40% EMI Rule: ನಿಮ್ಮ ಆದಾಯದಲ್ಲಿ ಸಾಲಕ್ಕೆ ಮಿತಿ ಎಷ್ಟಿರಬೇಕು? ನೆನಪಿರಲಿ 40 ಪರ್ಸೆಂಟ್ ರೂಲ್; ಈ ಗಡಿ ದಾಟದಿರಿ ಜೋಕೆ..!
ಸಾಲ ಮಾಡುವಾಗ 40% ರೂಲ್ ನೆನಪಿರಲಿ. ಇದು ನಿಮ್ಮ ಆದಾಯದಲ್ಲಿ ಸಾಲಗಳಿಗೆ ಕಟ್ಟಬೇಕಾದ ಕಂತುಗಳ ಹಣದ ಮಿತಿ. ನಿಮ್ಮ ಸಂಬಳ 50,000 ರೂ ಇದ್ದರೆ ಇಎಂಐಗಳ ಒಟ್ಟು ಮೊತ್ತ 20,000 ರೂ ಮೀರಿರಬಾರದು. ಸಾಲ ಮಾಡುವ ಅವಶ್ಯಕತೆ ಉದ್ಭವಿಸದ ರೀತಿಯಲ್ಲಿ ನಿಮ್ಮ ಆದಾಯದಲ್ಲಿ ಒಂದಿಷ್ಟು ಹಣವನ್ನು ತುರ್ತು ನಿಧಿಗೆ ಎತ್ತಿ ಇಡುವುದನ್ನು ರೂಢಿಸಿಕೊಳ್ಳಿ.
ಇವತ್ತಿನ ದಿನಗಳಲ್ಲಿ ಹಣಕಾಸು ಶಿಸ್ತು, ಮುಂದಾಲೋಚನೆ ಇಲ್ಲದಿದ್ದರೆ ಸಾಲದ ಸುಳಿಗೆ (debt trap) ಸಿಲುಕಿ ಬೀಳುವುದು ಬಹಳ ಸುಲಭ. ಅದರಲ್ಲೂ ಇಎಂಐ ಆಫರ್ಗಳು ನಮ್ಮನ್ನು ಜಾಣ ಕುರುಡರನ್ನಾಗಿಸುತ್ತವೆ. ಅಗತ್ಯ ಅಲ್ಲದಿದ್ದರೂ ಚಂದ ಎನಿಸಿದ ವಸ್ತುಗಳೆಲ್ಲಾ ಇಎಂಐ ದೆಸೆಯಿಂದ ನಮ್ಮ ಕೈ ಸೇರುತ್ತವೆ. ವಾಹನ ಸಾಲ, ಗೃಹಸಾಲ, ಪರ್ಸನಲ್ ಲೋನ್, ಶಾಪಿಂಗ್ ಇಎಂಐ ಹೀಗೆ ಸಾಲದ ಬಾಲ ಬೆಳೆಯುತ್ತಲೇ ಹೋಗಬಹುದು. ಇಎಂಐ ಅಲ್ಲವಾ ಕಟ್ಟಿದರಾಯಿತು ಎಂದುಕೊಂಡರೆ ತಿಂಗಳಿಗೆ ಕಟ್ಟು ಇಎಂಐ ನಿಮ್ಮ ಆದಾಯ ಮೀರಿ ಹೋಗಬಹುದು. ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿ ನೀವು ಸಾಲದ ಶೂಲಕ್ಕೆ ಬೀಳುವುದು ನಿಶ್ಚಿತ.
ಈ ಪರಿಸ್ಥಿತಿಯನ್ನು ತಪ್ಪಿಸಲು 40% ರೂಲ್ ನೆನಪಿರಲಿ. ಈ ನಿಯಮ ಬಹಳ ಸರಳ. ನಿಮ್ಮ ಎಲ್ಲಾ ಸಾಲಗಳಿಗೆ ನೀವು ಕಟ್ಟುವ ಇಎಂಐಗಳ ಒಟ್ಟು ಮೊತ್ತವು ನಿಮ್ಮ ಆದಾಯದ ಶೇ. 40ರಷ್ಟು ಹಣವನ್ನು ಮೀರಬಾರದು.
ಉದಾಹರಣೆಗೆ, ನಿಮಗೆ ಕೈಗೆ ಬರುವ ಸಂಬಳ ಸುಮಾರು 50,000 ರೂ ಇದೆ ಎಂದಿಟ್ಟುಕೊಳ್ಳಿ. ಅದರಲ್ಲಿ 40% ಎಂದರೆ 20,000 ರೂ ಆಗುತ್ತದೆ. ನಿಮ್ಮ ಎಲ್ಲಾ ಇಎಂಐಗಳು ತಿಂಗಳಿಗೆ 20,000 ರೂ ಮೀರಿರಬಾರದು. ಆ ರೀತಿಯಲ್ಲಿ ನೀವು ಸಾಲ ಪಡೆಯುವುದಕ್ಕೆ ಮಿತಿ ಹಾಕಿಕೊಳ್ಳಬೇಕು. ಹಳೆಯ ಸಾಲ ತೀರುವವರೆಗೂ ಹೊಸ ಸಾಲ ಪಡೆಯಬಾರದು.
ಇದನ್ನೂ ಓದಿ: Green FDs: ಎಸ್ಬಿಐನಿಂದ ಹೊಸ ಸ್ಪೆಷನ್ ಎಫ್ಡಿ ಸ್ಕೀಮ್ ಆರಂಭ; ಗ್ರೀನ್ ರುಪೀ ಟರ್ಮ್ ಡೆಪಾಸಿಟ್ ಯೋಜನೆ ಬಗ್ಗೆ ತಿಳಿಯಿರಿ
ಒಂದು ವೇಳೆ ನಿಮ್ಮ ಆದಾಯದಲ್ಲಿ ಶೇ. 40ಕ್ಕಿಂತ ಹೆಚ್ಚು ಹಣ ಸಾಲಕ್ಕೆಯೇ ಹೋದರೆ ಇತರ ಅಗತ್ಯ ವೆಚ್ಚಗಳಿಗೆ ಹಣ ಸಾಕಾಗುವುದಿಲ್ಲ. ಸಾಲದ ಸುಳಿಯಿಂದ ಹೊರಬರುವುದು ಕಷ್ಟಸಾಧ್ಯವಾಗುತ್ತದೆ.
ಸಾಲ ಮಾಡುವುದನ್ನು ಸಾಧ್ಯವಾದಷ್ಟೂ ತಪ್ಪಿಸಿ…
ವೈಯಕ್ತಿಕ ಸಾಲಕ್ಕೆ ಈಗ ಶೇ. 14ರಿಂದ ಶೇ. 24ರವರೆಗೆ ಬಡ್ಡಿ ವಿಧಿಸಲಾಗುತ್ತದೆ. ಆದ್ದರಿಂದ ತುರ್ತು ಸಂದರ್ಭ ಬಿಟ್ಟರೆ ಉಳಿದಂತೆ ಸಾಲ ಆಗದಂತೆ ಎಚ್ಚರ ವಹಿಸಿ. ನಿಮ್ಮ ಆದಾಯದಲ್ಲಿ ಇಂತಿಷ್ಟು ಮೊತ್ತವನ್ನು ತರ್ತು ನಿಧಿಯಾಗಿ ಬ್ಯಾಂಕ್ನಲ್ಲಿ ಆರ್ಡಿ ರೂಪದಲ್ಲಿ ಹಣ ಕೂಡಿಡುತ್ತಾ ಹೋಗಬಹುದು. ನಿಮ್ಮ ಮಾಸಿಕ ಆದಾಯದ ಐದು ಪಟ್ಟು ಹಣವನ್ನು ತುರ್ತು ನಿಧಿಯಲ್ಲಿ ಇರಿಸಬಹುದು. ಆಗ ತುರ್ತು ಸಂದರ್ಭದಲ್ಲಿ ಆ ಹಣ ಬಳಕೆ ಮಾಡಬಹುದು.
ಇದನ್ನೂ ಓದಿ: Money Management: ಎಷ್ಟೇ ದುಡಿದರೂ ಹಣ ನಿಲ್ಲುತ್ತಿಲ್ಲವಾ? ಬಾಲ್ಯದ ಅನುಭವ, ಅರಿವಿನ ಕೊರತೆ ಇವೆಲ್ಲವೂ ಕಾರಣ ಇರಬಹುದು
ಇಲ್ಲಿ ಮುಖ್ಯ ಸಂಗತಿ ಎಂದರೆ, ತುರ್ತು ನಿಧಿಯಲ್ಲಿರುವ ನಿಮ್ಮ ಹಣವನ್ನು ಸಾಲವೆಂಬಂತೆಯೇ ಭಾವಿಸಿಕೊಳ್ಳಬೇಕು. ಅಲ್ಲಿಂದ ತೆಗೆದ ಹಣವನ್ನು ಮತ್ತೆ ವಾಪಸ್ ಅಲ್ಲಿಗೇ ಮರಳಿಸಬೇಕು. ಆ ರೀತಿಯ ಶಿಸ್ತು ರೂಢಿಸಿಕೊಂಡರೆ ಹಣಕಾಸು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ