ನಿವೃತ್ತಿ ಬಳಿಕ ಆರೋಗ್ಯ ವಿಮಾ ಪಾಲಿಸಿ ಸಿಗುತ್ತದಾ? ಇನ್ಷೂರೆನ್ಸ್ ಮಾಡಿಸುವಾಗ ಎಚ್ಚರವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ
Health Insurance: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕೆಲವರು ಕಂಪನಿಯು ನೀಡುವ ಆರೋಗ್ಯ ವಿಮೆಯನ್ನೇ ಅವಲಂಬಿಸಿರುತ್ತಾರೆ. ಅವರು ತಮಗಾಗಿ ಪ್ರತ್ಯೇಕವಾದ ವಿಮಾ ರಕ್ಷಣೆಯನ್ನು ಕೊಳ್ಳುವುದಿಲ್ಲ. ಆದರೆ, ನಿವೃತ್ತಿಯ ನಂತರ ಅವರ ವಿಮಾ ಪಾಲಿಸಿ ರದ್ದಾಗುವುದರಿಂದ ಅವರಿಗೆ ಪ್ರತ್ಯೇಕ ವಿಮಾರಕ್ಷಣೆ ಬೇಕಾಗುತ್ತದೆ. ಆದರೆ, ಅರವತ್ತರ ವಯಸ್ಸಿನಲ್ಲೂ ಆರೋಗ್ಯ ವಿಮಾ ಪಾಲಿಸಿಯೊಂದನ್ನು ಕೊಳ್ಳುವ ಸರಿಯಾದ ಮಾರ್ಗ ಯಾವುದು? ನೀವು ನೆನಪಿಡಲೇಬೇಕಾದ ಸಂಗತಿಗಳು ಯಾವುವು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಖಾಸಗಿ ಕೆಲಸಗಳಲ್ಲಿದ್ದಾಗ ಹೆಲ್ತ್ ಇನ್ಷೂರೆನ್ಸ್ (Health Insurance) ಸೌಲಭ್ಯ ಹೊಂದಿದ್ದು, ನಿವೃತ್ತಿಯ ನಂತರ ಯಾವುದೇ ವಿಮಾ ರಕ್ಷಣೆ ಇಲ್ಲದ ಹಿರಿಯ ನಾಗರಿಕರು ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಕೆಲವರಿಗೆ ಕೌಟುಂಬಿಕ ನಿರ್ವಹಣೆಯ ಒತ್ತಡದಿಂದಾಗಿ ಆರೋಗ್ಯ ವಿಮಾ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ನೀವೂ ಸಹ ನಿವೃತ್ತಿಯ ಸಮೀಪದಲ್ಲಿದ್ದು ಇಂತಹುದೇ ಸ್ಥಿತಿಯಲ್ಲಿದ್ದರೆ, ನಿಮ್ಮ 60ನೇ ವಯಸ್ಸಿನಲ್ಲೂ ಕೂಡಾ ನೀವು ಆರೋಗ್ಯ ವಿಮೆಯೊಂದನ್ನು ಕೊಂಡು ನೆಮ್ಮದಿಯಿಂದ ಇರಬಹುದು. ಆರೋಗ್ಯ ವಿಮಾ ರಕ್ಷಣೆಯೊಂದನ್ನು ಕೊಳ್ಳುವ ಮೊದಲು ಕೆಲ ಅತ್ಯವಶ್ಯಕ ಸಂಗತಿಗಳತ್ತ ಗಮನ ಹರಿಸಿದರೆ ನೀವು ಅನೇಕ ವಿಷಯಗಳಲ್ಲಿ ನಿಶ್ಚಿಂತೆಯಿಂದ ಇರಬಹುದು. ಹಾಗೂ ನಿಮಗಾಗಿ ನೀವೊಂದು ಅತ್ಯಂತ ಸೂಕ್ತವಾದ ವಿಮಾರಕ್ಷಣೆಯನ್ನೂ ಪಡೆದುಕೊಳ್ಳಬಹುದು. ಅರವತ್ತರ ವಯಸ್ಸಿನಲ್ಲೂ ಆರೋಗ್ಯ ವಿಮಾ ಪಾಲಿಸಿಯೊಂದನ್ನು ಕೊಳ್ಳುವ ಸರಿಯಾದ ಮಾರ್ಗ ಯಾವುದು? ನೀವು ನೆನಪಿಡಲೇಬೇಕಾದ ಸಂಗತಿಗಳು ಯಾವುವು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಸರಿಯಾದ ಹಾಗೂ ನಿಖರವಾದ ಮಾಹಿತಿಗಳನ್ನು ನೀಡಿ
ಯಾವುದೇ ವಿಮಾ ಯೋಜನೆಯೊಂದನ್ನು ಕೊಳ್ಳಲು ಪ್ರೊಪೋಸಲ್ ಫಾರ್ಮ್ ಭರ್ತಿ ಮಾಡಬೇಕಾಗುವುದು. ಹೆಚ್ಚಿನ ವೇಳೆಗಳಲ್ಲಿ, ವಿಮಾ ಏಜೆಂಟ್ ನಿಮ್ಮ ಫಾರ್ಮ್ ಭರ್ತಿ ಮಾಡುವಾಗ ಅರ್ಧಂಬರ್ಧ ಮಾಹಿತಿಗಳನ್ನು ಮಾತ್ರ ಸಲ್ಲಿಸಿಬಿಡುತ್ತಾರೆ. ನೀವು ಇಂತಹ ತಪ್ಪನ್ನು ಮಾಡಬೇಡಿ. ಪ್ರೊಪೋಸಲ್ ಫಾರ್ಮ್ನಲ್ಲಿ ನಿಖರವಾದ ಮಾಹಿತಿಗಳನ್ನು ಮಾತ್ರವೇ ಒದಗಿಸಿ. ನಿಮಗೆ ಮೊದಲಿನಿಂದಲೇ ಯಾವ-ಯಾವ ಕಾಯಿಲೆಗಳಿವೆ? ನಿಮ್ಮ ಜೀವನಶೈಲಿ ಹೇಗಿದೆ? ನೀವು ಧೂಮಪಾನ ಹಾಗೂ ಮದ್ಯಪಾನ ಮಾಡುತ್ತೀರೇ ಅಥವಾ ಇಲ್ಲವೇ? ಇತ್ಯಾದಿ ಮಾಹಿತಿಗಳ ಸ್ಪಷ್ಟ ವಿವರಣೆಯನ್ನು ನೀಡಿ. ನೀವೇನಾದ್ರೂ ಹೀಗೆ ಮಾಡದಿದ್ದಲ್ಲಿ, ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಕಂಪನಿಯು ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಬಹುದು. ಇದರಿಂದ, ಅನಾರೋಗ್ಯದ ಸಮಯದಲ್ಲಿ ನಿಮ್ಮ ಕಷ್ಟ ಮತ್ತಷ್ಟು ಹೆಚ್ಚಾಗಿಬಿಡಬಹುದು.
ಕಾಯುವಿಕೆಯ ಅವಧಿ
ನೀವೇನಾದ್ರೂ ನಿಮ್ಮ 60ರ ವಯಸ್ಸಿನ ಸನಿಹದಲ್ಲಿದ್ರೆ, ಈಗಾಗಲೇ ನೀವು ಕೆಲ ರೋಗಗಳಿಗೆ ಪೀಡಿತರಾಗಿರಬಹುದು. ವಿಮಾ ಯೋಜನೆಯಲ್ಲಿ ಒಂದು ನಿಗದಿತ ಅವಧಿಯ ನಂತರ ಮಾತ್ರವೇ ಈ ರೋಗಗಳಿಗೆ ರಕ್ಷಣೆ ಸಿಗುತ್ತದೆ. ಇದನ್ನು ಕಾಯುವಿಕೆಯ ಅವಧಿ ಎನ್ನಲಾಗುವುದು. ಬೇರೆ-ಬೇರೆ ಕಂಪನಿಗಳಲ್ಲಿ ಈ ಅವಧಿಯು ಬೇರೆ-ಬೇರೆಯಾಗಿರುತ್ತದೆ. ಈ ಅವಧಿಯು ಒಂದರಿಂದ ನಾಲ್ಕು ವರ್ಷಗಳವರೆಗೆ ಇರುತ್ತದೆ. ಕೆಲವೊಮ್ಮೆ ರೋಗಗಳ ಗಂಭೀರತೆಯನ್ನು ಆಧರಿಸಿಯೂ ಈ ಅವಧಿಯನ್ನು ನಿರ್ಧರಿಸಲಾಗುತ್ತೆ. ಎಲ್ಲಕ್ಕಿಂತ ಕಡಿಮೆ ಕಾಯುವಿಕೆಯ ಅವಧಿ ಇರುವ ಕಂಪನಿಯನ್ನು ನೀವು ಆರಿಸಿಕೊಳ್ಳಬೇಕು.
ಇದನ್ನೂ ಓದಿ: ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಭಯವಾ? ನಿಮಗಾಗಿ ಇಗೋ ಇದೆ ಈಕ್ವಿಟ್ ಸೇವಿಂಗ್ಸ್ ಫಂಡ್
ಚಿಕಿತ್ಸೆಯ ಪರ್ಯಾಯ ಆಯ್ಕೆಗಳು
ವೃದ್ಧಾಪ್ಯದಲ್ಲಿ ಕೆಲ ಕಾಯಿಲೆಗಳಿಗೆ ದೀರ್ಘಾವಧಿ ಚಿಕಿತ್ಸೆ ಬೇಕಾಗುತ್ತದೆ. ಅನೇಕರು ಅಲೋಪಥಿ ಚಿಕಿತ್ಸೆಯನ್ನು ಇಷ್ಟಪಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಯೋಗ, ನಿಸರ್ಗ ಚಿಕಿತ್ಸೆ, ಯುನಾನಿ, ಸಿದ್ಧ, ಹಾಗೂ ಹೋಮಿಯೋಪಥಿಗಳನ್ನು ಅವಲಂಬಿಸುತ್ತಾರೆ. ನೀವೇನಾದ್ರೂ ಅಲೋಪಥಿಗೆ ಬದಲಾಗಿ ಆಯುಷ್ ಚಿಕಿತ್ಸೆಗೆ ಆದ್ಯತೆ ನೀಡಿದರೆ, ವಿಮಾ ಕಂಪನಿಗಳು ಅದನ್ನೂ ಒದಗಿಸುತ್ತಿವೆ. ಆದರೆ, ಕೆಲ ಕಂಪನಿಗಳು ಆಯುಷ್ಚಿಕಿತ್ಸೆಗೆ ಸಬ್ಲಿಮಿಟ್ (ಉಪ-ಮಿತಿ) ಹೊಂದಿವೆ. ಅಂತಹ ಸ್ಥಿತಿಯಲ್ಲಿ ನೀವು ಗರಿಷ್ಠ ಮಟ್ಟದ ಆಯುಷ್ಚಿಕಿತ್ಸಾ ವಿಧಾನದ ರಕ್ಷಣೆ ನೀಡುವ ಕಂಪನಿಯೊಂದನ್ನು ಆರಿಸಿಕೊಳ್ಳಬೇಕು
ಸೂಕ್ತವಾದ ಹೆಚ್ಚುವರಿ ರಕ್ಷಣೆಗಳನ್ನು (ರೈಡರ್) ಆರಿಸಿಕೊಳ್ಳಿ
ಆರೋಗ್ಯ ವಿಮಾ ಯೋಜನೆಗಳಲ್ಲಿ, ರೈಡರ್ ಒಂದು ಬಹಳ ಉಪಯುಕ್ತವಾದ ಸೌಲಭ್ಯವಾಗಿದೆ. ಇದರಿಂದ ವಿಮಾರಕ್ಷಣೆಯ ವ್ಯಾಪ್ತಿಯನ್ನು ಬಹಳಷ್ಟು ಮಟ್ಟಿಗೆ ಹೆಚ್ಚಿಸಿಕೊಳ್ಳಬಹುದು. ಈ ಸೌಲಭ್ಯವು ಮೂಲ ಪಾಲಿಸಿಯ ರಕ್ಷಣೆಗೆ ಹೆಚ್ಚುವರಿಯಾಗಿ ಲಭ್ಯವಿರುತ್ತದೆ. ಸ್ವಲ್ಪ ಹೆಚ್ಚುವರಿ ಹಣವನ್ನು ಪಾವತಿಸಿ ಈ ಸೌಲಭ್ಯವನ್ನು ಕೊಳ್ಳಬಹುದು. ಆದರೆ, ಪ್ರತಿಯೊಬ್ಬರಿಗೂ ಎಲ್ಲಾ ರೈಡರ್ಗಳ ಅವಶ್ಯಕತೆ ಇರೋದಿಲ್ಲ ಅನ್ನೋದನ್ನು ಮರೆಯಬೇಡಿ. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನೀವು ರೈಡರ್ಗಳನ್ನು ಆರಿಸಿಕೊಳ್ಳಬೇಕು. ತುರ್ತು ಅನಾರೋಗ್ಯದ ರೈಡರ್ ನಿಮಗೆ ಬಹಳ ಉಪಯುಕ್ತವೆನಿಸಬಹುದು. ಇದರ ಅಡಿಯಲ್ಲಿ, ವಿಮಾದಾರನಿಗೆ ಗಂಭೀರ ಕಾಯಿಲೆ ಇರುವುದು ಕಂಡುಬಂದಲ್ಲಿ ವಿಮಾ ಕಂಪನಿಯು 15 ದಿನಗಳ ಜೀವಿತಾವಧಿಯ ನಂತರ ಕ್ಲೈಮ್ ಪಾವತಿಯನ್ನು ಆರಂಭಿಸಿಬಿಡುತ್ತದೆ. ಆರೋಗ್ಯ ವಿಮಾಯೋಜನೆಗಳಲ್ಲಿ ಸಾಮಾನ್ಯವಾಗಿ ಕೊಠಡಿಯ ಬಾಡಿಗೆಯನ್ನು ಒಂದು ಮಿತಿಯವರೆಗೆ ಮಾತ್ರವೇ ನೀಡಲಾಗುವುದು. ನೀವೇನಾದ್ರೂ ಕೊಠಡಿ ಬಾಡಿಗೆಗೂ ರಕ್ಷಣೆ ಬಯಸಿದರೆ, ಇದಕ್ಕೂ ಸಹ ನೀವೊಂದು ರೈಡರ್ ಕೊಳ್ಳಬೇಕಾಗುವುದು. ಹೀಗೆ, ನೀವು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಒಂದು ಅಥವಾ ಎರಡು ಹೆಚ್ಚುವರಿ ರೈಡರ್ಗಳನ್ನೂ ಸಹ ಕೊಳ್ಳಬಹುದು.
ಟಾಪ್-ಅಪ್ ಮತ್ತು ಸೂಪರ್ ಟಾಪ್-ಅಪ್
ಆರೋಗ್ಯ ವಿಮಾರಕ್ಷಣೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಟಾಪ್-ಅಪ್ ಮತ್ತು ಸೂಪರ್ ಟಾಪ್-ಅಪ್ ಯೋಜನೆಗಳು ಬಹಳ ಉಪಯುಕ್ತವೆಂದು ಸಾಬೀತಾಗುತ್ತಿವೆ. ಈ ಯೋಜನೆಗಳು ನಿಮ್ಮ ಮೂಲ ಆರೋಗ್ಯ ವಿಮಾಯೋಜನೆಗೆ ಬೆಂಬಲ ನೀಡುವ ಕೆಲಸ ಮಾಡುತ್ತವೆ. ನಿಮ್ಮ ವಿಮಾ ಮೊತ್ತವು ನಿಮ್ಮದೇ ಚಿಕಿತ್ಸೆಗಾಗಿ ಸಂಪೂರ್ಣವಾಗಿ ಬಳಕೆಯಾದ ನಂತರ ಇವುಗಳ ರಕ್ಷಣೆ ಆರಂಭವಾಗುತ್ತದೆ.
ಇದನ್ನೂ ಓದಿ: ಸಾಲ ನೀಡಿ ಶೂಲಕ್ಕೇರಿಸುವ ಲೋನ್ ಆ್ಯಪ್ಗಳನ್ನು ಕಂಡುಹಿಡಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
“ಆಸ್ಪತ್ರೆಗಳಲ್ಲಿನ ಚಿಕಿತ್ಸೆಗಳ ವೆಚ್ಚಗಳು ಗಗನಕ್ಕೇರುತ್ತಿವೆ. ಇಂತಹ ಸಮಯದಲ್ಲಿ ತುರ್ತು ಆರೋಗ್ಯ ಸ್ಥಿತಿ ಎದುರಾದರೆ ಟಾಪ್-ಅಪ್ ಮತ್ತು ಸೂಪರ್ ಟಾಪ್-ಅಪ್ ಯೋಜನೆಗಳು ಬಹಳ ಸಹಾಯಕವಾಗುತ್ತವೆ. ಮೂಲ ಪಾಲಿಸಿಯಲ್ಲಿ ಕಡಿಮೆ ಮೊತ್ತದ ವಿಮಾರಕ್ಷಣೆಯನ್ನು ಹೊಂದಿರುವ ಜನರು ಟಾಪ್-ಅಪ್ ಪ್ಲಾನ್ ಮೂಲಕ ತಮ್ಮ ರಕ್ಷಣೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬೇಕು.
“ಪಾಲಿಸಿ ಕೊಳ್ಳುವ ಸಮಯದಲ್ಲಿ ಸಬ್-ಲಿಮಿಟ್ಸ್, ಕೋ-ಪೇಮೆಂಟ್ಸ್ (ಸಹಪಾವತಿಗಳು), ಹಾಗೂ ಡಿಡಕ್ಟಬಲ್ಗಳು (ಶುಲ್ಕಗಳು ಹಾಗೂ ವೆಚ್ಚಗಳು) ಇತ್ಯಾದಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ನಿಮಗೇನಾದರೂ ಅನುಮಾನಗಳಿದ್ದರೆ ಅವುಗಳನ್ನು ವಿಮಾ ಕಂಪನಿ ಅಥವಾ ಏಜೆಂಟರಿಂದ ಪರಿಹರಿಸಿಕೊಳ್ಳಬೇಕು” ಎಂದು ಪರ್ಸನಲ್ ಫೈನಾನ್ಸ್ ತಜ್ಞ ಜಿತೇಂದ್ರ ಸೋಲಂಕಿ ಹೇಳುತ್ತಾರೆ.
(ಕೃಪೆ: ಮನಿ)
ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Mon, 14 August 23