KYC Frauds: ಕೆವೈಸಿ ಅಪ್ಡೇಟ್ ಮಾಡಿ ಎಂದು ಕರೆ ಬಂದರೆ ಏನು ಮಾಡಬೇಕು? ಆರ್ಬಿಐ ಸಲಹೆ, ಸೂಚನೆಗಳಿವು
Do's and Don'ts list by RBI: ಕೆವೈಸಿ ಅಪ್ಡೇಟ್ ಮಾಡಬೇಕು ಎಂದು ಜನರ ಮೇಲೆ ಒತ್ತಡ ಹಾಕಿ ಅವರಿಂದ ಖಾತೆ ನಂಬರ್, ಕ್ರೆಡಿಟ್ ಕಾರ್ಡ್ ವಿವರ ಪಡೆದು ವಂಚಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಆರ್ಬಿಐ ಕಳೆದ ವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಜನರಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದೆ. ಕೆವೈಸಿ ಅಪ್ಡೇಟ್ ಮಾಡಬೇಕೆಂದು ಯಾರಾದರೂ ಕರೆ ಮಾಡಿದಾಗ ಗ್ರಾಹಕರು ಏನು ಮಾಡಬೇಕು, ಮಾಡಬಾರದು ಎಂಬ ಪಟ್ಟಿ ನೀಡಿದೆ.
ನವದೆಹಲಿ, ಫೆಬ್ರುವರಿ 11: ಕೆವೈಸಿ ಅಪ್ಡೇಟ್ (KYC frauds) ಮಾಡಬೇಕು ಎಂದು ಹೇಳಿ ಜನರಿಂದ ಬ್ಯಾಂಕ್ ಖಾತೆ ವಿವರ, ಲಾಗಿನ್ ವಿವರ, ಒಟಿಪಿ ಇತ್ಯಾದಿ ಪಡೆದು ವಂಚಿಸುತ್ತಿರುವ ಪ್ರಕರಣಗಳು ದೇಶಾದ್ಯಂತ ಬಹಳಷ್ಟು ಕಡೆ ಬೆಳಕಿಗೆ ಬರುತ್ತಲೇ ಇವೆ. ಮೊಬೈಲ್ ಫೋನ್ ಕರೆಗಳ ಮೂಲಕ ನಡೆಯುವ ವಂಚಕರ ಜಾಲಕ್ಕೆ ಜನರು ಪದೇ ಪದೇ ಬೀಳುತ್ತಿದ್ದಾರೆ. ಪೊಲೀಸರು, ಸರ್ಕಾರ, ಆರ್ಬಿಐ ಮೊದಲಾದವರು ಹಾಗು ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳೇ ಇಂಥ ವಂಚನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರಾದರೂ ಪ್ರಕರಣಗಳು ಮಾತ್ರ ಕಡಿಮೆ ಆದಂತಿಲ್ಲ. ಆರ್ಬಿಐ ಕಳೆದ ವಾರ ಬಿಡುಗಡೆ ಮಾಡಿದ ಮಾಧ್ಯಮ ಗೋಷ್ಠಿಯಲ್ಲಿ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದೆ.
ಕೆವೈಸಿ ಹೆಸರಲ್ಲಿ ವಂಚಕರ ಜಾಲ ಹೇಗಿರುತ್ತೆ?
ಕೆವೈಸಿ ಅಪ್ಡೇಟ್ ಆಗದ ಕಾರಣ ಬ್ಯಾಂಕ್ ಖಾತೆ ಫ್ರೀಜ್ ಆಗುತ್ತದೆ ಇತ್ಯಾದಿ ಹೇಳುವ ಮೂಲಕ ವಂಚಕರು ಗ್ರಾಹಕರ ಮೇಲೆ ಖಾತೆಯ ಎಲ್ಲಾ ಮಾಹಿತಿ ನೀಡುವಂತೆ ಒತ್ತಡ ಹಾಕಬಹುದು. ಬಹಳಷ್ಟು ಸಂದರ್ಭದಲ್ಲಿ ಗ್ರಾಹಕರಿಗೆ ಯೋಚಿಸುವಷ್ಟೂ ಪುರುಸೊತ್ತು ಸಿಗದೇ ವಂಚಕರು ಹೇಳಿ ಕೆಲಸ ಮಾಡಬಹುದು.
ಇದನ್ನೂ ಓದಿ: ಇಪಿಎಫ್ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ; ಎಲ್ಲಾ ಸ್ಮಾಲ್ ಫೈನಾನ್ಸ್ ಸ್ಕೀಮ್ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ
ಕೆವೈಸಿ ಅಪ್ಡೇಶನ್ಗೆ ಯಾವಾದರೂ ಕರೆ ಬಂದಾಗ ಏನು ಮಾಡಬೇಕು? ಆರ್ಬಿಐ ಸೂಚನೆಗಳಿವು…
- ಕೆವೈಸಿ ಅಪ್ಡೇಟ್ ಮಾಡಬೇಕು ಎಂದು ಕೇಳಿ ಯಾವುದಾದರೂ ಕರೆ ಬಂದಾಗ, ಮೊದಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಿ ದೃಢಪಡಿಸಿಕೊಳ್ಳಬೇಕು.
- ನೀವು ಬ್ಯಾಂಕನ್ನು ಆನ್ಲೈನ್ ಅಥವಾ ಮೊಬೈಲ್ನಲ್ಲಿ ಸಂಪರ್ಕಿಸಬೇಕೆಂದರೆ ಆ ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಅಥವಾ ಮೂಲಗಳಿಂದ ಕಸ್ಟಮರ್ ಕೇರ್ ನಂಬರ್ ಪಡೆದುಕೊಳ್ಳಬೇಕು.
- ಯಾವುದಾದರೂ ಸೈಬರ್ ವಂಚನೆ ಘಟನೆ ನಡೆದಿದ್ದು ಗೊತ್ತಾದ ಕೂಡಲೇ ಮೊದಲು ಬ್ಯಾಂಕ್ ಅನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು.
- ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡುವ ವಿಧಾನ ಏನಿದೆ ಎಂದು ಬ್ಯಾಂಕ್ನ ಶಾಖೆಗೆ ಹೋಗಿ ವಿಚಾರಿಸಬೇಕು.
ಕೆವೈಸಿ ಕರೆ ಬಂದಾಗ ಈ ಕೆಲಸ ಮಾಡದಿರಿ…
- ಕಾರ್ಡ್ ಮಾಹಿತಿ, ಪಿನ್ ನಂಬರ್, ಪಾಸ್ವರ್ಡ್, ಲಾಗಿನ್ ಇತ್ಯಾದಿ ವಿವರ ಯಾರಿಗೂ ನೀಡಬೇಡಿ.
- ದೃಢಪಡದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನಿಮ್ಮ ಕೆವೈಸಿ ದಾಖಲೆಗಳನ್ನು ಕೊಡಬೇಡಿ.
- ಅನಧಿಕೃತ ಆ್ಯಪ್ ಅಥವಾ ವೆಬ್ಸೈಟ್ಗಳಲ್ಲಿ ನಿಮ್ಮ ಸೂಕ್ಷ್ಮ ಮಾಹಿತಿ ನೀಡಬೇಡಿ.
- ಮೊಬೈಲ್ ಅಥವಾ ಇಮೇಲ್ನಲ್ಲಿ ಲಿಂಕ್ ಇರುವ ಮೆಸೇಜ್ಗಳು ಬಂದಿರಬಹುದು. ಅನಧಿಕೃತ ಮೂಲಗಳಿಂದ ಈ ಸಂದೇಶ ಬಂದಿದ್ದರೆ ಆ ಲಿಂಕ್ ಕ್ಲಿಕ್ ಮಾಡಬೇಡಿ. ಬ್ಯಾಂಕ್ ಅನ್ನೇ ನೇರವಾಗಿ ಸಂಪರ್ಕಿಸಿ ವಿಚಾರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ