Moonlight: ಅವಧಿ ಮೀರಿದ ಒತ್ತಾಯದ ದುಡಿಮೆ ಸರಿಯೇ; ಮೂನ್ಲೈಟ್ಗೆ ಕಂಪನಿಗಳ ವಿರೋಧದ ಬೆನ್ನಿಗೇ ಉದ್ಯೋಗಿಗಳಿಂದ ಮರುಪ್ರಶ್ನೆ
ಮುಂದಿನ ದಿನಗಳಲ್ಲಿ ಉದ್ಯೋಗಿಗಳು ಕೆಲಸಕ್ಕೆ ಬರುವ ಮೊದಲು ‘ಮೂನ್ಲೈಟ್’ಗೆ ಅವಕಾಶ ಇದೆಯೇ ಎಂದು ಪ್ರಶ್ನಿಸಿ ಖಾತ್ರಿಪಡಿಸಿಕೊಳ್ಳುವ ಕಾಲ ಬರಬಹುದು.
Moonlight Controversy | ಒಬ್ಬನೇ ಉದ್ಯೋಗಿಯು ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶವಿಲ್ಲ. ಹೀಗೆ ಮಾಡಿರುವುದು ಬೆಳಕಿಗೆ ಬಂದರೆ ಅಂಥ ಉದ್ಯೋಗಿಯನ್ನು ವಜಾ ಮಾಡಬಹುದು ಎಂದು ದೇಶದ ಪ್ರಮುಖ ಐಟಿ ಕಂಪನಿ ಇನ್ಫೊಸಿಸ್ (Infosys) ನಿನ್ನೆ (ಸೆ 13) ಸ್ಪಷ್ಟಪಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ವಿಪ್ರೋ (Wipro) ಅಧ್ಯಕ್ಷ ರಿಶದ್ ಪ್ರೇಮ್ಜಿ (Rishd Premji) ಅವರು ‘ಮೂನ್ಲೈಟ್ ಎನ್ನುವುದು ಮೋಸ’ ಎಂದು ಆಗಸ್ಟ್ 20ರಂದು ಮಾಡಿದ್ದ ಟ್ವೀಟ್ ಅನ್ನು ಹಲವರು ನೆನಪಿಸಿಕೊಂಡಿದ್ದಾರೆ. ‘ಒಬ್ಬ ಉದ್ಯೋಗಿಯು ಕಾರ್ಮಿಕ ಕಾನೂನುಗಳಂತೆ ದಿನಕ್ಕೆ 8 ತಾಸು ಕೆಲಸ ಮಾಡಬೇಕು. ಆದರೆ ಟಾರ್ಗೆಟ್ ಅಥವಾ ಇತರ ಕಾರಣಗಳನ್ನು ಪರೋಕ್ಷವಾಗಿ ಮುಂದಿಟ್ಟು ಅವರನ್ನು 10 ಗಂಟೆಗೂ ಹೆಚ್ಚು ಕಾಲ ದುಡಿಸಲಾಗುತ್ತಿದೆ. ಇದು ಸರಿಯೇ’ ಎಂದು ಹಲವು ಉದ್ಯೋಗಿಗಳು ಇದೀಗ ವಾದ ಆರಂಭಿಸಿದ್ದಾರೆ. ಹಲವು ಪ್ರಮುಖ ಕಂಪನಿಗಳು ಮೂನ್ಲೈಟ್ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ 2ನೇ ಕೆಲಸದ ಪರ ಮತ್ತು ವಿರೋಧದ ಚರ್ಚೆ ಗರಿಗೆದರಿದೆ.
ಈ ನಡುವೆ ಸ್ವಿಗಿ ತನ್ನ ಮೂನ್ಲೈಟ್ ಪಾಲಿಸಿ ಸ್ಪಷ್ಟಪಡಿಸಿದ್ದು, ‘ಯಾವುದೇ ಉದ್ಯೋಗಿ ತನ್ನ ವಾರಾಂತ್ಯದಲ್ಲಿ, ದಿನದ ಕೆಲಸದ ಅವಧಿ ಮುಗಿದ ನಂತರ ಮತ್ತೊಂದು ಅಸೈನ್ಮೆಂಟ್ ಒಪ್ಪಿಕೊಳ್ಳಲು ಆಕ್ಷೇಪವಿಲ್ಲ’ ಎಂದು ಸ್ಪಷ್ಟಪಡಿಸಿದೆ. ‘ಬೇರೊಂದು ಕಂಪನಿಯ ಮೂನ್ಲೈಟ್ ಆಫರ್ ಒಪ್ಪಿಕೊಳ್ಳುವ ಮೊದಲು ಆಂತರಿಕವಾಗಿ ಅನುಮೋದನೆ ಪಡೆದುಕೊಳ್ಳಬೇಕು. ಸ್ವಿಗಿ ಉದ್ಯೋಗಿಗಳ ಕಂಪನಿಯ ಕಚೇರಿಯಲ್ಲಿ ಬೇರೊಂದು ಕಂಪನಿಯ ಕೆಲಸ ಮಾಡಲು ಅವಕಾಶವಿಲ್ಲ. ಬೇರೊಂದು ಕಂಪನಿಯ ಅಸೈನ್ಮೆಂಟ್ ಒಪ್ಪಿಕೊಂಡಿರುವುದು ಉದ್ಯೋಗಿಯ ಕಾರ್ಯಕ್ಷಮತೆ (Productivity) ಕಡಿಮೆಯಾಗಲು ನೆಪವಾಗಬಾರದು’ ಎಂದು ಸ್ವಿಗಿ ಸ್ಪಷ್ಟಪಡಿಸಿದೆ.
Thanks for thoughts sir!! Please clear your stand on companies forcing employees to work for more than 10 hours and may be violating labour law, hiring tech freshers on a salary which is equivalent to a earning of unskilled labour, salary cut/layoffs, if companies profit drop.
— rahul khobragade (@rahultk85) August 21, 2022
ಮೂನ್ಲೈಟ್ ಅಕ್ರಮವೇ? ಸಕ್ರಮವೇ?
ಭಾರತದ ಸದ್ಯದ ಆರ್ಥಿಕ ಪರಿಸ್ಥಿತಿ ಮತ್ತು ಹಣದುಬ್ಬರದ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಕಂಪನಿಗಳು ಹೆಚ್ಚು ಮಾನವೀಯವಾಗಿ ನಡೆಸಿಕೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಐಟಿ ಉದ್ಯಮಿ ಮೋಹನ್ದಾಸ್ ಪೈ ಇಂಥದ್ದೇ ನಿಲುವು ಹೊಂದಿದ್ದಾರೆ. ‘ಮೂನ್ಲೈಟ್ ಮಾಡುವುದನ್ನು ಮೋಸ ಎಂದು ಕರೆಯುವುದು ಸರಿಯಲ್ಲ. ಯಾವುದೇ ಉದ್ಯೋಗಿಯು ದಿನದ ಒಂದು ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮಾಡಲು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ಈ ಅವಧಿಯ ನಂತರ ಏನು ಮಾಡುತ್ತಾರೆ ಎನ್ನುವುದು ಅವರ ಅವರಿಗೆ ಬಿಟ್ಟ ವಿಷಯ’ ಎಂದು ಹೇಳುತ್ತಾರೆ ಅವರು. ಪೂನಾ ಮೂಲದ ಐಟಿ ಉದ್ಯೋಗಿಗಳ ಒಕ್ಕೂಟವೂ ಮೂನ್ಲೈಟ್ ಕೆಲಸಗಳನ್ನು ಬೆಂಬಲಿಸಿದೆ. ‘ಕೆಲಸದ ಅವಧಿ ಮುಗಿದ ನಂತರ ಉದ್ಯೋಗಿ ಏನು ಮಾಡುತ್ತಾನೆ ಎನ್ನುವುದನ್ನು ಕಟ್ಟಿಕೊಂಡು ಕಂಪನಿಗಳಿಗೆ ಏನಾಗಬೇಕು’ ಎಂದು ಪ್ರಶ್ನಿಸಿದೆ.
ಆದರೆ ಉದ್ಯಮಿಗಳು ಇದನ್ನು ಒಪ್ಪುವುದಿಲ್ಲ. ‘ದಿನದಲ್ಲಿ 8ರಿಂದ 10 ತಾಸು ದುಡಿದ ಉದ್ಯೋಗಿಯು ನಂತರ ಕುಟುಂಬದೊಂದಿಗೆ ಕಾಲ ಕಳೆಯಬೇಕು, ವಿಶ್ರಾಂತಿ ಪಡೆಯಬೇಕು. ಆಗ ಮಾತ್ರ ಅವನು ಮತ್ತೊಂದು ದಿನದ ಕೆಲಸಕ್ಕೆ ಸಿದ್ಧನಾಗಲು ಸಾಧ್ಯ. ಇಲ್ಲದಿದ್ದರೆ ಮಾರನೇ ದಿನದ ಉತ್ಪಾದಕತೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಹೀಗಾಗಿ ಮೂನ್ಲೈಟ್ ಸಹಿಸಲು ಆಗುವುದಿಲ್ಲ’ ಎನ್ನುವುದು ಉದ್ಯಮಿಗಳ ನಿಲುವಾಗಿದೆ.
ಕಾನೂನು ಏನು ಹೇಳುತ್ತದೆ?
ಕಾರ್ಮಿಕ ಕಾನೂನು ಮತ್ತು ಸರ್ಕಾರದ ಉದ್ಯೋಗ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಕಾರ್ಖಾನೆಗಳ ಕಾರ್ಮಿಕರು ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಕಾನೂನು ಪ್ರಕಾರ ಮೂನ್ಲೈಟ್ ಮಾಡಲು ಅವಕಾಶವಿಲ್ಲ. ಆದರೆ ಐಟಿ ಉದ್ಯೋಗಿಗಳಿಗೆ, ಆಡಳಿತಾತ್ಮಕ ಹಾಗೂ ಉಸ್ತುವಾರಿ ಕೆಲಸಗಳನ್ನು ಮಾಡುವವರಿಗೆ ಇಂಥ ನಿರ್ಬಂಧದ ಕಾನೂನುಗಳು (ಬಹುತೇಕ) ಅನ್ವಯಿಸುವುದಿಲ್ಲ. ಆದರೆ ನಿರ್ದಿಷ್ಟ ಕಂಪನಿಯು ಕೆಲಸವನ್ನು ಕೊಡುವಾಗ ಉದ್ಯೋಗಿಗಳೊಂದಿಗೆ ಮಾಡಿಕೊಳ್ಳುವ ಒಪ್ಪಂದ ಪತ್ರದಲ್ಲಿರುವ ಷರತ್ತುಗಳು ಉದ್ಯೋಗಿಗಳಿಗೆ ಅನ್ವಯವಾಗುತ್ತದೆ. ಅದರಲ್ಲಿ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಅವಕಾಶವಿಲ್ಲ ಎಂಬ ಷರತ್ತು ಇದ್ದು, ಉದ್ಯೋಗಿ ಅದಕ್ಕೆ ಒಪ್ಪಿಕೊಂಡು ಕೆಲಸಕ್ಕೆ ಸೇರಿದ ನಂತರ ಮೂನ್ಲೈಟ್ ಮಾಡಿದರೆ ಅದು ಅಕ್ರಮ ಎನಿಸಿಕೊಳ್ಳುತ್ತದೆ.
I don’t see the problem with #moonlighting unless it’s clear case of ‘conflict of interest’. What employees do outside of contracted working hours is no employer’s business. People should be able to do second jobs to earn for their lives.#Infosys
— Manisha Awasthi (@Manisha_Awasthi) September 13, 2022
ಮೂನ್ಲೈಟ್ ನಿಲ್ಲುತ್ತದೆಯೇ?
ಐಟಿ ಉದ್ಯಮದ ಉದ್ಯೋಗಿಯೊಬ್ಬ ಬೇರೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಭಾರತದಲ್ಲಿ ಮೂನ್ಲೈಟ್ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ. ಆದರೆ ಇದು ಮೊದಲಿನಿಂದಲೂ ಚಾಲ್ತಿಯಲ್ಲಿದ್ದ ಕ್ರಮವೇ ಆಗಿದೆ. ಅಕ್ರಮ-ಸಕ್ರಮ ಎಂಬ ಚರ್ಚೆಯೂ ಬಹುಕಾಲದಿಂದ ಚಾಲ್ತಿಯಲ್ಲಿತ್ತು. ಶಾಲೆ-ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕರು ಸಂಜೆ ಅಥವಾ ಮುಂಜಾನೆ ಮನೆಪಾಠ ಮಾಡುವುದು, ಸರ್ಕಾರಿ ಕೆಲಸ ಮಾಡುವವರು ಬರಹ-ಅನುವಾದದಂಥ (ಆರ್ಥಿಕ ಉದ್ದೇಶದ) ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗುವುದು, ಸಿಎ ಕಚೇರಿಗಳಲ್ಲಿ ಕೆಲಸ ಮಾಡುವ ಗುಮಾಸ್ತರು ಬೇರೊಂದು ಕಂಪನಿಗಳಲ್ಲಿ ಲೆಕ್ಕ ಬರೆಯವುದು, ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುವುದು ಹೀಗೆ ಹಲವು ರೀತಿಯಲ್ಲಿ ಮೂನ್ಲೈಟ್ ಭಾರತೀಯ ಸಮಾಜದಲ್ಲಿ ಮೊದಲಿನಿಂದಲೂ ಅಸ್ತಿತ್ವದಲ್ಲಿತ್ತು.
‘ಈಗಿರುವ ಕೆಲಸದಿಂದ ತನಗೆ ಬೇಕಿರುವಷ್ಟು ಸಂಪಾದನೆ ಸಾಧ್ಯವಾಗುತ್ತಿಲ್ಲ ಎಂದಾಗ ಬಿಡುವಿನ ಅವಧಿಯಲ್ಲಿ ಮತ್ತೊಂದು ಕೆಲಸ ಮಾಡಿ ಸಂಪಾದನೆ ಹೆಚ್ಚಿಸಿಕೊಂಡರೆ ತಪ್ಪೇನು? ಲಂಚ ಪಡೆಯುವುದು ಅಥವಾ ಭಿಕ್ಷೆ ಬೇಡುವುದಕ್ಕಿಂತಲೂ ಇದು ಒಳ್ಳೆಯದಲ್ಲವೇ? ಎಷ್ಟು ಕಂಪನಿಗಳು ನಿಗದಿತ ಅವಧಿಗಿಂತಲೂ ಹೆಚ್ಚು ದುಡಿಸಿಕೊಂಡಿದ್ದಕ್ಕೆ ಒಟಿ ಕೊಡುತ್ತಿವೆ’ ಎಂದು ಮೂನ್ಲೈಟ್ ಪರ ಇರುವವರು ವಾದಿಸುತ್ತಾರೆ.
ಜನಪ್ರಿಯ ಫುಡ್ ಡೆಲಿವರಿ ಕಂಪನಿ ‘ಸ್ವಿಗಿ’ ಮತ್ತು ಫಿನ್ಟೆಕ್ ಕಂಪನಿ ‘ಕ್ರೆಡ್’ ಇದೀಗ ಅಧಿಕೃತ ಮೂನ್ಲೈಟ್ ಪಾಲಿಸಿ ಘೋಷಿಸಿ ಟ್ರೆಂಡ್ ಸೆಟರ್ ಎನಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಉದ್ಯೋಗಿಗಳು ಕೆಲಸಕ್ಕೆ ಬರುವ ಮೊದಲು ‘ಮೂನ್ಲೈಟ್’ಗೆ ಅವಕಾಶ ಇದೆಯೇ ಎಂದು ಪ್ರಶ್ನಿಸಿ ಖಾತ್ರಿಪಡಿಸಿಕೊಳ್ಳುವ ಕಾಲ ಬರುವ ನಿರೀಕ್ಷೆಯನ್ನು ಈ ಬೆಳವಣಿಗೆ ಹುಟ್ಟುಹಾಕಿದೆ.
Published On - 8:53 am, Wed, 14 September 22