ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ರೆಪೊ ದರ ಹೆಚ್ಚಿಸಿದಂತೆಲ್ಲಾ ಬ್ಯಾಂಕ್ಗಳೂ ಸಹ ಸಾಲದ ಮೇಲಿನ ಬಡ್ಡಿ ದರವನ್ನು (loan interest) ಹೆಚ್ಚಿಸುತ್ತವೆ. ಸೆಪ್ಟೆಂಬರ್ 30ರಂದು ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ಆರ್ಬಿಐ ರೆಪೊ ದರವನ್ನು 50 ಮೂಲಾಂಶದಷ್ಟು ಹೆಚ್ಚಿಸಿ ಶೇಕಡಾ 5.9ಕ್ಕೆ ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಎಸ್ಬಿಐ (State Bank of India), ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank), ಬ್ಯಾಂಕ್ ಆಫ್ ಬರೋಡ (Bank of Baroda) ಹಾಗೂ ಐಸಿಐಸಿಐ ಬ್ಯಾಂಕ್ಗಳು (ICICI Bank) ಸಾಲದ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿದ್ದವು.
ಪರಿಣಾಮವಾಗಿ ಸಾಲದ ಮೇಲಿನ ಬಡ್ಡಿ ದರಗಳು ಹೆಚ್ಚಾಗಿವೆ. ಅದೇ ರೀತಿ ಇಎಂಐ (EMIs) ಕೂಡ ದುಬಾರಿಯಾಗಿ ಪರಿಣಮಿಸಿದೆ. ಹೊಸದಾಗಿ ವೈಯಕ್ತಿಕ, ಗೃಹ ಹಾಗೂ ಕಾರು ಸಾಲ ಪಡೆಯುವವರಿಗೆ ಬಡ್ಡಿದರ ಹೆಚ್ಚಳದ ಬಿಸಿ ತಟ್ಟುತ್ತಿದೆ. ಇದರ ಹೊರತಾಗಿಯೂ ನೀವು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ಪಡೆಯಲು ಅವಕಾಶವಿದೆ. ಹೇಗೆಂಬ ಮಾಹಿತಿ ಇಲ್ಲಿದೆ;
ಹಬ್ಬದ ಆಫರ್ಗಳು:
ಪ್ರತಿ ಹಬ್ಬದ ಅವಧಿಯಲ್ಲಿ ಹೆಚ್ಚಿನ ಬ್ಯಾಂಕ್ಗಳು ಹಬ್ಬದ ವಿಶೇಷ ಆಫರ್ಗಳನ್ನು ನೀಡುತ್ತವೆ. ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತವೆ.
ಕೆಲವು ಬ್ಯಾಂಕ್ಗಳು ಹಬ್ಬದ ಋತುವಿನಲ್ಲಿ ಗೃಹ ಸಾಲದ ಮೇಲಿನ ಪ್ರೊಸೆಸಿಂಗ್ ಶುಲ್ಕದಿಂದ ಗ್ರಾಹಕರಿಗೆ ವಿನಾಯಿತಿ ನೀಡುತ್ತವೆ. ಅಲ್ಲದೆ ಇತರ ಶುಲ್ಕಗಳಿಂದಲೂ ವಿನಾಯಿತಿ ನೀಡುತ್ತವೆ. ಈ ಸೌಲಭ್ಯಗಳು ಗೃಹ ಸಾಲವನ್ನು ಕಡಿಮೆ ವೆಚ್ಚದಾಯಕವಾಗಿಸಬಲ್ಲವು.
ಕ್ರೆಡಿಟ್ ಸ್ಕೋರ್:
ಸಾಲ ಪಡೆಯಲು ಗ್ರಾಹಕರು ಎಷ್ಟು ಅರ್ಹರು ಎಂಬುದನ್ನು ನಿರ್ಧರಿಸುವ ಹಾಗೂ ಗ್ರಾಹಕರ ಸಾಲದ ದಾಖಲೆಗಳಿಗೆ ಸಂಬಂಧಿಸಿದ 3 ಅಂಕಿಗಳ ಒಂದು ಸಂಖ್ಯೆಯೇ ಕ್ರೆಡಿಟ್ ಸ್ಕೋರ್. ನಾವು ಎಷ್ಟು ಸಾಲ ಪಡೆದಿದ್ದೇವೆ, ಎಷ್ಟರ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿದ್ದೇವೆ ಎಂಬುದರ ಆಧಾರದಲ್ಲಿ ಈ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಗೃಹ ಸಾಲ ಪಡೆಯಲು ಮುಂದಾದಾಗ ಗ್ರಾಹಕರ ಕ್ರೆಡಿಟ್ ಸ್ಕೋರ್ ಅನ್ನು ಮೌಲ್ಯಮಾಪನ ಮಾಡಿ ಬ್ಯಾಂಕ್ಗಳು ಸಾಲ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ.
ಇದನ್ನೂ ಓದಿ: Credit Score: ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸುವುದು ಹೇಗೆ? ಇಲ್ಲಿದೆ ಸಲಹೆ
ಉತ್ತಮವಾದ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಅಂಥ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲು ಬ್ಯಾಂಕ್ಗಳು ಮುಂದಾಗುತ್ತವೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಹೋಲಿಸಿದರೆ, ಬ್ಯಾಂಕ್ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಸಾಧ್ಯತೆ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದವರಿಗೇ ಹೆಚ್ಚಾಗಿದೆ.
ಆಯ್ಕೆಗಳನ್ನು ಪರಿಶೀಲಿಸಬೇಕು:
ಅನೇಕ ಬ್ಯಾಂಕ್ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಿವಿಧ ಬಡ್ಡಿ ದರಗಳಲ್ಲಿ ಗೃಹ ಸಾಲ ನೀಡುತ್ತವೆ. ಹೀಗಾಗಿ ಆಯ್ಕೆಗಳನ್ನು ಪರಿಶೀಲಿಸಿ ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಸಾಲಗಳನ್ನೇ ಪರಿಗಣಿಸುವುದು ಉತ್ತಮ ಆಯ್ಕೆಯಾಗಿದೆ ಎಂದು ‘ಎನ್ಡಿಟಿವಿ ಪ್ರಾಫಿಟ್’ ಸಲಹೆ ನೀಡಿದೆ.
ಗ್ರಾಹಕರ ವೃತ್ತಿ, ಕ್ರೆಡಿಟ್ ಇತಿಹಾಸದ ಆಧಾರದಲ್ಲಿ ಬಡ್ಡಿ ದರಗಳು ಬದಲಾಗಬಹದು. ಗ್ರಾಹಕರು ಬಯಸುವ ಸಾಲದ ಮೊತ್ತ ಮತ್ತು ಮರುಪಾವತಿಗಾಗಿ ಅವರು ಆಯ್ಕೆ ಮಾಡಿರುವ ಅವಧಿ ಕೂಡ ಬಡ್ಡಿದರದ ಮೇಲೆ ಪರಿಣಾಮ ಬೀರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Fri, 21 October 22