ಇಸ್ರೋ ವೆಚ್ಚ ಅಪ್ರಯೋಜಕವಾಗಿಲ್ಲ; ಪ್ರತೀ ರುಪಾಯಿಯೂ ಎರಡೂವರೆ ಪಟ್ಟು ಲಾಭ ಕೊಟ್ಟಿದೆ ಎಂತಾರೆ ಎಸ್ ಸೋಮನಾಥ್
ISRO and Indian economy: ಇಸ್ರೋ ಮಾಡಿರುವ ಪ್ರತೀ ವೆಚ್ಚವೂ ಹಲವು ಪಟ್ಟು ಲಾಭ ತಂದಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಿಂದ ಆರ್ಥಿಕತೆಗೆ ಹೇಗೆ ಲಾಭವಾಗಿದೆ ಎನ್ನುವ ಸಂಗತಿಯನ್ನು ಬೆಳಕಿಗೆ ತರಲಾಗಿದೆ. ಸೀಮಿತ ಬಜೆಟ್ನಲ್ಲೂ ಇಸ್ರೋ ಗಮನಾರ್ಹ ಸಾಧನೆ ಮಾಡಿದೆ.
ಬೆಂಗಳೂರು, ನವೆಂಬರ್ 14: ಚಂದ್ರಯಾನ, ಮಂಗಳಯಾನ ಇತ್ಯಾದಿ ಎಲ್ಲಾ ಕೆಲಸಕ್ಕೆ ಬಾರದ ವೆಚ್ಚ. ಸುಮ್ಮನೆ ತೆರಿಗೆ ಪಾವತಿದಾರರ ಹಣ ಪೋಲಾಗುತ್ತಿದೆ ಎನ್ನುವ ಅಭಿಪ್ರಾಯಗಳು ಇಸ್ರೋ ಯೋಜನೆಗಳ ಬಗ್ಗೆ ಕೇಳಿಬರುವುದುಂಟು. ಭಾರತದ ಈ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿರುವ ಎಸ್ ಸೋಮನಾಥ್ ಅವರು ಈ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ. ಇಸ್ರೋದಿಂದ ವೆಚ್ಚವಾಗುವ ಪ್ರತೀ ರುಪಾಯಿಯೂ ಎರಡೂವರೆ ಪಟ್ಟು ಲಾಭ ತಂದಿದೆ ಎನ್ನುವ ವಿಚಾರವನ್ನು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ. ಕರ್ನಾಟಕ ರೆಸಿಡೆನ್ಷಿಯಲ್ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್ ಸೊಸೈಟಿಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಇಸ್ರೋ ಯೋಜನೆಗಳಿಂದ ಸಮಾಜಕ್ಕೆ ಮತ್ತು ಆರ್ಥಿಕತೆಗೆ ಹೇಗೆ ಲಾಭ ಆಗುತ್ತಿದೆ ಎನ್ನುವ ಸಂಗತಿಯನ್ನು ವಿವರಿಸಿದ್ದಾರೆ.
‘ಚಂದ್ರನಲ್ಲಿ ಹೋಗುವುದು ದುಬಾರಿ ಕಾರ್ಯ ಹೌದು. ಫಂಡಿಂಗ್ಗಾಗಿ ಸರ್ಕಾರದ ಮೇಲೆಯೇ ನಾವು ಅವಲಂಬಿತರಾಗುವಂತಿಲ್ಲ. ಬಿಸಿನೆಸ್ ಅವಕಾಶಗಳನ್ನು ಸೃಷ್ಟಿಸಬೇಕಾಗುತ್ತದೆ. ನಮ್ಮ ಪ್ರಯೋಗಗಳನ್ನು ಮುಂದುವರಿಸಬೇಕಾದರೆ ಅದಕ್ಕೆ ಬಳಕೆಯನ್ನೂ ನಾವು ಸೃಷ್ಟಿಸಬೇಕು. ಇಲ್ಲದಿದ್ದರೆ, ಸರ್ಕಾರ ನಮ್ಮ ಕೆಲಸವನ್ನು ನಿಲ್ಲಿಸಲು ಹೇಳಬಹುದು’ ಎಂದು ಇಸ್ರೋ ಛೇರ್ಮನ್ ಎಸ್ ಸೋಮನಾಥ್ ವಾಸ್ತವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಟಿಸಿಎಸ್ ಉದ್ಯೋಗಿಗಳಿಗೆ ಸಂಕಷ್ಟ; ವೇರಿಯಬಲ್ ಪೇ ಕಡಿತಗೊಳಿಸುತ್ತಿರುವ ಟಾಟಾ ಕಂಪನಿ
ಯೂರೋಪ್ನ ಸ್ಪೇಸ್ ಕನ್ಸಲ್ಟೆನ್ಸಿ ಸಂಸ್ಥೆಯಾದ ನೋವಾಸ್ಪೇಸ್ನ ಸಹಯೋಗದಲ್ಲಿ ಇಸ್ರೋ ಸಂಸ್ಥೆಯು ಭಾರತದ ಬಾಹ್ಯಾಕಾಶ ಯೋಜನೆಗಳಿಂದ ಯಾವೆಲ್ಲಾ ಅನುಕೂಲಗಳಾಗಿವೆ ಎನ್ನುವುದನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿತ್ತು. ಕೇಂದ್ರ ಬಾಹ್ಯಾಕಾಶ ಸಚಿವ ಜಿತೇಂದರ್ ಸಿಂಗ್ ಅವರು ಈ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ಆ ವರದಿಯಲ್ಲಿನ ಅಂಶಗಳನ್ನು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಉಲ್ಲೇಖಿಸುತ್ತಾ, ಬಾಹ್ಯಾಕಾಶ ಯೋಜನೆಯಿಂದ ಆದ ಅನುಕೂಲಗಳೇನು ಎಂಬುದನ್ನು ವಿವರಿಸಿದ್ಧಾರೆ.
ನೊವಾಸ್ಪೇಸ್ ತಯಾರಿಸಿದ ಆ ವರದಿ ಪ್ರಕಾರ 2014ರಿಂದ 2024ರವರೆಗೆ ಭಾರತದ ಜಿಡಿಪಿಗೆ ಬಾಹ್ಯಾಕಾಶ ಕ್ಷೇತ್ರದ ಕೊಡುಗೆ 60 ಬಿಲಿಯನ್ ಡಾಲರ್ನಷ್ಟಿದೆ. ಈ ಲೆಕ್ಕದ ಪ್ರಕಾರ ಈ ಸೆಕ್ಟರ್ನಲ್ಲಿ ಹೂಡಿಕೆಯಾದ ಪ್ರತೀ ಡಾಲರ್ ಹಣವೂ ಭಾರತೀಯ ಆರ್ಥಿಕತೆಗೆ 2.54 ಡಾಲರ್ನಷ್ಟು ಲಾಭ ತಂದಿದೆಯಂತೆ.
2023ರಲ್ಲಿ ಭಾರತಿಯ ಬಾಹ್ಯಾಕಾಶ ವಲಯದ ಆದಾಯ 6.3 ಬಿಲಿಯನ್ ಡಾಲರ್ಗೆ ಏರಿದೆ. ಅತಿದೊಡ್ಡ ಬಾಹ್ಯಾಕಾಶ ಉದ್ಯಮ ಹೊಂದಿರುವ ದೇಶಗಳಲ್ಲಿ ಭಾರತ ಎಂಟನೇ ಸ್ಥಾನಕ್ಕೇರುವಂತೆ ಮಾಡಿದೆ. ಈ ಉದ್ಯಮವು ಭಾರತದಲ್ಲಿ 47 ಲಕ್ಷ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿದೆ.
ಇದನ್ನೂ ಓದಿ: ಕಡಿಮೆ ಆಗಿದೆ ಮಧ್ಯಮ ವರ್ಗದವರ ತೆರಿಗೆ ಪಾವತಿ; ಹೆಚ್ಚು ಆದಾಯದ ಗುಂಪಿನವರಿಂದ ಹೆಚ್ಚು ತೆರಿಗೆ
2024ರಲ್ಲಿ ಭಾರತದ ಬಾಹ್ಯಾಕಾಶ ಆರ್ಥಿಕತೆಯ ಮೌಲ್ಯವನ್ನು ಗಣಿಸುವುದಾದರೆ ಅದು 8.4 ಬಿಲಿಯನ್ ಡಾಲರ್ನಷ್ಟಿದೆ (6,700 ಕೋಟಿ ರೂ). ಜಾಗತಿಕವಾಗಿ ಭಾರತದ ಪಾಲು ಶೇ. 2-3ರಷ್ಟಿರಬಹುದು. 2025ರಷ್ಟರಲ್ಲಿ ಭಾರತದ ಸ್ಪೇಸ್ ಎಕನಾಮಿ 13 ಬಿಲಿಯನ್ ಡಾಲರ್ ಆಗುವ ನಿರೀಕ್ಷೆ ಇದೆ.
ಕುತೂಹಲದ ಸಂಗತಿ ಎಂದರೆ ಇಸ್ರೋ ಆರಂಭವಾಗಿ 55 ವರ್ಷಗಳಾಯಿತು. ಅಲ್ಲಿಂದ ಇಲ್ಲಿಯವರೆಗೆ ಅದು ಮಾಡಿರುವ ಹೂಡಿಕೆಯು ಅಮೆರಿಕದ ನಾಸಾದ ಒಂದು ವರ್ಷದ ಬಜೆಟ್ಗಿಂತಲೂ ಕಡಿಮೆಯೇ. ಇಸ್ರೋದ ಈಗಿನ ವಾರ್ಷಿಕ ಬಜೆಟ್ 1.6 ಬಿಲಿಯನ್ ಡಾಲರ್ ಇದೆ. ನಾಸಾದ ವಾರ್ಷಿಕ ಬಜೆಟ್ 25 ಬಿಲಿಯನ್ ಡಾಲರ್ ಇದೆ. ಆದರೂ ಇಸ್ರೋ ಈ ಕೊರತೆಯ ನಡುವೆಯೂ ಸಾಕಷ್ಟು ಯೋಜನೆಗಳನ್ನು ನಡೆಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ