Masala Bond: ಅಗ್ಗದ ಬೆಲೆಯಲ್ಲಿ ಕಂಪನಿಗಳಿಗೆ ಬಂಡವಾಳ ತರುವ ಮಸಾಲ ಬಾಂಡ್ ಎಂದರೇನು? ಇದರ ಅನುಕೂಲಗಳ ಬಗ್ಗೆ ಒಂದಷ್ಟು ಮಾಹಿತಿ
ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಲು ಬಳಸುವ ಸಾಧನಗಳಲ್ಲಿ ಮಸಾಲ ಬಾಂಡ್ ಒಂದು. ವಿದೇಶೀ ಹೂಡಿಕೆದಾರರಿಂದ ಭಾರತೀಯ ಕಂಪನಿಗಳು ಮಸಾಲ ಬಾಂಡ್ ಮೂಲಕ ಬಂಡವಾಳ ಅಥವಾ ಸಾಲ ಪಡೆಯಬಹುದು. ಬಹಳ ಕಡಿಮೆ ಬಡ್ಡಿದರಕ್ಕೆ ಈ ಸಾಲ ಸಿಗುತ್ತದೆ. ರುಪಾಯಿ ಕರೆನ್ಸಿಯಲ್ಲಿ ಬಾಂಡ್ ಕೊಟ್ಟು ಡಾಲರ್ ಕರೆನ್ಸಿಯಲ್ಲಿ ರಿಟರ್ನ್ ಸೆಟ್ಲ್ ಮಾಡಲಾಗುತ್ತದೆ.
ಹಣಕಾಸು ಜಗತ್ತಿನಲ್ಲಿ ನೀವು ಬಾಂಡ್ ಹೆಸರು ಕೇಳಿರುತ್ತೀರಿ. ಇವು ಒಂದು ರೀತಿಯಲ್ಲಿ ಸಾಲಪತ್ರ. ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಸರ್ಕಾರಗಳು, ಕಾರ್ಪೊರೇಟ್ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಸಾಲಪತ್ರಗಳನ್ನು ವಿತರಿಸುತ್ತವೆ. ಇವೇ ಬಾಂಡ್ಗಳು. ನಾನಾ ರೀತಿಯ ಬಾಂಡ್ಗಳಿವೆ. ಗೋಲ್ಡ್ ಬಾಂಡ್, ವಿವಿಧ ಕಾರ್ಪೊರೇಟ್ ಬಾಂಡ್, ಗವರ್ನ್ಮೆಂಟ್ ಬಾಂಡ್ ಇತ್ಯಾದಿ. ಅಂಥದ್ದೇ ಒಂದು ಮಸಾಲ ಬಾಂಡ್ (Masala Bond). ಅಂತಾರಾಷ್ಟ್ರೀಯ ಬಾಂಡ್ ಮಾರುಕಟ್ಟೆ ಬಹಳ ಅಗಾಧವಾಗಿರುತ್ತದೆ. ಇದರಲ್ಲಿ ವಿವಿಧ ದೇಶಗಳ ಸರ್ಕಾರಗಳು, ಕಾರ್ಪೊರೇಟ್ ಸಂಸ್ಥೆಗಳ ಬಾಂಡ್ಗಳನ್ನು ಮಾರಾಟಕ್ಕಿಡಲಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಇದರಲ್ಲಿ ಮಸಾಲ ಬಾಂಡ್ಗಳ ಆಗಮನವಾಗಿದೆ.
ಮಸಾಲ ಬಾಂಡ್ ಎಂದರೆ ಮಸಾಲ ಪದಾರ್ಥ ತಯಾರಿಸುವ ಕಂಪನಿಗಳು ವಿತರಿಸುವ ಬಾಂಡ್ ಅಲ್ಲ. ಭಾರತದ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳು ವಿದೇಶೀ ಹೂಡಿಕೆದಾರರಿಗೆ ಮಸಾಲ ಬಾಂಡ್ ಆಫರ್ ಮಾಡುತ್ತವೆ. ಹೂಡಿಕೆದಾರರು ಈ ಬಾಂಡ್ಗಳನ್ನು ರುಪಾಯಿ ಕರೆನ್ಸಿಯಲ್ಲಿ ಖರೀದಿಸುತ್ತಾರೆ. ಭಾರತ ಮಾತ್ರವಲ್ಲ ಬೇರೆ ಬೇರೆ ದೇಶಗಳ ಮಾರುಕಟ್ಟೆಗಳಲ್ಲಿ ಈ ರೀತಿಯ ಬಾಂಡ್ಗಳನ್ನು ವಿತರಿಸುತ್ತವೆ. ಉದಾಹರಣೆಗೆ, ಜಪಾನ್ನ ಯೆನ್ ಕರೆನ್ಸಿಯ ಸಮುರಾಯ್ ಬಾಂಡ್, ಚೀನಾದ ಯುಆನ್ ಕರೆನ್ಸಿಯ ಪಾಂಡಾ ಬಾಂಡ್ಗಳು ಇತ್ಯಾದಿ.
ಮಸಾಲ ಬಾಂಡ್ ಅನುಕೂಲಗಳು
- ಪ್ರಮುಖ ವಿದೇಶಗಳಲ್ಲಿ ಬಡ್ಡಿದರ ಭಾರತದಕ್ಕೆ ಹೋಲಿಸಿದರೆ ಕಡಿಮೆ ಇರುತ್ತದೆ. ಮಸಾಲ ಬಾಂಡ್ ವಿತರಿಸುವ ಸಂಸ್ಥೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಬಂಡವಾಳ ಸಿಗುತ್ತದೆ.
- ರುಪಾಯಿ ಕರೆನ್ಸಿಯಲ್ಲಿ ಹೂಡಿಕೆದಾರರು ಖರೀದಿ ಮಾಡುತ್ತಾರೆ. ಡಾಲರ್ ಕರೆನ್ಸಿಯಲ್ಲಿ ಹೂಡಿಕೆದಾರರಿಗೆ ರಿಟರ್ನ್ ಸಿಗುತ್ತದೆ. ರುಪಾಯಿ ಕರೆನ್ಸಿ ಮೌಲ್ಯ ತಗ್ಗಿದರೆ ಸಂಸ್ಥೆಗೆ ಅನನುಕೂಲವಾಗುವುದು ತಪ್ಪುತ್ತದೆ. ಅಂದರೆ, ಕಡಿಮೆ ರಿಸ್ಕ್ನಲ್ಲಿ ಸಂಸ್ಥೆಗಳು ಕಡಿಮೆ ದರದಲ್ಲಿ ಬಂಡವಾಳ ಪಡೆಯುತ್ತವೆ.
- ಭಾರತೀಯ ಸಂಸ್ಥೆಗಳಿಗೆ ಹೂಡಿಕೆದಾರರ ವೈವಿಧ್ಯತೆ ದೊಡ್ಡದಾಗುತ್ತದೆ.
- ಹೂಡಿಕೆದಾರರಿಗೂ ಅನುಕೂಲತೆಗಳಿರುತ್ತವೆ. ತಮ್ಮ ದೇಶಗಳಲ್ಲಿ ಸಿಗುವುದಕ್ಕಿಂತ ಇಲ್ಲಿ ಹೆಚ್ಚು ರಿಟರ್ನ್ ಸಿಗುವ ಸಾಧ್ಯತೆ ಇರುತ್ತದೆ.
- ನೊಂದಣಿ ಕೆಲಸ ಹೆಚ್ಚು ಸಂಕೀರ್ಣ ಇರುವುದಿಲ್ಲ. ಮಸಾಲ ಬಾಂಡ್ ಪಡೆಯಲು ವಿದೇಶೀ ಪೋರ್ಟ್ಫೋಲಿಯೋ ಇನ್ವೆಸ್ಟರ್ (ಎಫ್ಪಿಐ) ಎಂದು ನೊಂದಾಯಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
- ಭಾರತದ ಆರ್ಥಿಕತೆ ಒಳ್ಳೆಯ ಸ್ಥಿತಿಯಲ್ಲಿರುವುದರಿಂದ ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಗೆ ಮಸಾಲ ಬಾಂಡ್ ಆಕರ್ಷಕ ಎನಿಸಬಹುದು.
ಈ ಮಸಾಲ ಬಾಂಡ್ ಅಸ್ತಿತ್ವಕ್ಕೆ ಬಂದದ್ದು ಹೇಗೆ?
ಇದಕ್ಕೂ ಇಂಟ್ರೆಸ್ಟಿಂಗ್ ಕಾರಣ ಇದೆ. ಮಸಾಲ ಬಾಂಡ್ ಎಂದು ಹಾಗೇ ಸುಮ್ಮನೆ ಬಂದ ಹೆಸರಲ್ಲ. ದೇಶದ ಸಂಪ್ರದಾಯದ ಪ್ರತೀಕವಾಗಿ ಈ ಹೆಸರಿಡಲಾಗಿದೆ. ಅಂದಹಾಗೆ ಈ ಬಾಂಡ್ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದು 2013ರ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಒಂದು ವಿದ್ಯಮಾನ. ಆಗ ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ತನ್ನ ಬಾಂಡ್ ಖರೀದಿ ಯೋಜನೆಯನ್ನು ಕಡಿಮೆಗೊಳಿಸಲು ನಿರ್ಧರಿಸಿತು. ಅದರ ಪರಿಣಾಮವಾಗಿ ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಂದ ಹೂಡಿಕೆದಾರರು ಹೊರಬಿದ್ದಿದ್ದರು. ಇದರಿಂದ ರುಪಾಯಿಗೆ ಸಂಚಕಾರದ ಸ್ಥಿತಿ ಬಂದಿತ್ತು. ಫಾರೆಕ್ಸ್ ರಿಸರ್ವ್ಸ್ ನಿಧಿ ಖಾಲಿಯಾಗುತ್ತಾ ಬಂದಿತ್ತು. ಆಗ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳಿಗೂ ವಿದೇಶಗಳಿಂದ ಹೂಡಿಕೆ ಪಡೆಯುವುದು ಕಷ್ಟಕರವಾಗಿತ್ತು. ಈ ಕಾರಣಕ್ಕೆ ಮಸಾಲ ಬಾಂಡ್ಗಳನ್ನು ಜಾರಿಗೆ ತರಲಾಯಿತು. ಭಾರತವು ಮಸಾಲ ಪದಾರ್ಥಗಳಿಗೆ ಹೆಸರುವಾಸಿಯಾದ್ದರಿಂದ ಆ ಬಾಂಡ್ಗೆ ಮಸಾಲ ಬಾಂಡ್ ಎಂದು ಹೆಸರಿಸಲಾಯಿತು.
ಇದನ್ನೂ ಓದಿ: ಖಾಸಗಿ ಬಂಡವಾಳ ವೆಚ್ಚ ಬರದಿದ್ದರೂ ಇದೇ ಆರ್ಥಿಕ ವೇಗ ಉಳಿಯಲು ಸಾಧ್ಯ: ಟಿವಿ ಸೋಮನಾಥನ್
2014ರಲ್ಲಿ ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆ ಮೊದಲ ಬಾರಿಗೆ ಮಸಾಲ ಬಾಂಡ್ ಮೂಲಕ 1,000 ಕೋಟಿ ರೂ ಬಂಡವಾಳ ಪಡೆಯಿತು. ಎಚ್ಡಿಎಫ್ಸಿ 2016ರಲ್ಲಿ 3,000 ಕೋಟಿ ರೂ ಬಂಡವಾಳ ಪಡೆಯಿತು. ಎನ್ಟಿಪಿಸಿ, ಎಡಿಬಿ, ಕೇರಳದ ಕೆಐಐಎಫ್ಬಿ ಮೊದಲಾದ ಸಂಸ್ಥೆಗಳೂ ಈ ಮಸಾಲ ಬಾಂಡ್ಗಳ ಮೂಲಕ ಸಾವಿರಾರು ಕೋಟಿ ರೂ ಬಂಡವಾಳ ಕಲೆ ಹಾಕಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ