PLI scheme: ಐಟಿ ಸರ್ವರ್, ಹಾರ್ಡ್​ವೇರ್​ಗೂ ಪಿಎಲ್​ಐ ಸ್ಕೀಮ್​; ಏನಿದು?

ಮೊಬೈಲ್ ಉತ್ಪಾದನೆಗೆ ಪಿಎಲ್​​ಐ ಸ್ಕೀಮ್ ಯಶಸ್ವಿಯಾಗಿರುವುದರಿಂದ ಹಾರ್ಡ್​​ವೇರ್ ವಿಚಾರದಲ್ಲಿಯೂ ಯಶಸ್ಸು ಸಿಗಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ. ಏನಿದು ಪಿಎಲ್​ಐ ಸ್ಕೀಮ್? ಇಲ್ಲಿದೆ ಮಾಹಿತಿ.

PLI scheme: ಐಟಿ ಸರ್ವರ್, ಹಾರ್ಡ್​ವೇರ್​ಗೂ ಪಿಎಲ್​ಐ ಸ್ಕೀಮ್​; ಏನಿದು?
ರಾಜೀವ್ ಚಂದ್ರಶೇಖರ್
Image Credit source: PTI
Updated By: Ganapathi Sharma

Updated on: Jan 12, 2023 | 10:38 AM

ನವದೆಹಲಿ: ಮೊಬೈಲ್ ಉತ್ಪಾದನೆಗೆ ‘ಉತ್ಪಾದನೆ ಆಧಾರಿತ ಭತ್ಯೆ ಯೋಜನೆ’ (PLI scheme) ಘೋಷಿಸಿ ಯಶಸ್ಸು ಕಂಡಿರುವುದರಿಂದ ಐಟಿ ಸರ್ವರ್ ಹಾಗೂ ಹಾರ್ಡ್​ವೇರ್ ಉತ್ಪಾದನೆಗೂ ಪಿಎಲ್​ಐ ಸ್ಕೀಮ್ ಪರಿಚಯಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಮೊಬೈಲ್ ಉತ್ಪಾದನೆಗೆ ಪಿಎಲ್​​ಐ ಸ್ಕೀಮ್ ಯಶಸ್ವಿಯಾಗಿರುವುದರಿಂದ ಹಾರ್ಡ್​​ವೇರ್ ವಿಚಾರದಲ್ಲಿಯೂ ಯಶಸ್ಸು ಸಿಗಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ. ಈ ವಿಚಾರವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಮಾಹಿತಿ ನೀಡಿದ್ದಾರೆ.

‘ವಿಎಲ್​ಎಸ್​ಐ ಡಿಸೈನ್ ಕಾನ್ಫರೆನ್ಸ್ 2023’ಯಲ್ಲಿ ಮಾತನಾಡಿದ ಅವರು, ಭಾರತವು ಸೆಮಿ ಕಂಡಕ್ಟರ್ ಉತ್ಪಾದನೆ ಹಬ್ ಆಗಿ ಹೊರಹೊಮ್ಮಲಿದೆ. ಜಾಗತಿಕ ಅನ್ವೇಷಣೆಗೆ ಮಹತ್ವದ ಕೊಡುಗೆ ನೀಡಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ‘ಭಾರತ ಸೆಮಿಕಂಡಕ್ಟರ್ ಮಿಷನ್’ ಸೇರಿದಂತೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು, ಉತ್ತೇಜಿಸಲು ಹಾಗೂ ಉತ್ಪಾದನೆಯ ವೇಗವರ್ಧಿಸಲು ಮಾಡಲು 10 ಶತಕೋಟಿ ಡಾಲರ್ ಮೀಸಲಿಟ್ಟಿದೆ ಎಂದು ಅವರು ಹೇಳಿದ್ದಾರೆ.

2024ರ ವೇಳೆಗೆ ಭಾರತವು ಸೆಮಿ ಕಂಡಕ್ಟರ್ ಉತ್ಪಾದನೆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದ್ದು, ಹೆಚ್ಚು ದೇಶೀಯ ಉತ್ಪಾದನೆಯ ನಿರೀಕ್ಷೆ ಇದೆ. ಸರ್ಕಾರ ಕೂಡ ಮುಂದಿನ ಜನರೇಷನ್ ಅಪ್ಲಿಕೇಷನ್​ಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟಪ್​ಗಳಲ್ಲಿ 200 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: Bank NPAs: ಬ್ಯಾಂಕ್​ಗಳ ಅನುತ್ಪಾದಕ ಆಸ್ತಿ 6 ವರ್ಷಗಳ ಕನಿಷ್ಠ ಮಟ್ಟಕ್ಕೆ; ನಿರ್ಮಲಾ ಸೀತಾರಾಮನ್

ಏನಿದು ಪಿಎಲ್​ಐ ಸ್ಕೀಮ್?

ಪಿಎಲ್​ಐ ಸ್ಕೀಮ್ ಇದರ ವಿಸ್ತೃತ ರೂಪ ಪ್ರೊಡಕ್ಷನ್ ಲಿಂಕ್ಡ್ ಇನ್​ಸೆಂಟಿವ್ ಸ್ಕೀಮ್. ಅಂದರೆ, ಕನ್ನಡದಲ್ಲಿ ಉತ್ಪಾದನೆ ಆಧಾರಿತ ಭತ್ಯೆ ಎನ್ನಬಹುದು. ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಮತ್ತು ಉತ್ಪಾದನೆ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಮೊಬೈಲ್ ಫೋನ್ ಉತ್ಪಾದನೆಗಾಗಿ ಈಗಾಗಲೇ ಪಿಎಲ್​ಐ ಸ್ಕೀಮ್ ಜಾರಿಗೊಳಿಸಲಾಗಿದ್ದು, ಪರಿಣಾಮವಾಗಿ ದೇಶದಲ್ಲಿ ಸ್ಮಾರ್ಟ್​​ಫೋನ್ ಉತ್ಪಾದನೆ ಹೆಚ್ಚಾಗಿದೆ ಎಂಬುದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ. 2022ರ ಏಪ್ರಿಲ್ – ಅಕ್ಟೋಬರ್ ಅವಧಿಯಲ್ಲಿ ಭಾರತವು ಒಟ್ಟು 5 ಶತಕೋಟಿ ಡಾಲರ್​ ಮೌಲ್ಯದ ಸ್ಮಾರ್ಟ್​​ಫೋನ್​ಗಳನ್ನು ರಫ್ತು ಮಾಡಿತ್ತು. ಅದಕ್ಕೂ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022ರಲ್ಲಿ ಸ್ಮಾರ್ಟ್​​ಫೋನ್​ಗಳ ರಫ್ತು ಪ್ರಮಾಣದಲ್ಲಿ ಶೇಕಡಾ 127ರಷ್ಟು ಹೆಚ್ಚಾಗಿತ್ತು. ಇದೀಗ ಪಿಎಲ್​ಐ ಸ್ಕೀಮ್​ ಮೂಲಕ ಐಟಿ ಸರ್ವರ್, ಹಾರ್ಡ್​ವೇರ್​ ದೇಶೀಯ ಉತ್ಪಾದನೆ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ