ನಾವೊಂದು ಬಗೆದರೆ ದೈವವೊಂದು ಬಗೆದೀತು… ಹಾಗೆಯೇ, ಬಹಳ ಮಂದಿಯ ವಿದ್ಯಾಭ್ಯಾಸಕ್ಕೂ ಅವರು ಮಾಡುವ ಕೆಲಸಕ್ಕೂ ಸಂಬಂಧವೇ ಇರುವುದಿಲ್ಲ. ಏನೋ ಆಗಲು ಹೋಗಿ ಇನ್ನೇನೋ ಆಗಿ ಫ್ಲಾಪ್ ಆದವರು ಇದ್ದಾರೆ, ಟಾಪ್ ಆದವರೂ ಇದ್ದಾರೆ. ಭಾರತದ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಬಹಳ ಹೆಸರುವಾಸಿಯಾದ ಮತ್ತು ಅತ್ಯಂತ ಅನುಭವಿ ಎನಿಸಿರುವ ಎ ಬಾಲಸುಬ್ರಮಣಿಯನ್ (A Balasubramanian) ಅವರ ಜೀವನ ಕತೆ ನಿಜಕ್ಕೂ ಅದ್ಭುತ. ಹಳ್ಳಿಗಾಡಿನ ಈ ವ್ಯಕ್ತಿ ಕೃಷಿಗಾರಿಕೆಗೆ ನಿಂತಿದ್ದವು, ಬ್ಯಾಂಕರ್ ಆಗಬೇಕಿದ್ದವರು, ಸಾಫ್ಟ್ವೇರ್ ಎಂಜಿನಿಯರ್ ಕೂಡ ಆಗುತ್ತಿದ್ದವರು… ಎಲ್ಲವೂ ಬಿಟ್ಟು ದೇಶದ ಅತಿದೊಡ್ಡ ಮ್ಯೂಚುವಲ್ ಫಂಡ್ ಸಂಸ್ಥೆಗೆ ಅಧಿಪತಿಯಾಗಿದ್ದಾರೆ. ಲಕ್ಷಾಂತರ ಮಂದಿ ಹೂಡಿಕೆದಾರರ ಆಸೆ ಈಡೇರಿಸುವ ಮಹತ್ತರ ಜವಾಬ್ದಾರಿ ಹೊತ್ತಿದ್ದಾರೆ ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್ ಸಂಸ್ಥೆಯ ಸಿಇಒ ಮತ್ತು ಎಂಡಿ ಎ ಬಾಲಸುಬ್ರಮಣಿಯನ್. ಇವರ ಸುಪರ್ದಿಯಲ್ಲಿ 3 ಲಕ್ಷ ಕೋಟಿ ರೂ ಮೌಲ್ಯದ ಹೂಡಿಕೆಗಳ ನಿರ್ವಹಣೆ ಆಗುತ್ತದೆ.
ಎ ಬಾಲಸುಬ್ರಮಣಿಯನ್ ಅವರು ತಮಿಳುನಾಡಿನ ತಂಜಾವೂರ್ನ ಮೇಲಟ್ಟೂರು ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದವರು. ಹಳ್ಳಿಯಲ್ಲೇ ಶಾಲಾ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡುವ ಆಸೆ ಹೊಂದಿದ್ದರು. ಆದರೆ, ಫೀಸ್ ಕಟ್ಟಲು ಸಾಕಷ್ಟು ಹಣ ಇಲ್ಲದ್ದರಿಂದ ಬಿಎಸ್ಸಿ ಸೇರುತ್ತಾರೆ. ಆಗ ಕೋಬಾಲ್ ಮೊದಲಾದ ಕಂಪ್ಯೂಟರ್ ಲ್ಯಾಂಗ್ವೇಜ್ಗಳ ಕಾಲ. ಕಂಪ್ಯೂಟರ್ ಎಂಜಿನಿಯರುಗಳ ಕೊರತೆ ಇದ್ದ ಆ ಸಂದರ್ಭದಲ್ಲಿ ಬಾಲಸುಬ್ರಮಣಿಯನ್ ಸುಲಭವಾಗಿ ಐಟಿ ಉದ್ಯಮಕ್ಕೆ ಹೋಗಬಹುದಿತ್ತು. ಅದೇಕೋ ಅವರಿಗೆ ಮನಸು ಒಪ್ಪದೇ ಕುಟುಂಬದ ಕಾಯಕವಾದ ಕೃಷಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಬಿಎಸ್ಸಿ ಓದಿದ ಮಗ ತಮ್ಮಂತೆ ಮಣ್ಣು ಹೊರುವುದನ್ನು ನೋಡಲು ಇಚ್ಛಿಸದ ಪೋಷಕರು ಬಾಲಸುಬ್ರಮಣಿಯನ್ ಅವರನ್ನು ಹೊರಗೆ ಹೋಗಿ ಸಂಪಾದನೆ ಮಾಡುವಂತೆ ಉತ್ತೇಜಿಸುತ್ತಾರೆ. ಆಗ ತಂಜಾವೂರ್ ಜಿಲ್ಲೆ ಬಿಟ್ಟು ಬಾಲಸುಬ್ರಮಣಿಯನ್ 1988ರಲ್ಲಿ ಬಾಂಬೆಗೆ ಹೋಗುತ್ತಾರೆ.
ಇದನ್ನೂ ಓದಿ: Inspiring: ಕಾಲೇಜು ಶುಲ್ಕ ಕಟ್ಟಲು ಚಹಾ ಮಾರುತ್ತಿದ್ದ ವಿಜಯ್ ಇವತ್ತು ಸಾವಿರ ಕೋಟಿ ರೂ ರಾಯಲ್ ಓಕ್ ಒಡೆಯ
ಕಲಿತ ವಿದ್ಯೆಯಿಂದಲೇ ಮುಂಬೈನಲ್ಲಿ ಹೆಜ್ಜೆ ಹಾಕತೊಡಗಿದ ಅವರು ಕೆಲ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಈ ಪ್ರಯಾಣ ಹೆಚ್ಚು ದಿನ ಸಾಗುವುದಿಲ್ಲ. ಕೆಲ ಸ್ನೇಹಿತರ ಸಲಹೆ ಮೇರೆಗೆ ಬ್ಯಾಂಕಿಂಗ್ ಉದ್ಯಮಕ್ಕೆ ಕಾಲಿಡುತ್ತಾರೆ. ಕೆನ್ಬ್ಯಾಂಕ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿ ಅವರ ಜೀವನಕ್ಕೆ ಪ್ರಮುಖ ಟರ್ನಿಂಗ್ ಪಾಯಿಂಟ್ ಸಿಗುತ್ತದೆ.
ಬಾಲಸುಬ್ರಮಣಿಯನ್ ಅವರ ಹಣಕಾಸು ಕುಶಲತೆಯು ಗಮನ ಸೆಳೆಯತೊಡಗುತ್ತದೆ. ಕೆಲಸದಲ್ಲಿ ಮಿಂಚುತ್ತಲೇ ಬಾಲಸುಬ್ರಮಣಿಯನ್ ಅವರು ಎಂಬಿಎ ಮಾಡುತ್ತಾರೆ. ಅಲ್ಲಿ ಜಿಐಸಿ ಮ್ಯೂಚುವಲ್ ಫಂಡ್ ಸಂಸ್ಥೆಗೆ ಡೀಲರ್ ಆಗಿ ಸೇರುತ್ತಾರೆ. ಇದು 1992ರಲ್ಲಿ ಆದ ಬೆಳವಣಿಗೆ. ಇವರ ವೃತ್ತಿಜೀವನದ ಮತ್ತೊಂದು ಮಹತ್ವದ ತಿರುವು ಅದಾಗಿತ್ತು.
ಅ ಕಾಲದಲ್ಲಿ ಷೇರು ಮಾರುಕಟ್ಟೆ ಸಮಯ ದಿನದಲ್ಲಿ ಕೇವಲ 2 ಗಂಟೆ ಮಾತ್ರ. ಉಳಿದ ಸಮಯವನ್ನು ಬಾಲಸುಬ್ರಮಣಿಯನ್ ಅವರು ರಿಸರ್ಚ್, ಮಾರುಕಟ್ಟೆ ವಿಚಾರ ಅರಿಯಲು, ಜನರ ಜೊತೆ ಒಡನಾಡಲು, ಓದಲು ವಿನಿಯೋಗಿಸುತ್ತಿದ್ದರು. ಬಾಂಡ್ ಮಾರ್ಕೆಟ್ ಟ್ರೇಡಿಂಗ್ ಕೂಡ ಮಾಡಲು ಸಮಯಾವಕಾಶ ಸಿಗುತ್ತಿತ್ತು.
ಅವರು ಕೆಲಸ ಮಾಡುತ್ತಿದ್ದ ಜಿಐಸಿ ಮ್ಯೂಚುವಲ್ ಫಂಡ್ ಸರ್ಕಾರಿ ಸ್ವಾಮ್ಯದ್ದಾಗಿತ್ತು. ಆಗ ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್ ಸಂಸ್ಥೆಯಲ್ಲಿ ಕೆಲಸ ಮಾಡಲು ಆಫರ್ ಬಂದಿತು. ಆ ಕಾಲದಲ್ಲಿ ಸರ್ಕಾರಿ ಕೆಲಸ ಬಿಟ್ಟು ಖಾಸಗಿ ವಲಯಕ್ಕೆ ಹೋಗುವುದೆಂದರೆ ಅದು ಪವಾಡಸದೃಶದಂತೆಯೇ. ಸ್ನೇಹಿತನೊಬ್ಬರನ ಉತ್ತೇಜನದಿಂದ ಬಾಲಸುಬ್ರಮಣಿಯನ್ ಅವರು ಆದಿತ್ ಬಿರ್ಲಾ ಕಂಪನಿಗೆ ಸೇರಿದರು.
ಮೂವತ್ತು ವರ್ಷದಿಂದ ಅವರು ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಡೀಲರ್ ಆಗಿ ಕೆಲಸ ಆರಂಭಿಸಿ ಅವರು ಇದೀಗ ಸಿಇಒ ಹುದ್ದೆಗೆ ಬೆಳೆದಿದ್ದಾರೆ. ಷೇರುಮಾರುಕಟ್ಟೆ, ಬಾಂಡ್ ಇತ್ಯಾದಿ ಎಲ್ಲಾ ಹಣಕಾಸು ಎಳೆಗಳನ್ನೂ ಅವರು ಬಲ್ಲವರಾಗಿದ್ದಾರೆ.
ಕುತೂಹಲ ಎಂದರೆ ಎ ಬಾಲಸುಬ್ರಮಣಿಯನ್ ಅವರಂತೆ ಇಂದು ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಸಿಇಒಗಳಾಗಿರುವ ನಿಲೇಶ್ ಶಾ, ರಾಜೀವ್ ಶಾಸ್ತ್ರಿ, ಸಂದೀಪ್ ಬಾಗ್ಲಾ ಮೊದಲಾದವರು ಹಿಂದೆ ಬಾಂಡ್ ಮ್ಯಾನೇಜರುಗಳೇ ಆಗಿದ್ದವರು.
ಕುತೂಹಲ ಎಂದರೆ ಬಿಎಸ್ಸಿ ಓದಿ ಕೃಷಿ ಮಾಡಲು ಆಸಕ್ತಿ ತೋರಿದ್ದ ಎ ಬಾಲಸುಬ್ರಮಣಿಯನ್ ಇದೀಗ ತಮ್ಮ ಅ ಕೃಷಿ ಕನಸು ಮರೆತಿಲ್ಲ. ತಮ್ಮ ಸ್ವಂತ ಊರಿನಲ್ಲಿ ಕೃಷಿಗಾರಿಕೆ ನಡೆಸಬೇಕೆಂಬ ಅಭಿಲಾಷೆಯಲ್ಲಿದ್ದಾರೆ. ಊರಿನ ಜನರಿಗೆ ಒಳ್ಳೆಯದು ಮಾಡುವ ಆಲೋಚನೆಯಲ್ಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ