Nureka share listing: ಹೋಂ ಹೆಲ್ತ್​​ಕೇರ್, ವೆಲ್​ನೆಸ್ ಉತ್ಪನ್ನಗಳ ನ್ಯೂರೆಕಾ ಕಂಪನಿಯ ಷೇರು ಶೇ 53ರಷ್ಟು ಪ್ರೀಮಿಯಂನಲ್ಲಿ ಲಿಸ್ಟಿಂಗ್

Nureka share listing: ಹೋಮ್​​ಕೇರ್ ಮತ್ತು ವೆಲ್​​ನೆಸ್ ಉತ್ಪನ್ನಗಳನ್ನು ಮಾರಾಟ ಮಾಡುವ Nureka ಕಂಪೆನಿಯ ಷೇರು ಫೆಬ್ರವರಿ 25ನೇ ತಾರೀಕಿನ ಗುರುವಾರ ಶೇಕಡಾ 53ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್ ಆಗಿದೆ. ಈ ಷೇರಿನ IPO ಫೆಬ್ರವರಿ 15ರಿಂದ 17 ಸಾರ್ವಜನಿಕರಿಗೆ ಸಬ್​​ಸ್ಕ್ರಿಪ್ಷನ್​​ಗೆ ಮುಕ್ತವಾಗಿತ್ತು.

  • TV9 Web Team
  • Published On - 11:54 AM, 25 Feb 2021
Nureka share listing: ಹೋಂ ಹೆಲ್ತ್​​ಕೇರ್, ವೆಲ್​ನೆಸ್ ಉತ್ಪನ್ನಗಳ ನ್ಯೂರೆಕಾ ಕಂಪನಿಯ ಷೇರು ಶೇ 53ರಷ್ಟು ಪ್ರೀಮಿಯಂನಲ್ಲಿ ಲಿಸ್ಟಿಂಗ್
Nureka Selling Products

ನ್ಯೂರೆಕಾ ಕಂಪೆನಿಯ ಷೇರುಗಳು ಫೆಬ್ರವರಿ 25 ರಂದು ಲಿಸ್ಟಿಂಗ್ ಆಗಿದ್ದು, ಪ್ರತಿ ಷೇರಿಗೆ 400 ರೂಪಾಯಿಯಂತೆ ಹಂಚಿಕೆ ಆಗಿತ್ತು. ಆ ಷೇರು ಇಂದು 53.75 ಪರ್ಸೆಂಟ್ ಪ್ರೀಮಿಯಂನೊಂದಿಗೆ ಲಿಸ್ಟಿಂಗ್ ಆಗಿ, ರೂ. 634.95ರಲ್ಲಿ ವಹಿವಾಟು ಆರಂಭಿಸಿದೆ. 2021ನೇ ಸಾಲಿನಲ್ಲಿ ನಡೆದಿರುವ ಆರನೆಯ ಲಿಸ್ಟಿಂಗ್ ಇದಾಗಿದೆ. ಇದಕ್ಕೂ ಮುನ್ನ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್, ಇಂಡಿಗೋ ಪೇಂಟ್ಸ್, ಹೋಂ ಫಸ್ಟ್ ಫೈನಾನ್ಸ್ ಕಂಪೆನಿ, ಸ್ಟೋವ್ ಕ್ರಾಫ್ಟ್ ಮತ್ತು ಬ್ರೂಕ್​ಫೀಲ್ಡ್ ಇಂಡಿಯಾ REIT ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಆರಂಭಿಸಿದೆ.

ಹೋಮ್ ಹೆಲ್ತ್​​ಕೇರ್ ಹಾಗೂ ವೆಲ್​ನೆಸ್ ಉತ್ಪನ್ನಗಳ ಮಾರಾಟ ಮಾಡುವ ನ್ಯೂರೆಕಾ ಕಂಪೆನಿಯ ಷೇರು ಬಿಎಸ್​​ಇ ಸೂಚ್ಯಂಕದಲ್ಲಿ ಇಂದು 634.95ಕ್ಕೆ ಲಿಸ್ಟಿಂಗ್ ಆಗಿದೆ (Nureka share listing). ಇನ್ನು ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್​ನಲ್ಲಿ 53.75 ಪರ್ಸೆಂಟ್ ಪ್ರೀಮಿಯಂನೊಂದಿಗೆ 615 ರೂಪಾಯಿಗೆ ಲಿಸ್ಟಿಂಗ್ ಆಯಿತು. ಫೆಬ್ರವರಿ 15ರಿಂದ 17ರ ಮಧ್ಯೆ ಸಾರ್ವಜನಿಕ ವಿತರಣೆಗೆ (IPO) ಬಿಡುಗಡೆ ಮಾಡಲಾಗಿತ್ತು. ಈ ಮೂಲಕ ಕಂಪೆನಿಯು 100 ಕೋಟಿ ರೂಪಾಯಿ ಸಂಗ್ರಹಿಸಿತು. ಐಪಿಒಗೆ ನಲವತ್ತು ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು.

ನಿವ್ವಳ ವಿತರಣೆ ಮೊತ್ತವಾದ 75 ಕೋಟಿ ರೂಪಾಯಿಯನ್ನು ಕಂಪೆನಿಯು ಹೆಚ್ಚುವರಿ ಕಾರ್ಯನಿರ್ವಹಣೆ ಬಂಡವಾಳಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ನ್ಯೂರೆಕಾ ಕಂಪೆನಿಯು ಹೋಮ್ ಹೆಲ್ತ್​​ಕೇರ್ ಹಾಗೂ ವೆಲ್​​ನೆಸ್ ಉತ್ಪನ್ನಗಳನ್ನು ಇ-ಕಾಮರ್ಸ್, ವಿತರಕರು, ರೀಟೇಲರ್ ಮೂಲಕ ಮಾರಾಟ ಮಾಡುತ್ತದೆ. ಜತೆಗೆ ತನ್ನದೇ ವೆಬ್​​ಸೈಟ್ drtrust.in ಮತ್ತು ಥರ್ಡ್ ಪಾರ್ಟಿ ಪ್ಲಾಟ್​​ಫಾರ್ಮ್​​ಗಳು ಮತ್ತು ರೀಟೇಲರ್​​ಗಳ ಮೂಲಕವೂ ಮಾರುತ್ತದೆ.

ಯಂತ್ರೋಪಕರಣಗಳು, ಭೂಮಿ ಮತ್ತು ಆಸ್ತಿ ಇಂಥವುಗಳ ಮೇಲೆ ನ್ಯೂರೆಕಾ ಕಂಪೆನಿಯು ಹೆಚ್ಚು ಹೂಡಿಕೆ ಮಾಡುವುದಿಲ್ಲ. ದೊಡ್ಡ ಮೊತ್ತದ ವೆಚ್ಚವನ್ನು ಮಾಡದೆ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಹಾಗೂ ಹಂಚುವುದು ಅದರ ವ್ಯಾಪಾರ ಮಾದರಿ. ಉದ್ಯಮವನ್ನು ವಿಸ್ತರಿಸುವ ಉದ್ದೇಶದಿಂದ 2019ರ ಅಕ್ಟೋಬರ್​​ನಲ್ಲಿ ಕ್ರೋಮಾ ಜತೆಗೆ ನ್ಯೂರೆಕಾ ಕೈ ಜೋಡಿಸಿತ್ತು. ಈ ಸಹಭಾಗಿತ್ವದ ಕಾರಣಕ್ಕೆ ನ್ಯೂರೆಕಾವು ತನ್ನ ಡಾ ಟ್ರಸ್ಟ್ ಮತ್ತು ಡಾ ಫಿಸಿಯೋ ಬ್ರ್ಯಾಂಡ್​​ಗಳನ್ನು ದೇಶದಾದ್ಯಂತ ಇರುವ 30 ಕ್ರೋಮಾ ಮಳಿಗೆಗಳಲ್ಲೂ ಮಾರಾಟ ಮಾಡುತ್ತದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ