Pakistan Crisis: ಮಿತ್ರರಾಷ್ಟ್ರಗಳ ತಿರಸ್ಕಾರ, ಐಎಂಎಫ್ ಕಠಿಣ ಷರತ್ತು; ದಿವಾಳಿಯಾಗುವತ್ತ ಪಾಕಿಸ್ತಾನ
ಪಾಕಿಸ್ತಾನದೊಂದಿಗೆ ಆಪ್ತ ಸಂಬಂಧ ಹೊಂದಿರುವ ಚೀನಾ, ಸೌದಿ ಅರೇಬಿಯಾ ಸೇರಿದಂತೆ ಹಲವು ಮಿತ್ರರಾಷ್ಟ್ರಗಳು ಪಾಕಿಸ್ತಾನಕ್ಕೆ ಸುಲಭ ಷರತ್ತುಗಳೊಂದಿಗೆ ಹೊಸ ಸಾಲ ನೀಡಲು, ಹಳೆಯ ಸಾಲ ಮನ್ನಾ ಮಾಡಲು ನಿರಾಕರಿಸಿವೆ.
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (International Monetary Fund – IMF) ಪ್ರತಿನಿಧಿಗಳು ಭೇಟಿ ನೀಡಿ ದೇಶಕ್ಕೆ ತುರ್ತು ಅಗತ್ಯವಿರುವ ನೆರವಿನ ಸ್ವರೂಪದ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚನೆ ನೆಡೆಸಲಿದ್ದಾರೆ. ಇಂಧನ ಮತ್ತು ಅಗತ್ಯವಸ್ತುಗಳ ಬೆಲೆಏರಿಕೆಯಿಂದ ಪಾಕಿಸ್ತಾನದ ಜನಜೀವನ ಅಸ್ತವ್ಯಸ್ತಗೊಂಡಿದೆ. ತೆರಿಗೆ ಹೆಚ್ಚಳ ಮತ್ತು ಸಬ್ಸಿಡಿ ಕಡಿತದ ಬಗ್ಗೆ ಐಎಂಎಫ್ ಹೇರುತ್ತಿರುವ ಒತ್ತಡವನ್ನು ಪ್ರಧಾನಿ ಶಹಬಾಜ್ ಷರೀಫ್ (Shehbaz Sharif) ಕಾರ್ಯರೂಪಕ್ಕೆ ಬಾರದಂತೆ ತಡೆದಿದ್ದಾರೆ. ಇದೇ ಅಕ್ಟೋಬರ್‌ನಲ್ಲಿ ಪಾಕಿಸ್ತಾನದಲ್ಲಿ ಮಹಾಚುನಾವಣೆ ನಡೆಯಬೇಕಿತ್ತು. ತೆರಿಗೆ ಹೆಚ್ಚಳದ ನಿರ್ಧಾರ ಪ್ರಕಟಿಸಿದರೆ ಜನರು ತಿರುಗಿ ಬೀಳಬಹುದು ಎಂಬ ಆತಂಕ ರಾಜಕಾರಿಣಿಗಳನ್ನು ಕಾಡುತ್ತಿದೆ. ಹಲವು ಮಿತ್ರರಾಷ್ಟ್ರಗಳನ್ನು ಸುತ್ತಿಬಂದ ನಂತರವೂ ಯಾವುದೇ ದೇಶದಿಂದ ಪಾಕಿಸ್ತಾನಕ್ಕೆ ಸುಲಭದ ಸಿಗುತ್ತಿಲ್ಲ. ಪಾಕಿಸ್ತಾನದೊಂದಿಗೆ ಆಪ್ತ ಸಂಬಂಧ ಹೊಂದಿರುವ ಚೀನಾ, ಸೌದಿ ಅರೇಬಿಯಾ ಸೇರಿದಂತೆ ಹಲವು ಮಿತ್ರರಾಷ್ಟ್ರಗಳು ಪಾಕಿಸ್ತಾನಕ್ಕೆ ಸುಲಭ ಷರತ್ತುಗಳೊಂದಿಗೆ ಹೊಸ ಸಾಲ ನೀಡಲು, ಹಳೆಯ ಸಾಲ ಮನ್ನಾ ಮಾಡಲು ನಿರಾಕರಿಸಿವೆ. ದಿವಾಳಿಯಂಚಿಗಿರುವ ಪಾಕಿಸ್ತಾನಕ್ಕೆ ಸದ್ಯದ ಮಟ್ಟಿಗೆ ಐಎಂಎಫ್ ಷರತ್ತುಗಳಿಗೆ ತಲೆಬಾಗುವುದು ಬಿಟ್ಟರೆ ವಿಶ್ವದೆದುರು ಮುಖ ಉಳಿಸಿಕೊಳ್ಳಲು ಬೇರೆ ಮಾರ್ಗವಿಲ್ಲ.
ಐಎಂಎಫ್ ಷರತ್ತುಗಳಿಗೆ ಪಾಕಿಸ್ತಾನವು ಮಣಿದ ನಂತರ ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ಕರೆನ್ಸಿ ರೂಪಾಯಿ ಸತತ ಕುಸಿತ ಕಂಡಿದೆ. ಸರ್ಕಾರದ ಸಬ್ಸಿಡಿಗಳಿಂದಾಗಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಪೆಟ್ರೋಲ್ ಬೆಲೆ ಇದೀಗ ಹೆಚ್ಚಾಗಿವೆ. ಸರ್ಕಾರದ ಜನಪ್ರಿಯತೆ ಕಡಿಮೆಯಾಗುತ್ತಿದೆ. ‘ನಮಗೆ ಹೆಚ್ಚಿನ ಆಯ್ಕೆಗಳೇ ಉಳಿದಿಲ್ಲ. ಸರ್ಕಾರದ ಎದುರು ಐಎಂಎಫ್‌ನ ಷರತ್ತುಗಳಿಗೆ ಒಪ್ಪಿಕೊಳ್ಳುವುದು ಬಿಟ್ಟರೆ ಬೇರೆ ಮಾರ್ಗ ಇದ್ದಂತೆ ಇಲ್ಲ. ಈ ಸಮಸ್ಯೆಯನ್ನು ಇದೀಗ ಜನರು ಅನುಭವಿಸಲೇಬೇಕಾಗುತ್ತದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಜನರು ಸ್ಪಂದಿಸಬೇಕು. ಇಲ್ಲದಿದ್ದರೆ ದೇಶವು ದಿವಾಳಿಯಾಗುತ್ತದೆ. ಪಾಕಿಸ್ತಾನದ ಪರಿಸ್ಥಿತಿ ಶ್ರೀಲಂಕಾದಂತೆಯೇ ವಿಷಮಿಸುತ್ತದೆ’ ಎಂದು ವಿಶ್ವಬ್ಯಾಂಕ್‌ನಲ್ಲಿ ಈ ಹಿಂದೆ ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ಅಬೀಬ್ ಹಸನ್ ಎಎಫ್‌ಪಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Economic Survey 2023 Highlights: ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರ ಹೇಳಿದ್ದೇನು? ಇಲ್ಲಿವೆ ಮುಖ್ಯಾಂಶಗಳು
‘ಕಳೆದ ವರ್ಷ ಶ್ರೀಲಂಕಾ ಸಾಲ ಮಾರುಪಾವತಿ ಮಾಡಲು ಸಾಧ್ಯವಾಗದೆ ದಿವಾಳಿಯಾಯಿತು. ಇದರಿಂದ ಜನರು ಹಲವು ತಿಂಗಳುಗಳವರೆಗೆ ಆಹಾರ ಮತ್ತು ಇಂಧನ ಕೊರತೆ ಅನುಭವಿಸಬೇಕಾಯಿತು. ಶ್ರೀಲಂಕಾದಾದ್ಯಂತ ಪ್ರತಿಭಟನೆಗಳು ಸಾಮಾನ್ಯವಾದವು. ಜನರ ಆಕ್ರೋಶಕ್ಕೆ ಮಣಿದು ಅಧ್ಯಕ್ಷ, ಪ್ರಧಾನಿ ದೇಶಬಿಟ್ಟು ಓಡಿಹೋಗಬೇಕಾಯಿತು. ಪಾಕಿಸ್ತಾನದಲ್ಲಿ ಈಗ ಸಮಯವು ಎಲ್ಲಕ್ಕಿಂತ ಅಮೂಲ್ಯವಾಗಿದೆ. ‘ಕೆಟ್ಟ ಆಡಳಿತ ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ ನಮ್ಮ ಆರ್ಥಿಕತೆ ಈಗಾಗಲೇ ಕುಸಿದಿದೆ. ಈ ಕ್ಷಣದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ’ ಎಂದು ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಎಕನಾಮಿಕ್ಸ್‌ನ ವಿದ್ವಾಂಸ ನಾಸಿರ್ ಇಕ್ಬಾಲ್ ಹೇಳಿದರು.
ಐಎಂಎಫ್ ನಿಯೋಗವು ಪಾಕಿಸ್ತಾನಕ್ಕೆ ಮಂಗಳವಾರ ಭೇಟಿ ನೀಡಿದ್ದು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದೆ. ಅತಿಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರಗಳ ಪೈಕಿ ಒಂದಾಗಿರುವ ಪಾಕಿಸ್ತಾನದ ಬಳಿ ಪ್ರಸ್ತುತ ಕೇವಲ 3.7 ಶತಕೋಟಿ ಡಾಲರ್‌ಗಳಷ್ಟು ವಿದೇಶಿ ಮೀಸಲು ನಿಧಿ ಇದೆ.
ಕುಸಿದ ಆರ್ಥಿಕತೆ, ಕಂಗಾಲಾದ ಜನತೆ
ಜೀವನಾವಶ್ಯಕ ವಸ್ತುಗಳು ಮತ್ತು ಔಷಧಿಗಳನ್ನು ಹೊರತುಪಡಿಸಿದರ ಉಳಿದ ಯಾವುದೇ ರೀತಿಯ ವಸ್ತುಗಳಿಗೆ ಪಾಕಿಸ್ತಾನದ ಸರ್ಕಾರವು ಪಾವತಿ ಖಾತ್ರಿ (Letter of Credit) ಕೊಡುತ್ತಿಲ್ಲ. ಇದರಿಂದಾಗಿ ಕರಾಚಿ ಬಂದರಿನಲ್ಲಿ ಹಡಗುಗಳು ಸಾಲುಗಟ್ಟಿ ನಿಂತಿದ್ದು, ಕಂಟೇನರ್‌ಗಳನ್ನು ಇಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿದೆ.
ಆಮದು ನಿರ್ಬಂಧ ಮತ್ತು ಕರೆನ್ಸಿ ಮೌಲ್ಯ ಕುಸಿತದಿಂದಾಗಿ ಪಾಕಿಸ್ತಾನದಲ್ಲಿ ಉದ್ಯಮಗಳ ಕಾರ್ಯನಿರ್ವಹಣೆಗೆ ತೊಡಕುಂಟಾಗಿದೆ. ಸಾರ್ವಜನಿಕ ಉಪಯೋಗಕ್ಕಾಗಿ ನಿರ್ಮಿಸುವ ಕಾಮಗಾರಿಗಳನ್ನು (ರಸ್ತೆ, ಸೇತುವೆ ಇತ್ಯಾದಿ) ಸ್ಥಗಿತಗೊಳಿಸಲಾಗಿದೆ. ಜವಳಿ ಘಟಕಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ವಿದೇಶಗಳಿಂದ ಹೂಡಿಕೆಗಳು ಬರುತ್ತಿಲ್ಲ, ದೇಶೀಯ ಹೂಡಿಕೆಯೂ ಉದ್ಯಮಗಳಿಗೆ ಹರಿದುಬರುತ್ತಿಲ್ಲ.
ಕರಾಚಿಯ ಹೃದಯ ಭಾಗದಲ್ಲಿಯೇ ನೂರಾರು ದಿನಗೂಲಿ ಕಾರ್ಮಿಕರು ತಮ್ಮ ಕೆಲಸದ ಉಪಕರಣಗಳನ್ನು ಮುಂದಿಟ್ಟುಕೊಂಡು ಯಾರಾದರೂ ಕೆಲಸಕ್ಕೆ ಕರೆಯುತ್ತಾರೆಯೇ ಎಂದು ಕಾಯುತ್ತಿರುತ್ತಾರೆ. ಆದರೆ ಬಹುತೇಕ ದಿನಗಳಲ್ಲಿ ಇವರಿಗೆ ಕೆಲಸಗಳೇ ಸಿಗುವುದಿಲ್ಲ. ‘ಉದ್ಯೋಗಾವಕಾಶಗಳು ಕಡಿಮೆಯಾದಂತೆ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು 55 ವರ್ಷದ ಗಾರೆ ಮೇಸ್ಟ್ರಿ ಜಾಫರ್ ಇಕ್ಬಾಲ್ ಹೇಳಿದರು. ಈ ಮಾತು ಆಡುವಾಗ ಅವರು ಯಾರೋ ದಾನಿಗಳು ಪ್ಲಾಸ್ಟಿಕ್ ಕವರ್‌ನಲ್ಲಿ ಕೊಟ್ಟ ಬಿರಿಯಾನಿಯನ್ನು ತಿನ್ನುತ್ತಿದ್ದರು.
ಐಎಂಎಫ್ ನೆರವು ಸಿಕ್ಕರೂ ಪರಿಹಾರ ಮರೀಚಿಕೆ
ಪಾಕಿಸ್ತಾನದ ನಗರ ಪ್ರದೇಶಗಳ ಸ್ಥಿತಿಗತಿ ಬಗ್ಗೆ ಜಾಗತಿಕ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಪ್ರಕಟವಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ. ಈವರೆಗೆ 24ಕ್ಕೂ ಹೆಚ್ಚು ಬಾರಿ ಐಎಂಎಫ್‌ನೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು ರಿಯಾಯ್ತಿ ಪಡೆದುಕೊಂಡಿದ್ದರೂ ಪದೇಪದೆ ಬಿಕ್ಕಟ್ಟಿನ ಸುಳಿಗೆ ಸಿಲುಕುತ್ತಲೇ ಇದೆ.
‘ಪಾಕಿಸ್ತಾನವು ದಿವಾಳಿಯಾಗುವ ಅಪಾಯದಿಂದ ಈ ಬಾರಿ ಐಎಂಎಫ್ ಕಾಪಾಡಿದರೂ ಮುಂದಿನ ದಿನಗಳಲ್ಲಿ ಇಂಥದ್ದೇ ಪರಿಸ್ಥಿತಿ ಮರುಕಳಿಸುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಪಾಕಿಸ್ತಾನವನ್ನು ಈ ಬಿಕ್ಕಟ್ಟಿನ ಸ್ಥಿತಿಗೆ ದೂಡಿದ ಹಲವು ಅಂಶಗಳು ಇಂದಿಗೂ ಜೀವಂತವಾಗಿವೆ. ಉತ್ತಮ ಆಡಳಿತ, ಭ್ರಷ್ಟಾಚಾರಕ್ಕೆ ಕಡಿವಾಣ, ಆರ್ಥಿಕ ಅಸಮಾನತೆ ನಿವಾರಣೆಯಾಗದೆ ಪರಿಸ್ಥಿತಿ ಸುಧಾರಿಸುವುದಿಲ್ಲ’ ಎಂದು ವಾಷಿಂಗ್‌ಟನ್‌ನ ಅರ್ಥಶಾಸ್ತ್ರಜ್ಞ ಮೈಕೆಲ್ ಕುಗೆಲ್‌ಮನ್ ಹೇಳುತ್ತಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:13 pm, Tue, 31 January 23