ನವದೆಹಲಿ, ಫೆ. 2: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ಬಿಐ ನಿರ್ಬಂಧ ವಿಧಿಸಿದ ಕ್ರಮಕ್ಕೆ ಬಹಳ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ತಳಮಟ್ಟದಿಂದ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಉದ್ಯಮಿಗಳ ಉತ್ಸಾಹವನ್ನು ಸರ್ಕಾರ ಕುಂದಿಸುತ್ತಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪೇಟಿಎಂ ಬ್ಯಾಂಕ್ (Paytm Payments Bank) ಒಂದಷ್ಟು ನಿಯಮಗಳನ್ನು ಪಾಲಿಸಿಲ್ಲವಾದ್ದರಿಂದ ಆರ್ಬಿಐ ನಿರ್ಬಂಧ ಹಾಕಿದೆ ಎಂಬುದು ಸದ್ಯ ಮೇಲ್ನೋಟಕ್ಕೆ ಗೊತ್ತಾಗಿರುವ ಕಾರಣ. ಇದು ನಿಜವೂ ಹೌದು. ಜೊತೆಗೆ, ಇನ್ನೂ ಬಹಳಷ್ಟು ಬಲವಾದ ಕಾರಣಗಳು ಆರ್ಬಿಐ ಅನ್ನು ಈ ಅತಿರೇಕದ ಕ್ರಮಕ್ಕೆ (RBI extreme action) ದೂಡಿವೆ. ನಿಯಮಗಳ ಉಲ್ಲಂಘನೆ ಆಗುತ್ತಿದ್ದು, ಅದನ್ನು ಸರಿಪಡಿಸಿಕೊಳ್ಳುವಂತೆ ಆರ್ಬಿಐ ಹಲವು ಬಾರಿ ಪೇಟಿಎಂ ಪೇಮೆಂಟ್ ಬ್ಯಾಂಕ್ಗೆ ಹೇಳುತ್ತಲೇ ಬಂದಿತ್ತು. ಇದ್ಯಾವುದಕ್ಕೂ ಅದು ಸ್ಪಂದಿಸದೇ ಇದ್ದರಿಂದ ನಿರ್ಬಂಧ ಹೇರಿದೆ.
ಇದನ್ನೂ ಓದಿ: ಇದು ಸ್ಪೀಡ್ ಬ್ರೇಕರ್ ಮಾತ್ರ, ಗಾಡಿ ನಿಲ್ಲಲ್ಲ; ಪೇಟಿಎಂ ಮುಖ್ಯಸ್ಥ ಶರ್ಮಾ ಹೇಳಿದ್ದಿದು
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಸಿಸ್ಟಂ ಆಡಿಟ್ ಅನ್ನು ಆರ್ಬಿಐ ನಡೆಸಿದಾಗ ಹಲವು ಲೋಪದೋಷಗಳು ಬೆಳಕಿಗೆ ಬಂದಿದ್ದವು. ಅದರಲ್ಲಿ ಪ್ರಮುಖವಾದುದು ಕೆವೈಸಿ ದಾಖಲೆಯ ವಿಚಾರ. ಕ್ಲೈಂಟ್ಗಳಿಂದ ಸರಿಯಾದ ಕೆವೈಸಿ ದಾಖಲೆಗಳನ್ನು ಪಡೆಯಲಾಗಿಲ್ಲ. ಈ ಮೂಲಕ ಅಕ್ರಮ ಹಣ ವರ್ಗಾವಣೆಯ ಸಾಧ್ಯತೆ ಹೆಚ್ಚಾಗಿದೆ. ಪೇಟಿಎ ಬ್ಯಾಂಕ್ನಲ್ಲಿ ವಹಿವಾಟು ಆಗುವ ಹಣದ ಮೂಲವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಕ್ಲೈಂಟ್ಗಳನ್ನು ಸೇರಿಸಿಕೊಳ್ಳುವಾಗ ಕೆವೈಸಿ ದಾಖಲೆಗಳ ಮೂಲಕ ಅವರ ಹಿನ್ನೆಲೆಯನ್ನು ಪರಿಶೀಲಿಸುವ ಗೊಡವೆಗೆ ಹೋಗಲಾಗಿಲ್ಲ ಎಂಬುದು ಆರ್ಬಿಐ ಆಕ್ಷೇಪವಾಗಿದೆ.
ಸರಿಯಾದ ಕೆವೈಸಿ ದಾಖಲೆಗಳಿಲ್ಲದ ವರ್ತಕ ಖಾತೆ (Merchant Account) ಮೂಲಕ ದೊಡ್ಡ ಪ್ರಮಾಣದ ವಹಿವಾಟುಗಳಾಗಿರುವುದನ್ನು ಆಡಿಟಿಂಗ್ ವೇಳೆ ಪತ್ತೆ ಮಾಡಲಾಗಿತ್ತು. ಈ ಬಗ್ಗೆ ಪೇಟಿಎಂ ಬ್ಯಾಂಕ್ಗೆ ಆರ್ಬಿಐ ಪದೇ ಪದೇ ಎಚ್ಚರಿಕೆ ನೀಡುತ್ತಿತ್ತು. ಆದರೆ, ಬ್ಯಾಂಕ್ ತನ್ನ ನಡವಳಿಕೆ ತಿದ್ದಿಕೊಳ್ಳಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಪೇಟಿಎಂ ಫಾಸ್ಟ್ಯಾಗ್, ವ್ಯಾಲಟ್ ಬಳಕೆ ನಿಲ್ಲಿಸಬೇಕಿಲ್ಲ; ಅಷ್ಟಕ್ಕೂ ಆರ್ಬಿಐ ನಿರ್ಬಂಧ ಹಾಕಿದ್ದು ಯಾಕೆ, ಡೀಟೇಲ್ಸ್ ನೋಡಿ
ಪೇಟಿಎಂ ಪೇಮೆಂಟ್ಸ್ ಬ್ಯಾಂಕು ಮತ್ತು ಪೇಟಿಎಂ ಮೊದಲಾದವುಗಳು ಸೋದರ ಸಂಸ್ಥೆಗಳೇ ಆದರೂ ಕಾನೂನು ಪ್ರಕಾರ, ಪೇಟಿಎಂ ಪೇಮೆಂಟ್ ಬ್ಯಾಂಕು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಬ್ಯಾಂಕು ಸ್ವಾಯತ್ತವಾಗಿರಬೇಕು. ಆದರೆ, ಪೇಟಿಎಂ ಗ್ರೂಪ್ ಮತ್ತು ಬ್ಯಾಂಕ್ ಮಧ್ಯೆ ಅವಲಂಬನೆ ಮತ್ತು ವ್ಯವಹಾರ ಬಹಳ ಗಾಢವಾಗಿತ್ತು. ಪೇಮೆಂಟ್ ಬ್ಯಾಂಕ್ ಅನ್ನು ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಪರೋಕ್ಷವಾಗಿ ನಿಯಂತ್ರಿಸುವ ಸಾಧ್ಯತೆ ಇರುವುದು ಆರ್ಬಿಐಗೆ ಮೇಲ್ನೋಟಕ್ಕೆ ತೋರಿದೆ. ಇದೂ ಕೂಡ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ಮುಗಿಬೀಳಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ