BBC: ಬಿಬಿಸಿಯಿಂದ ಎಷ್ಟು ಮೊತ್ತದ ತೆರಿಗೆ ವಂಚನೆ ಆಗಿದೆ? ಐಟಿ ಮೂಲಗಳಿಂದ ತಿಳಿದ ಮಾಹಿತಿ ಇದು
IT Dept Has Strong Case Against BBC: ಬಿಬಿಸಿ ಇಂಡಿಯಾ ವಿರುದ್ಧ ಐಟಿ ಇಲಾಖೆ ಪ್ರಬಲ ಸಾಕ್ಷ್ಯ ಸಂಗ್ರಹಿಸಿದೆ. ಬಿಬಿಸಿ ಇಂಡಿಯಾ ಭಾರತದಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡದೇ ಸುಮಾರು 55-60 ಕೋಟಿಯಷ್ಟು ತೆರಿಗೆ ಕಳ್ಳತನ ಮಾಡಿರುವುದು ಮೂರು ದಿನಗಳ ತನಿಖೆ ಬಳಿಕ ಇಲಾಖೆಗೆ ಗೊತ್ತಾಗಿದೆ.
ನವದೆಹಲಿ: ಲಂಡನ್ ಮೂಲದ ಬಿಬಿಸಿ ಮಾಧ್ಯಮ ಸಂಸ್ಥೆಯ ದಿಲ್ಲಿ ಮತ್ತು ಮುಂಬೈ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಸರ್ವೆಯಿಂದ (IT Survey In BBC offices) ಕೆಲವಾರು ಮಹತ್ವದ ಸುಳಿವುಗಳು ಸಿಕ್ಕಿವೆ ಎಂದು ಝೀ ಬ್ಯುಸಿನೆಸ್ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ವರದಿ ಪ್ರಕಾರ ಬಿಬಿಸಿ ಸುಮಾರು 60 ಕೋಟಿ ರೂ ಮೌಲ್ಯದಷ್ಟು ತೆರಿಗೆ ವಂಚನೆ ಮಾಡಿದೆ. ಪರಸ್ಪರ ಸಮ್ಮತ ಒಪ್ಪಂದ ವಿಧಾನ (ಎಂಎಪಿ– Mutually Agreed Procedure) ಜಾರಿಯಲ್ಲಿದ್ದರೂ ಸತತ ಎರಡು ವರ್ಷ ಬಿಬಿಸಿ ಆದಾಯ ತೆರಿಗೆಯನ್ನೇ ಪಾವತಿಸಿಲ್ಲದಿರುವುದು ಐಟಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಒಂದು ಕಂಪನಿ ತನ್ನೊಂದು ಉತ್ಪನ್ನ ಅಥವಾ ಸೇವೆಗೆ ಎರಡು ದೇಶಗಳಿಗೆ ತೆರಿಗೆ ಪಾವತಿಸುವುದನ್ನು ತಪ್ಪಿಸುವ ಉದ್ದೇಶದಿಂದ ಎರಡು ದೇಶಗಳ ತೆರಿಗೆ ಪ್ರಾಧಿಕಾರಗಳ ಮಧ್ಯೆ ಇರುವ ದ್ವಿಪಕ್ಷೀಯ ವ್ಯವಸ್ಥೆಯೇ ಎಂವಿಪಿ. ಆ ವ್ಯವಸ್ಥೆ ಜಾರಿಯಲ್ಲಿದ್ದರೂ ಬಿಬಿಸಿ ತೆರಿಗೆ ಪಾವತಿಯಿಂದ ವಿಮುಖವಾಗಿದ್ದು ಈಗ ಅದರ ಮೈ ಸುತ್ತಿಕೊಳ್ಳುತ್ತಿದೆ.
ಐಟಿ ಅಧಿಕಾರಿಗಳು ಮೂರು ದಿನಗಳ ಕಾಲ ನಡೆಸಿದ ತನಿಖೆಯಲ್ಲಿ ಈ ಸಂಗತಿ ಸ್ಪಷ್ಟವಾಗಿ ಗೋಚರಿಸಿದೆ. “ವಿವಿಧ ತೆರಿಗೆ ವಿಚಾರದಲ್ಲಿ ಬಿಬಿಸಿ ಇಂಡಿಯಾ ವಿರುದ್ಧ ಐಟಿ ಇಲಾಖೆ ಪ್ರಬಲ ಸಾಕ್ಷ್ಯ ಸಂಗ್ರಹಿಸಿದೆ. ಮೂರು ದಿನಗಳ ತನಿಖೆ ಬಳಿಕ, ಬಿಬಿಸಿ ಇಂಡಿಯಾ ಭಾರತದಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡದೇ ಸುಮಾರು 55-60 ಕೋಟಿಯಷ್ಟು ತೆರಿಗೆ ಕಳ್ಳತನ ಮಾಡಿರುವುದು ಇಲಾಖೆಗೆ ಗೊತ್ತಾಗಿದೆ” ಎಂದು ಝೀ ಬ್ಯುಸಿನೆಸ್ ತನ್ನ ವರದಿಯಲ್ಲಿ ತಿಳಿಸಿದೆ.
ಟ್ರಾನ್ಸ್ಫರ್ ಪ್ರೈಸಿಂಗ್ ಅವ್ಯವಹಾರ:
ಇದಕ್ಕಿಂತ ಮುಖ್ಯವಾಗಿ, ಬಿಬಿಸಿ ಹಲವಾರು ಟ್ರಾನ್ಸ್ಫರ್ ಪ್ರೈಸಿಂಗ್ ನಿಯಮಗಳ ಉಲ್ಲಂಘನೆಗಳನ್ನು ಮಾಡಿರುವುದು ಐಟಿ ಅಧಿಕಾರಿಗಳಿಗೆ ದೃಢಪಟ್ಟಿದೆ. ಬಿಬಿಸಿ ಇಂಡಿಯಾ ಮತ್ತು ಅದರ ಮಾತೃ ಸಂಸ್ಘಥೆ ಬಿಬಿಸಿ ಯುಕೆ ನಡುವಿನ ಆಂತರಿಕ ವ್ಯವಹಾರ ಮತ್ತು ವಹಿವಾಟಿನಲ್ಲಿ ಹಲವು ವಂಚನೆಗಳು ನಡೆದಿವೆ ಎನ್ನಲಾಗಿದೆ.
ಇದನ್ನೂ ಓದಿ: BBC: ಬಿಬಿಸಿ ಕಚೇರಿಯಲ್ಲಿ ಐಟಿ ಸರ್ವೆಯ ಮರ್ಮವೇನು? ಟ್ರಾನ್ಸ್ಫರ್ ಪ್ರೈಸಿಂಗ್ನಿಂದ ಜಾಗತಿಕವಾಗಿ ಆಗುವ ತೆರಿಗೆನಷ್ಟ ಎಷ್ಟು?
ಟ್ರಾನ್ಸ್ಫರ್ ಪ್ರೈಸಿಂಗ್ ನಿದರ್ಶನ
ಎರಡು ವಿಭಿನ್ನ ತೆರಿಗೆ ವ್ಯವಸ್ಥೆಯ ದೇಶಗಳಲ್ಲಿ ವ್ಯವಹಾರ ಹೊಂದಿರುವ ಒಂದು ಕಂಪನಿ, ತನಗೆ ಅನುಕೂಲಕರವಾಗುವ ರೀತಿಯಲ್ಲಿ ತನ್ನ ಉಪಸಂಸ್ಥೆಗಳ ಮಧ್ಯೆ ಉತ್ಪನ್ನವನ್ನು ಮಾರುಕಟ್ಟೆ ದರಕ್ಕಿಂತ ಏರಿಳಿತ ಮಾಡಿ ತೆರಿಗೆ ಉಳಿಸುವ ಪ್ರಯತ್ನ ಮಾಡುತ್ತದೆ. ಇದು ಟ್ರಾನ್ಸ್ಫರ್ ಪ್ರೈಸಿಂಗ್ ನಿಯಮಗಳಿಗೆ ವಿರುದ್ಧವಾದುದು.
ಬಿಬಿಸಿ ವಿಚಾರಕ್ಕೆ ಬಂದರೆ ಬಿಬಿಸಿ ಯುಕೆ ಮಾತೃಸಂಸ್ಥೆಯಅದರೆ ಬಿಬಿಸಿ ಇಂಡಿಯಾ ಒಂದು ಅಂಗಸಂಸ್ಥೆ. ಬಿಬಿಸಿ ಇಂಡಿಯಾ ಒಂದು ಕಂಟೆಂಟ್ ತಯಾರಿಸಿ ಅದನ್ನು ಯುಕೆಗೆ ಕಳುಹಿಸಿಕೊಡುತ್ತದೆ. ಅದರಿಂದ ವಾಣಿಜ್ಯಾತ್ಮಕವಾಗಿ ಬರುವ ಲಾಭದಲ್ಲಿ ಭಾರತೀಯ ವಿಭಾಗಕ್ಕೆ ಸುಮಾರು ಶೇ. 7ರಷ್ಟು ಪಾಲನ್ನು ಕೊಡುತ್ತದೆ. ಇದರಲ್ಲಿ ಸಂಬಳ, ಬಾಡಿಗೆ ಇತ್ಯಾದಿ ಎಲ್ಲಾ ವೆಚ್ಚವನ್ನೂ ನಿಭಾಯಿಸಬೇಕಾಗುತ್ತದೆ. ಇದು ಟ್ರಾನ್ಸ್ಫರ್ ಪ್ರೈಸಿಂಗ್ನ ಪ್ರಕರಣವಾಗಿದ್ದಿರಬಹುದು ಎಂಬುದು ಐಟಿ ಇಲಾಖೆಯ ಅನುಮಾನ. ಈ ನಿಟ್ಟಿನಲ್ಲಿ ತನಿಖೆ ನಡೆಸಬೇಕೆನ್ನುವುದು ಅದರ ಯೋಜನೆ ಎಂದು ಐಟಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.