ಭಾರತದಲ್ಲಿ ಐಷಾರಾಮಿ ಸರಕುಗಳಿಗೆ ಹೆಚ್ಚಿದ ಬೇಡಿಕೆ; ಕಾರಣವೇನು? ಬೆಚ್ಚಿಬೀಳಿಸುತ್ತದೆ ಈ ವರದಿ
Indian economic growth and income disparity: ವಸತಿಗಳಿಂದ ಹಿಡಿದು ಫೋನ್ಗಳವರೆಗೆ ವಿವಿಧ ಕೆಟಗರಿಯಲ್ಲಿ ಲೋ ಎಂಡ್ ಉತ್ಪನ್ನಗಳಿಗಿಂತ ಪ್ರೀಮಿಯಮ್ ಸೆಗ್ಮೆಂಟ್ಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಹೆಚ್ಚೆಚ್ಚು ಕಂಪನಿಗಳು ಪ್ರೀಮಿಯಮ್ ಸೆಗ್ಮೆಂಟ್ನತ್ತ ಹೆಚ್ಚು ಗಮನ ಹರಿಸತೊಡಗಿವೆ. ಬ್ಲೂಮ್ ವೆಂಚರ್ಸ್ ವರದಿಯೊಂದರ ಪ್ರಕಾರ, ಭಾರತದಲ್ಲಿ ನೂರು ಕೋಟಿ ಜನರ ಜೇಬಲ್ಲಿ ವೆಚ್ಚ ಮಾಡಲು ಹಣವೇ ಇಲ್ಲ. 14 ಕೋಟಿ ಜನರಿಗೆ ಮಾತ್ರವೇ ಐಷಾರಾಮಿ ವಸ್ತುಗಳನ್ನು ಖರೀದಿಸುವ ಶಕ್ತಿ ಇರವುದು ಎನ್ನಲಾಗಿದೆ.

ನವದೆಹಲಿ, ಫೆಬ್ರುವರಿ 27: ಭಾರತದಲ್ಲಿ ಅಗ್ಗದ ದರದಲ್ಲಿ ಉತ್ಪನ್ನಗಳನ್ನು ಮಾರುವ ಕಂಪನಿಗಳು ಲಾಭ ಮಾಡುವುದು ಕಷ್ಟವಾಗಿದೆ. ಹಲವು ಕ್ಷೇತ್ರಗಳಲ್ಲಿ ಕಂಪನಿಗಳು ಹೈ ಎಂಡ್ ಪ್ರಾಡಕ್ಟ್, ಅಥವಾ ಐಷಾರಾಮಿ ಉತ್ಪನ್ನಗಳ (high end product) ಮಾರಾಟಕ್ಕೆ ಗಮನ ಕೊಡುತ್ತಿವೆ. ಸ್ಮಾರ್ಟ್ಫೋನ್ನಿಂದ ಹಿಡಿದು ಮನೆಗಳವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರೀಮಿಯಮ್ ಸೆಗ್ಮೆಂಟ್ನಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ಆಗುತ್ತಿದೆ. ಐದು ವರ್ಷಗಳ ಹಿಂದೆ ಅಗ್ಗದ ಮನೆಗಳು ಶೇ. 40ರಷ್ಟು ವಸತಿ ಮಾರುಕಟ್ಟೆ (housing market) ಆಕ್ರಮಿಸಿದ್ದುವು. ಈಗ ಅದು ಶೇ. 18ಕ್ಕೆ ಇಳಿದಿದೆ. ಅಂದರೆ, ಜನರು ಐಷಾರಾಮಿ ಮನೆಗಳತ್ತ ಒಲವು ತೋರುತ್ತಿದ್ದಾರೆ.
ಈ ಟ್ರೆಂಡ್ಗೆ ಏನು ಕಾರಣ ಇರಬಹುದು? ಎರಡು ಸಾಧ್ಯತೆಗಳಿವೆ. ಒಂದು, ಹೆಚ್ಚು ಜನರು ಶ್ರೀಮಂತರಾಗುತ್ತಿರಬಹುದು. ಇನ್ನೊಂದು, ಶ್ರೀಮಂತರು ಮಾತ್ರವೇ ಖರೀದಿಸುತ್ತಿರಬಹುದು. ಬ್ಲೂಮ್ ವೆಂಚರ್ಸ್ (Blume Ventures) ಎನ್ನುವ ಬಂಡವಾಳ ಕಂಪನಿಯ ವರದಿಯೊಂದು ಎರಡನೇ ಸಂಗತಿಗೆ ಪೂರಕವಾಗುವ ಅಂಶಗಳನ್ನು ಎತ್ತಿತೋರಿಸಿದೆ. ಈ ವರದಿ ಪ್ರಕಾರ, ಕೋವಿಡ್ ಬಳಿಕ ಭಾರತದ ಆರ್ಥಿಕತೆ ಇಂಗ್ಲೀಷ್ನ V ಆಕಾರದಲ್ಲಿ ಚೇತರಿಕೆ ಪಡೆದಿಲ್ಲ. ಬದಲಾಗಿ ಇಂಗ್ಲೀಷ್ನ K ಆಕಾರದಲ್ಲಿ ಬೆಳವಣಿಗೆ ಪಡೆಯುತ್ತಿದೆ.
ಇದನ್ನೂ ಓದಿ: ಓದಿಗೆ ಟೈಮ್ ಕಮ್ಮಿ; ನಗರದವರಿಗಿಂತ ಗ್ರಾಮೀಣದವರಿಂದಲೇ ಓದಿಗೆ ಹೆಚ್ಚು ಸಮಯ ಮೀಸಲು
K ಆಕಾರದಲ್ಲಿ ಬೆಳೆಯುತ್ತಿದೆ ಎಂದರೆ, ಆರ್ಥಿಕತೆ ಅಸಮತೋಲಿತವಾಗಿ ವೃದ್ಧಿಸುತ್ತಿದೆ ಎಂದರ್ಥ. ಅಂದರೆ, ಬಡವರ ಜೇಬು ಖಾಲಿಯಾಗೇ ಇದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಎಂದರ್ಥ. ಬ್ಲೂಮ್ ವೆಂಚರ್ಸ್ನ ವರದಿಯು ಭಾರತದಲ್ಲಿ ಎಷ್ಟು ಮಂದಿ ಅನುಭೋಗಿಗಳಿದ್ದಾರೆ ಎಂಬುದನ್ನು ಗುರುತಿಸುವ ಕೆಲಸ ಮಾಡಿದೆ. ಅದರ ಪ್ರಕಾರ, ದೇಶದ 143 ಕೋಟಿ ಜನಸಂಖ್ಯೆಯಲ್ಲಿ ಅನುಭೋಗಿಗಳಿರುವುದು 13ರಿಂದ 14 ಕೋಟಿ ಮಾತ್ರವೆ. ಭಾರತದ ಅನುಭೋಗ ನಿಂತಿರುವುದು ಇವಿಷ್ಟು ಜನರಿಂದ ಮಾತ್ರವೇ.
ಈ 13-14 ಕೋಟಿ ಜನರಿಗೆ ಮಾತ್ರವೇ ಅಗತ್ಯವಲ್ಲದ ಸೇವೆ ಅಥವಾ ಸರಕುಗಳನ್ನು ಖರೀದಿಸುವ ಶಕ್ತಿ ಮತ್ತು ಸಂಪನ್ಮೂಲ ಇರುವುದು. 100 ಕೋಟಿ ಜನರ ಜೇಬಲ್ಲಿ ಹೆಚ್ಚುವರಿ ಹಣವೇ ಇಲ್ಲ. ತಮ್ಮ ದೈನಂದಿನ ಅಗತ್ಯಗಳಿಗೆ ಪೂರೈಸುವುದರಲ್ಲೇ ಇವರ ಜೇಬು ಖಾಲಿಯಾಗಿರುತ್ತದೆ. ಸಣ್ಣ ಸಣ್ಣ ಲಾಲಸೆಗಳಿಗೆ ವ್ಯಯಿಸಲು ಇವರ ಬಳಿ ಹಣ ಇರುವುದಿಲ್ಲವಂತೆ. ಹಾಗಂತ ಬ್ಲೂಮ್ ವೆಂಚರ್ಸ್ನ ಅಧ್ಯಯನವು ಪತ್ತೆ ಮಾಡಿದೆ.
ಇದನ್ನೂ ಓದಿ: ಭಾರತದ ಷೇರುಮಾರುಕಟ್ಟೆ ಮತ್ತು ಆರ್ಥಿಕತೆ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೆಚ್ಚಿನ ನಿರೀಕ್ಷೆ
ಈ 14 ಕೋಟಿ ಐಷಾರಾಮಿಗಳು ಹಾಗೂ 100 ಕೋಟಿ ಬಡವರ ಮಧ್ಯೆ ಆ ಕಡೆಯೂ ಸೇರದ, ಈ ಕಡೆಯೂ ಸೇರದ ಅಪ್ಪಟ ಮಧ್ಯಮವಾಗಿರುವ 30 ಕೋಟಿ ಜನರಿದ್ದಾರೆ. ಇವರಿಗೆ ಯುಪಿಐ ಇತ್ಯಾದಿ ಡಿಜಿಟಲ್ ಪೇಮೆಂಟ್ ಸಾಧನಗಳು ಇವರ ಕೈಲಿರುವುದರಿಂದ ವೆಚ್ಚ ಮಾಡಲು ಹಾತೊರೆಯುತ್ತಾರೆ. ಆದರೆ, ವೆಚ್ಚ ಸ್ವಲ್ಪ ಕೈಮೀರಿ ಹೋದರೂ ಕಷ್ಟ ಕಷ್ಟ ಎಂದು ಹೆದರುವ ಸ್ಥಿತಿ ಇವರದ್ದು. ಈ ದ್ವಂದ್ವಗಳ ಮಧ್ಯೆ ಈ 30 ಕೋಟಿ ಜನರು ತಮ್ಮ ಶಕ್ತಿಮೀರಿ ವ್ಯಯಿಸುತ್ತಿದ್ದಾರೆ.
ಓಟಿಟಿ, ಗೇಮಿಂಗ್, ಶಿಕ್ಷಣ ತಂತ್ರಜ್ಞಾನ, ಹಣಕಾಸು ಸಾಲ, ಇವುಗಳಿಗೆ ಈ 30 ಕೋಟಿ ಮಧ್ಯಮವರ್ಗದವರೇ ದೊಡ್ಡ ಮಾರುಕಟ್ಟೆಯಾಗಿರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ