ಇನ್ಫೋಸಿಸ್ ಸಿಬ್ಬಂದಿ, ಹತ್ತಿರ ಸಂಬಂಧಿಗಳಿಗೆ ಕಂಪೆನಿಯೇ ಭರಿಸಲಿದೆ ಕೊರೊನಾ ಲಸಿಕೆ ವೆಚ್ಚ

ಇನ್ಫೋಸಿಸ್ ಕಂಪೆನಿಯು ತನ್ನ ಸಿಬ್ಬಂದಿಗೆ ಹಾಗೂ ಅವರ ಹತ್ತಿರದ ಸಂಬಂಧಿಗಳಿಗೆ ಲಸಿಕೆ ಹಾಕಿಸಿಕೊಳ್ಳುವುದರ ವೆಚ್ಚವನ್ನು ಭರಿಸಲು ಮುಂದಾಗಿದೆ. ಇದಕ್ಕಾಗಿ ಹೆಲ್ತ್​ಕೇರ್ ಕಂಪೆನಿಯ ಸಹಭಾಗಿತ್ವಕ್ಕೆ ಎದುರು ನೋಡುತ್ತಿದೆ.

  • TV9 Web Team
  • Published On - 23:00 PM, 3 Mar 2021
ಇನ್ಫೋಸಿಸ್ ಸಿಬ್ಬಂದಿ, ಹತ್ತಿರ ಸಂಬಂಧಿಗಳಿಗೆ ಕಂಪೆನಿಯೇ ಭರಿಸಲಿದೆ ಕೊರೊನಾ ಲಸಿಕೆ ವೆಚ್ಚ
ಕೊರೊನಾ ಲಸಿಕೆ

ಸಿಬ್ಬಂದಿ ಮತ್ತು ಅವರ ಹತ್ತಿರದ ಸಂಬಂಧಿಗಳಿಗೆ ಕೊರೊನಾ ಲಸಿಕೆ ವೆಚ್ಚವನ್ನು ಬೆಂಗಳೂರು ಮೂಲದ ಸಾಫ್ಟ್​ವೇರ್ ರಫ್ತು ಕಂಪೆನಿ ಇನ್ಫೋಸಿಸ್ ಭರಿಸಲಿದೆ. ‘ಇನ್ಫೋಸಿಸ್ ಕಂಪೆನಿ ತನ್ನ ಸಿಬ್ಬಂದಿಗೆ, ಹತ್ತಿರದ ಸಂಬಂಧಿಗಳಿಗೆ ಭಾರತ ಸರ್ಕಾರದ ಒಪ್ಪಿಗೆ ನೀಡಿದ ನಿಯಮಾವಳಿ ಹಾಗೂ ಟೈಮ್​​ಲೈನ್ ಪ್ರಕಾರ ಲಸಿಕೆ ಹಾಕುವುದಕ್ಕೆ ಹೆಲ್ತ್​​ಕೇರ್ ಸಹಭಾಗಿಗಳನ್ನು ಎದುರು ನೋಡುತ್ತಿದ್ದೇವೆ. ಆರೋಗ್ಯ ಮತ್ತು ನೆಮ್ಮದಿಯನ್ನು ಗಮನದಲ್ಲಿ ಇಟ್ಟುಕೊಂಡು, ಕಂಪೆನಿ ಸಿಬ್ಬಂದಿಯ, ಅವರ ಹತ್ತಿರದ ಸಂಬಂಧಿಗಳ ಕೊರೊನಾ ಲಸಿಕೆ ವೆಚ್ಚವನ್ನು ಇನ್ಫೋಸಿಸ್ ಭರಿಸಲಿದೆ’ ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ಪ್ರವೀಣ್ ರಾವ್ ಅವರು ಮಾಧ್ಯಮವೊಂದರ ಪ್ರಶ್ನೆಗೆ ಹೇಳಿಕೆ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷದ ಆರಂಭದಲ್ಲಿ ಕೋವಿಡ್- 19 ಕಾಣಿಸಿಕೊಂಡಾಗ 40 ದೇಶಗಳಲ್ಲಿ ಕಾರ್ಯ ನಿರ್ವಹಿಸುವ ಇನ್ಫೋಸಿಸ್​ನ 2.4 ಲಕ್ಷ ಸಿಬ್ಬಂದಿ ವರ್ಕ್ ಫ್ರಮ್ ಹೋಮ್ ಮಾಡಿದ್ದರು. ಇತರ ಐಟಿ ಕಂಪೆನಿಗಳ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಮಾಡಿದ್ದರು. ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ.

‘ಕೋವಿಡ್ ಲಸಿಕೆ ಪಡೆಯಲು ಅರ್ಹರಿರುವ ಸಿಬ್ಬಂದಿಗೆ, ಅವರ ಅವಲಂಬಿತರ ಲಸಿಕೆ ವೆಚ್ಚವನ್ನು ಆಕ್ಸೆಂಚರ್ ಕಂಪೆನಿಯು ಭರಿಸುತ್ತದೆ. ವೈದ್ಯಕೀಯ ಅನುಕೂಲ ಕಾರ್ಯಕ್ರಮದ ಭಾಗವಾಗಿ ಇದನ್ನು ಒದಗಿಸಲಾಗುತ್ತದೆ. ನಮ್ಮ ಜನರ ತಾಳ್ಮೆ, ಧಾರಣಾ ಸಾಮರ್ಥ್ಯಕ್ಕೆ ಆಭಾರಿಗಳು. ಇಂಥ ಅಸಾಧಾರಣ ಸಮಯದಲ್ಲಿ ಒಟ್ಟಾಗಿ ಕೆಲಸ ಮಾಡಿ, ಎಲ್ಲವೂ ನಿರ್ವಹಿಸಿದ್ದೇವೆ’ ಎಂದು ಆಕ್ಸೆಂಚರ್ ಮುಖ್ಯಸ್ಥರು, ಕಾರ್ಯನಿರ್ವಾಹಕ ನಿರ್ದೇಶಕಿಯಾದ ರೇಖಾ ಮೆನನ್ ಹೇಳಿಕೆ ನೀಡಿದ್ದಾರೆ. ಆಕ್ಸೆಂಚರ್​ನಲ್ಲಿ 2 ಲಕ್ಷ ಸಿಬ್ಬಂದಿ ಇದ್ದಾರೆ.

ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 45 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಖಾಸಗಿಯಾಗಿ ದೊಡ್ಡ ಮಟ್ಟದಲ್ಲಿ ಉದ್ಯೋಗ ಒದಗಿಸುವ ಕ್ಷೇತ್ರ ಇದು. ಪರೋಕ್ಷ ಉದ್ಯೋಗ, ಉಳಿತಾಯ, ಹೂಡಿಕೆ, ಬಳಕೆ ಮೇಲೆ ಇದರ ಪ್ರಭಾವ ಹೆಚ್ಚಿದೆ. ಈಚಿನ ತ್ರೈಮಾಸಿಕದಲ್ಲಿ ಐ.ಟಿ. ಕಂಪೆನಿಗಳು ಉತ್ತಮ ಫಲಿತಾಂಶವನ್ನು ಪ್ರಕಟಿಸಿವೆ. ಈ ವರ್ಷ ಭಾರೀ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುವ ಯೋಜನೆ ಸಹ ಹಾಕಿಕೊಂಡಿವೆ.

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ಕಾರಣರಾದ ದಿನೇಶ್ ಕಲ್ಲಹಳ್ಳಿ ಸಂದರ್ಶನ