ಇವತ್ತು ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಾದ ಅಂಶ. ಸಿಬಿಲ್ (CIBIL), ಎಕ್ಸ್ಪೀರಿಯಾ ಇತ್ಯಾದಿ ಕೆಲ ಏಜೆನ್ಸಿಗಳು ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಸೇವೆ ಒದಗಿಸುತ್ತವೆ. ಇವುಗಳ ನೀಡುವ ಅಂಕಗಳು ನಮ್ಮ ಹಣಕಾಸು ಶಿಸ್ತು, ಆರೋಗ್ಯವನ್ನು ಪ್ರತಿಫಲಿಸುತ್ತವೆ. ಸಾಲವನ್ನು ಹೇಗೆ ನಿಭಾಯಿಸುತ್ತೇವೆ ಇದು ಕ್ರೆಡಿಟ್ ಸ್ಕೋರ್ಗೆ ಮಾನದಂಡವಾಗಿರುತ್ತದೆ. ಸಾಲ ನಿಭಾಯಿಸುವುದು ಎಂದರೆ, ಪರ್ಸನಲ್ ಲೋನ್, ಹೋಮ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿಯನ್ನು ಸಕಾಲಕ್ಕೆ ಮರುಪಾವತಿ ಮಾಡುವುದು. ಈ ಮಧ್ಯೆ ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ, ಅಥವಾ ಸಾಲ ಬಳಕೆ ಅನುಪಾತ ಎಂಬ ಅಂಶವೊಂದೂ ಕ್ರೆಡಿಟ್ ಸ್ಕೋರ್ ಅನ್ನು ಪ್ರಭಾವಿಸುತ್ತದೆ.
ನಮಗೆ ಕೊಡುವ ಒಂದು ಕ್ರೆಡಿಟ್ ಕಾರ್ಡ್ಗೆ ಒಂದು ಹಣದ ಮಿತಿ ಹಾಕಲಾಗಿರುತ್ತದೆ. ಆ ಮಿತಿಯೊಳಗೆ ನಾವು ಕಾರ್ಡ್ ಬಳಕೆ ಮಾಡಬೇಕು. ಇಲ್ಲಿ ಎಷ್ಟು ಬಳಕೆ ಮಾಡುತ್ತೇವೆ ಎಂಬುದು ನಮ್ಮ ಹಣಕಾಸು ಆರೋಗ್ಯವನ್ನು ಸೂಚಿಸುತ್ತದೆ. ತಜ್ಞರ ಪ್ರಕಾರ ಇದರ ಬಳಕೆ ಶೇ. 30ಕ್ಕಿಂತ ಹೆಚ್ಚಿರಬಾರದು.
ಇದನ್ನೂ ಓದಿ: ಪರ್ಸನಲ್ ಲೋನ್ ಅನ್ನು ಮುಂಗಡವಾಗಿ ತೀರಿಸಬೇಕೆ? ಈ ಅಂಶಗಳು ತಿಳಿದಿರಲಿ
ಉದಾಹರಣೆಗೆ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ 50 ಸಾವಿರ ರೂ ಇದ್ದರೆ 15,000 ರೂಗಿಂತ ಹೆಚ್ಚು ಹಣವನ್ನು ಕ್ರೆಡಿಟ್ ಕಾರ್ಡ್ ಮೂಲಕ ಬಳಸದಂತೆ ನೋಡಿಕೊಳ್ಳಿ. ನೀವು ಕಾರ್ಡ್ ಬಳಸಿ 25,000 ರೂ ವೆಚ್ಚ ಮಾಡಿದರೆ ನಿಮ್ಮ ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಶೇ. 50 ಆಗಿ ಹೋಗುತ್ತದೆ. ಹೀಗಾಗಿ, ಮಿತಿಯೊಳಗೆ ವೆಚ್ಚ ಮಾಡುವುದು ಕಷ್ಟವಾಗಬಹುದು. ಇದಕ್ಕೂ ಕೆಲ ಉಪಾಯಗಳಿವೆ.
ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನು ಪಡೆದುಕೊಳ್ಳಬಹುದು. ಅದರಲ್ಲೂ ಲೈಫ್ಟೈಮ್ ಫ್ರೀ ಇರುವಂತಹ ಕಾರ್ಡ್ ಸಿಕ್ಕರೆ ತಪ್ಪದೇ ಪಡೆಯಿರಿ. ಆಗ ನಿಮ್ಮ ಕ್ರೆಡಿಟ್ನ ಒಟ್ಟಾರೆ ಮಿತಿ ಹೆಚ್ಚುತ್ತದೆ. ಒಂದು ಕಾರ್ಡ್ಗೆ 50,000 ರೂ ಮಿತಿ ಇದ್ದರೆ, ಮತ್ತೊಂದು ಕಾರ್ಡ್ಗೆ 40,000 ರೂ ಮಿತಿ ಇರಬಹುದು. ಇನ್ನೊಂದು ಕಾರ್ಡ್ಗೆ 60,000 ರೂ ಕ್ರೆಡಿಟ್ ಮಿತಿ ಇರಬಹುದು. ನಿಮ್ಮ ಮೂರು ಕ್ರೆಡಿಟ್ ಕಾರ್ಡ್ ಸೇರಿ ಒಟ್ಟಾರೆ ಒಂದೂವರೆ ಲಕ್ಷ ರೂ ಕ್ರೆಡಿಟ್ ಮಿತಿ ಆಗುತ್ತದೆ. ಈಗ ನೀವು ಶೇ 30, ಎಂದರೆ 45,000 ರೂವರೆಗೂ ವೆಚ್ಚ ಮಾಡಬಹುದು.
ಇದನ್ನೂ ಓದಿ: ಚೆಕ್ ಲೀಫ್, ಪಾಸ್ಬುಕ್ ಫೋಟೋ ಲಗತ್ತಿಸುವ ಅಗತ್ಯವಿಲ್ಲ; ಸರಳವಾಗಲಿದೆ ಪಿಎಫ್ ಹಣಕ್ಕೆ ಕ್ಲೇಮ್ ಪ್ರಕ್ರಿಯೆ
ನಿಮ್ಮ ಕಾರ್ಡ್ನಲ್ಲಿ ಆರಂಭದಲ್ಲಿ ನಿಮ್ಮ ಆದಾಯ ಮತ್ತಿತರೆ ಅಂಶ ಪರಿಗಣಿಸಿ ಕ್ರೆಡಿಟ್ ಮಿತಿ ನಿಗದಿ ಮಾಡಲಾಗಿರುತ್ತದೆ. ನಿಮ್ಮ ಆದಾಯ ಹೆಚ್ಚಾಗಿದ್ದಲ್ಲಿ ನೀವು ಕ್ರೆಡಿಟ್ ಕಾರ್ಡ್ ಕಂಪನಿಯನ್ನು ಸಂಪರ್ಕಿಸಿ ಕ್ರೆಡಿಟ್ ಲಿಮಿಟ್ ಹೆಚ್ಚಿಸುವಂತೆ ಕೋರಬಹುದು. ಇದರಿಂದ ನಿಮಗೆ ಹೆಚ್ಚು ಕ್ರೆಡಿಟ್ ಸ್ಪೇಸ್ ಸಿಗುತ್ತದೆ. ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಮಿತಿಯನ್ನು ಪಾಲಿಸುವುದು ಸುಲಭವಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ