Original Documents: ಬ್ಯಾಂಕ್​ನವರು ನಿಮ್ಮ ಮೂಲಪತ್ರ ಹಿಂದಿರುಗಿಸದಿದ್ದರೆ ಏನು ಮಾಡಬೇಕು? ಇಲ್ಲಿವೆ ಮಾರ್ಗೋಪಾಯಗಳು

|

Updated on: Jun 29, 2023 | 4:09 PM

What If Bank Lose Your Original Documents: ನಿಮ್ಮ ಸಾಲಕ್ಕೆ ಅಡಮಾನವಾಗಿ ಇರಿಸಿಕೊಂಡಿದ್ದ ಮೂಲ ಆಸ್ತಿಪತ್ರಗಳನ್ನು ಬ್ಯಾಂಕ್ ನಿಮಗೆ ಸಕಾಲಕ್ಕೆ ಮರಳಿಸಬೇಕು ಎಂದಿದೆ ಕಾನೂನು. ಒಂದು ವೇಳೆ ಈ ಮೂಲಪತ್ರಗಳು ಹಿಂದಿರುಗದಿದ್ದರೆ ಏನೇನು ಮಾಡಬಹುದು ಎಂಬ ವಿವರ ಇಲ್ಲಿದೆ....

Original Documents: ಬ್ಯಾಂಕ್​ನವರು ನಿಮ್ಮ ಮೂಲಪತ್ರ ಹಿಂದಿರುಗಿಸದಿದ್ದರೆ ಏನು ಮಾಡಬೇಕು? ಇಲ್ಲಿವೆ ಮಾರ್ಗೋಪಾಯಗಳು
ಬ್ಯಾಂಕ್ ಲಾಕರ್
Follow us on

ಗೃಹಸಾಲಕ್ಕೆ ನಾವು ಇಡುವ ಪ್ರಮುಖ ಅಡಮಾನಗಳಲ್ಲಿ ಆಸ್ತಿ ಕ್ರಯಪತ್ರ (Sale Deed) ಒಂದು. ನಮ್ಮ ಆಸ್ತಿ ಮೇಲೆ ನಮಗೆ ಹಕ್ಕು ತಂದುಕೊಡುವುದು ಈ ಸೇಲ್ ಡೀಡ್ ಪತ್ರವೇ. ಇದರ ಮೂಲಪತ್ರವನ್ನು ಗೃಹಸಾಲ ಕೊಡುವ ಹಣಕಾಸು ಸಂಸ್ಥೆಗಳು ಸಾಲ ಪೂರ್ಣಗೊಳ್ಳುವವರೆಗೂ ಅಡವಾಗಿ ಇಟ್ಟುಕೊಂಡಿರುತ್ತವೆ. ಕೆಲ ಪ್ರಕರಣಗಳಲ್ಲಿ ಬ್ಯಾಂಕುಗಳು ಗ್ರಾಹಕ ಸಾಲ ಪೂರ್ಣ ತೀರಿಸಿದ್ದರೂ ಆಸ್ತಿಪತ್ರಗಳನ್ನು ಮರಳಿಸದೇ ಉಳಿಸಿಕೊಂಡದ್ದು ಇದೆ. ಗೃಹಸಾಲ ಅವಧಿ ಕೆಲವೊಮ್ಮೆ 25 ವರ್ಷಗಳೇ ಆಗುತ್ತದಾದ್ದರಿಂದ ಅಡವಾಗಿಟ್ಟುಕೊಂಡ ವಸ್ತುಗಳು ಕಾಣೆಯಾಗುವ ಸಾಧ್ಯತೆ ಇಲ್ಲದಿಲ್ಲ. ಆದರೆ, ಆಸ್ತಿಪತ್ರವೇ ಆಗಲೀ ಯಾವುದೇ ಅಡಮಾನವನ್ನೇ ಆಗಲಿ ಬ್ಯಾಂಕು ಬಹಳ ಜೋಪಾನವಾಗಿ ಇಟ್ಟುಕೊಳ್ಳುವುದು ಅದರ ಜವಾಬ್ದಾರಿ. ಸಾಲ ತೀರಿದ ಬಳಿಕ ಈ ಆಸ್ತಿಪತ್ರ ಮರಳಿಸುವುದರ ಜೊತೆಗೆ ನೋ ಡ್ಯೂ ಸರ್ಟಿಫಿಕೇಟ್ ಕೊಟ್ಟು ಎಲ್ಲವನ್ನೂ ಕ್ಲಿಯರ್ ಮಾಡಬೇಕು.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಪ್ರಕರಣವನ್ನು ಒಬ್ಬ ಗ್ರಾಹಕ ಎತ್ತಿತೋರಿಸಿದ್ದರು. ಸಾಲ ತೀರಿಸಿದ ಬಳಿಕ ಮೂಲ ಆಸ್ತಿಪತ್ರದ ಬದಲು ಸರ್ಟಿಫೈಡ್ ಕಾಪಿ ಕೊಟ್ಟಿದ್ದಾರೆ. ಮೂಲಪತ್ರ ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಅಲವತ್ತುಕೊಂಡಿದ್ದರು. ಹಾಗೊಂದು ವೇಳೆ, ನೀವು ಅಡವಿಟ್ಟ ಮೂಲ ಆಸ್ತಿಪತ್ರವನ್ನು ಬ್ಯಾಂಕ್​ನವರು ವಾಪಸ್ ಕೊಡದಿದ್ದರೆ ಏನು ಮಾಡಬೇಕು? ಮುಂದೆ ಕೆಲ ಮಾರ್ಗೋಪಾಯಗಳನ್ನು ನೀಡಲಾಗಿದೆ.

ಇದನ್ನೂ ಓದಿRBI: ನೀವು ಬ್ಯಾಂಕ್​ನಲ್ಲಿ ಅಡಮಾನ ಇಟ್ಟಿದ್ದ ಮೂಲ ಆಸ್ತಿ ದಾಖಲೆ ಕಳೆದುಹೋದರೆ ಏನಾಗುತ್ತೆ? ಆರ್​ಬಿಐ ತರುತ್ತಿದೆ ಹೊಸ ಕಾನೂನು

ಬ್ಯಾಂಕ್​ನಿಂದ ಸ್ವೀಕೃತಿ ಪಡೆಯಿರಿ

ಒಂದು ವೇಳೆ ಬ್ಯಾಂಕ್​ನವರು ನಿಮ್ಮ ಮೂಲಪತ್ರ ಕಳೆದಿದ್ದರೆ ನೀವು ಆ ಬಗ್ಗೆ ಲಿಖಿತವಾಗಿ ಬರೆಸಿಕೊಳ್ಳಿ. ಬ್ಯಾಂಕ್​ನಿಂದ ಮೂಲ ಆಸ್ತಿಪತ್ರ ಕಳೆದುಹೋಗಿದೆ ಎಂದು ಸ್ಪಷ್ಟವಾಗಿ ಬರೆಯಿಸಿಕೊಂಡು ಅದಕ್ಕೆ ಬ್ಯಾಂಕ್​ನ ಮುದ್ರೆ ಹಾಗೂ ಅಧಿಕಾರಿಗಳ ಸಹಿ ಮಾಡಿಸಿಕೊಳ್ಳಿ.

ಒಂದು ವೇಳೆ ಲಿಖಿತವಾಗಿ ಅಕ್ನಾಡ್ಮೆಂಟ್ ಕೊಡಲು ಬ್ಯಾಂಕ್ ನಿರಾಕರಿಸಿದರೆ ನೀವು ಬ್ಯಾಂಕಿಗೆ ದೂರು ದಾಖಲಿಸಬಹುದು. ಕಳೆದುಹೋಗಿರುವ ದಾಖಲೆಗಳ ವಿವರ ಹಾಗೂ ಬ್ಯಾಂಕ್​ನಿಂದ ಸ್ವೀಕೃತಿ ನೀಡಲು ನಿರಾಕರಿಸಿದ ಸಂಗತಿ ಇವೆಲ್ಲವೂ ನಿಮ್ಮ ದೂರಿನಲ್ಲಿರಬೇಕು. ಇದು ಮೊದಲ ಹೆಜ್ಜೆ ಆಗಿರುತ್ತದೆ.

ಓಂಬುಡ್ಸ್​ಮ್ಯಾನ್​ಗೆ ದೂರು ಕೊಡಿ

ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರ ಸಂಬಂಧಿತ ವ್ಯಾಜ್ಯಗಳ ಪರಿಹಾರಕ್ಕೆ ಓಂಬುಡ್ಸ್​ಮನ್​ಗಳನ್ನು ನಿಯೋಜಿಸಲಾಗಿರುತ್ತದೆ. ನಿಮ್ಮ ವ್ಯಾಪ್ತಿಗೆ ಬರುವ ಒಂಬುಡ್ಸ್​ಮನ್ ಸಂಪರ್ಕಿಸಿ ದೂರು ದಾಖಲಿಸಿ. ಬಹಳಷ್ಟು ಸಮಸ್ಯೆಗಳು ಈ ಹಂತದಲ್ಲೇ ಪರಿಹಾರಗೊಳ್ಳುತ್ತವೆ.

ಇದನ್ನೂ ಓದಿAlexandr Wang: ವಿಶ್ವದ ಕಿರಿಯ ಬಿಲಿಯನೇರ್, 26 ವರ್ಷದ ಅಲೆಕ್ಸಾಂಡರ್ ವ್ಯಾಂಗ್; ಸ್ಕೇಲ್ ಎಐ ಮಾಲೀಕ

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ

ಬ್ಯಾಂಕ್​ನಲ್ಲಿ ನಿಮ್ಮ ಆಸ್ತಿಪತ್ರ ಕಳೆದುಹೋಗಿದ್ದರೆ ಬ್ಯಾಂಕ್​ನವರೇ ಪೊಲೀಸ್ ದೂರು ದಾಖಲಿಸಬೇಕು. ಆದರೆ, ಬ್ಯಾಂಕ್​ನಿಂದ ದೂರು ದಾಖಲಾಗದಿದ್ದರೆ ನೀವೇ ಪೊಲೀಸ್ ಕಂಪ್ಲೇಟ್ ಕೊಡಬಹುದು. ಬ್ಯಾಂಕಿಗೆ ನೀವು ಕೊಟ್ಟ ದೂರಿನ ಪ್ರತಿಯನ್ನು ಈ ವೇಳೆ ಲಗತ್ತಿಸಬಹುದು. ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್​ಐಆರ್​ನ ಕಾಪಿಯನ್ನು ನೀವು ಬ್ಯಾಂಕಿಗೆ ಕೊಡಬೇಕು. ಈ ಎಫ್​ಐಆರ್ ಪ್ರತಿ ನಿಮಗೆ ಕಾನೂನು ಬಲ ಕೊಡುತ್ತದೆ.

ಪತ್ರಿಕೆಗಳಲ್ಲಿ ನೋಟೀಸ್ ಹಾಕಿ

ಎರಡು ದಿನಪತ್ರಿಕೆಗಳಲ್ಲಿ ನಿಮ್ಮ ಸೇಲ್ ಡೀಡ್ ಬ್ಯಾಂಕ್​ನಲ್ಲಿ ಕಳೆದುಹೋಗಿರುವ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ. ಇದರಲ್ಲಿ ನಿಮ್ಮ ಆಸ್ತಿಯ ಎಲ್ಲಾ ವಿವರಗಳು ಒಳಗೊಂಡಿರಲಿ.

ಕನ್ಸೂಮರ್ ಫೋರಂನಲ್ಲಿ ಕಂಪ್ಲೇಂಟ್ ಕೊಡಿ

ನೀವು ಕನ್ಸೂಮರ್ ಫೋರಂನಲ್ಲೂ ದೂರು ದಾಖಲಿಸಬಹುದು. ಬ್ಯಾಂಕ್​ನ ಪರಿಹಾರ ನೀತಿ ಪ್ರಕಾರ ನಿಮ್ಮ ದಾಖಲೆಗಳ ನಷ್ಟಕ್ಕೆ ಸೂಕ್ತ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Thu, 29 June 23