ಇತ್ತೀಚೆಗೆ ಭಾರತ್ ಫೋರ್ಜ್ ಕಂಪನಿಯ ಛೇರ್ಮನ್ ಬಾಬಾ ಕಲ್ಯಾಣಿ (Babasaheb Kalyani) ಅವರ ತಂಗಿಯ ಇಬ್ಬರು ಮಕ್ಕಳು ಇಡೀ ಕಲ್ಯಾಣಿ ಗ್ರೂಪ್ನ ಆಸ್ತಿಯಲ್ಲಿ ಪಾಲು ಕೇಳಿ ಕೇಸು ದಾಖಲಿಸಿದ ಘಟನೆ ಎಲ್ಲರ ಗಮನ ಸೆಳೆದಿದೆ. ಆಸ್ತಿಗಾಗಿ ಎಂಥ ಬಡವರೂ ಕಿತ್ತಾಡುತ್ತಾರೆ, ಇನ್ನು ಸಾವಿರಾರು ಕೋಟಿ ರೂ ಸಂಪತ್ತಿರುವ ಬಿಸಿನೆಸ್ ಆಸ್ತಿಗಾಗಿ ವ್ಯಾಜ್ಯಗಳು ಇರಲಾರವೇ? ಭಾರತದಲ್ಲಿ ಇಂಥ ಹಲವು ಕೌಟುಂಬಿಕ ಆಸ್ತಿ ಕಲಹಗಳು ನಡೆದಿವೆ. ಬಿಸಿನೆಸ್ ಬೆಳೆದಂತೆ ಕುಟುಂಬದೊಳಗೆ ಅಧಿಕಾರ ಮತ್ತು ಹಕ್ಕು ಸ್ಥಾಪನೆಗೆ ಪೈಪೋಟಿ ನಡೆಯುತ್ತವೆ. ಕಲ್ಯಾಣಿ ಕುಟುಂಬದಲ್ಲೂ ಇಂಥ ವ್ಯಾಜ್ಯ ನಡೆದಿದೆ. ಸಮೀರ್ ಮತ್ತು ಪಲ್ಲವಿ ಅವರು ಕೇಸ್ ಹಾಕಿರುವುದು ಈ ವ್ಯಾಜ್ಯದ ಸುದೀರ್ಘ ಇತಿಹಾಸದ ಹೊಸ ಅಧ್ಯಾಯ ಮಾತ್ರವೇ. ಅಷ್ಟಕ್ಕೂ ಈ ಫ್ಯಾಮಿಲಿಯ ಆಸ್ತಿ ಕಲಹ (Kalyani family property dispute) ನಿಜಕ್ಕೂ ಸಿನಿಮಾ ಥ್ರಿಲ್ಲರ್ನಂತೆ ಭಾಸವಾಗಬಹುದು.
ಈಗಿನ ಕಲ್ಯಾಣಿ ಫ್ಯಾಮಿಲಿಯ ಮೂಲ ಅಣ್ಣಪ್ಪ ಕಲ್ಯಾಣಿ. ಇವರು ಕರ್ನಾಟಕದ ನಂಟಿರುವ ಲಿಂಗಾಯತ ಸಮಾಜಕ್ಕೆ ಸೇರಿದ ಕುಟುಂಬದವರು. ಅಣ್ಣಪ್ಪಗೆ ಇಬ್ಬರು ಪತ್ನಿಯರು. ಪಾರ್ವತಿ ಕಲ್ಯಾಣಿ, ಅಕುತಾಯ್ ಕಲ್ಯಾಣಿ. ಮೊದಲ ಪತ್ನಿಗೆ ಮಕ್ಕಳಿಲ್ಲ. ಎರಡನೇ ಪತ್ನಿ ಅಕುತಾಯ್ ಕಲ್ಯಾಣಿಗೆ ನೀಲಕಂಠ ಕಲ್ಯಾಣಿ ಎಂಬ ಗಂಡು ಸಂತಾನ. ಇವರೇ ಭಾರತ್ ಫೋರ್ಜ್ ಕಂಪನಿಯನ್ನು 1961ರಲ್ಲಿ ಸ್ಥಾಪಿಸಿದ್ದು. ಈಗಿನ ಕಲ್ಯಾಣಿ ಗ್ರೂಪ್ಗೆ ಮೂಲನೆಲೆ ರೂಪಿಸಿದ್ದು ನೀಲಕಂಠ ಕಲ್ಯಾಣಿ. ಇವರೀಗ ಬದುಕಿಲ್ಲ.
ನೀಲಕಂಠ ಕಲ್ಯಾಣಿ ಮತ್ತವರ ಪತ್ನಿ ಸುಲೋಚನಾ ದಂಪತಿಗೆ ಬಾಬಾಸಾಹೇಬ್ ಕಲ್ಯಾಣಿ, ಗೌರಿಶಂಕರ್ ಕಲ್ಯಾಣಿ ಮತ್ತು ಸುಗಂಧ ಹಿರೇಮಠ್ ಎಂಬ ಮೂವರು ಮಕ್ಕಳು. ಬಾಬಾ ಸಾಹೇಬ್ ಕಲ್ಯಾಣಿ ಈಗ ಭಾರತ್ ಫೋರ್ಜ್ನ ಛೇರ್ಮನ್ ಆಗಿದ್ದಾರೆ. ಇಡೀ ಕಲ್ಯಾಣಿ ಫ್ಯಾಮಿಲಿಯ ಮುಖ್ಯಸ್ಥ ಅವರು. ಇವರಿಗೆ ಅಮಿತ್ ಕಲ್ಯಾಣಿ ಎಂಬ ಮಗ ಇದ್ದಾರೆ.
ನೀಲಕಂಠ ಕಲ್ಯಾಣಿ ಅವರ ಎರಡನೇ ಮಗ ಗೌರಿಶಂಕರ್. ಇವರಿಗೆ ಶೀತಲ್ ಮತ್ತು ವಿರಾಜ್ ಎಂಬಿಬ್ಬರು ಮಕ್ಕಳಿದ್ದಾರೆ. ನೀಲಕಂಠ ಅವರ ಕಿರಿಯ ಪುತ್ರಿ ಸುಗಂಧಾ ಹಿರೇಮಠ ಅವರು ಹಿಕಲ್ ಕಂಪನಿಯ ಸಂಸ್ಥಾಪಕ ಜೈದೇವ್ ಹಿರೇಮಠ ಅವರನ್ನು ವರಿಸಿದ್ದಾರೆ. ಇವರಿಗೆ ಸಮೀರ್ ಮತ್ತು ಪಲ್ಲವಿ ಎಂಬಿಬ್ಬರು ಮಕ್ಕಳಿದ್ದಾರೆ. ಇದು ಕಲ್ಯಾಣಿ ಫ್ಯಾಮಿಲಿ ಚಿತ್ರಣ.
ಇದನ್ನೂ ಓದಿ: ವಿಪ್ರೋದಲ್ಲಿ ಥಿಯೆರಿ ಡೆಲಾಪೋರ್ಟೆ ನಿರ್ಗಮನ; ನೂತನ ಸಿಇಒ ಶ್ರೀನಿವಾಸ್ ಪಾಲಿಯಾ ಯಾರು?
ಜೈದೇವ್ ಹಿರೇಮಠ ಅವರು 1988ರಲ್ಲಿ ಹಿಕಲ್ ಕಂಪನಿಯನ್ನು ಸ್ಥಾಪಿಸಿದ್ದರು. ಇದು ರಾಸಾಯನಿಕ ಉತ್ಪನ್ನಗಳನ್ನು ತಯಾರಿಸುವ ಕಂಪನಿ. ಮಹಾರಾಷ್ಟ್ರದ ರಾಯಗಡದಲ್ಲಿ ಹಿಕಲ್ ಫ್ಯಾಕ್ಟರಿ ಸ್ಥಾಪನೆಗೆ ನೀಲಕಂಠ ಕಲ್ಯಾಣಿ ತಮ್ಮ ಸೂರಜ್ಮುಖಿ ಇನ್ವೆಸ್ಟ್ಮೆಂಟ್ ಮೂಲಕ ಬಂಡವಾಳ ಕೊಟ್ಟಿದ್ದರು. ಇದಕ್ಕೆ ಬದಲಾಗಿ ಹಿಕಲ್ನ ಕೆಲ ಷೇರುಗಳನ್ನು ಸೂರಜ್ಮುಖಿ ಕಂಪನಿಗೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಷೇರುಗಳನ್ನು ಹಿಕಲ್ಗೆ ವಾಪಸ್ ರವಾನೆ ಆಗಬೇಕೆಂದು ಒಪ್ಪಂದವಾಗಿರುತ್ತದೆ. ಈಗ ಈ ವಿಚಾರವೇ ಕಲ್ಯಾಣಿ ಕುಟುಂಬದೊಳಗೆ ಬೆಂಕಿ ಹುಟ್ಟುಹಾಕಿರುವುದು.
ಸೂರಜ್ಮುಖಿ ಇನ್ವೆಸ್ಟ್ಮೆಂಟ್ನೊಂದಿಗೆ ಇದ್ದ ಹಿಕಲ್ ಷೇರುಗಳು ಈಗ ಬಾಬಾ ಕಲ್ಯಾಣಿಗೆ ಹೋಗಿವೆ. ಹಿಕಲ್ನಲ್ಲಿ ಬಾಬಾ ಕಲ್ಯಾಣಿ ಷೇರುಪಾಲು ಶೇ. 34ರಷ್ಟಿದೆ. ಹಿರೇಮಠರೊಂದಿಗಿರುವ ಷೇರುಪಾಲು ಶೇ. 35ರಷ್ಟಿದೆ. ಎರಡು ವರ್ಷದ ಹಿಂದೆ ಬಾಬಾ ಕಲ್ಯಾಣಿ ಹಿಕಲ್ನ ಷೇರು ಖರೀದಿಸಿ ತಮ್ಮ ಪಾಲನ್ನು ಹೆಚ್ಚಿಸಲು ಮಾಡಿದ ಪ್ರಯತ್ನವನ್ನು ಸುಗಂಧಾ ಹಿರೇಮಠ ಹಾಗೂ ಕುಟುಂಬದವರು ತಡೆದಿದ್ದರು. ಇದು ಬಾಬಾ ಕಲ್ಯಾಣಿಯ ಆಕ್ರೋಶಕ್ಕೆ ಕಾರಣವಾಗಿದೆ. ಹಿಕಲ್ ಮ್ಯಾನೇಜ್ಮೆಂಟ್ ವಿರುದ್ಧ ಕಲ್ಯಾಣಿ ಗ್ರೂಪ್ ದಾಖಲಿಸಿದ ಕೇಸ್ ಇದೆ.
ಆದರೆ, ತಮ್ಮ ತಾಯಿ ಸುಲೋಚನಾ ಸತ್ತ ನಂತರ ಹಿಕಲ್ನ ಕಲ್ಯಾಣಿ ಗ್ರೂಪ್ ಹೊಂದಿರುವ ಪೂರ್ಣ ಷೇರುಗಳು ತಮ್ಮ ಕುಟುಂಬಕ್ಕೆ ರವಾನೆಯಾಗಬೇಕು ಎನ್ನುವ ಮಾತಾಗಿತ್ತು ಎಂದು ಸುಗಂಧಾ ಹಿರೇಮಠ ಹೇಳುತ್ತಾರೆ. ಮುಂಬೈನ ತಾಜ್ ಹೋಟೆಲ್ನಲ್ಲಿ 1994ರಲ್ಲಿ ಐಸಿಐಸಿಐ ಬ್ಯಾಂಕ್ ಛೇರ್ಮನ್ ಎನ್ ವಾಘುಲ್ ಮತ್ತು ಮಾಜಿ ಸೆಬಿ ಛೇರ್ಮನ್ ಎಸ್ ಎಸ್ ನಾಡಕರ್ಣಿ ಅವರ ಉಪಸ್ಥಿತಿಯಲ್ಲಿ ತಂದೆ ತಾಯಿ ಹಾಗೂ ಅಣ್ಣ ಬಾಬಾ ಕಲ್ಯಾಣಿ ಮಧ್ಯೆ ತೀರ್ಮಾನ ಆಗಿತ್ತು. ತಂದೆ ಶ್ರೀಕಂಠ ಕಲ್ಯಾಣಿ ಅವರು ಕುಟುಂಬದ ಈ ಹೊಂದಾಣಿಕೆಯ ವಿವರವನ್ನು ಒಂದು ಕಾಗದಪತ್ರದಲ್ಲಿ ಬರೆದು ವಾಘುಲ್ಗೆ ನೀಡಿದ್ದರು. ಈ ಪತ್ರವನ್ನು ತಮ್ಮ ತಾಯಿ ಸುಲೋಚನಾ ಅವರು ತನಗೆ ನೀಡಿದರು ಎಂದು ಸುಗಂಧಾ ಹಿರೇಮಠ ಹೇಳುತ್ತಾರೆ.
ಇದನ್ನೂ ಓದಿ: 50 ರೂ ಇಟ್ಟುಕೊಂಡು ದೇಶ ಬಿಟ್ಟು, ಬ್ರೂನೇ ಸುಲ್ತಾನರಿಂದ ಶಭಾಷ್ಗಿರಿ ಪಡೆಯುವ ಮಟ್ಟಕ್ಕೆ ಬೆಳೆದ ರಿಯಲ್ ಎಸ್ಟೇಟ್ ಕಿಂಗ್
ತಮ್ಮ ತಂಗಿಯ ಈ ಮಾತನ್ನು ಬಾಬಾ ಕಲ್ಯಾಣಿ ನಿರಾಕರಿಸುತ್ತಿಲ್ಲ. ಆದರೆ, ತಮ್ಮ ಬಳಿ ಇರುವ 2.2 ಲಕ್ಷ ಷೇರುಗಳನ್ನು ಹಿರೇಮಠ ಕುಟುಂಬ ವಾಪಸ್ ಖರೀದಿಸಬೇಕಿತ್ತು. ಅದಕ್ಕೆ 1992ರ ಏಪ್ರಿಲ್ 1ರಿಂದ 2000ರ ಡಿಸೆಂಬರ್ 31ರವರೆಗೆ ಕಾಲಾವಕಾಶ ಕೊಡಲಾಗಿತ್ತು. ಅವರು ಖರೀದಿಸಲಿಲ್ಲವಾದ್ದರಿಂದ ಆ ಷೇರು ತಮ್ಮ ಬಳಿ ಉಳಿದುಕೊಂಡಿದೆ ಎಂದು ಬಾಬಾ ಕಲ್ಯಾಣಿ ವಾದಿಸುತ್ತಾರೆ.
ಸುಗಂಧಾ ಹಿರೇಮಠ ಅವರು ತಮ್ಮ ಅಣ್ಣನ ಈ ವಾದವನ್ನೂ ನಿರಾಕರಿಸುತ್ತಿಲ್ಲ. ಅವರ ಪ್ರಕಾರ 1992ರಿಂದ 2000ರ ಅವಧಿಯಲ್ಲಿ ಆ ಷೇರುಗಳನ್ನು ಖರೀದಿಸಲು ಅವರು ಪ್ರಯತ್ನಿಸಿದ್ದರಂತೆ. ಆದರೆ, ಯಾವ್ಯಾವುದೋ ಕಾರಣಕ್ಕೆ ಖರೀದಿಗೆ ಅವಕಾಶವನ್ನೇ ನೀಡುತ್ತಿರಲಿಲ್ಲ ಎನ್ನುತ್ತಾರೆ ಅವರು.
ಇದೀಗ ಸುಗಂಧ ಮತ್ತು ಜೈದೇವ್ ಹಿರೇಮಠರ ಮಕ್ಕಳಾದ ಸಮೀರ್ ಮತ್ತು ಪಲ್ಲವಿ ಅವರು ಈಗ ಇಡೀ ಕಲ್ಯಾಣಿ ಫ್ಯಾಮಿಲಿಯ ಆಸ್ತಿಯಲ್ಲಿ ಸರಿಯಾದ ಪಾಲಾಗಬೇಕು ಎಂದು ಒತ್ತಾಯಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಕಲ್ಯಾಣಿ ಅವಿಭಜಿತ ಕುಟುಂಬ ಇದ್ದಾಗ ಬಿಸಿನೆಸ್ಗಳು ಆರಂಭವಾಗಿದ್ದವು. ಹೀಗಾಗಿ, ಕಲ್ಯಾಣಿ ಗ್ರೂಪ್ನ ಎಲ್ಲಾ ಕಂಪನಿಗಳಲ್ಲಿ ತಮಗೂ ಪಾಲು ಬರಬೇಕಿದೆ ಎಂದು ಈ ಇಬ್ಬರು ಕೇಳುತ್ತಿದ್ದಾರೆ. ಅಂದಹಾಗೆ, ಕಲ್ಯಾಣಿ ಗ್ರೂಪ್ನ ವಿವಿಧ ಕಂಪನಿಗಳ ಮಾರುಕಟ್ಟೆ ಮೌಲ್ಯ ಸುಮಾರು 70,000 ಕೋಟಿ ರೂನಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ