ನವದೆಹಲಿ, ಡಿಸೆಂಬರ್ 2: ಈಗಾಗಲೇ ಹೆಸರುವಾಸಿಯಾಗಿರುವ ಪ್ರವಾಸೀ ತಾಣಗಳು ಮತ್ತೆ ಮತ್ತೆ ಜನರನ್ನು ಆಕರ್ಷಿಸುತ್ತಲೇ ಇರುತ್ತವೆ. ಕಾಣದ ಕಣ್ಮರೆಯಂತಿರುವ ಅದೆಷ್ಟೋ ಸ್ಥಳಗಳು ಪ್ರವಾಸಿಗರಿಗೆ ಮರೆಯಾಗಿಯೇ ಇರುತ್ತವೆ. ಈ ಎಲೆಮರೆ ಕಾಯಿಯಂತಹ ಪ್ರವಾಸೀ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ಬೆಳೆಯುತ್ತದೆ. ಜೊತೆಗೆ ಜನಪ್ರಿಯ ಪ್ರವಾಸೀ ಸ್ಥಳಗಳಲ್ಲಿನ ಮೂಲಸೌಕರ್ಯ ವ್ಯವಸ್ಥೆ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ದೃಷ್ಟಿಯಿಂದ ಕೇಂದ್ ಸರ್ಕಾರವು ಈಶಾನ್ಯ ರಾಜ್ಯಗಳಲ್ಲಿ ಎಂಟು ಆಯ್ದ ಸ್ಥಳಗಳನ್ನು ರಮ್ಯ ಪ್ರವಾಸೀ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಿದೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ ಕಳೆದ ವಾರ ಕೇಂದ್ರ ವೆಚ್ಚ ಇಲಾಖೆಯು ಆರು ಈಶಾನ್ಯ ರಾಜ್ಯಗಳಲ್ಲಿ 800 ಕೋಟಿ ರೂ ವೆಚ್ಚದ ಎಂಟು ಯೋಜನೆಗಳಿಗೆ ಅನುಮೋದನೆ ನೀಡಿದೆ. ಮೇಘಾಲಯ, ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರ, ಸಿಕ್ಕಿಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಈ ಯೋಜನೆಗಳನ್ನು ನಡೆಸಲಾಗುತ್ತದೆ. ಇವೆಲ್ಲವೂ ಕೇಂದ್ರದ ಪ್ರವಾಸೋದ್ಯಮ ಯೋಜನೆಯ ಒಂದು ಭಾಗವಾಗಿದೆ.
ಇದನ್ನೂ ಓದಿ: ಕ್ಯೂಐಪಿ ಮೂಲಕ ಈ ವರ್ಷ ಒಂದು ಲಕ್ಷ ಕೋಟಿ ರೂ ದಾಟಿದ ಕಾರ್ಪೊರೇಟ್ ಫಂಡಿಂಗ್; ಇತಿಹಾಸದಲ್ಲೇ ಇದು ದೊಡ್ಡ ಮೊತ್ತ
23 ರಾಜ್ಯಗಳಲ್ಲಿ 3,295 ಕೋಟಿ ರೂ ವೆಚ್ಚದಲ್ಲ ಸರ್ಕಾರ 40 ಪ್ರವಾಸೋದ್ಯಮ ಯೋಜನೆಗಳನ್ನು ಹಮ್ಮಿಕೊಂಡಿದೆ. ಪ್ರವಾಸಿಗರು ಕೆಲವೇ ರಾಜ್ಯಗಳತ್ತ ಸಾಗುವುದನ್ನು ನಿಯಂತ್ರಿಸಿ ಎಲ್ಲಾ ರಾಜ್ಯಗಳಲ್ಲೂ ಪ್ರವಾಸೋದ್ಯಮ ಬೆಳೆಯುವ ಉದ್ದೇಶದಿಂದ ಈ ಪ್ರಾಜೆಕ್ಟ್ ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ ಆರು ಈಶಾನ್ಯ ರಾಜ್ಯಗಳಲ್ಲಿನ ಎಂಟು ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಎಂಟು ಯೋಜನೆಗಳಲ್ಲಿ ಸಿಕ್ಕಿಂನ ನಾಥು ಲಾ, ತ್ರಿಪುರಾದ ಗೋಮತಿಯಲ್ಲಿನ 51 ಶಕ್ತಿಪೀಠಗಳ ಸ್ಥಳ, ಮಣಿಪುರದ ಲೋಕತಕ್ ಸರೋವರ, ಶಿಲ್ಲಾಂಗ್ನ ಉಮಿಯಾಮ್ ಸರೋವರ, ಗುವಾಹಟಿಯ ಅಸ್ಸಾಂ ಸ್ಟೇಟ್ ಝೂ, ಅರುಣಾಚಲಪ್ರದೇಶದ ಪಾಸಿಘಾಟ್ನ ಸಿಯಾಂಗ್ ಇಕೋ-ಟ್ರೀಟ್ ಸ್ಥಳಗಳೂ ಸೇರಿವೆ. ಉಮಿಯಾಂ ಸರೋವರ ಅಭಿವಧ್ಧಿಗೆ 99 ಕೋಟಿ ರೂ, ನಾತುಲಾಗೆ 97 ಕೋಟಿ, ಗೋಮತಿಗೆ 97 ಕೋಟಿ ರೂ ಹೀಗೆ ಬೇರೆ ಬೇರೆ ಸ್ಥಳಗಳ ಅಭಿವೃದ್ಧಿಗೆ ಪ್ರತ್ಯೇಕ ಹಣ ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಜಿಎಸ್ಟಿ ಸಂಗ್ರಹ 1.82 ಲಕ್ಷ ಕೋಟಿ ರೂ; ಶೇ. 8.5ರಷ್ಟು ಹೆಚ್ಚಳ
ವೆಚ್ಚ ಇಲಾಖೆಯು ಈಗಾಗಲೇ ಇದಕ್ಕೆ ಬೇಕಾದ ಹಣವನ್ನು ಕ್ರೋಢೀಕರಿಸಿದೆ. ಮೊದಲ ಕಂತಿನಲ್ಲಿ ಶೇ 66ರಷ್ಟು ಹಣವನ್ನು ಆಯಾ ರಾಜ್ಯಗಳಿಗೆ ನೀಡಲಾಗುತ್ತದೆ. ಈ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳಿಗೆ ಸೇರಿದ್ದು. ಎರಡು ವರ್ಷದ ಟೈಮ್ಲೈನ್ ನೀಡಲಾಗಿದೆ. 2026ರ ಮಾರ್ಚ್ನೊಳಗೆ ಎಲ್ಲಾ ಅಗತ್ಯ ಫಂಡ್ಗಳನ್ನು ರಾಜ್ಯಗಳಿಗೆ ಕೇಂದ್ರವೇ ಒದಗಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ