Locker Rules: ಬ್ಯಾಂಕ್ ಲಾಕರ್ ಹಾಳಾದರೆ ಯಾರು ಹೊಣೆ? ಆರ್ಬಿಐ ನಿಯಮಗಳು ಬದಲಾಗಿವೆ; ಒಪ್ಪಂದ ನವೀಕರಿಸುವ ಮುನ್ನ ತಿಳಿದಿರಿ, ಇಲ್ಲಿದೆ ಡೀಟೇಲ್ಸ್
Know The RBI Rules On Bank Lockers: ಬ್ಯಾಂಕ್ ಲಾಕರ್ ಹಾಳಾದರೆ ಯಾರು ಹೊಣೆ, ಸ್ಟ್ಯಾಂಪ್ ಪೇಪರ್, ಎಫ್ಡಿ ಇತ್ಯಾದಿ ಅಂಶಗಳನ್ನು ಆರ್ಬಿಐ ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಈ ವರ್ಷದ ಅಂತ್ಯದೊಳಗೆ ಎಲ್ಲಾ ಬ್ಯಾಂಕುಗಳು ಲಾಕರ್ ಅಗ್ರೀಮೆಂಟ್ ರಿನಿವಲ್ ಮಾಡಬೇಕಿದೆ.
ನವದೆಹಲಿ: ಬ್ಯಾಂಕ್ ಲಾಕರ್ ಒಪ್ಪಂದಗಳ ನವೀಕರಣ (Bank Locker agreement rules) ಪ್ರಕ್ರಿಯೆ ಪೂರ್ಣಗೊಳಿಸಲು ಆರ್ಬಿಐ 2023ರ ಡಿಸೆಂಬರ್ 31ಕ್ಕೆ ಡೆಡ್ಲೈನ್ ನಿಗದಿ ಮಾಡಿದೆ. ಈ ಅವಧಿಯೊಳಗೆ ಎಲ್ಲಾ ಬ್ಯಾಂಕುಗಳು ಬ್ಯಾಂಕ್ ಲಾಕರ್ ಒಪ್ಪಂದಗಳನ್ನು ರಿನಿವಲ್ ಮಾಡಬೇಕೆಂದು ತಿಳಿಸಲಾಗಿದೆ. ಆದರೆ, ಹಂತ ಹಂತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಪ್ರಕಾರವಾಗಿ ಜೂನ್ 30ಕ್ಕೆ ಶೇ. 50 ಮತ್ತು ಸೆಪ್ಟಂಬರ್ 30ಕ್ಕೆ ಶೇ. 75ರಷ್ಟು ರಿನಿವಲ್ ಕಾರ್ಯ ಮುಗಿಯಬೇಕು ಎಂದು ಗುರಿ ಇಡಲಾಗಿದೆ. ಬ್ಯಾಂಕ್ ಲಾಕರ್ ಇಟ್ಟಿರುವ ಎಲ್ಲಾ ಗ್ರಾಹಕರೊಂದಿಗೆ ಬ್ಯಾಂಕುಗಳು ಒಪ್ಪಂದವನ್ನು ಹೊಸ ನಿಯಮಗಳ ಪ್ರಕಾರ ನವೀಕರಿಸುವ ಅಗತ್ಯ ಇದೆ. 2022ರ ಜನವರಿಯಲ್ಲೇ ಬ್ಯಾಂಕ್ ಲಾಕರ್ ಅಗ್ರೀಮೆಂಟ್ ಪರಿಷ್ಕರಿಸಬೇಕೆಂದು ಬ್ಯಾಂಕುಗಳಿಗೆ ಸೂಚಿಸಲಾಗಿತ್ತು. ಆದರೆ ತ್ವರಿತವಾಗಿ ಈ ಕಾರ್ಯ ಪೂರ್ಣಗೊಳಿಸಲೆಂದು ಆರ್ಬಿಐ ಡೆಡ್ಲೈನ್ ನಿಗದಿ ಮಾಡಿದೆ.
ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಲಾಕರ್ ಅಗ್ರೀಮೆಂಟ್ ನಿಯಮ
ಲಾಕರ್ ನಿರ್ವಹಣೆಯ ನಿಯಮಗಳನ್ನು ಅಂತಿಮಗೊಳಿಸಬೇಕೆಂದು ಸುಪ್ರೀಂಕೋರ್ಟ್ 2021 ಫೆಬ್ರುವರಿಯಲ್ಲಿ ಆರ್ಬಿಐಗೆ ನಿರ್ದೇಶನ ನೀಡಿತ್ತು. ಅದಾದ ಬಳಿಕ ಆರ್ಬಿಐ ಎಲ್ಲಾ ಬ್ಯಾಂಕುಗಳಿಗೂ ಹೊಸ ನಿಯಮಗಳ ಪ್ರಕಾರ ಲಾಕರ್ ಒಪ್ಪಂದ ನವೀಕರಿಸಬೇಕೆಂದು ಸೂಚಿಸಿತು. ಭಾರತೀಯ ಬ್ಯಾಂಕುಗಳ ಸಂಸ್ಥೆ (ಐಬಿಎ) ರೂಪಿಸುವ ಮಾದರಿ ಲಾಕರ್ ಒಪ್ಪಂದವನ್ನು ಬ್ಯಾಂಕುಗಳು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಆರ್ಬಿಐನ ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: GST Collection: ಮೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 1.57 ಲಕ್ಷ ಕೋಟಿ ರೂ; ಕರ್ನಾಟಕದಲ್ಲಿ ತೆರಿಗೆ ಕಲೆಕ್ಷನ್ ಎಷ್ಟು?
ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಂದ
ಹೊಸ ಲಾಕರ್ ಒಪ್ಪಂದವನ್ನು ಛಾಪಾ ಕಾಗದದ ಮೇಲೆ ಮಾಡಬೇಕಾಗುತ್ತದೆ. ಇದಕ್ಕೆ ಗ್ರಾಹಕರಿಂದ ಶುಲ್ಕ ಪಡೆಯುವಂತಿಲ್ಲ. ಆದರೆ, ಎಷ್ಟು ರೂ ಬೆಲೆಯ ಸ್ಟ್ಯಾಂಪ್ ಪೇಪರ್ ಆಗಬೇಕು ಎಂಬುದನ್ನು ಆರ್ಬಿಐ ಸ್ಪಷ್ಟಪಡಿಸಿಲ್ಲವಾದ್ದರಿಂದ ಗೊಂದಲ ಇದೆ.
ಲಾಕರ್ಗೆ ನಿಶ್ಚಿತ ಠೇವಣಿ
ಬ್ಯಾಂಕ್ನಲ್ಲಿ ಗ್ರಾಹಕರಿಗೆ ಲಾಕರ್ ಕೊಡುವಾಗ ನಿಶ್ಚಿತ ಠೇವಣಿ ಇಡುವಂತೆ ಕೇಳುವ ಅವಕಾಶ ಇದೆ. ಇದು ಒಂದು ರೀತಿಯಲ್ಲಿ ಸೆಕ್ಯೂರಿಟಿ ಡೆಪಾಸಿಟ್ ರೀತಿ. ಮೂರು ವರ್ಷದ ಲಾಕರ್ ಬಾಡಿಗೆ ಮತ್ತು ಲಾಕರ್ ಮುರಿಯಲು ಇರುವ ಶುಲ್ಕ ಈ ಮೊತ್ತವನ್ನು ಸರಿದೂಗಿಸುವಷ್ಟಾದರೂ ಎಫ್ಡಿ ಇರಬೇಕಾಗುತ್ತದೆ.
ಲಾಕರ್ ಹೊಂದಿರುವ ಗ್ರಾಹಕರು ಬಹಳ ಸಮಯ ಲಾಕರ್ ಬಳಸದಿದ್ದರೆ ಅಥವಾ ಬಾಡಿಗೆ ಕೂಡ ಕಟ್ಟದೇ ಹೋದರೆ ಆಗ ಬ್ಯಾಂಕುಗಳು ಈ ಲಾಕರ್ ಅನ್ನು ತೆರೆಯುವ ಸ್ವಾತಂತ್ರ್ಯ ಹೊಂದಿರುತ್ತವೆ. ಕೆಲ ಬ್ಯಾಂಕುಗಳು ಮುಂಗಡವಾಗಿ ಒಂದಷ್ಟು ಅವಧಿಯ ಬಾಡಿಗೆಯನ್ನು ಪಡೆದಿರುತ್ತವೆ.
ಇದನ್ನೂ ಓದಿ: Own business: ಸ್ವಂತ ವ್ಯವಹಾರ ನಡೆಸಲು ಏನೇನು ಮಾಡಬೇಕು? ಈ ಕೆಲ ಅಂಶಗಳು ಗಮನದಲ್ಲಿರಲಿ
ಲಾಕರ್ ಹಾಳಾದರೆ ಬ್ಯಾಂಕ್ ಹೊಣೆಯಲ್ಲ…
ಮಳೆ, ಪ್ರವಾಹ, ಭೂಕಂಪ, ಸಿಡಿಲು, ಸಾರ್ವಜನಿಕ ಗಲಭೆ, ಹಿಂಸಾಚಾರ, ಭಯೋತ್ಪಾದನೆ ದಾಳಿ ಇತ್ಯಾದಿ ಕಾರಣದಿಂದ ಬ್ಯಾಂಕ್ ಲಾಕರ್ ಹಾಳಾದರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ. ಗ್ರಾಹಕರ ಅಜಾಗರೂಕತೆಯಿಂದ ಲಾಕರ್ ಹಾಳಾದರೂ ಅದಕ್ಕೆ ಬ್ಯಾಂಕ್ ಹೊಣೆ ಇರುವುದಿಲ್ಲ.
ಕಳ್ಳತನ, ಬೆಂಕಿ ಅವಘಡಗಳಿಗೆ ಬ್ಯಾಂಕ್ ಹೊಣೆ
ಬ್ಯಾಂಕ್ನ ಅಸಮರ್ಪಕ ಭದ್ರತೆ ಮತ್ತು ಲೋಪದೋಷಗಳಿಂದ ಲಾಕರ್ ಹಾಳಾದರೆ ಅದಕ್ಕೆ ಬ್ಯಾಂಕ್ ಹೊಣೆಯಾಗಬೇಕಾಗುತ್ತದೆ. ಅಂದರೆ ಕಳ್ಳತನ, ದರೋಡೆ, ಕಟ್ಟಡ ಕುಸಿತ, ಸಿಬ್ಬಂದಿ ವಂಚನೆ ಇತ್ಯಾದಿ ಕಾರಣಕ್ಕೆ ಲಾಕರ್ ಹಾಳಾದರೆ ಗ್ರಾಹಕರಿಗೆ ಪರಿಹಾರ ಒದಗಿಸಬೆಕಾಗುತ್ತದೆ. ಲಾಕರ್ನ ವಾರ್ಷಿಕ ಬಾಡಿಗೆಯ 100 ಪಟ್ಟು ಮೊತ್ತವನ್ನು ಗ್ರಾಹಕರಿಗೆ ಕೊಡಬೇಕಾಗುತ್ತದೆ.
ಲಾಕರ್ ಬಳಕೆಗೆ ಅಲರ್ಟ್ ಮೆಸೇಜ್
ಲಾಕರ್ ಬಳಕೆಗೆ ದಿನಾಂಕ ಮತ್ತು ಸಮಯ ನಿಗದಿ ಮಾಡಿ ಗ್ರಾಹಕರಿಗೆ ನೀಡಬೇಕು. ಇದಕ್ಕೆ ಗ್ರಾಹಕರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ನೊಂದಾಯಿಸಬೇಕಾಗುತ್ತದೆ.