ನವದೆಹಲಿ, ಮಾರ್ಚ್ 23: ಕೋವಿಡ್ ಬಳಿಕ ಚೀನಾ ದೇಶ ಕ್ರಮೇಣವಾಗಿ ಹೂಡಿಕೆಗಳನ್ನು (FDI- Foreign Direct Investment) ಕಳೆದುಕೊಳ್ಳುತ್ತಿದೆ. 2021ರಿಂದ ಈಚೆ ಚೀನಾಗೆ ವಿದೇಶೀ ನೇರ ಹೂಡಿಕೆ ಅಥವಾ ಎಫ್ಡಿಐ ಹರಿದುಬರುವುದು ಶೇ. 99ರಷ್ಟು ನಿಂತಿದೆಯಂತೆ. ಕೋವಿಡ್ ಸಂದರ್ಭದಲ್ಲಿ ದೀರ್ಘಾವಧಿ ಲಾಕ್ಡೌನ್ ಕಾರಣದಿಂದ ಜಾಗತಿಕ ಸರಕು ಸರಬರಾಜು ಸರಪಳಿ ವ್ಯವಸ್ಥೆ ದುರ್ಬಲವಾಗಿ ಹೋಗಿತ್ತು. ಈ ಕಾರಣದಿಂದ ಅಮೆರಿಕನ್ ಕಂಪನಿಗಳು ಚೀನಾದಿಂದ ತಮ್ಮ ಉತ್ಪಾದನಾ ಕಾರ್ಯಗಳನ್ನು ಹೊರಗೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ವಿಯೆಟ್ನಾಂ, ಫಿಲಿಪ್ಪೈನ್ಸ್, ಇಂಡೋನೇಷ್ಯಾ, ಭಾರತ ಮೊದಲಾದ ದೇಶಗಳತ್ತ ಈ ಹೊರಹರಿವು ಹಂಚಿಹೋಗುತ್ತಿದೆ.
ಆದರೆ, ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎನಿಸಿರುವ ಮತ್ತು ಕಳೆದ ಹತ್ತು ವರ್ಷಗಳಿಂದ ಮ್ಯಾನುಫ್ಯಾಕ್ಚರಿಂಗ್ ವಲಯಕ್ಕೆ ಶತಾಯಗತಾಯ ಬಲ ತುಂಬಬೇಕು ಎಂದು ಹೊರಟಿರುವ ಭಾರತಕ್ಕೆ ಅತ್ಯಧಿಕ ಹೂಡಿಕೆಗಳು ಬರಬಹುದು ಎನ್ನುವ ನಿರೀಕ್ಷೆಗಳಿದ್ದುವು. ಆದರೆ, ಹಾಗಾಗಿಲ್ಲ. ವಿಯೆಟ್ನಾಂ, ಫಿಲಿಪ್ಪೈನ್ಸ್, ಇಂಡೋನೇಷ್ಯಾದಂತಹ ದೇಶಗಳಿಗೆ ಹೂಡಿಕೆಗಳು ಹಂಚಿಹೋಗುತ್ತಿವೆ. ಇದು ನಿಜಕ್ಕೂ ಅಚ್ಚರಿ ತಂದಿರುವ ಸಂಗತಿ. ಇದಕ್ಕೆ ಕಾರಣಗಳು ಹಲವಾರು. ವರದಿಯೊಂದರ ಪ್ರಕಾರ, ಚೀನಾ ದೇಶವೂ ಉದ್ದೇಶಪೂರ್ವಕವಾಗಿ ಭಾರತಕ್ಕೆ ಅಡ್ಡಗಾಲು ಹಾಕುತ್ತಿರುವುದೂ ಕೂಡ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ರೋಡಿಯಂ ಗ್ರೂಪ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2024ರಲ್ಲಿ ಚೀನಾಗೆ ಹರಿದುಹೋದ ವಿದೇಶೀ ಹೂಡಿಕೆ ಕೇವಲ 4.5 ಬಿಲಿಯನ್ ಡಾಲರ್. ಇದು ಕಳೆದ ಮೂರು ದಶಕದಲ್ಲೇ ಚೀನಾ ಕಂಡ ಅತಿಕಡಿಮೆ ಎಫ್ಡಿಐ.
ಇದನ್ನೂ ಓದಿ: ಭಾರತದ ಆರ್ಥಿಕತೆ 4.3 ಟ್ರಿಲಿಯನ್ ಡಾಲರ್; 10 ವರ್ಷದಲ್ಲಿ ಡಿಜಿಪಿ ಡಬಲ್; ಜಪಾನ್ ಅನ್ನೂ ಹಿಂದಿಕ್ಕಿದೆಯಾ ಭಾರತ?
ಚೀನಾ ಎಫ್ಡಿಐ ಎತ್ತ ಹೋಗುತ್ತಿದೆ ಎನ್ನುವುದೇ ಗಮನಾರ್ಹ ಸಂಗತಿ. ಸಾಮಾನ್ಯವಾಗಿ ಎಫ್ಡಿಐ ಕಡಿಮೆ ಆದಾಗ ವಿದೇಶಗಳಲ್ಲಿದ್ದ ಚೀನಾ ಹೂಡಿಕೆಗಳು ಮರಳಿ ತವರಿಗೆ ಬರುವ ನಿರೀಕ್ಷೆಗಳಿದ್ದುವು. ಅಮೆರಿಕ, ಜಪಾನ್, ಯೂರೋಪ್ನನಲ್ಲಿ ಆಸ್ತಿಗಳನ್ನು ಗಳಿಸುವ ಬದಲು ಚೀನಾದ ಬಂಡವಾಳ ಈಗ ಹಂಗೆರಿ, ಮೆಕ್ಸಿಕೋ, ಬ್ರೆಜಿಲ್, ಮೊರಾಕ್ಕೋ ಮೊದಲಾದ ದೇಶಗಳಲ್ಲಿ ತೊಡಗುತ್ತಿದೆ. ಅಲ್ಲಿ ಫ್ಯಾಕ್ಟರಿಗಳು, ಬ್ಯಾಟರಿ ಘಟಕಗಳು, ಕೈಗಾರಿಕಾ ಪಾರ್ಕ್ಗಳಂತಹ ಯೋಜನೆಗಳಲ್ಲಿ ಚೀನಾದ ಹೂಡಿಕೆಗಳು ಹರಿದುಹೋಗುತ್ತಿವೆ.
ಜಾಗತಿಕ ಸರಬರಾಜು ಸರಪಳಿಯಲ್ಲಿ ಚೀನೀ ಕಂಪನಿಗಳ ಪಾತ್ರ ಬಹಳ ದೊಡ್ಡದು. ಅಮೆರಿಕ ಮೊದಲಾದ ದೇಶಗಳಿಗೆ ಆತಂಕ ಇರುವುದು ಚೀನಾದಲ್ಲಿ ಎಲ್ಲ ಕಂಪನಿಗಳು ನೆಲೆಗೊಂಡಿರುವುದು. ಬೇರೆ ದೇಶಗಳಲ್ಲಿ ಈ ಕಂಪನಿಗಳು ಘಟಕ ಸ್ಥಾಪಿಸಬೇಕು ಎನ್ನುವುದು ಒತ್ತಾಯ. ಚೀನಾ ಸರ್ಕಾರ ತನ್ನ ದೇಶದ ಕಂಪನಿಗಳಿಗೆ ಎಲ್ಲೆಲ್ಲಿಗೆ ಹೋಗಿ ಹೂಡಿಕೆ ಮಾಡಬೇಕು ಎಂದು ಬೆರಳು ತೋರಿಸಿ ನಿರ್ದೇಶನ ನೀಡುತ್ತಿರಬಹುದು.
ಚೀನಾದ ವಾಹನ ಕಂಪನಿಗಳು ಆಯ್ದ ದೇಶಗಳಲ್ಲಿ ವಿಸ್ತರಿಸುತ್ತಿವೆ. ಚೀನಾಗೆ ರಾಜಕೀಯವಾಗಿ ಬೆಂಬಲಿಗನಾಗಿರುವ ದೇಶಗಳಿಗೆ ಆದ್ಯತೆ ನೀಡುತ್ತಿವೆ. ಇದು ಒಂದು ಉದಾಹರಣೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಇದು ಆಗುತ್ತಿದೆ ಎನ್ನಲಾಗುತ್ತಿದೆ.
ಬಿವೈಡಿ ಮೊದಲಾದ ಚೀನೀ ಕಂಪನಿಗಳು ಭಾರತಕ್ಕೆ ಇನ್ನೂ ಕಾಲಿಡಲು ಆಗಿಲ್ಲ ಎಂದರೆ ಅದರ ಹಿಂದೆ ಚೀನಾ ಸರ್ಕಾರದ ಪಾತ್ರವೂ ಇದೆ. ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತ ಮೇಲೇರಬಹುದು ಎನ್ನುವುದು ಚೀನಾದ ಭಯ. ಚೀನಾ ತನ್ನ ರಫ್ತುಗಳನ್ನೂ ಕೂಡ ಬೇಕೆಂದ ಹಾಗೆ ನಿಯಂತ್ರಣ ಮಾಡುತ್ತಿದೆ. ಸೌರ ಉಪಕರಣ, ಇವಿ ಬಿಡಿಭಾಗ, ಎಲೆಕ್ಟ್ರಾನಿಕ್ಸ್ ಯಂತ್ರೋಪಕರಣಗಳು ಭಾರತಕ್ಕೆ ಸರಾಗವಾಗಿ ಹೋಗದಂತೆ ಚೀನಾ ನಿಯಂತ್ರಣ ಮಾಡುತ್ತಿದೆಯಂತೆ. ಹೀಗಾಗಿ ಭಾರತಕ್ಕೆ ಬರಬೇಕಾದ ಹಲವು ಟನ್ ಬೋರಿಂಗ್ ಮೆಷಿನ್, ಎಕ್ವಿಪ್ಮೆಂಟ್ ಮೆಷೀನ್ಗಳು ಚೀನಾದ ಬಂದರುಗಳಲ್ಲಿ ಸ್ಥಗಿತಗೊಂಡಿವೆ.
ಇದನ್ನೂ ಓದಿ: ರೈಲು ಎಂಜಿನ್ ವಾಹನಗಳ ತಯಾರಿಕೆಯಲ್ಲಿ ಅಮೆರಿಕ, ಯೂರೋಪ್ ಅನ್ನು ಮೀರಿಸಿದ ಭಾರತ
ಚೀನೀಯರದ್ದು ಅಲ್ಲದ ಕಂಪನಿಗಳೂ ಕೂಡ ಭಾರತಕ್ಕೆ ಪೂರ್ಣ ಮನಸ್ಸಿನಲ್ಲಿ ಬರಲು ಹಿಂದೇಟು ಹಾಕುತ್ತಿರುವುದು ಗಮನಿಸಬೇಕಾದ ಸಂಗತಿ. ಬಿಡಿಭಾಗಗಳ ಆಮದಿಗೆ ಹೆಚ್ಚಿನ ಸುಂಕ, ಸಂಕುಚಿತ ಕಾರ್ಮಿಕ ಕಾನೂನು ಇತ್ಯಾದಿ ಕಾರಣಳಿರಬಹುದು. ಹೀಗಾಗಿ, ಆ್ಯಪಲ್ ಸಂಸ್ಥೆ ಭಾರತದಲ್ಲಿ ಶೇ. 25ರಷ್ಟು ಉತ್ಪಾದನೆ ಮಾಡಬೇಕೆನ್ನುವ ಗುರಿ ಹೊಂದಿತ್ತು. ಆದರೆ, ಅದಿನ್ನೂ ಶೇ. 15ರಲ್ಲೇ ಇದೆ. ವಿಯೆಟ್ನಾಂ ದೇಶಗಳತ್ತ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹೆಚ್ಚು ನೆಲೆಗೊಳ್ಳುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Sun, 23 March 25