ಒಂದು ಬ್ಯುಸಿನೆಸ್ ನಡೆಸುವುದು ಅಷ್ಟು ಸುಲಭವಲ್ಲ. ಸತತ ಪರಿಶ್ರಮ, ಮಾರುಕಟ್ಟೆ ಅರಿವು, ಸಂಪನ್ಮೂಲ, ಸಂಪರ್ಕ ಇವೆಲ್ಲವೂ ಮೇಳೈಸಿದರೆ ಉದ್ದಿಮೆ ಯಶಸ್ವಿಯಾಗಲು ಸಾಧ್ಯ. ಭಾರತದಲ್ಲಿ ಸ್ವಂತವಾಗಿ ವ್ಯವಹಾರ ಶುರು ಮಾಡಿ ಯಶಸ್ವಿಯಾದವರು ಹಲವರಿದ್ದಾರೆ. ಅವರಲ್ಲಿ ಗಮನ ಸೆಳೆಯುವ ಕೆಲವರ ಪೈಕಿ ವಿಜಯ್ ಸುಬ್ರಮಣಿಯಮ್ (Vijai Subramaniam) ಒಬ್ಬರು. ಬೆಂಗಳೂರಿನ ರಾಯಲ್ ಓಕ್ (Royal Oak) ಎಂಬ ಹೆಸರು ನೀವು ಕೇಳಿರಬಹುದು. ಅದು ಪೀಠೋಪಕರಣಗಳನ್ನು ಮಾರುವ ಕಂಪನಿ. ಅದರ ಒಡೆಯರೇ ವಿಜಯ್ ಸುಬ್ರಮಣಿಯಮ್. ಇವರ ಜೀವನದ ಕಥೆ ಎಲ್ಲಾ ಕಾಲದ ಯುವಕರಿಗೂ ಸ್ಫೂರ್ತಿ ನೀಡುವಂಥದ್ದು.
ತಮಿಳುನಾಡು ಸಂಜಾತರಾದ ವಿಜಯ್ ಸುಬ್ರಮಣಿಯಮ್ ಅವರು ಕಾಲೇಜು ದಿನಗಳಲ್ಲಿ ಹಣ ಇಲ್ಲದೇ ಚಹಾ ಮಾರಿ ಫೀಸ್ ಕಟ್ಟುತ್ತಿದ್ದರು. ಕಷ್ಟಪಟ್ಟು ಓದಿ ಕೊನೆಗೆ ಬೆಂಗಳೂರಿನಲ್ಲಿ ರಾಯಲ್ ಓಕ್ ಕಟ್ಟಿ ಅದನ್ನು ಯಶಸ್ವಿಯಾಗಿ ರೂಪಿಸಿದ ಅವರ ಶ್ರಮ ಅದ್ವಿತೀಯ.
ಬಡ ಕುಟುಂಬದಲ್ಲಿ ಜನಿಸಿದ ವಿಜೈ ಸುಬ್ರಮಣಿಯಮ್ ಅವರು ಏಳನೇ ವಯಸ್ಸಿನವರೆಗೂ ಶಾಲೆಯ ಮುಖ ನೋಡಿದವರಲ್ಲ. ಬಳಿಕ ನೇರವಾಗಿ 2ನೇ ಇಯತ್ತೆಗೆ ದಾಖಲಾದರು. 1992ರಲ್ಲಿ ಅವರು ತಮಿಳು ಮೀಡಿಯಂನಲ್ಲಿ 12ನೇ ತರಗತಿಯವರೆಗೂ ಓದಿದರು. ಇವರ ತಾಯಿ ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಅದೇ ಇವರ ಕುಟುಂಬಕ್ಕೆ ಹಣಕಾಸು ಆಧಾರ. ಬಿಕಾಂ ಓದುವಾಗ ಫೀಸ್ ಕಟ್ಟಲು ಹಣ ಇಲ್ಲದೇ ಅಂಗಡಿಗಳಿಗೆ ಚಹಾಪುಡಿ ಮಾರುತ್ತಾ ಅದರಿಂದ ಬಂದ ಹಣದಲ್ಲಿ ಫೀಸ್ ಕಟ್ಟುತ್ತಿದ್ದರಂತೆ. ಬಿಕಾಂ ಓದಿದ ಬಳಿಕ ಎಂಕಾಂಗೆ ಸೇರಿದರಾದರೂ ಮುಂದೆ ಓದಲು ಆಗಲಿಲ್ಲ. ಮನೆಯ ಹಣಕಾಸು ಪರಿಸ್ಥಿತಿ ತೀರಾ ಕೆಳಗಿದ್ದರಿಂದ ಅವರು ಅನಿವಾರ್ಯವಾಗಿ ಸಂಪಾದನೆಗೆ ಇಳಿಯಬೇಕಾಯಿತು.
ಎಂಕಾಂನಿಂದ ನಿರ್ಗಮಿಸಿದ ಬಳಿಕ ಇವರು ಕೊಯಮತ್ತೂರಿನಲ್ಲಿ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನಲ್ಲಿ ಕ್ರೆಡಿಟ್ ಕಾರ್ಡ್ ಮಾರುವ ಕೆಲಸಕ್ಕೆ ಸೇರಿದರು. ಕೊಯಮತ್ತೂರಿನಲ್ಲಿ ಎಕ್ಸಿಬಿಶನ್ವೊಂದರಲ್ಲಿ ಸ್ಟಾಲ್ ಹಾಕುವ ಅವಕಾಶ ಇವರಿಗೆ ಸಿಕ್ಕಿತ್ತು. ತನ್ನ ಬಳಿ ಇದ್ದ ಸ್ಕೂಟರ್ ಮಾರಿ ಹಣ ಒಟ್ಟುಗೂಡಿಸಿದರು. ಸ್ನೇಹಿತರಿಬ್ಬರಿಂದಲೂ ಒಂದಷ್ಟು ಹಣ ಕಲೆಹಾಕಿದರು. ಬಟ್ಟೆ, ಅಡುಗೆ ಮನೆ ವಸ್ತು, ಕ್ಯಾಂಡಲ್ ಸ್ಟ್ಯಾಂಡ್ ಇತ್ಯಾದಿ ವಸ್ತುಗಳನ್ನು ಮಾರಲು ತೊಡಗಿದರು. ಇದೆಲ್ಲವೂ ತಕ್ಕಮಟ್ಟಿಗೆ ಅವರಿಗೆ ಕೈಹಿಡಿಯಿತು.
ಇದನ್ನೂ ಓದಿ: Alexandr Wang: ವಿಶ್ವದ ಕಿರಿಯ ಬಿಲಿಯನೇರ್, 26 ವರ್ಷದ ಅಲೆಕ್ಸಾಂಡರ್ ವ್ಯಾಂಗ್; ಸ್ಕೇಲ್ ಎಐ ಮಾಲೀಕ
ಬೆಂಗಳೂರಿನಲ್ಲಿ ರಾಯಲ್ ಓಕ್ ಎಂಬ ಫರ್ನಿಚರ್ (ಪೀಠೋಪಕರಣ) ಕಂಪನಿ ಆರಂಭಿಸಿದರು. ಇದೂ ಕೂಡ ದೊಡ್ಡಮಟ್ಟದಲ್ಲಿ ಯಶಸ್ವಿಯಾಯಿತು. ಬೇರೆ ಬೇರೆ ನಗರಗಳಲ್ಲಿ ಸುಮಾರು 150 ರೀಟೇಲ್ ಮಳಿಗೆಗಳನ್ನು ಹೊಂದಿರುವ ರಾಯಲ್ ಓಕ್ನಲ್ಲಿ ಒಟ್ಟು 2,000ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಇವರ ಕಂಪನಿಯ ಮೌಲ್ಯ 1,000 ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ