Economy: ಭಾರತ ಮುಂದುವರಿದ ದೇಶವಾಗಲು ಖಾಸಗಿ ವಲಯದಿಂದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಹೂಡಿಕೆ ಹೆಚ್ಚಬೇಕು; ಬಜೆಟ್​ನಲ್ಲಿ ನಿರೀಕ್ಷೆ ಏನು?

India Infrastructure: ಭಾರತ 2047ರಲ್ಲಿ 30 ಟ್ರಿಲಿಯನ್ ಆರ್ಥಿಕತೆಯ ದೇಶವಾಗಬೇಕಾದರೆ ಶೇ. 7.5ರಿಂದ 8ರ ವಾರ್ಷಿಕ ದರದಲ್ಲಿ ಬೆಳೆಯಬೇಕು. ಅದಕ್ಕೆ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಮುಖ್ಯ. ಕಳೆದ ಏಳು ವರ್ಷದಲ್ಲಿ ಸರ್ಕಾರದಿಂದ ಇನ್​ಫ್ರಾಸ್ಟ್ರಕ್ಚರ್​ಗೆ ಮಾಡಲಾಗುವ ಬಂಡವಾಳ ವೆಚ್ಚ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ, ಅಮೆರಿಕ, ಚೀನಾದಂಥ ದೇಶಗಳಿಗೆ ಹೋಲಿಸಿದರೆ ಭಾರತ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಮಾಡಲಾಗುತ್ತಿರುವ ತಲಾ ವೆಚ್ಚ ಬಹಳ ಕಡಿಮೆ ಇದೆ.

Economy: ಭಾರತ ಮುಂದುವರಿದ ದೇಶವಾಗಲು ಖಾಸಗಿ ವಲಯದಿಂದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಹೂಡಿಕೆ ಹೆಚ್ಚಬೇಕು; ಬಜೆಟ್​ನಲ್ಲಿ ನಿರೀಕ್ಷೆ ಏನು?
ಇನ್​ಫ್ರಾಸ್ಟ್ರಕ್ಚರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 17, 2024 | 12:56 PM

ನವದೆಹಲಿ, ಜನವರಿ 17: ಭಾರತ 2047ರೊಳಗೆ ಮುಂದುವರಿದ ದೇಶವನ್ನಾಗಿ ಮಾಡುವುದು ಸರ್ಕಾರ ಇಟ್ಟಿರುವ ಮಹತ್ವಾಕಾಂಕ್ಷಿ ಗುರಿ. ಸದ್ಯ 3.5 ಟ್ರಿಲಿಯನ್ ಡಾಲರ್ ಆಸುಪಾಸಿನಲ್ಲಿರುವ ಜಿಡಿಪಿ ಇನ್ನು 24 ವರ್ಷದಲ್ಲಿ 30 ಟ್ರಿಲಿಯನ್ ಡಾಲರ್​ನಷ್ಟಾಗಬೇಕು. ಈ ನಿಟ್ಟಿನಲ್ಲಿ ಆರ್ಥಿಕತೆ ವರ್ಷಕ್ಕೆ ಶೇ. 7.5ರಿಂದ 8ರ ದರದಲ್ಲಿ ಬೆಳೆಯುವುದು ಅವಶ್ಯ. ಹೀಗೆ ಸತತವಾಗಿ ಇದೇ ವೇಗದಲ್ಲಿ ಬೆಳೆಯಬೇಕೆಂದರೆ ಆರ್ಥಿಕತೆ ಪೂರಕವಾಗಿ ವಿಸ್ತೃತಗೊಳ್ಳಬೇಕು. ಅದಕ್ಕೆ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ (Infrastructure development) ಬಹಳ ಮುಖ್ಯ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ನೀತಿ ಕೂಡ ಪ್ರಮುಖವಾಗಿದ್ದು ಬಜೆಟ್​ನಲ್ಲಿ ಒಂದಷ್ಟು ಕ್ರಮಗಳನ್ನು ನಿರೀಕ್ಷಿಸಬಹುದು.

ಇನ್​ಫ್ರಾಸ್ಟ್ರಕ್ಚರ್​ಗೆ ಭಾರತ ಸರ್ಕಾರ ಮಾಡುತ್ತಿರುವ ಬಂಡವಾಳ ವೆಚ್ಚ ಗಣನೀಯವಾಗಿ ಹೆಚ್ಚುತ್ತಿದೆ. 2016-17ರಲ್ಲಿ ಸೌಕರ್ಯ ವೃದ್ಧಿಗೆ ಬಜೆಟ್​ನಲ್ಲಿ 2.47 ಟ್ರಿಲಿಯನ್ ಡಾಲರ್ ಹಣ ವಿನಿಯೋಗಿಸಲಾಗಿತ್ತು. 2023-24ರ ಬಜೆಟ್​ನಲ್ಲಿ ಅದು ಬರೋಬ್ಬರಿ 10 ಟ್ರಿಲಿಯನ್ ಡಾಲರ್​ಗೆ ಏರಿದೆ. ಏಳು ವರ್ಷದಲ್ಲಿ ಇನ್​ಫ್ರಾಸ್ಟ್ರಕ್ಚರ್​ಗೆ ಸರ್ಕಾರದಿಂದ ಮಾಡಲಾದ ವೆಚ್ಚ ನಾಲ್ಕು ಪಟ್ಟು ಹೆಚ್ಚಾಗಿದೆ. ಈಗ ಜಿಡಿಪಿಯ ಶೇ. 3.4ರಷ್ಟು ಮೊತ್ತವನ್ನು ಇನ್​ಫ್ರಾಸ್ಟ್ರಕ್ಚರ್​ಗೆ ಹಾಕಲಾಗುತ್ತಿದೆ.

ಇದನ್ನೂ ಓದಿ: Fitch Ratings: ಭಾರತಕ್ಕೆ ಬಿಬಿಬಿ ಗ್ರೇಡ್ ಕೊಟ್ಟ ಫಿಚ್ ರೇಟಿಂಗ್ಸ್; ಸಾಲ ಮರುಪಾವತಿ ಶಕ್ತಿ ಉತ್ತಮ; ಬೇರೆ ದೇಶಗಳಿಗೆ ಹೇಗಿದೆ ರೇಟಿಂಗ್ಸ್?

ಈ ವೆಚ್ಚ ಯಾತಕ್ಕೂ ಸಾಲದು

ಇಷ್ಟಾದರೂ ಭಾರತದ ಮಹೋನ್ನತ ಗುರಿ ಈಡೇರಬೇಕಾದರೆ ಇನ್​ಫ್ರಾಸ್ಟ್ರಕ್ಚರ್​ಗೆ ಸರ್ಕಾರ ಮಾಡುತ್ತಿರುವ ವೆಚ್ಚ ಯಾತಕ್ಕೂ ಸಾಲದು ಎನ್ನುತ್ತಾರೆ ತಜ್ಞರು. ಇಂಡಿಯಾ ರೇಟಿಂಗ್ಸ್ ಅಂಡ್ ರೀಸರ್ಚ್ ಸಂಸ್ಥೆ ಪ್ರಕಾರ ಭಾರತದಲ್ಲಿ ಇನ್​ಫ್ರಾಸ್ಟ್ರಕ್ಚರ್ ಹೂಡಿಕೆಗೆ ತಲಾ ವೆಚ್ಚ (per capita infrastructure investment) ಕೇವಲ 91 ಡಾಲರ್ ಇದೆ. ಅದೇ ನೀವು ಅಮೆರಿಕದ್ದನ್ನು ನೋಡಿದರೆ ಆ ದೇಶದಲ್ಲಿ ತಲಾ ವೆಚ್ಚ 938 ಡಾಲರ್ ಇದೆ. ಚೀನಾ 622 ಮತ್ತು ಬ್ರೆಜಿಲ್ 256 ಡಾಲರ್ ಹಣವನ್ನು ಸರಾಸರಿಯಾಗಿ ಇನ್​ಫ್ರಾಸ್ಟ್ರಕ್ಚರ್​ಗೆ ವ್ಯಯಿಸುತ್ತವೆ. ಈ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇನ್​ಫ್ರಾಸ್ಟ್ರಕ್ಚರ್​ಗೆ ಮಾಡಲಾಗುತ್ತಿರುವ ಬಂಡವಾಳ ವೆಚ್ಚ ಬಹಳ ಕಡಿಮೆ ಎನಿಸುತ್ತದೆ.

ಈ ಕೊರತೆಯನ್ನು ನೀಗಿಸಬೇಕಾದರೆ ಇನ್​ಫ್ರಾಸ್ಟ್ರಕ್ಚರ್​ಗೆ ಬಂಡವಾಳ ವೆಚ್ಚ ಹೆಚ್ಚಾಗಬೇಕು. ಸರ್ಕಾರದಿಂದಲೇ ಎಲ್ಲಾ ವೆಚ್ಚ ಆಗಬೇಕೆಂದು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಖಾಸಗಿ ವಲಯದ ಪಾತ್ರ ತುಂಬಾ ಮುಖ್ಯ ಎನಿಸುತ್ತದೆ. ಖಾಸಗಿ ವಲಯದಿಂದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಹೂಡಿಕೆ ಪ್ರಮಾಣ ಬಹಳ ದೊಡ್ಡ ಮಟ್ಟದಲ್ಲಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಬಜೆಟ್​ನಲ್ಲಿ ಸರ್ಕಾರದ ನೀತಿಗಳು ಯಾವ ರೀತಿ ಇರಲಿವೆ ಎಂಬುವು ಕುತೂಹಲ ಮೂಡಿಸುತ್ತವೆ.

ಇದನ್ನೂ ಓದಿ: Interim Budget: ಈ ಬಾರಿಯ ಬಜೆಟ್​ನ ರೂವಾರಿಗಳ ಪೈಕಿ ಇದ್ದಾರೆ ಕರ್ನಾಟಕದ ಒಬ್ಬ ವ್ಯಕ್ತಿ; ಇವರೇ ನೋಡಿ ಈ ನಿರ್ಮಲಾ ಸೀತಾರಾಮನ್ ಬಜೆಟ್ ಟೀಮ್

ಬಜೆಟ್​ನಲ್ಲಿ ಏನು ನಿರೀಕ್ಷಿಸಬಹುದು?

ಸರ್ಕಾರದಿಂದ ಬಂಡವಾಳ ವೆಚ್ಚ, ಖಾಸಗಿ ವಲಯದಿಂದ ಹೂಡಿಕೆ, ಸಾರ್ವಜನಿಕ ಅನುಭೋಗ ಮತ್ತು ರಫ್ತು ಈ ಅಂಶಗಳು ಆರ್ಥಿಕ ಪ್ರಗತಿಗೆ ಪೂರಕವಾಗಿರುತ್ತವೆ. ಕೋವಿಡ್ ಬಳಿಕ ಖಾಸಗಿ ಹೂಡಿಕೆ ಬಹಳ ಕಡಿಮೆ ಆಯಿತು. ಸರ್ಕಾರವೇ ಬಂಡವಾಳ ವೆಚ್ಚ ಹೆಚ್ಚಿಸಿತು. ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಮೊತ್ತದ ಹಣವನ್ನು ಬಡ್ಡಿರಹಿತವಾಗಿ ಒದಗಿಸಿ, ವಿವಿಧ ರಾಜ್ಯಗಳಲ್ಲಿ ಬಂಡವಾಳ ವೆಚ್ಚ ಹೆಚ್ಚಿಸಲು ಪ್ರೇರೇಪಿಸಲಾಯಿತು. ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಾದರೆ ಖಾಸಗಿ ವಲಯವನ್ನೂ ಹೂಡಿಕೆಗೆ ಉತ್ತೇಜಿಸಬಹುದು ಎಂಬ ನಿರೀಕ್ಷೆ ಇತ್ತು. ಅದು ಸಾಧ್ಯವಾಗಿಲ್ಲ.

ಈಗ ಬಜೆಟ್​ನಲ್ಲಿ ಖಾಸಗಿ ವಲಯದಿಂದ ಇನ್​ಫ್ರಾಸ್ಟ್ರಕ್ಚರ್​ಗೆ ಹೂಡಿಕೆ ಹೆಚ್ಚಿಸಲು ಸರ್ಕಾರ ತೆರಿಗೆ ಭತ್ಯೆ ಇತ್ಯಾದಿ ವಿವಿಧ ಸೌಲಭ್ಯಗಳನ್ನು ಪ್ರಕಟಿಸಬಹುದು. ಈ ನಿರೀಕ್ಷೆ ಉದ್ಯಮ ವಲಯದಲ್ಲಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ