ನಮ್ಮ ಆರೋಗ್ಯಕ್ಕೆ ಕೆಟ್ಟಾಗ ಚಿಕಿತ್ಸೆಗೆ ಬಹಳ ವೆಚ್ಚವಾಗುತ್ತದೆ. ಅದಕ್ಕೆ ಮುನ್ನೆಚ್ಚರಿಕೆಯಾಗಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ (health insurance) ಮಾಡಿಸುತ್ತೇವೆ. ಆದರೆ, ವೆಚ್ಚ ಭರಿಸಲು ಮಾಡಿಸಿದ ಈ ಪಾಲಿಸಿಯಿಂದ ಹಣ ಬರದೇ ಹೋದರೆ? ಕ್ಲೈಮ್ ಮಾಡಲು ಸಾಧ್ಯವಾಗದೇ ಹೋದರೆ? ಈ ರೀತಿಯ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆ ಇದೆ. ಬೇರೆ ಬೇರೆ ಕಾರಣಗಳಿಗೆ ಆರೋಗ್ಯ ವಿಮೆ ಕ್ಲೈಮ್ಗಳು ಪೂರ್ಣವಾಗದೇ ಹೋಗಬಹುದು. ಒಂದು ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ನಲ್ಲಿ ನಿಮ್ಮ ಕ್ಲೈಮ್ ತಿರಸ್ಕೃತಗೊಳ್ಳಲು (insurance claim rejection) ಸಕಾರಣಗಳು ಏನಿವೆ? ಒಂದು ವೇಳೆ ಎಲ್ಲವೂ ಸರಿಯಾಗಿದ್ದು ನಿಮ್ಮ ಕ್ಲೈಮ್ ರಿಜೆಕ್ಟ್ ಆದರೆ ಅದಕ್ಕೆ ನ್ಯಾಯ ಒದಗಿಸುವ ವ್ಯವಸ್ಥೆ ಏನಿದೆ? ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ….
ನೀವು ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ಪಡೆಯುವ ಮುನ್ನ ಪ್ರೀಮಿಯಮ್ ಕಟ್ಟುವುದರ ಜೊತೆಗೆ ಕ್ಲೈಮ್ ಇತ್ಯಾದಿ ಎಲ್ಲಾ ನಿಯಮಗಳನ್ನು ಓದಿರಿ. ಪಾಲಿಸಿ ಪಡೆದ ಬಳಿಕವಾದರೂ ಈ ನಿಯಮಗಳ ಅರಿವು ನಿಮ್ಮಲ್ಲಿರಬೇಕು. ಕ್ಲೈಮ್ ಮಾಡುವ ಮುನ್ನ ಯಾವ್ಯಾವ ದಾಖಲೆಗಳನ್ನು ಪಡೆದುಕೊಳ್ಳಬೇಕು ಇತ್ಯಾದಿ ಪ್ರಕ್ರಿಯೆಗಳೇನು ಎಂಬುದು ಗೊತ್ತಿರಲಿ.
ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್; ಕೃಷಿಕರು ಇರುವುದೆಷ್ಟು? ಈ ಯೋಜನೆಯಿಂದ ವಂಚಿತರಾಗಿರುವುದು ಎಷ್ಟು ಮಂದಿ?
ಇನ್ಷೂರೆನ್ಸ್ ಕಂಪನಿಗಳು ಬಿಟ್ಟಿಯಾಗಿ ಹಣ ಸಂಪಾದಿಸುವುದಿಲ್ಲ. ಅವುಗಳಿಗೆ ರಿಸ್ಕ್ ಫ್ಯಾಕ್ಟರ್ ಬಹಳ ಇರುತ್ತವೆ. ಯಾವುದೋ ಅನಾರೋಗ್ಯ ಉದ್ಭವಿಸಿ ಅದರ ಚಿಕಿತ್ಸೆಗೆ ಲಕ್ಷಗಟ್ಟಲೆ ವೆಚ್ಚವಾಗುತ್ತದೆ ಎಂದಾಗ ಕೆಲವರು ಇನ್ಷೂರೆನ್ಸ್ ಮಾಡಿಸುತ್ತಾರೆ. ಇದರಿಂದ ವಿಮಾ ಸಂಸ್ಥೆಗಳಿಗೆ ನಷ್ಟ ಅಧಿಕ ಆಗುತ್ತದೆ. ಈ ವಂಚನೆಯನ್ನು ತಡೆಯಲು ಈ ಕಂಪನಿಗಳು ಎಚ್ಚರ ವಹಿಸುತ್ತವೆ. ಪಾಲಿಸಿ ಮಾಡಿಸುವ ಪೂರ್ವದಲ್ಲೇ ಅನಾರೋಗ್ಯ ಇದ್ದೂ ಅದನ್ನು ಮುಚ್ಚಿಟ್ಟಿದ್ದರೆ ಆಗ ಆ ಅನಾರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸಾ ವೆಚ್ಚವನ್ನು ಕಂಪನಿ ಭರಿಸುವುದಿಲ್ಲ.
ಹೀಗಾಗಿ, ನೀವು ಇನ್ಷೂರೆನ್ಸ್ ಪಾಲಿಸಿ ಮಾಡಿಸುವ ಮುನ್ನವೇ ನಿಮ್ಮ ಪೂರ್ವರೋಗದ ಮಾಹಿತಿಯನ್ನು ತಪ್ಪದೇ ತಿಳಿಸಿ. ಧೂಮಪಾನ, ಮದ್ಯಪಾನ ಇತ್ಯಾದಿ ಚಟ ಇದ್ದರೆ ಅದನ್ನೂ ನಮೂದಿಸಿ.
ನೀವು ಚಿಕಿತ್ಸೆ ಪಡೆದು ನಿರ್ದಿಷ್ಟ ಕಾಲದೊಳಗೆ ಕ್ಲೈಮ್ಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವನ್ನು ಎಲ್ಲಾ ಇನ್ಷೂರೆನ್ಸ್ ಕಂಪನಿಗಳು ಹೊಂದಿರುತ್ತವೆ. ತಡವಾಗಿ ಅರ್ಜಿ ಸಲ್ಲಿಸಿದರೆ ಕ್ಲೈಮ್ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ: FIRE Model: ನಿಮ್ಮ ಜೀವನಕ್ಕೆ ಬೆಂಕಿ ಕಿಚ್ಚು; ಫೈರ್ ತಂತ್ರ ಅನುಸರಿಸಿ ಬೇಗ ನಿವೃತ್ತಿ ಪಡೆದು ಆರಾಮವಾಗಿರಿ
ಒಂದು ವೇಳೆ ಎಲ್ಲಾ ರೀತಿಯಲ್ಲಿ ಸರಿ ಇದ್ದೂ ನಿಮ್ಮ ಇನ್ಷೂರೆನ್ಸ್ ಕ್ಲೈಮ್ ರಿಜೆಕ್ಟ್ ಆಗಿದೆ ಎನಿಸಿದರೆ ನ್ಯಾಯಾಧಿಕಾರಿಯ ಮೊರೆ ಹೋಗಬಹುದು. ಇನ್ಷೂರೆನ್ಸ್ ವ್ಯಾಜ್ಯ ಪರಿಹಾರಕ್ಕೆಂದು ಸರ್ಕಾರ ಓಂಬುಡ್ಸ್ಮನ್ ನಿಯೋಜಿಸಿರುತ್ತದೆ. ಅಲ್ಲಿ ನೀವು ದೂರು ದಾಖಲಿಸಬಹುದು. ನಿಮ್ಮ ಇನ್ಷೂರೆನ್ಸ್ ಪಾಲಿಸಿ ದಾಖಲೆ, ಆಸ್ಪತ್ರೆಯ ಚಿಕಿತ್ಸೆಯ ದಾಖಲೆ, ಬಿಲ್, ಇನ್ಷೂರೆನ್ಸ್ ಕ್ಲೈಮ್ಗೆ ಸಲ್ಲಿಸಿದ ಅರ್ಜಿ ಇತ್ಯಾದಿಗಳನ್ನು ಇಟ್ಟುಕೊಂಡಿರಿ.
ಇನ್ಷೂರೆನ್ಸ್ ಕ್ಲೈಮ್ ತಿರಸ್ಕೃತಗೊಂಡರೆ ಅದರಿಂದ ಭಾವನಾತ್ಮಕವಾಗಿ ಆಗುವ ಘಾಸಿ ಹಣಕಾಸು ನಷ್ಟದಷ್ಟೇ ಕಷ್ಟಕರವಾಗಿರುತ್ತದೆ. ಅದನ್ನು ತಪ್ಪಿಸಲು ಎಚ್ಚರ ವಹಿಸಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ