ಭಾರತದಲ್ಲಿ ವಿಧಿಸಲಾಗುವ ಹಲವು ತೆರಿಗೆಗಳಲ್ಲಿ ಇನ್ಕಂ ಟ್ಯಾಕ್ಸ್ (Income Tax) ಕೂಡ ಒಂದು. ಎರಡೂವರೆ ಲಕ್ಷ ರೂಗಿಂತ ಆದಾಯ ಹೊಂದಿರುವ ಪ್ರತಿಯೊಬ್ಬ ಭಾರತೀಯ ನಾಗರಿಕರೂ ತಮ್ಮ ಆದಾಯಕ್ಕೆ ತೆರಿಗೆ ಕಟ್ಟಲೇ ಬೇಕು. ಪ್ರತೀ ವರ್ಷವೂ ಐಟಿ ರಿಟರ್ನ್ಸ್ ಫೈಲ್ (IT Returns) ಮಾಡಬೇಕಾಗುತ್ತೆ. ಆದರೆ, ವಯೋವೃದ್ಧರಿಗೆ ಅಥವಾ ಹಿರಿಯ ನಾಗರಿಕರಿಗೆ (Senior Citizen) ಸರ್ಕಾರ ಸಾಕಷ್ಟು ವಿನಾಯಿತಿಗಳನ್ನು ನೀಡುವ ಹಿನ್ನೆಲೆಯಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆಯಿಂದಲೂ ಅವರಿಗೆ ಮುಕ್ತಿ ನೀಡುತ್ತದೆಯಾ ಎಂಬ ಪ್ರಶ್ನೆ ಬರಬಹುದು. ವೃದ್ಧರಿಗೆ ಐಟಿ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿಗೆ ಅವಕಾಶ ಇದೆ. ಅದಕ್ಕೆ ಕೆಲ ಷರತ್ತುಗಳೂ ಮತ್ತು ಮಾನದಂಡಗಳನ್ನು ಹಾಕಲಾಗಿದೆ. ಅದರ ವಿವರ ಮುಂದಿದೆ.
ಹಿರಿಯ ನಾಗರಿಕ ಅಥವಾ ಸೀನಿಯರ್ ಸಿಟಿಜನ್ ಎಂದರೆ 60 ವರ್ಷ ಮೇಲ್ಪಟ್ಟ ಮತ್ತು 80 ವರ್ಷ ವಯಸ್ಸು ದಾಟದ ವ್ಯಕ್ತಿ. 80 ವರ್ಷ ಮೇಲ್ಪಟ್ಟ ವಯಸ್ಸಿನವರನ್ನು ಸೂಪರ್ ಸೀನಿಯರ್ ಸಿಟಿಜನ್ ಎಂದು ಪರಿಗಣಿಸಲಾಗುತ್ತದೆ. ಇನ್ನು, ಆದಾಯ ತೆರಿಗೆ ವಿಚಾರಕ್ಕೆ ಬರುವುದಾದರೆ 1961ರ ಐಟಿ ಕಾಯ್ದೆಯ ಸೆಕ್ಷನ್ 194ಪಿ ಅಡಿಯಲ್ಲಿ ವೃದ್ಧರಿಗೆ ಕೆಲ ಷರತ್ತುಗಳ ಮೇಲೆ ಐಟಿ ರಿಟರ್ನ್ಸ್ ಸಲ್ಲಿಕೆಯಿಂದ ಮುಕ್ತಿ ಕೊಡಲಾಗಿದೆ. ಈ ಷರತ್ತುಗಳೇನು?
ಆದಾಯ ತೆರಿಗೆ ಕಾಯ್ದೆಯ ಈ ಹೊಸ ಸೆಕ್ಷನ್ ಆದ 194ಪಿ 2021ರ ಏಪ್ರಿಲ್ 1ರಿಂದ ಜಾರಿಯಲ್ಲಿದೆ. ಪಿಂಚಣಿ ಮತ್ತು ಠೇವಣಿಯ ಬಡ್ಡಿ ಹೊರತುಪಡಿಸಿ ವಾರ್ಷಿಕವಾಗಿ 2.5 ಲಕ್ಷ ರೂನಷ್ಟು ಬೇರೆ ಆದಾಯ ಹೊಂದಿದ ಯಾವುದೇ ಹಿರಿಯ ನಾಗರಿಕರಾದರೂ ಐಟಿ ರಿಟರ್ನ್ ಸಲ್ಲಿಸುವುದು ಅವಶ್ಯಕ.
ಆಗಲೇ ಹೇಳಿದಂತೆ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಆದಾಯ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯೂ ಐಟಿ ರಿಟರ್ನ್ ಫೈಲ್ ಮಾಡಬೇಕು. ವ್ಯಕ್ತಿಯ ಆದಾಯ ಹಾಗೂ ಆ ಆದಾಯಕ್ಕೆ ನಿರ್ದಿಷ್ಟಪಡಿಸಲಾದ ತೆರಿಗೆಯನ್ನು ಆ ವ್ಯಕ್ತಿ ಪಾವತಿಸುತ್ತಿದ್ದಾರಾ ಎಂಬುದು ಸರ್ಕಾರಕ್ಕೆ ಗೊತ್ತಾಗಬೇಕು. ಹಾಗೆಯೇ, ಐಟಿ ರಿಟರ್ನ್ ಮೂಲಕ ಒಬ್ಬ ವ್ಯಕ್ತಿಯು ವಿವಿಧ ತೆರಿಗೆ ರಿಯಾಯಿತಿ, ರಿಬೇಟ್ ಇತ್ಯಾದಿಯನ್ನು ನಮೂದಿಸಿ ಒಂದಷ್ಟು ತೆರಿಗೆ ಹಣವನ್ನು ಮರಳಿ ಗಳಿಸುವ ಅವಕಾಶವನ್ನು ಐಟಿ ರಿಟರ್ನ್ಸ್ ನೀಡುತ್ತದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 208ರ ಪ್ರಕಾರ ಯಾವುದೇ ವ್ಯಕ್ತಿ 10 ಸಾವಿರ ರೂಗಿಂತ ಹೆಚ್ಚು ಮೊತ್ತದ ತೆರಿಗೆ ಕಟ್ಟಬೇಕಿದ್ದರೆ ಅಂಥವರೆಲ್ಲರೂ ಮುಂಗಡ ತೆರಿಗೆ ಅಥವಾ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕು. ಆದರೆ, ಸೆಕ್ಷನ್ 207ರಲ್ಲಿ ಯಾವುದೇ ವ್ಯವಹಾರ ಅಥವಾ ವೃತ್ತಿಯಿಂದ ಆದಾಯ ಹೊಂದಿಲ್ಲದ ಹಿರಿಯ ನಾಗರಿಕರಿಗೆ ಅಡ್ವಾನ್ಸ್ ತೆರಿಗೆ ಪಾವತಿಯಿಂದ ವಿನಾಯಿತಿ ಕೊಡಲಾಗಿದೆ.
ಇದನ್ನೂ ಓದಿ: SBI WECARE: ಎಸ್ಬಿಐ ವೀ ಕೇರ್ ಸ್ಕೀಮ್; ಕೊನೆಯ ದಿನಾಂಕ ಮತ್ತೆ 3 ತಿಂಗಳು ವಿಸ್ತರಣೆ; ಏನಿದು ಯೋಜನೆ?
60ರಿಂದ 80 ವರ್ಷದೊಳಗಿನ ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಲ್ಲಿ ಹೆಚ್ಚಿನ ವಿನಾಯಿತಿ ಇಲ್ಲ. 2.5 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. 2.50ರಿಂದ 5ಲಕ್ಷ ರೂ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಇರುತ್ತದೆ.
5,00,0001ರಿಂದ 7,50,000 ರೂ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ 12,500 ರೂ ಮೂಲ ತೆರಿಗೆ ವಿಧಿಸಲಾಗುತ್ತದೆ. ಜೊತೆಗೆ 5 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 10ರಷ್ಟು ಹೆಚ್ಚುವರಿ ತೆರಿಗೆ ಹಾಕಲಾಗುತ್ತದೆ. ಉದಾಹರಣೆಗೆ 6 ಲಕ್ಷ ರೂ ವಾರ್ಷಿಕ ಆದಾಯ ಇದ್ದರೆ 12,500 ರೂ ಜೊತೆಗೆ 1 ಲಕ್ಷಕ್ಕೆ ಶೇ. 10ರಷ್ಟು ಮೊತ್ತವಾದ 10 ಸಾವಿರ ರೂ, ಹೀಗೆ ಒಟ್ಟು 22,500 ರೂ ತೆರಿಗೆ ಇರುತ್ತದೆ.
ಇದೇ ರೀತಿ ಒಟ್ಟು ಏಳು ಇನ್ಕಮ್ ಟ್ಯಾಕ್ಸ್ ಸ್ಲಾಬ್ಗಳು ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಇದೆ.