ITR: ಆದಾಯ ತೆರಿಗೆ ರಿಟರ್ನ್ ಇನ್ನೂ ಎಷ್ಟು ಮಂದಿ ಫೈಲ್ ಮಾಡಿಲ್ಲ? ತಡವಾಗಿ ಸಲ್ಲಿಸಿದವರು ದಂಡ ಎಷ್ಟು ಕಟ್ಟಬೇಕು?

ಐಟಿ ರಿಟರ್ನ್ ಸಲ್ಲಿಸಲು ಜುಲೈ 31ರ ಡೆಡ್​ಲೈನ್ ತಪ್ಪಿಸಿಕೊಂಡವರು ವಿಳಂಬವಾಗಿ ರಿಟರ್ನ್ ಫೈಲ್ ಮಾಡಬಹುದು. ಆದರೆ, ಐದು ಸಾವಿರ ರೂವರೆಗೂ ದಂಡ ಮತ್ತು ಬಡ್ಡಿ ಕಟ್ಟಬೇಕಾಗಬಹುದು.

ITR: ಆದಾಯ ತೆರಿಗೆ ರಿಟರ್ನ್ ಇನ್ನೂ ಎಷ್ಟು ಮಂದಿ ಫೈಲ್ ಮಾಡಿಲ್ಲ? ತಡವಾಗಿ ಸಲ್ಲಿಸಿದವರು ದಂಡ ಎಷ್ಟು ಕಟ್ಟಬೇಕು?
ಐಟಿ ರಿಟರ್ನ್
Follow us
|

Updated on:Aug 01, 2023 | 1:31 PM

ಈವರೆಗೂ ಐಟಿ ರಿಟರ್ನ್ (IT Return) ಸಲ್ಲಿಸಿದವರ ಸಂಖ್ಯೆ 6.77 ಕೋಟಿಗೂ ಅಧಿಕ ಎನ್ನಲಾಗಿದೆ. ಇನ್ನೂ ಸುಮಾರು ಶೇ. 10ರಿಂದ 13ರಷ್ಟು ಮಂದಿ ರಿಟರ್ನ್ ಫೈಲ್ ಮಾಡಿಲ್ಲದಿರಬಹುದು ಎಂದು ಅಂದಾಜಿಸಲಾಗಿದೆ. ವಿವಿಧ ಕಾರಣಗಳಿಂದ ಇವುಗಳ ಸಲ್ಲಿಕೆ ತಡವಾಗಿರಬಹುದು. ಪೋರ್ಟಲ್ ನಿಧಾನವಿತ್ತು ಎಂದು ಜುಲೈ 30 ಮತ್ತು 31ರಂದು ಬಹಳ ಮಂದಿ ಆನ್​ಲೈನ್​ನಲ್ಲಿ ದೂರಿದ್ದರು. ಹೀಗಾಗಿ, ಬಹಳ ಮಂದಿಗೆ ಡೆಡ್​ಲೈನ್ ತಪ್ಪಿಹೋಗಿದ್ದಿರಬಹುದು. ಗಡುವು ಮುಗಿದರೂ ತೆರಿಗೆ ಪಾವತಿದಾರರು ಐಟಿಆರ್​ಗಳನ್ನು ಸಲ್ಲಿಸುವ ಅವಕಾಶ ಮುಂದುವರಿಯುತ್ತದೆ. ಡಿಸೆಂಬರ್ 31ರವರೆಗೂ ಐಟಿಆರ್ ಫೈಲ್ ಮಾಡಲು ಅವಕಾಶ ಇರುತ್ತದೆ. ಆದರೆ, ಒಂದಷ್ಟು ದಂಡ ಪಾವತಿಸಬೇಕಾಗುತ್ತದೆ.

ಐಟಿಆರ್ ತಡವಾಗಿ ಸಲ್ಲಿಸಿದರೆ 5,000 ರೂ ದಂಡ?

ಜುಲೈ 31ರೊಳಗೆ ನೀವು ಐಟಿ ರಿಟರ್ನ್ ಫೈಲ್ ಮಾಡದೇ ಇದ್ದರೆ, ದಂಡ, ಬಡ್ಡಿ ಇತ್ಯಾದಿ ಶುಲ್ಕಗಳೊಂದಿಗೆ ರಿಟರ್ನ್ ಸಲ್ಲಿಸಲು ಡಿಸೆಂಬರ್ 31ರವರೆಗೂ ಅವಕಾಶ ಇದೆ.

5 ಲಕ್ಷ ರೂವರೆಗಿನ ಆದಾಯ ಹೊಂದಿದವರು 1,000 ರೂ ಲೇಟ್ ಫೀ ಕಟ್ಟಬೇಕು. 5 ಲಕ್ಷ ರೂಗೂ ಮೇಲ್ಪಟ್ಟ ಆದಾಯ ಗುಂಪಿನವರು 5,000 ರೂ ದಂಡ ಕಟ್ಟಬೇಕಾಗುತ್ತದೆ. ಇದು ಐಟಿ ಸೆಕ್ಷನ್ 234ಎಫ್ ಅಡಿಯಲ್ಲಿ ಬರುತ್ತದೆ.

ಇದನ್ನೂ ಓದಿ: ITR: ಡೆಡ್​ಲೈನ್ ಮುಗಿಯಿತು; ಈವರೆಗೆ ಸಲ್ಲಿಕೆಯಾದ ಐಟಿಆರ್​ಗಳೆಷ್ಟು? ಹೊಸ ದಾಖಲೆ ಎಂದು ಐಟಿ ಇಲಾಖೆ ಟ್ವೀಟ್

ಇನ್ನು, ಸೆಕ್ಷನ್ 234ಎ, ಬಿ ಮತ್ತು ಸಿ ಪ್ರಕಾರ ಬಡ್ಡಿಯನ್ನೂ ದಂಡಕ್ಕೆ ಸೇರಿಸಲಾಗುತ್ತದೆ. ನೀವು ಬಾಕಿ ಉಳಿಸಿಕೊಂಡಿರುವ ತೆರಿಗೆ ಮೊತ್ತಕ್ಕೆ ಶೇ. 12ರ ವಾರ್ಷಿಕ ಬಡ್ಡಿದರದಲ್ಲಿ ದಂಡ ಕಟ್ಟಬೇಕಾಗುತ್ತದೆ. ಅಂದರೆ ತಿಂಗಳಿಗೆ ಶೇ. 1ರಷ್ಟು ಬಡ್ಡಿ ಅನ್ವಯ ಆಗುತ್ತದೆ.

ಡಿಡಕ್ಷನ್ ಕ್ಲೇಮ್ ಮಾಡಲು ಕಷ್ಟವಾಗಬಹುದು

ನೀವು ದಂಡ ಕಟ್ಟಿ ವಿಳಂಬವಾಗಿ ಐಟಿ ರಿಟರ್ನ್ ಪಾವತಿಸಲು ಅವಕಾಶ ಇದೆಯಾದರೂ ಕೆಲ ಸೌಲಭ್ಯಗಳಿಂದ ವಂಚಿತರಾಗುತ್ತೀರಿ. 2022-23ರ ಹಣಕಾಸು ವರ್ಷದಲ್ಲಿ ಮನೆ ಆಸ್ತಿಯಿಂದ ಆಗುವ ನಷ್ಟ ಹೊರತುಪಡಿಸಿ ನೀವು ಬೇರೆ ಯಾವುದಾದರೂ ನಷ್ಟ ಹೊಂದಿದ್ದರೆ ಅದನ್ನು ಮರುವರ್ಷಕ್ಕೆ ಮುಂದುವರಿಸಿಕೊಂಡು ಹೋಗಲು ಆಗುವುದಿಲ್ಲ. ಹಾಗೆಯೇ, ಕೆಲವೊಂದಿಷ್ಟು ಡಿಡಕ್ಷನ್​ಗಳನ್ನು ಕ್ಲೇಮ್ ಮಾಡಲು ಆಗದೇ ಹೋಗಬಹುದು.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳಿದ್ದರೆ ಎಲ್ಲಕ್ಕೂ ಸರ್ಕಾರದ ಕೊಡುಗೆ ಸಿಗುತ್ತಾ? ನೀವು ತಿಳಿಯಬೇಕಾದ ಸಂಗತಿಗಳು

ಜುಲೈ 31ರೊಳಗೆ ಐಟಿಆರ್ ಸಲ್ಲಿಸಿದ್ದರೆ ವೆರಿಫಿಕೇಶನ್​ಗೆ, ರಿವಿಶನ್​ಗೆ ದಂಡ ಕಟ್ಟಬೇಕಾ?

ಐಟಿ ರಿಟರ್ನ್ ಫೈಲ್ ಮಾಡಲು ಜುಲೈ 31 ಕೊನೆಯ ದಿನ ಎಂದಿತ್ತು. ಇದು ಇಡೀ ಪ್ರಕ್ರಿಯೆಗೆ ಡೆಡ್​ಲೈನ್ ಅಲ್ಲ. ನೀವು ಜುಲೈ 31ರೊಳಗೆ ರಿಟರ್ನ್ ಫೈಲ್ ಮಾಡಿ, ಇ-ವೆರಿಫಿಕೇಶನ್ ಮಾಡಿಲ್ಲದಿದ್ದರೆ ಏನೂ ಸಮಸ್ಯೆ ಇಲ್ಲ. 30 ದಿನಗಳವರೆಗೆ ಕಾಲಾವಕಾಶ ಇರುತ್ತದೆ.

ಇನ್ನು, ನೀವು ಪರಿಷ್ಕೃತ ಅರ್ಜಿ ಸಲ್ಲಿಸಲೂ ಸಮಸ್ಯೆ ಇಲ್ಲ. ಜುಲೈ 31ರೊಳಗೆ ನೀವು ಸಲ್ಲಿಸಿರುವ ಐಟಿಆರ್​ನಲ್ಲಿ ಯಾವುದಾದರೂ ಬದಲಾವಣೆ ಮಾಡುವ ಅಗತ್ಯ ಇದೆ ಎನಿಸಿದರೆ ರಿವೈಸ್ಡ್ ಐಟಿಆರ್ ಸಲ್ಲಿಸಬಹುದು. ಇದಕ್ಕೆ ಡಿಸೆಂಬರ್ 31ರವರೆಗೂ ಕಾಲಾವಕಾಶ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Tue, 1 August 23