ಮುಂಬೈ, ಸೆಪ್ಟೆಂಬರ್ 29: ಸಂಜೆ 9 ಗಂಟೆಯವರೆಗೂ ಟ್ರೇಡಿಂಗ್ ಸೆಷನ್ ಅವಧಿ ವಿಸ್ತರಿಸಲು (extended trading session) ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಮಾಡಿರುವ ಪ್ರಸ್ತಾಪಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಳಷ್ಟು ಟ್ರೇಡರ್ಗಳು ಈ ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ಈ ಕ್ರಮ ಜಾರಿಯಾದರೆ ಷೇರು ವಿನಿಮಯ ಕೇಂದ್ರಕ್ಕೆ ಲಾಭ ಆಗುತ್ತದೆ ಹೊರತು ಟ್ರೇಡರ್ಗಳಿಗೆ ಯಾವ ಲಾಭವೂ ಆಗುವುದಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ, ಜಾಗತಿಕ ಮಾರುಕಟ್ಟೆಯೊಂದಿಗೆ ತಾಳೆಯಾಗುವ ಸಲುವಾಗಿ ಟ್ರೇಡಿಂಗ್ ಅವಧಿ ವಿಸ್ತರಿಸುತ್ತಿರುವುದಾಗಿ ಎನ್ಎಸ್ಇ ಹೇಳಿದೆ. ಆದರೆ, ಇದು ಪ್ರಾಯೋಗಿಕವಾಗಿ ಅಸಾಧ್ಯ ಎಂಬುದು ವಿರೋಧಿಗಳ ತಗಾದೆ. ಒಬ್ಬರಂತೂ ಈ ಟ್ರೇಡಿಂಗ್ ಅವಧಿ ವಿಸ್ತರಿಸುವ ಆಲೋಚನೆಯನ್ನು ಕಾಲೇಜಿನಲ್ಲಿ ಎರಡನೇ ಬ್ಯಾಚ್ ಆರಂಭಿಸುವ ಕ್ರಮಕ್ಕೆ ಹೋಲಿಸಿದ್ದಾರೆ.
‘ನಾನಿರುವ ಸ್ಥಳದ ಬಳಿ ಇರುವ ಒಂದು ಕಾಲೇಜಿನಲ್ಲಿ ತರಗತಿಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುತ್ತಿದ್ದವು. ಇನ್ನಷ್ಟು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅನುಕೂಲವಾಗುತ್ತದೆಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆಗೆಯವರೆಗೆ ಇನ್ನೊಂದು ಬ್ಯಾಚ್ ಆರಂಭಿಸುವುದಾಗಿ ಕಾಲೇಜು ಹೇಳಿತು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಎಂದು ಕಾಲೇಜು ಹೇಳಿತಾದರೂ ವಾಸ್ತವವಾಗಿ ಅದು ಕಾಲೇಜಿಗೆ ಹೆಚ್ಚು ಆದಾಯ ಸೃಷ್ಟಿಸಿಕೊಳ್ಳಲು ಮಾಡಿದ ಐಡಿಯಾ’ ಎಂದು ಕೃಪಾಕರನ್ ರಾಜೇಂದ್ರನ್ ಎಂಬ ಷೇರು ಟ್ರೇಡರ್ ಹೇಳಿದ್ದಾರೆ.
‘ಟ್ರೇಡಿಂಗ್ ಅವಧಿಯನ್ನು ಹೆಚ್ಚಿಸುವುದರಿಂದ ಅತಿಹೆಚ್ಚು ಲಾಭವಾಗುವುದು ಎಕ್ಸ್ಚೇಂಜ್ಗಳಿಗೆ. ಷೇರು ವಿನಿಮಯ ಕೇಂದ್ರಗಳಿಗೆ ಹೆಚ್ಚುವರಿ ಆದಾಯ ಮೂಲ ಸೃಷ್ಟಿಯಾಗುತ್ತದೆ. ಡಿಸ್ಕೌಂಟ್ ಬ್ರೋಕರ್ಗಳಿಗೂ ಲಾಭ ಆಗಬಹುದು’ ಎಂದು ರಾಜೇಂದ್ರನ್ ಹೇಳಿದರೆಂದು ಮನಿಕಂಟ್ರೋಲ್ ವರದಿ ಮಾಡಿದೆ.
ಇದನ್ನೂ ಓದಿ: ಎರಡು ಸಾವಿರ ರೂ ನೋಟುಗಳ ವಿನಿಮಯಕ್ಕೆ ಡೆಡ್ಲೈನ್ ವಿಸ್ತರಣೆ; ಅಕ್ಟೋಬರ್ವರೆಗೂ ಕಾಲಾವಕಾಶ ಸಿಗುವ ಸಾಧ್ಯತೆ
ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಅವಧಿ ಬೆಳಗ್ಗೆ 9:15ರಿಂದ ಮಧ್ಯಾಹ್ನ 3:30ರವರೆಗೂ ಇದೆ. ಇದಾದ ಬಳಿಕ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡಿಂಗ್ ಅನ್ನು ರಾತ್ರಿ 11:30ರವರೆಗೂ ವಿಸ್ತರಿಸುವ ಪ್ರಸ್ತಾವನೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿದೆ. ಮೊದಲ ಹಂತದಲ್ಲಿ, ಎಫ್ ಅಂಡ್ ಒ ಇಂಡೆಕ್ಸ್ ಟ್ರೇಡಿಂಗ್ ಅನ್ನು ಸಂಜೆ 6ಗಂಟೆಯಿಂದ 9 ಗಂಟೆಗೆ ವಿಸ್ತರಿಸುವ ಉದ್ದೇಶ ಇದೆ.
ಎರಡನೇ ಹಂತದಲ್ಲಿ ಈ ಅವಧಿಯನ್ನು ರಾತ್ರಿ 11:30ರವರೆಗೆ ವಿಸ್ತರಿಸಲಾಗುತ್ತದೆ. ಮೂರನೇ ಹಂತದಲ್ಲಿ ಕ್ಯಾಷ್ ಮಾರ್ಕೆಟ್ ಟ್ರೇಡಿಂಗ್ ಅವಧಿಯನ್ನೂ ಸಂಜೆ 5 ಗಂಟೆಯವರೆಗೆ ವಿಸ್ತರಿಸುವ ಆಲೋಚನೆ ಎನ್ಎಸ್ಇನದ್ದು.
ಮಾರುಕಟ್ಟೆ ಸಂಚಲನಕ್ಕೆ ಕಾರಣವಾಗುವ ಸುದ್ದಿಗಳು ಬರುವುದು ಸಂಜೆಯ ನಂತರವಾದ್ದರಿಂದ ಅದಕ್ಕೆ ಅನುಗುಣವಾಗಿ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡಿಂಗ್ ಅವಧಿಯನ್ನು ವಿಸ್ತರಿಸುವುದು ಅನುಕೂಲಕರ ಎಂಬುದು ಲೆಕ್ಕಾಚಾರ.
ಟ್ರೇಡರ್ ಆದವರಿಗೆ ಮಾರುಕಟ್ಟೆ ಸಂಶೋಧನೆ ಬಹಳ ಅಗತ್ಯ. ವಿವಿಧ ಕ್ಷೇತ್ರಗಳು ಮತ್ತು ಕಂಪನಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಕಷ್ಟು ಅವಧಿ ವ್ಯಯಿಸಬೇಕಾಗುತ್ತದೆ. ಟ್ರೇಡಿಂಗ್ ಅವಧಿ ವಿಸ್ತರಿಸಿಬಿಟ್ಟರೆ ಈ ರೀಸರ್ಚ್ ಕಾರ್ಯಕ್ಕೆ ಕಷ್ಟವಾಗುತ್ತದೆ. ಟ್ರೇಡರ್ನ ವೈಯಕ್ತಿಕ ಜೀವನಕ್ಕೂ ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ಇದೆ.
ಟ್ರೇಡಿಂಗ್ ಅವಧಿ ವಿಸ್ತರಣೆಯಿಂದ ಟ್ರೇಡರ್ಗಳಿಗೆ ಲಾಭವೂ ಆಗುವುದಿಲ್ಲ. ಅವರ ವರ್ಕ್ ಲೈಫ್ ಬ್ಯಾಲನ್ಸ್ ತಪ್ಪಿಹೋಗುತ್ತದೆ. ಷೇರುವಿನಿಮಯ ಕೇಂದ್ರಕ್ಕೆ ಹೆಚ್ಚುವರಿ ಆದಾಯ ಸೃಷ್ಟಿಯಾಗುತ್ತದೆಯೇ ಹೊರತು ಬೇರೇನಿಲ್ಲ ಎಂದು ಸಾಕಷ್ಟು ಟ್ರೇಡರ್ಗಳು ಹೇಳಿರುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ