ನೆರೆ ದೇಶಗಳೊಂದಿಗೆ ತಿಕ್ಕಾಟ ನಿಲ್ಲಿಸುವುದು ಸೇರಿದಂತೆ ಪಾಕಿಸ್ತಾನಕ್ಕೆ 11 ಷರತ್ತುಗಳನ್ನು ವಿಧಿಸಿದ ಐಎಂಎಫ್
International Monetary Fund's 11 conditions to Pakistan: ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನಕ್ಕೆ ಸಾಲದ ನೆರವು ಒದಗಿಸಲು ಒಪ್ಪಿದೆ. ಈ ನೆರವಿನ ಪ್ಯಾಕೇಜ್ನಲ್ಲಿ ಮುಂದಿನ ಹಂತದ ಹಣ ಬಿಡುಗಡೆಗೆ ಐಎಂಎಫ್ 11 ಷರತ್ತುಗಳನ್ನು ವಿಧಿಸಿದೆ. ಪಕ್ಕದ ದೇಶಗಳೊಂದಿಗೆ ಘರ್ಷಣೆಗೆ ಇಳಿದು ಆರ್ಥಿಕತೆಯ ಅಸ್ಥಿರತೆಗೆ ಕಾರಣವಾಗದಂತೆ ಸೂಚಿಸಿದೆ. ಪರೋಕ್ಷವಾಗಿ ಭಾರತದೊಂದಿಗೆ ತಿಕ್ಕಾಟವನ್ನು ಐಎಂಎಫ್ ಉಲ್ಲೇಖಿಸಿದೆ.

ನವದೆಹಲಿ, ಮೇ 18: ಪಾಕಿಸ್ತಾನಕ್ಕೆ ಒಂದು ಬಿಲಿಯನ್ ಡಾಲರ್ ಸಾಲ ಮಂಜೂರಾತಿ ಮಾಡಿರುವ ಐಎಂಎಫ್ (IMF bailout to Pakistan), ಈ ಹಣಕಾಸು ನೆರವಿಗಾಗಿ ಪಾಕಿಸ್ತಾನಕ್ಕೆ 11 ಷರತ್ತುಗಳನ್ನು ವಿಧಿಸಿರುವುದು ಗೊತ್ತಾಗಿದೆ. ಈ 1 ಬಿಲಿಯನ್ ಡಾಲರ್ ನೆರವಿನ ಪ್ಯಾಕೇಜ್ ಅನ್ನು ಹಂತ ಹಂತವಾಗಿ ನೀಡಲಾಗುತ್ತದೆ. ಮುಂದಿನ ಹಂತದ ಹಣ ಬಿಡುಗಡೆಗೆ ಈ ಷರತ್ತುಗಳನ್ನು ಐಎಂಎಫ್ ನೀಡಿದೆ. ಅಂದರೆ, ಐಎಂಎಫ್ ನೀಡಿರುವ ಸಲಹೆಗಳನ್ನು ಪಾಕಿಸ್ತಾನ ಜಾರಿಗೆ ತಂದರೆ ಮಾತ್ರ ಮುಂದಿನ ಟ್ರಾಂಚ್ ಸಿಗುತ್ತದೆ.
ಈ 11 ಷರತ್ತುಗಳಲ್ಲಿ ನೆರೆಯ ದೇಶಗಳೊಂದಿಗಿನ ಘರ್ಷಣೆಯನ್ನು ತಪ್ಪಿಸುವುದೂ ಕೂಡ ಒಳಗೊಂಡಿದೆ. ಭಾರತ ಹಾಗೂ ಅಫ್ಘಾನಿಸ್ತಾನದೊಂದಿಗೆ ಪಾಕಿಸ್ತಾನ ನಿರಂತರವಾಗಿ ಘರ್ಷಣೆಯ ಸ್ಥಿತಿಯಲ್ಲಿದೆ. ಇದನ್ನು ತಪ್ಪಿಸಬೇಕು ಎಂಬುದು ಐಎಂಎಫ್ನ ಒಂದು ಷರತ್ತು.
ಇದನ್ನೂ ಓದಿ: ಅಮೆರಿಕಕ್ಕೆ ಕ್ರೆಡಿಟ್ ರೇಟಿಂಗ್ AAAನಿಂದ AA1ಗೆ ಇಳಿಸಿದ ಮೂಡೀಸ್; ಭಾರತಕ್ಕೆಷ್ಟಿದೆ ರೇಟಿಂಗ್? ಏನಿದರ ಅರ್ಥ?
ಪಾಕಿಸ್ತಾನಕ್ಕೆ ಸಾಲ ಕೊಡಲು ಐಎಂಎಫ್ ವಿಧಿಸಿರುವ ಷರತ್ತುಗಳು:
- ತೆರಿಗೆ ಸುಧಾರಣೆ: ತೆರಿಗೆ ವ್ಯಾಪ್ತಿ ಮತ್ತು ತೆರಿಗೆ ಆದಾಯ ಹೆಚ್ಚಿಸಲು ಕೃಷಿ ಕ್ಷೇತ್ರದ ಮೇಲೂ ಆದಾಯ ತೆರಿಗೆ ಹೇರಿಕೆ ಸೇರಿದಂತೆ ಸಮಗ್ರ ತೆರಿಗೆ ಸುಧಾರಣೆ ಜಾರಿಗೆ ತರಬೇಕು.
- ಸಬ್ಸಿಡಿ ಕಡಿಮೆ: ಸರ್ಕಾರಕ್ಕೆ ಹಣಕಾಸು ಹೊರೆ ತಗ್ಗಿಸಲು ಇಂಧನ ಹಾಗೂ ಕೃಷಿ ಕ್ಷೇತ್ರದಲ್ಲಿ ಕ್ರಮೇಣವಾಗಿ ಸಬ್ಸಿಡಿಗಳನ್ನು ಕಡಿಮೆ ಮಾಡುತ್ತಾ ಬರಬೇಕು.
- ಸರ್ಕಾರಿ ಸಂಸ್ಥೆಗಳಿಗೆ ಸುಧಾರಣೆ: ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಕಾರ್ಯಕ್ಷಮತೆ ಹೆಚ್ಚಲು ಅನುವಾಗುವಂತೆ ಸುಧಾರಣೆಗಳನ್ನು ತರಬೇಕು.
- ಭ್ರಷ್ಟಾಚಾರ ನಿಗ್ರಹಕ್ಕೆ ಕ್ರಮ: ಸರ್ಕಾರದ ಆಡಳಿತದ ಮಟ್ಟದಲ್ಲಿ ಭ್ರಷ್ಟಾಚಾರ ತಡೆಯಲು ಕಾನೂನು ಚೌಕಟ್ಟನ್ನು ಬಲಪಡಿಸಬೇಕು.
- ಹಣಕಾಸು ಶಿಸ್ತು: ಬಜೆಟ್ ಕೊರತೆ ಆಗದ ರೀತಿಯಲ್ಲಿ ಕಟ್ಟುನಿಟ್ಟಾರೆ ಹಣಕಾಸು ಶಿಸ್ತು ಹೊಂದಿರಬೇಕು. ಸಾರ್ವಜನಿಕ ಸಾಲವನ್ನು ಸರಿಯಾಗಿ ನಿಭಾಯಿಸಬೇಕು.
- ಹಣಕಾಸು ನೀತಿ ಹೊಂದಾಣಿಕೆ: ಹಣದುಬ್ಬರ ಗುರಿಗೆ ಬದ್ಧವಾಗಿರುವ ಮತ್ತು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುವಂತೆ ಹಣಕಾಸು ನೀತಿ ಇರಬೇಕು. ಅದನ್ನು ಸರಿಯಾಗಿ ಜಾರಿಗೊಳಿಸಬೇಕು.
- ವಿನಿಮಯ ದರ ಹೊಂದಾಣಿಕೆ: ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ, ಮತ್ತು ಬಾಹ್ಯ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಎಕ್ಸ್ಚೇಂಜ್ ರೇಟ್ನಲ್ಲಿ ಫ್ಲೆಕ್ಸಿಬಿಲಿಟಿ ಇರಬೇಕು.
- ಇಂಧನ ಕ್ಷೇತ್ರದಲ್ಲಿ ಸುಧಾರಣೆ: ಇಂಧನ ವಲಯದಲ್ಲಿ ನಷ್ಟ ತಗ್ಗಿಸಲು ಮತ್ತು ಕ್ಷಮತೆ ಹೆಚ್ಚಿಸಲು ಸರಿಯಾದ ನಿರ್ವಹಣೆ ಆಗಬೇಕು. ಆ ಕ್ಷೇತ್ರದಲ್ಲಿ ಹೂಡಿಕೆಗಳಾಗಬೇಕು.
- ಸಾಮಾಜಿಕ ಸುರಕ್ಷಾ ಯೋಜನೆಗಳು: ದುರ್ಬಲ ಜನರಿಗೆ ರಕ್ಷಣೆಯಾಗಿ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು.
- ಆಡಳಿತ ಸುಧಾರಣೆಗಳು: ದೇಶದ ಸಾಂಸ್ಥಿಕ ವ್ಯವಸ್ಥೆ ಬಲಪಡಿಸಲು ಮತ್ತು ಪಾರದರ್ಶಕತೆ ಹೆಚ್ಚಿಸಲು ಆಡಳಿತ ಸುಧಾರಣೆಗಳನ್ನು ತರಬೇಕು.
- ಪ್ರಾದೇಶಿಕ ಸ್ಥಿರತೆ: ಪ್ರಾದೇಶಿಕ ಬಿಕ್ಕಟ್ಟು, ಅದರಲ್ಲಿ ನೆರೆಯ ದೇಶಗಳೊಂದಿಗೆ ಘರ್ಷಣೆಯನ್ನು ತಪ್ಪಿಸಬೇಕು. ಆರ್ಥಿಕ ಪ್ರಗತಿಗೆ ಜಾಗತಿಕ ರಾಜಕೀಯ ಸ್ಥಿರತೆ ಬಹಳ ಮುಖ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Sun, 18 May 25