ಬೆಂಗಳೂರು, ಫೆಬ್ರುವರಿ 6: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಹಾಗೂ ಕೆಲ ರಾಜ್ಯಗಳ ನಡುವೆ ಜಟಾಪಟಿ ಮುಂದುವರಿದಿದೆ. ಅದರಲ್ಲೂ ಕರ್ನಾಟಕ, ಕೇರಳ, ತಮಿಳುನಾಡು ಮೊದಲಾದ ದಕ್ಷಿಣ ರಾಜ್ಯಗಳು ಬಹಿರಂಗವಾಗಿ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕುವುದು ಹೆಚ್ಚಾಗಿದೆ. ನಮ್ಮ ತೆರಿಗೆ ನಮ್ಮ ಹಕ್ಕು (Our Tax Our Right) ಎಂದು ಸಿದ್ದರಾಮಯ್ಯ ಆದಿಯಾಗಿ ದಕ್ಷಿಣ ಸಿಎಂಗಳು ಹೇಳುತ್ತಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಪ್ರತಿಕ್ರಿಯಿಸಬೇಕಾಯಿತು. ಬೆಂಗಳೂರಿನವರು ಕೊಡುವ ತೆರಿಗೆ ಹಣವನ್ನು ಕಲ್ಯಾಣ ಕರ್ನಾಟಕಕ್ಕೆ ಯಾಕೆ ಕೊಡುತ್ತೀರಿ ಎಂದು ಹಣಕಾಸು ಸಚಿವೆ ಪ್ರಶ್ನಿಸಿದ್ದರು. ಅಷ್ಟಕ್ಕೂ ಕೇಂದ್ರದ ತೆರಿಗೆ ಹಂಚಿಕೆಗೂ, ರಾಜ್ಯದೊಳಗಿನ ತೆರಿಗೆ ಹಣ ವಿತರಣೆಗೂ (tax sharing formula) ಸಂಬಂಧ ಇದೆಯಾ? ತೆರಿಗೆ ಹಂಚಿಕೆ ಹೇಗೆ ನಡೆಯುತ್ತದೆ?
ಕೇಂದ್ರಕ್ಕೆ ನೇರವಾಗಿ ಯಾವ ತೆರಿಗೆಯೂ ಹೋಗುವುದಿಲ್ಲ. ರಾಜ್ಯಗಳಲ್ಲಿ ಕಲೆಹಾಕುವ ತೆರಿಗೆಗಳು ಕೇಂದ್ರಕ್ಕೆ ಹೋಗುತ್ತವೆ. ಈ ತೆರಿಗೆಯ ಒಟ್ಟು ಮೊತ್ತದಲ್ಲಿ ಒಂದಷ್ಟು ಭಾಗ ಕೇಂದ್ರ ಸರ್ಕಾರ, ಉಳಿದ ಭಾಗ ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ. ಇದನ್ನು ಕೇಂದ್ರ ಸರ್ಕಾರ ನಿರ್ಧರಿಸುವುದಿಲ್ಲ. ಇದನ್ನು ನಿರ್ಧರಿಸಲೆಂದೇ ಹಣಕಾಸು ಆಯೋಗವನ್ನು ರಚಿಸಲಾಗುತ್ತದೆ. ಮೊನ್ನೆಮೊನ್ನೆ ಸರ್ಕಾರ 16ನೇ ಹಣಕಾಸು ಆಯೋಗ ರಚಿಸಿದೆ. ಈ ವರ್ಷ ನಾವು ಕಾಣುತ್ತಿರುವ ತೆರಿಗೆ ಹಂಚಿಕೆಯನ್ನು ಶಿಫಾರಸು ಮಾಡಿದ್ದು 15ನೇ ಹಣಕಾಸು ಆಯೋಗ. ಈ ಆಯೋಗ ಮಾಡಿದ ಶಿಫಾರಸನ್ನು ಸರ್ಕಾರ ಪಾಲಿಸುತ್ತದೆ. ಇದನ್ನೇ ನಿರ್ಮಲಾ ಸೀತಾರಾಮನ್ ನಿನ್ನೆ ಸ್ಪಷ್ಟಪಡಿಸಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ಎರಡು ಭಾಗ ಇರುತ್ತದೆ. ಲಂಬ ತೆರಿಗೆ ಹಂಚಿಕೆ ಅಥವಾ ವರ್ಟಿಕಲ್ ಡೆವಲ್ಯೂಶನ್ (Vertical tax devolution), ಮತ್ತು ಸಮತಲ ತೆರಿಗೆ ಹಂಚಿಕೆ (Horizontal tax devolution) ಅಥವಾ ಹಾರಿಜಾಂಟಲ್ ಡೆವಲ್ಯೂಶನ್. ಇಲ್ಲಿ ವರ್ಟಿಕಲ್ ಡೆವಲ್ಯೂಶನ್ನಲ್ಲಿ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಎಷ್ಟು ಹಂಚಿಕೆ ಆಗಬೇಕು ಎಂಬುದು ನಿರ್ಧಾರವಾಗುತ್ತದೆ. ಹಾರಿಜಾಂಟಲ್ ಡೆವಲ್ಯೂಶನ್ನಲ್ಲಿ ರಾಜ್ಯ ರಾಜ್ಯಗಳ ಮಧ್ಯೆ ಎಷ್ಟು ಹಂಚಿಕೆ ಆಗಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.
15ನೇ ಹಣಕಾಸು ಆಯೋಗವು ವರ್ಟಿಕಲ್ ಡೆವಲ್ಯೂಶನ್ನಲ್ಲಿ ರಾಜ್ಯಗಳಿಗೆ ಒಟ್ಟು ಶೇ. 41ರಷ್ಟು ತೆರಿಗೆ ಪಾಲು ಸಿಗಬೇಕೆಂದು ಶಿಫಾರಸು ಮಾಡಿದೆ. ಅಂದರೆ ಸಂಗ್ರಹಿಸಾದ 100 ರೂ ತೆರಿಗೆಯಲ್ಲಿ ರಾಜ್ಯಗಳ ಪಾಲು 41 ರುಪಾಯಿ ಇರುತ್ತದೆ.
ಇನ್ನು ಹಾರಿಜಾಂಟಲ್ ಡೆವಲ್ಯೂಶನ್ ಅಥವಾ ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಬೇರೆ ಸೂತ್ರ ಮತ್ತು ಮಾನದಂಡಗಳನ್ನು ಇಡಲಾಗಿದೆ. ಜನಸಂಖ್ಯೆ, ಆದಾಯ, ಅರಣ್ಯ, ತೆರಿಗೆ ಸಂಗ್ರಹ ಮೊದಲಾದ ಮಾನದಂಡಗಳು ರಾಜ್ಯಗಳಿಗೆ ತೆರಿಗೆ ಹಂಚಿಕೆ ಎಷ್ಟಾಗಬೇಕೆಂದು ಪ್ರಮುಖ ಪಾತ್ರ ವಹಿಸುತ್ತವೆ. ಇದು ಈಗ ಕರ್ನಾಟಕ ಸೇರಿ ಕೆಲ ರಾಜ್ಯಗಳಿಗೆ ಸಿಟ್ಟು ತಂದಿರುವುದು. ಹೆಚ್ಚು ತೆರಿಗೆ ಸಂಗ್ರಹ ಮಾಡಿದರೂ ಕಡಿಮೆ ತೆರಿಗೆ ಪಾಲು ಸಿಗುತ್ತಿದೆ ಎಂದು ಕರ್ನಾಟಕ, ತಮಿಳುನಾಡು ಮೊದಲಾದ ರಾಜ್ಯಗಳು ವಾದಿಸುತ್ತಿವೆ.
ಇಲ್ಲಿ ಕೊಟ್ಟಿರುವ ಪರ್ಸಂಟೇಜ್ ಪ್ರಮಾಣವು ಆಯಾ ಮಾನದಂಡಕ್ಕೆ ನೀಡಲಾಗಿರುವ ತೂಕ ಅಥವಾ ಪ್ರಾಧಾನ್ಯತೆಯಾಗಿದೆ. ಇಲ್ಲಿ ಆದಾಯ ಅಂತರ ಎಂದರೆ ದೇಶದ ಅತಿಹೆಚ್ಚು ತಲಾದಾಯ ಇರುವ ರಾಜ್ಯದ ಜಿಎಸ್ಡಿಪಿಗೆ ಹೋಲಿಸಿದರೆ ಹಿಂದಿನ ಮೂರು ವರ್ಷದಲ್ಲಿ ಒಂದು ರಾಜ್ಯದ ಜಿಎಸ್ಡಿಪಿ ಎಷ್ಟಿದೆ ಎಂಬುದು.
ಜನಸಂಖ್ಯೆಯು 1971ರ ಸೆನ್ಸಸ್ನ ಅಂಕಿ ಅಂಶವನ್ನು ಪರಿಗಣಿಸಲಾಗುತ್ತದೆ. ಜನಸಂಖ್ಯೆ ಬೆಳವಣಿಗೆ ಎಂದರೆ 1971ರಿಂದ ಒಂದು ರಾಜ್ಯದಲ್ಲಿ ಆಗಿರುವ ಜನಸಂಖ್ಯಾ ಹೆಚ್ಚಳ ಎಷ್ಟು ಎಂಬುದು.
ಮೊದಲಿಂದಲೂ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಬಂಗಾಳ ಮೊದಲಾದ ರಾಜ್ಯಗಳು ಬಹಳ ಹಿಂದುಳಿದಿವೆ. ಇಲ್ಲಿ ಜನಸಂಖ್ಯೆಯೂ ಹೆಚ್ಚಿದೆ. ಉತ್ತರಪ್ರದೇಶದಲ್ಲಿ ಗರಿಷ್ಠ ಜನಸಂಖ್ಯೆ ಇದೆ. ಹೀಗಾಗಿ ಈ ರಾಜ್ಯಗಳಿಗೆ ಸಜವಾಗಿ ಹೆಚ್ಚು ತೆರಿಗೆ ಪಾಲು ಸಿಗುತ್ತದೆ.
16ನೇ ಹಣಕಾಸು ಆಯೋಗ ಈ ಮೇಲಿನ ತೆರಿಗೆ ಹಂಚಿಕೆ ಮಾನದಂಡಗಳನ್ನು ಬದಲಿಸುವ ಅಧಿಕಾರ ಹೊಂದಿರುತ್ತದೆ. ಅಸಮಾಧಾನಗೊಂಡಿರುವ ರಾಜ್ಯಗಳು ಆಯೋಗದ ಜೊತೆ ಮಾತನಾಡಿ ತಮ್ಮ ವಾದ ಮುಂದಿಡಬಹುದು. ಈ ಆಯೋಗ ಮಾಡುವ ಶಿಫಾರಸುಗಳನ್ನು ಸರ್ಕಾರ ಪಾಲಿಸುತ್ತದೆ.
ಇದನ್ನೂ ಓದಿ: ಕರ್ನಾಟಕ ಕೈ ಶಾಸಕರ ಪ್ರತಿಭಟನೆ ಲೋಕಸಭೆಯಲ್ಲಿ ಪ್ರಸ್ತಾಪ: ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು
ಒಟ್ಟು ತೆರಿಗೆ ಹಂಚಿಕೆ: 12,19,782.85 ಕೋಟಿ ರೂ
ಸಂ | ರಾಜ್ಯ | ಶೇಕಡಾವಾರು ತೆರಿಗೆ ಪಾಲು | ತೆರಿಗೆ ಮೊತ್ತ (ಕೋಟಿಯಲ್ಲಿ) |
1) | ಉತ್ತರ ಪ್ರದೇಶ | 17.939% | 2,18,816.84 |
2) | ಬಿಹಾರ | 10.058% | 1,22,685.76 |
3) | ಮಧ್ಯಪ್ರದೇಶ | 7.850% | 95,752.96 |
4) | ಪಶ್ಚಿಮ ಬಂಗಾಳ | 7.523% | 91,764.26 |
5) | ಮಹಾರಾಷ್ಟ್ರ | 6.317% | 77,053.69 |
6) | ರಾಜಸ್ಥಾನ | 6.026% | 73.504.11 |
7) | ಒಡಿಶಾ | 4.528% | 55,231.76 |
8) | ತಮಿಳುನಾಡು | 4.079% | 49,754.95 |
9) | ಆಂಧ್ರಪ್ರದೇಶ | 4.047% | 49,364.61 |
10) | ಕರ್ನಾಟಕ | 3.647% | 44,485.59 |
11) | ಗುಜರಾತ್ | 3.478% | 42,424.05 |
12) | ಛತ್ತೀಸ್ಗಡ್ | 3.407% | 41,557.99 |
13) | ಜಾರ್ಖಂಡ್ | 3.307% | 40,338.22 |
14) | ಅಸ್ಸಾಮ್ | 3.128% | 38,154.81 |
15) | ತೆಲಂಗಾಣ | 2.102% | 25,639.84 |
16) | ಕೇರಳ | 1.925% | 23,480.81 |
17) | ಪಂಜಾಬ್ | 1.807% | 22,041.48 |
18) | ಅರುಣಾಚಲಪ್ರದೇಶ | 1.757% | 21,431.59 |
19) | ಉತ್ತರಾಖಂಡ್ | 1.118% | 13,637.15 |
20) | ಹರ್ಯಾಣ | 1.093% | 13,332.23 |
21) | ಹಿಮಾಚಲಪ್ರದೇಶ | 0.830% | 10,124.20 |
22) | ಮೇಘಾಲಯ | 0.716% | 9,355.73 |
23) | ಮಣಿಪುರ | 0.716% | 8,733.65 |
24) | ತ್ರಿಪುರಾ | 0.708% | 8,636.05 |
25) | ನಾಗಾಲ್ಯಾಂಡ್ | 0.569% | 6,940.56 |
26) | ಮಿಝೋರಾಮ್ | 0.500% | 6,098.93 |
27) | ಸಿಕ್ಕಿಂ | 0.388% | 4,732.76 |
28) | ಗೋವಾ | 0.386% | 4,708.37 |
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ