ಪಿಎಲ್‌ಐ ಸ್ಕೀಮ್ ಅಡಿಯಲ್ಲಿ ಐಟಿ ಹಾರ್ಡ್‌ವೇರ್ ತಯಾರಿಕೆಗೆ 40 ಕಂಪನಿಗಳಿಂದ ಅರ್ಜಿ, 75 ಸಾವಿರ ಉದ್ಯೋಗಸೃಷ್ಟಿ ಸಾಧ್ಯತೆ
IT Hardware PLI: ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ ಪೋಸ್ಟರ್ನಲ್ಲಿ ಕೆಲವಿಷ್ಟು ಮಾಹಿತಿ ಇದೆ. ಅದರ ಪ್ರಕಾರ, ಈ ಪಿಎಲ್‌ಐ ಯೋಜನೆಯಿಂದ 4.7 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಉತ್ಪಾದನೆ ನಿರೀಕ್ಷಿಸಲಾಗಿದೆ. 5 ಸಾವಿರ ಕೋಟಿ ರೂಗೂ ಅಧಿಕ ಬಂಡವಾಳ ಹೂಡಿಕೆ ಬರುವ ಸಾಧ್ಯತೆ ಇದೆ. ಈ ಯೋಜನೆಯಿಂದ 75 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆಯಬಹುದು.
ನವದೆಹಲಿ, ಆಗಸ್ಟ್ 31: ಕೇಂದ್ರ ಸರ್ಕಾರ ತನ್ನ ಹಿಟ್ ಯೋಜನೆಯಾದ ಪಿಎಲ್‌ಐ ಸ್ಕೀಮ್ ಅನ್ನು ಐಟಿ ಹಾರ್ಡ್ವೇರ್ಗೆ ವಿಸ್ತರಿಸಿದೆ. ಇದಕ್ಕೆ ಡೆಲ್, ಹೆಚ್ಪಿ ಸೇರಿದಂತೆ 40 ಕಂಪನಿಗಳು ಅರ್ಜಿ ಸಲ್ಲಿಸಿವೆ. ಇದರಲ್ಲಿ ಸರ್ಕಾರ ಶಾರ್ಟ್ಲಿಸ್ಟ್ ಮಾಡಿ ಆಯ್ದ ಕಂಪನಿಗಳಿಗೆ ಭಾರತದಲ್ಲಿ ಉತ್ಪಾದನೆ ಆರಂಭಿಸಲು ಅವಕಾಶ ಕೊಡುವ ಸಾಧ್ಯತೆ ಇದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು, ಮುಂದಿನ ದಿನಗಳಲ್ಲಿ ಹಾರ್ಡ್‌ವೇರ್ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (PLI- Production Linked Incentive scheme) ಅಡಿಯಲ್ಲಿ 75,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಮಹತ್ವದ ಮಾಹಿತಿ ನೀಡಿದ್ದಾರೆ. ಈವರೆಗೆ 40 ಅರ್ಜಿಗಳು ಬಂದಿವೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ನಿಮ್ಮ ಬುಧವಾರ (ಆಗಸ್ಟ್ 30) ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಅಶ್ವಿನಿ ವೈಷ್ಣವ್ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 32 ಕಂಪನಿಗಳು ಹಾರ್ಡ್‌ವೇರ್ ಪಿಎಲ್‌ಐ ಸ್ಕೀಮ್ನಲ್ಲಿ ಅರ್ಜಿ ಹಾಕಿವೆ ಎಂದಿದ್ದರು. ಇಂದು ಎಕ್ಸ್ನಲ್ಲಿ ಅಂತಿಮ ದತ್ತಾಂಶವನ್ನು ಹೊರಹಾಕಿದ್ದಾರೆ. ಅದರ ಪ್ರಕಾರ ಡೆಲ್, ಎಚ್‌ಪಿ ಸೇರಿದಂತೆ 40 ಕಂಪನಿಗಳು ಭಾರತದಲ್ಲಿ ಐಟಿ ಹಾರ್ಡ್‌ವೇರ್ ತಯಾರಿಕೆಗೆ ಪಿಎಲ್‌ಐ ಸ್ಕೀಮ್ ಬಳಸಲು ಅರ್ಜಿ ಹಾಕಿರುವ ಮಾಹಿತಿ ಹಂಚಿಕೊಂಡಿದ್ದಾರೆ.
ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ ಪೋಸ್ಟರ್ನಲ್ಲಿ ಕೆಲವಿಷ್ಟು ಮಾಹಿತಿ ಇದೆ. ಅದರ ಪ್ರಕಾರ, ಈ ಪಿಎಲ್‌ಐ ಯೋಜನೆಯಿಂದ 4.7 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಉತ್ಪಾದನೆ ನಿರೀಕ್ಷಿಸಲಾಗಿದೆ. 5 ಸಾವಿರ ಕೋಟಿ ರೂಗೂ ಅಧಿಕ ಬಂಡವಾಳ ಹೂಡಿಕೆ ಬರುವ ಸಾಧ್ಯತೆ ಇದೆ. ಈ ಯೋಜನೆಯಿಂದ 75 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆಯುವ ನಿರೀಕ್ಷೆ ಇದೆ.
ಪ್ರಧಾನಿಯವರ ‘ಮೇಕ್ ಇನ್ ಇಂಡಿಯಾ’ ಬಗ್ಗೆ ಐಟಿ ಹಾರ್ಡ್‌ವೇರ್ ಉದ್ಯಮ ಹೊಂದಿರುವ ಬದ್ಧತೆ ಮತ್ತು ನಂಬಿಕೆಗೆ ಧನ್ಯವಾದಗಳು ಎಂದು ಕೇಂದ್ರ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ರೈಲ್ವೆ ಸಚಿವ ಎ ವೈಷ್ಣವ್ ಟ್ವೀಟ್ ಮಾಡಿದ್ದಾರೆ. ಈ 40 ಅರ್ಜಿಗಳನ್ನು ಶಾರ್ಟ್ಲಿಸ್ಟ್ ಮಾಡಿ ಅಂತಿಮ ಪಟ್ಟಿಯನ್ನು ಸರ್ಕಾರ ಪ್ರಕಟಿಸುತ್ತದೆ.
Big thanks to IT hardware industry for your commitment and confidence in PM @narendramodi Ji’s ‘Make in India’ vision. pic.twitter.com/AJDPJfgop1
— Ashwini Vaishnaw (@AshwiniVaishnaw) August 31, 2023
ಇದನ್ನೂ ಓದಿ: ಎಬಿಆರ್ವೈ ಸ್ಕೀಮ್ ಮೂಲಕ ನಿರೀಕ್ಷೆಮೀರಿ ಹೊಸ ಉದ್ಯೋಗಸೃಷ್ಟಿ; ಸರ್ಕಾರದಿಂದ ದತ್ತಾಂಶ ಬಿಡುಗಡೆ
ಇದಕ್ಕೂ ಮುನ್ನ ಬುಧವಾರ (ಆಗಸ್ಟ್ 30) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, ಐಟಿ ಹಾರ್ಡ್‌ವೇರ್‌ನ ಪಿಎಲ್‌ಐ ಯೋಜನೆಗೆ ಕಂಪನಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯ ಕಂಪನಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಿವೆ. ಫಾಕ್ಸ್‌ಕಾನ್, ಎಚ್‌ಪಿ, ಡೆಲ್ ಮತ್ತು ಲೆನೊವೊದಂತಹ ಜಾಗತಿಕ ಆಟಗಾರರು ಅಷ್ಟೇ ಅಲ್ಲದೇ, ಫ್ಲೆಕ್ಸ್‌ಟ್ರಾನಿಕ್ಸ್, ಡಿಕ್ಸನ್, ಏಸರ್, ಥಾಂಪ್ಸನ್, ವಿವಿಡಿಎನ್ ಸೇರಿದಂತೆ ಕಂಪನಿಗಳು ಅರ್ಜಿ ಸಲ್ಲಿಸಿವೆ ಎಂದು ವೈಷ್ಣವ್ ಹೇಳಿದ್ದಾರೆ.
ಈ ಯೋಜನೆ ಏಕೆ ಅಗತ್ಯ?
ಐಟಿ ಹಾರ್ಡ್‌ವೇರ್ ಕ್ಷೇತ್ರಕ್ಕಾಗಿ ತಂದಿರುವ ಪಿಎಲ್‌ಐ ಯೋಜನೆಯ ಮೂಲಕ ಲ್ಯಾಪ್‌ಟಾಪ್‌ಗಳು, ಆಲ್ ಇನ್ ಒನ್ ಪಿಸಿಗಳು, ಸರ್ವರ್‌ಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಸಾಧನಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಈ ಯೋಜನೆಯಡಿ ಆಯ್ಕೆಯಾದ ಕಂಪನಿಗಳಿಗೆ ಸರ್ಕಾರದಿಂದ ಪ್ರೋತ್ಸಾಹಧನ ದೊರೆಯುತ್ತದೆ. ನವೆಂಬರ್ 1 ರಿಂದ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳಂತಹ ಐಟಿ ಉಪಕರಣಗಳ ಆಮದಿನ ಮೇಲೆ ಸರ್ಕಾರ ಹಲವಾರು ನಿರ್ಬಂಧಗಳನ್ನು ಘೋಷಿಸಿದೆ ಎಂಬ ಅರ್ಥದಲ್ಲಿ ಈ ಯೋಜನೆಯು ಮುಖ್ಯವಾಗಿದೆ. ಈಗ ಈ ಉತ್ಪನ್ನಗಳನ್ನು ನೇರವಾಗಿ ಆಮದು ಮಾಡಿಕೊಳ್ಳಲಾಗುವುದಿಲ್ಲ ಮತ್ತು ಇದಕ್ಕಾಗಿ ಪರವಾನಗಿ ತೆಗೆದುಕೊಳ್ಳುವುದು ಅಗತ್ಯವಾಗಿರುತ್ತದೆ.
ಇದನ್ನೂ ಓದಿ: ಮೊದಲ ತ್ರೈಮಾಸಿಕದಲ್ಲಿ ಶೇ. 8ಕ್ಕಿಂತ ಹೆಚ್ಚು ಆರ್ಥಿಕವೃದ್ಧಿ ಸಾಧ್ಯತೆ; ಆರ್ಥಿಕತಜ್ಞರ ಸರಾಸರಿ ಲೆಕ್ಕಾಚಾರ
ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಶೇ.17 ರಷ್ಟು ಬೆಳವಣಿಗೆಯಾಗಿದೆ
ಭಾರತವು ವಿಶ್ವಾಸಾರ್ಹ ಪೂರೈಕೆ ಸರಪಳಿ ಪಾಲುದಾರ ಮತ್ತು ಮೌಲ್ಯವರ್ಧಿತ ಪಾಲುದಾರನಾಗಿ ಹೊರಹೊಮ್ಮುತ್ತಿದೆ ಎಂದು ವೈಷ್ಣವ್ ಹೇಳಿದರು. ಕಂಪನಿಗಳು ಉತ್ಪಾದನೆ ಮತ್ತು ವಿನ್ಯಾಸಕ್ಕಾಗಿ ಭಾರತಕ್ಕೆ ಬರಲು ಸಂತೋಷವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದನೆಯು ವಾರ್ಷಿಕ ದರದಲ್ಲಿ 17 ಪ್ರತಿಶತದಷ್ಟು ಬೆಳೆದಿದೆ. ಈ ವರ್ಷ ಅದು $105 ಬಿಲಿಯನ್ ಗಡಿ ದಾಟಿದೆ. ಈ ಸಮಯದಲ್ಲಿ ಭಾರತವು ಮೊಬೈಲ್ ಫೋನ್‌ಗಳ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ. ಡಿಕ್ಸನ್ ತನ್ನ ಘಟಕವನ್ನು ನೋಯ್ಡಾದಲ್ಲಿ ಸ್ಥಾಪಿಸಿದೆ. ಅಲ್ಲಿ ಶೀಘ್ರದಲ್ಲೇ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ವೈಷ್ಣವ್ ಹೇಳಿದರು. ಆದಾಗ್ಯೂ ಹೆಚ್ಚಿನ ಕಂಪನಿಗಳು ಏಪ್ರಿಲ್, 2024 ರಿಂದ ಉತ್ಪಾದನೆಯನ್ನು ಪ್ರಾರಂಭಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ