವ ಕಡೆಗೆ ಇಲ್ಲಿನ ಶಿಕ್ಷಣ​ ಗಮನ ಹರಿಸಲ್ಲ. ಅಭಿವೃದ್ಧಿ ಶೀಲ ರಾಷ್ಟ್ರಗಳ ಶಿಕ್ಷಣ ಸಂಸ್ಥೆಗಳನ್ನು ಆಹ್ವಾನಿಸಿ, ಭಾರತದಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಕೇಳಬೇಕು. ಇಲ್ಲಿನ ಶಿಕ್ಷಕರನ್ನು ತರಬೇತುಗೊಳಿಸಬೇಕು. ಇಂಗ್ಲಿಷ್​ ಮೇಲೆ ನಮ್ಮ ಗಮನ ಮತ್ತೆ ಹಿಂತಿರುಗಬೇಕು. ಪುಸ್ತಕಗಳು, ಜರ್ನಲ್​ಗಳು ಮತ್ತು ವಿಕಿಪಿಡಿಯಾ ಸಹ ಇಂಗ್ಲಿಷ್​ನಲ್ಲಿ ಇರುತ್ತವೆ. ನಮಗೆ ಬೇಕೋ ಬೇಡವೋ ಕಾಲೇಜಿಗೆ ಹೋದ ಶಿಕ್ಷಿತ ಜನರಿಗೆ ಇಂಗ್ಲಿಷ್ ಜತೆ ಅಧಿಕೃತ ನಂಟಿರಬೇಕು. ನಾನು ಬೆಂಗಳೂರಿನಲ್ಲಿ ಹಲವು ಜನರನ್ನು ನೋಡಿದ್ದೇನೆ. ಪ್ರಾದೇಶಿಕ ಭಾಷೆಯಲ್ಲಿ ಪದವಿ ಮಾಡಿರುತ್ತಾರೆ. ಅವರಿಗೆ ಅರ್ಹತೆ ಇರುವುದಕ್ಕಿಂತ ಕಡಿಮೆ ಮಟ್ಟದ ಕೆಲಸ ಮಾಡಲು ಒತ್ತಡ ಹೇರಲಾಗುತ್ತದೆ. ಏಕೆಂದರೆ ಅವರಿಗೆ ಸುಲಲಿತವಾಗಿ ಇಂಗ್ಲಿಷ್ ಮಾತನಾಡಲು ಆಗಲ್ಲ ಎಂಬ ಕಾರಣಕ್ಕೆ. ನೇಮಕಾತಿಯಲ್ಲಿ ಫ್ಲೆಕ್ಸಿಬಲಿಟಿ ಇರಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದಾಗ ಇನ್ಸೆಂಟಿವ್ ಸೃಷ್ಟಿಸಬೇಕು.

ಇದನ್ನೂ ಓದಿ: 4 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಸಹ-ಸಂಸ್ಥಾಪಕನಿಗೆ ಉಡುಗೊರೆಯಾಗಿ ನೀಡಿದ Infosys!

Published On - 6:16 pm, Tue, 20 July 21

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು