ಮೇಡ್​ ಇನ್ ಚೀನಾ ಉತ್ಪನ್ನಗಳ ಖರೀದಿಯಿಂದ ಹಿಂದಕ್ಕೆ ಸರಿದ ಶೇ 40ಕ್ಕೂ ಹೆಚ್ಚು ಭಾರತೀಯರು; ಸಮೀಕ್ಷೆಯಲ್ಲಿ ಕಂಡು ಬಂದಿದ್ದೇನು?

Made in China products: ಭಾರತ ಮತ್ತು ಚೀನಾ ಮಧ್ಯೆ ಗಾಲ್ವಾನ್ ಉದ್ವಿಗ್ನತೆಗೆ ಒಂದು ವರ್ಷ (ಜೂನ್ 15, 2021) ಪೂರ್ತಿಯಾಗಿದೆ. ಈ ಅವಧಿಯಲ್ಲಿ ಶೇ 40ಕ್ಕೂ ಹೆಚ್ಚು ಭಾರತೀಯ ಗ್ರಾಹಕರು ಮೇಡ್ ಇನ್ ಚೀನಾ ಉತ್ಪನ್ನಗಳಿಂದ ಹಿಂದೆ ಸರಿದಿರುವುದಾಗಿ ಸಮೀಕ್ಷೆಯೊಂದರಲ್ಲಿ ಹೇಳಿದ್ದಾರೆ.

ಮೇಡ್​ ಇನ್ ಚೀನಾ ಉತ್ಪನ್ನಗಳ ಖರೀದಿಯಿಂದ ಹಿಂದಕ್ಕೆ ಸರಿದ ಶೇ 40ಕ್ಕೂ ಹೆಚ್ಚು ಭಾರತೀಯರು; ಸಮೀಕ್ಷೆಯಲ್ಲಿ ಕಂಡು ಬಂದಿದ್ದೇನು?
ಸಾಂದರ್ಭಿಕ ಚಿತ್ರ

ಭಾರತ ಮತ್ತು ಚೀನಾ ಮಧ್ಯೆ ಗಾಲ್ವಾನ್ ಕಣಿವೆ ಉದ್ವಿಗ್ನತೆ ಉದ್ಭವಿಸಿದ ನಂತರ, ಎರಡು ದೇಶಗಳ ಮಧ್ಯೆ ವಾಣಿಜ್ಯ ವ್ಯವಹಾರಗಳಿಗೆ ಪೆಟ್ಟು ಬಿದ್ದಿದೆ. ಈ ಬೆಳವಣಿಗೆಯಾಗಿ ಒಂದು ವರ್ಷ ಕಳೆದಿದೆ. ಲೋಕಲ್​ಸರ್ಕಲ್ಸ್​ನಿಂದ ನಡೆಸಿರುವ ಸಮೀಕ್ಷೆ ಪ್ರಕಾರ, ಕಳೆದ 12 ತಿಂಗಳಲ್ಲಿ ಶೇ 40ಕ್ಕೂ ಹೆಚ್ಚು ಗ್ರಾಹಕರು ಮೇಡ್ ಇನ್ ಚೀನಾ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ಹಿಂದಕ್ಕೆ ಸರಿದಿದ್ದಾರೆ. ಗಾಲ್ವಾನ್ ಉದ್ವಿಗ್ನತೆಯ ನಂತರ ಭಾರತ ಸರ್ಕಾರದಿಂದ ಟಿಕ್​ಟಾಕ್​, ಕ್ಲಬ್ ಫ್ಯಾಕ್ಟರಿ ಸೇರಿದಂತೆ ಚೈನೀಸ್​ ಆ್ಯಪ್​ಗಳನ್ನು ನಿಷೇಧಿಸಲಾಯಿತು. ಸ್ಥಳೀಯವಾಗಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಮಾಡುವ ಸಲುವಾಗಿ ಆತ್ಮನಿರ್ಭರ್ ಯೋಜನೆಯನ್ನು ಆರಂಭಿಸಿತು. ಇದರ ಜತೆಗೆ ಸ್ಥಳೀಯ ವರ್ತಕರು ಸಹ ಚೀನಾದಿಂದ ಗ್ರಾಹಕ ಬಳಕೆ ವಸ್ತುಗಳ ಆಮದು ಕಡಿಮೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ಅಂದಹಾಗೆ, ಸಮೀಕ್ಷೆಯ ಸಲುವಾಗಿ ಲೋಕಲ್​ಸರ್ಕಲ್ಸ್​ನಿಂದ 18,000 ಮಂದಿಯ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. 281 ಜಿಲ್ಲೆಗಳ ಗ್ರಾಹಕರನ್ನು ಮಾತನಾಡಿಸಲಾಗಿದೆ. ಸಮೀಕ್ಷೆಯಲ್ಲಿ ಕಂಡುಬಂದ ಅಂಕಿ- ಅಂಶದ ಪ್ರಕಾರ, ಕಳೆದ 12 ತಿಂಗಳಲ್ಲಿ ಶೇ 43ರಷ್ಟು ಭಾರತೀಯ ಗ್ರಾಹಕರು ಚೀನಾ ಉತ್ಪನ್ನವನ್ನು ಖರೀದಿ ಮಾಡಿಲ್ಲ. ಸಮೀಕ್ಷೆಯಲ್ಲಿ ಸಂಗ್ರಹವಾದ ಅಂಕಿ- ಅಂಶದ ಪ್ರಕಾರ, ಶೇ 34ರಷ್ಟು ಮಂದಿ ತಾವು ಒಂದೆರಡು ಚೀನಾ ಪ್ರಾಡಕ್ಟ್​ಗಳನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಶೇ 8ರಷ್ಟು ಮಂದಿ 3ರಿಂದ 5 ವಸ್ತುಗಳು, ಶೇ 4ರಷ್ಟು ಮಂದಿ 5ರಿಂದ 10 ವಸ್ತುಗಳು, ಶೇ 3ರಷ್ಟು ಮಂದಿ 10- 15 ಉತ್ಪನ್ನ, ಶೇ 1ರಷ್ಟು ಮಂದಿ 20ಕ್ಕೂ ಹೆಚ್ಚು, ಮತ್ತು ಇತರ ಶೇ 1ರಷ್ಟು ಮಂದಿ 15ರಿಂದ 20 ಪ್ರಾಡಕ್ಟ್​ಗಳನ್ನು ಖರೀದಿಸಿರುವುದಾಗಿ ಹೇಳಿದ್ದಾರೆ.

ಆದರೂ ಮೇಡ್​ ಇನ್ ಚೀನಾ ಉತ್ಪನ್ನಗಳ ಮೇಲೆ ಭಾರತದ ಅವಲಂಬನೆ ಈಗಲೂ ಹೆಚ್ಚಿಗೆ ಇದ್ದೇ ಇದೆ. ಎಲೆಕ್ಟ್ರಿಕಲ್ ಮಷಿನರಿ, ಅಪ್ಲೈಯನ್ಸಸ್, ಫಾರ್ಮಾಸ್ಯುಟಿಕಲ್ಸ್ ಔಷಧ ಉತ್ಪಾದನೆ ಹಾಗೂ ಎಲೆಕ್ಟ್ರಾನಿಕ್ಸ್​ಗಳಿಗೆ ಕಳೆದ ವರ್ಷ ಬೇಡಿಕೆ ಹೆಚ್ಚಾಗಿ ಕಂಡುಬಂದಿತ್ತು ಎನ್ನಲಾಗಿದೆ. ಮೇಡ್ ಇನ್​ ಚೀನಾದ ಹಲವು ಉತ್ಪನ್ನಗಳಿಗೆ ಪರ್ಯಾಯವಾಗಿ ಭಾರತದ ಉತ್ಪನ್ನಗಳು ಇಲ್ಲ. ಒಂದು ವೇಳೆ ಇದ್ದರೂ ಬೆಲೆ ತುಂಬ ಜಾಸ್ತಿ ಹಾಗೂ ಗುಣಮಟ್ಟ ಮತ್ತು ಆ ವೈಶಿಷ್ಟ್ಯ ಇಲ್ಲ. ಅದೇ ರೀತಿ ಜಾಗತಿಕ ಮಟ್ಟದ ಗ್ಯಾಜೆಟ್ ತಯಾರಕರು ಹಲವರು ಚೀನಾದಲ್ಲಿ ಕಾರ್ಖಾನೆಯನ್ನು ಹೊಂದಿದ್ದಾರೆ. ಜಾಗತಿಕ ಅಗತ್ಯವನ್ನು ಚೀನಾದ ಕಾರ್ಖಾನೆಗಳಿಂದಲೇ ಪೂರೈಸುತ್ತಾರೆ. ಅಂಥ ಪ್ರಾಡಕ್ಟ್​ಗಳ ಮೇಲೆ ಬ್ರ್ಯಾಂಡ್​ನೇಮ್ ಅವುಗಳದೇ ಇದ್ದರೂ ಆ ಉತ್ಪನ್ನಗಳು ಚೀನಾದಲ್ಲಿ ತಯಾರಿಸಲಾಗುತ್ತದೆ ಎಂದು ಲೋಕಲ್​ಸರ್ಕಲ್ಸ್​ ಸಮೀಕ್ಷೆಯಲ್ಲಿ ತಿಳಿಸಿದೆ. ಉದಾಹರಣೆಗೆ, ಕೊರೊನಾ ಎರಡನೇ ಅಲೆಯಲ್ಲಿ ಖರೀದಿ ಮಾಡಿದ ಪಲ್ಸ್ ಆಕ್ಸಿಮೀಟರ್​ಗಳು ದೊಡ್ಡ ಪ್ರಮಾಣದಲ್ಲಿ ಚೀನಾದಲ್ಲಿ ತಯಾರು ಆದಂಥದ್ದು. ಭಾರತೀಯರು ಅವುಗಳನ್ನು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: Galwan Valley Clash: ಚೀನಾ ಸೈನಿಕರ ಕ್ರೌರ್ಯಕ್ಕೆ ಸಾಕ್ಷಿಯಾದ ಗಾಲ್ವಾನ್​ ಸಂಘರ್ಷಕ್ಕೆ ಒಂದು ವರ್ಷ; ಎಲ್​ಎಸಿಯಲ್ಲಿ ಇಂದಿಗೂ ಹೈ ಅಲರ್ಟ್​

(More than 40% of Indian consumers refrain from made in China products in last one year, after Galwan valley tension between India and China, according to Survey by LocalCircles)