ವಿಮಾ ಪಾಲಿಸಿ ನಿಯಮ ತಪ್ಪದೇ ಓದಿ; ರೋಗದಿಂದ ಸತ್ತರೂ ಹಣ ಕ್ಲೇಮ್ ಅಸಾಧ್ಯವಾಗಬಹುದು
Health Insurance, read documents carefully: ವಿಮಾ ಕರಾರಿನಲ್ಲಿ ಅನೇಕ ಪ್ರಮುಖ ನಿಯಮಗಳು ಮತ್ತು ಷರತ್ತುಗಳನ್ನು ಬರೆಯಲಾಗಿರುತ್ತದೆ. ಓದದೆ ಸಹಿ ಮಾಡಿದರೆ ತೊಂದರೆಗೆ ಸಿಲುಕ್ತೀರಿ. ನಿಮಗೆ ಮೊದಲೇ ಯಾವುದಾದರೂ ಅನಾರೋಗ್ಯ ಇದ್ದು ವಿಮೆ ಮಾಡಿಸುವಾಗ ಅದನ್ನು ಮುಚ್ಚಿಟ್ಟುಕೊಳ್ಳಬಾರದು. ಅಕಸ್ಮಾತ್ ಬೇರೆ ಕಾಯಿಲೆಗೆ ಚಿಕಿತ್ಸೆ ಪಡೆಯುವಾಗ ನೀವು ಮುಚ್ಚಿಟ್ಟ ಅನಾರೋಗ್ಯದ ವಿಷಯ ಇನ್ಷೂರೆನ್ಸ್ ಕಂಪನಿಗೆ ಗೊತ್ತಾದರೆ ಹಣ ಭರಿಸುವುದಿಲ್ಲ, ಗೊತ್ತಿರಲಿ. ಹಾಗೆಯೇ, ಆತ್ಮಹತ್ಯೆ ಮಾಡಿಕೊಂಡರೂ ಇನ್ಷೂರೆನ್ಸ್ ಹಣ ಬರೋದಿಲ್ಲ.
ವಿಮೆ ಖರೀದಿಸುವಾಗ ಸಾಮಾನ್ಯವಾಗಿ ನಾವುಗಳು ಒಪ್ಪಂದ (insurance agreement) ಅಥವಾ ಫಾರ್ಮ್ಗಳಲ್ಲಿ ಏನು ಬರೆದಿದೆ ಎಂದು ಓದುವ ಗೋಜಿಗೆ ಹೋಗುವುದಿಲ್ಲ. ಹಲವು ಪುಟಗಳು ಇರುವುದರಿಂದ ಸುಮ್ಮನೆ ಓದಿ ಸಮಯ ವ್ಯರ್ಥ ಯಾಕೆ ಮಾಡುವುದು; ಹೇಗಿದ್ದರೂ ವಿಮಾ ಏಜೆಂಟ್ ವಿವರಣೆ ಕೊಟ್ಟಿದ್ದಾರಲ್ಲ ಎಂದು ಸುಮ್ಮನಾಗಿ ಬಿಡುತ್ತೇವೆ. ವಿಮೆ ವಿಚಾರದಲ್ಲಿ ಮಾತ್ರವಲ್ಲ, ಬಹಳಷ್ಟು ಹಣಕಾಸು ವ್ಯವಹಾರಗಳಲ್ಲೂ ನಮ್ಮ ವರ್ತನೆ ಇದೇ ರೀತಿ ಇರುತ್ತದೆ. ಉದಾಸೀನತೆ ಅಥವಾ ಏಜೆಂಟ್ ಮೇಲಿನ ವಿಶ್ವಾಸ ನಮ್ಮನ್ನು ಜಾಗ್ರತೆಯಿಂದ ಇರದಂತೆ ತಡೆಯಬಹುದು. ಸಾಕಷ್ಟು ಬಾರಿ ಏಜೆಂಟ್ಗಳು ಬಿಸಿನೆಸ್ ಕೈತಪ್ಪುವ ಸಾಧ್ಯತೆಯಲ್ಲಿ ಕೆಲವೊಂದು ಅಂಶಗಳನ್ನು ತಿಳಿಸಿರುವುದೇ ಇಲ್ಲ. ಇದರಿಂದ ಮುಂದೆ ತೊಂದರೆ ಆಗುವ ಸಾಧ್ಯತೆಯಂತೂ ಇದ್ದೇ ಇರುತ್ತದೆ.
ಉದಾಹರಣೆಗೆ, ವಿಮೆ ಪಾಲಿಸಿ ಮಾಡಿಸಿದ ಒಬ್ಬ ವ್ಯಕ್ತಿಗೆ ದೀರ್ಘಕಾಲದಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇತ್ತೆಂದಿಟ್ಟುಕೊಳ್ಳಿ. ಅವರು ವಿಮೆ ಮಾಡಿಸುತ್ತಾರೆ. ಪಾಲಿಸಿ ಪಡೆದ ಒಂದು ವರ್ಷದಲ್ಲೇ ಕಾಯಿಲೆಗೆ ಅವರು ಬಲಿಯಾಗಿಬಿಡುತ್ತಾರೆ. ಆಗ ಕುಟುಂಬ ಸದಸ್ಯರು ವಿಮಾ ಹಣ ಕ್ಲೇಮ್ ಮಾಡಲು ಇನ್ಷೂರೆನ್ಸ್ ಕಂಪನಿಯನ್ನು ಸಂಪರ್ಕಿಸುತ್ತಾರೆ. ಆದರೆ, ಅವರ ದುರದೃಷ್ಟಕ್ಕೆ ಕ್ಲೇಮ್ ಅನ್ನು ಕಂಪನಿ ರಿಜೆಕ್ಟ್ ಮಾಡುತ್ತದೆ. ಕಾರಣ, ಮೃತಪಟ್ಟ ಪಾಲಿಸಿದಾರನು ದೀರ್ಘಕಾಲದಿಂದ ತಮಗಿದ್ದ ಕಾಯಿಲೆಯನ್ನು ವಿಮೆ ಮಾಡಿಸುವ ವೇಳೆ ಬಹಿರಂಗಪಡಿಸದೇ ಹೋಗಿದ್ದು.
ಇಂತಹ ತಪ್ಪನ್ನು ಸಾಕಷ್ಟು ಜನರು ಮಾಡುತ್ತಾರೆ. ಇನ್ಷೂರೆನ್ಸ್ ಕ್ಲೇಮ್ಗಳು ರಿಜೆಕ್ಟ್ ಆಗಲು ಹೆಚ್ಚಿನ ಕಾರಣಗಳಲ್ಲಿ ಇದೂ ಒಂದು ಎನ್ನಲಾಗುತ್ತದೆ. ವಿಮಾ ಪಾಲಿಸಿಯ ಡ್ಯಾಕುಮೆಂಟ್ ಎಂಬುದು ವಿಆ ಕಂಪನಿ ಮತ್ತು ಪಾಲಿಸಿದಾರರ ನಡುವಿನ ಒಪ್ಪಂದವಿದ್ದಂತೆ. ಇದರಲ್ಲಿ ಸಾಕಷ್ಟು ನಿಯಮ, ಷರತ್ತುಗಳಿರುತ್ತವೆ. ಇಂತಹ ಷರತ್ತುಗಳು ಆಯಾ ಕಂಪನಿಗಳ ಪಾಲಿಸಿಗಳ ಆಧಾರದಲ್ಲಿ ವಿಭಿನ್ನವಾಗಿರಬಹುದು.
ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ದಾಖಲೆ, ವಿವರ ಬರೆದಿಡುವುದು ಯಾಕೆ ಮುಖ್ಯ? ಅವನ್ನು ಸಂಗ್ರಹಿಸಿಟ್ಟುಕೊಳ್ಳುವ ಕ್ರಮ ಹೇಗೆ? ಇಲ್ಲಿದೆ ಟಿಪ್ಸ್
ಇಲ್ಲಿ ಕೆಲವೊಂದು ನಿಯಮ ಮತ್ತು ಷರತ್ತುಗಳು ಅರ್ಥವಾಗದೇ ಇರಬಹುದು. ಅರ್ಥವಾಗಲಿಲ್ಲವೆಂದು ಸುಮ್ಮನೆ ಸಹಿ ಮಾಡಬೇಡಿ. ಏಜೆಂಟ್ ಬಳಿ ಕೇಳಿ ತಿಳಿದುಕೊಳ್ಳಿ.
ಅನಾರೋಗ್ಯದ ಮಾಹಿತಿ ಮರೆಮಾಚಬೇಡಿ
ವಿಮಾ ಪಾಲಿಸಿ ತಗೋಳೋವಾಗ ನೀವೇನಾದರೂ ದೀರ್ಘ ಕಾಲದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ, ಅದರ ಮಾಹಿತಿ ಉಲ್ಲೇಖಿಸಿ. ಏಜೆಂಟ್ ಹೇಳಿದ ಅಂತಾ ಸುಮ್ಮನಾಗಬೇಡಿ. ನೀವು ಒದಗಿಸುವ ಯಾವುದೇ ತಪ್ಪು ಮಾಹಿತಿ ನಿಮ್ಮ ಪಾಲಿಸಿ ರದ್ದಾಗಲು ಕಾರಣವಾಗಬಹುದು.
ವಿಮೆ ಖರೀದಿಸೊ ಗ್ರಾಹಕರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನಷ್ಟೇ ಉಲ್ಲೇಖಿಸಬಾರದು. ಅದರ ಜತೆಗೆ ತಮಗೆ ಸಿಗರೇಟ್ ಸೇವನೆಯಂತಹ ದುಶ್ಚಟಗಳಿದ್ದರೆ ಅದರ ಬಗ್ಗೆಯೂ ಮಾಹಿತಿ ನೀಡಬೇಕು.
ಸತ್ತರೆ, ಕುಟುಂಬಕ್ಕೆ ಸಿಗುವ ಪ್ರಯೋಜನ ತಿಳಿಯಿರಿ
- ಪಾಲಿಸಿಯ ಡ್ಯಾಕುಮೆಂಟ್‌ನಲ್ಲಿ ಪಾಲಿಸಿದಾರ ಸತ್ತಾಗುವ ಸಿಗುವ ಪ್ರಯೋಜನಗಳ ಕುರಿತು ಸೆಕ್ಷನ್ ಇರುತ್ತದೆ. ಅದನ್ನ ಎಚ್ಚರಿಕೆಯಿಂದ ಓದಬೇಕು. ಪಾಲಿಸಿದಾರನ ಯಾವ ಬಗೆಯ ಮರಣ ಸಂದರ್ಭದಲ್ಲಿ ಕ್ಲೇಮ್ ಹಣದ ಒಂದು ಭಾಗವನ್ನ ಯಾಕೆ ತಡೆ ಹಿಡೀತಾರೆ ಅನ್ನೋದನ್ನು ತಿಳಿಯಲು ಮೊದಲು ಇದನ್ನ ಓದಬೇಕು.
- ನಿಗದಿತ ಅವಧಿಯೊಳಗೆ ಪಾಲಿಸಿದಾರ ಆತ್ಮಹತ್ಯೆ ಮಾಡಿಕೊಂಡರೆ, ಅಂತಹ ಸಂದರ್ಭದಲ್ಲಿ ಮರಣದ ಕ್ಲೇಮ್ ಹಣ ಪಡೆಯಲು ಬಹುತೇಕ ಪಾಲಿಸಿಗಳಲ್ಲಿ ಸಾಧ್ಯವಾಗೊಲ್ಲ.
- ವಿಮೆ ಮಾಡಿಸಿದಾತ ಕಾನೂನುಬಾಹಿರ ಮತ್ತು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಸತ್ತರೆ ಅದಕ್ಕೂ ಮರಣ ಪರಿಹಾರದ ಕ್ಲೇಮ್ ಸಿಗೋದಿಲ್ಲ. ಇದಲ್ಲದೇ, ಇನ್ನೂ ಹೆರಿಗೆ ಸಮಯದಲ್ಲಿ ತಾಯಿ ಮೃತಪಟ್ಟರೆ ಆಗಲೂ ಅನೇಕ ಪಾಲಿಸಿಗಳು ವಿಮಾ ರಕ್ಷಣೆಯನ್ನು ಒದಗಿಸೋದಿಲ್ಲ.
- ಖಾಸಗಿ ವಿಮಾನ ಪ್ರಯಾಣದ ವೇಳೆ ಅಪಘಾತದಿಂದ ಸಾವು ಸಂಭವಿಸಿದರೆ ಅದಕ್ಕೂ ಕೆಲವು ವಿಮಾನ ಕಂಪನಿಗಳು ಮರಣ ಪರಿಹಾರದ ಕ್ಲೇಮ್ ಕೊಡೋದಿಲ್ಲ.
- ಡ್ರಗ್ಸ್ ಸೇವಿಸಿ ವಾಹನ ಚಲಾಯಿಸೋದು, ಸೀಟ್ ಬೆಲ್ಟ್ ಹಾಕದೇ ಸ್ಪೀಡ್ ಡ್ರೈವಿಂಗ್‌ನಿಂದ ಅಪಘಾತಕ್ಕೀಡಾಗುವ ಆಕಸ್ಮಿಕ ಸಾವಿಗೂ ಕೆಲವು ವಿಮಾ ಕಂಪನಿಗಳು ಕ್ಲೇಮ್ ಪರಿಹಾರದ ರಕ್ಷಣೆ ನೀಡುವುದಿಲ್ಲ.
- ಯುದ್ಧದಿಂದ ಸಾವು ಸಂಭವಿಸಿದರೆ ಅನೇಕ ಪಾಲಿಸಿಗಳು ವಿಮಾ ರಕ್ಷಣೆ ಒದಗಿಸುವುದಿಲ್ಲ.
ಇದನ್ನೂ ಓದಿ: 40ರ ಬಳಿಕ ಮನೆ ಮಾಡಲು ಹೊರಟಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ
ಕೊನೆಯ ಮಾತು
ಪಾಲಿಸಿ ತೆಗೆದುಕೊಳ್ಳೋವಾಗ, ನೀವು ಕರಾರು ಒಪ್ಪಂದವನ್ನ ಸೂಕ್ಷ್ಮವಾಗಿ ಗಮನಿಸಬೇಕು. ನಿಮ್ಮ ಪಾಲಿಸಿ ಕವರೇಜ್‌ಅನ್ನು ನಿಲ್ಲಿಸಬಹುದಾದ ಅಥವಾ ಮಿತಿಗೊಳಿಸಬಹುದಾದ ಅಂಶಗಳಿದ್ದರೆ ಗಮನಿಸಬೇಕು. ಈ ಬಗ್ಗೆ ನಿಮ್ಮ ಏಜೆಂಟರನ್ನು ಪ್ರಶ್ನಿಸಿ, ಎಲ್ಲವನ್ನೂ ಬ್ಲೈಂಡ್ ಆಗಿ ನಂಬಬೇಡಿ.
ಟ್ಯಾಕ್ಸ್ ಬೆನಿಫಿಟ್, ಲಾಕ್-ಇನ್ ಅವಧಿ ಮತ್ತು ನಾಮಿನಿ ಇಂತಹ ಹಲವು ಅಂಶಗಳು ಪಾಲಿಸಿ ಡ್ಯಾಕುಮೆಂಟ್ಸ್‌ನಲ್ಲಿ ಇರುತ್ತವೆ. ಇಂತಹದ್ದರ ಬಗ್ಗೆ ಕೇಳಿ, ಚೆನ್ನಾಗಿ ಅರ್ಥಮಾಡಿಕೊಳ್ಳಿ. ಇಲ್ಲದಿದ್ದರೆ ಅದು ನಿಮಗೆ ನಷ್ಟಕ್ಕೆ ಕಾರಣವಾಗಬಹುದು.
(ಮಾಹಿತಿ ಕೃಪೆ: ಪವನ್ ಜಯಸ್ವಾಲ್, ಮನಿ9)
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ