ನೀವು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಮತ್ತು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ಗಳ ಬಗ್ಗೆ ಕೇಳಿರಬಹುದು. ಷೇರು ಹೂಡಿಕೆದಾರರು ತಿಳಿದುಕೊಂಡಿರಬಹುದಾದ ತೆರಿಗೆಗಳು ಇವು. ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆ ಎಂದರೇನು ಮತ್ತು ಅದು ಷೇರು ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ನಿಮ್ಮ ಲಾಭವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದನ್ನು ಈ ತಿಳಿಯಬಹುದು. 2018ರಲ್ಲಿ ಷೇರು ಮಾರುಕಟ್ಟೆ ಮತ್ತು ಇಕ್ವಿಟಿ ಮ್ಯೂಚುವಲ್ ಫಂಡ್ ಹೂಡಿಕೆದಾರರ ಮೇಲೆ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು (LTCG- Long Term Capital Gain Tax) ವಿಧಿಸಲಾಯಿತು. ಅದಕ್ಕೂ ಹಿಂದೆ, ಕೇವಲ 15% ಅಲ್ಫಾವಧಿಯ ಬಂಡವಾಳ ಲಾಭದ ತೆರಿಗೆ (STCG- Short Term Capital Gain) ವಿಧಿಸಲಾಗುತ್ತಿತ್ತು.
ನೀವು ಭೂಮಿ, ಮನೆ ಅಥವ ಷೇರುಗಳಂತಹ ಆಸ್ತಿಯನ್ನು ಮಾರಾಟ ಮಾಡಿದಾಗ, ಅದರ ಮೇಲಿನ ಲಾಭವನ್ನು ಬಂಡವಾಳ ಲಾಭ ಎಂದು ಕರೆಯಲಾಗುತ್ತದೆ.
ನೀವು 12 ತಿಂಗಳವರೆಗೆ ಹಿಡಿದಿಟ್ಟುಕೊಂಡ ನಂತರ ಈಕ್ವಿಟಿ ಷೇರು ಅಥವಾ ಇಕ್ವಿಟಿ ಮ್ಯೂಚುಯಲ್ ಫಂಡ್ಗಳನ್ನು ಮಾರಾಟ ಮಾಡಿದರೆ, ಅದಕ್ಕೆ ವಿಧಿಸುವ ತೆರಿಗೆಯನ್ನು ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆ (LTCG) ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳಿದ್ದರೆ ಎಲ್ಲಕ್ಕೂ ಸರ್ಕಾರದ ಕೊಡುಗೆ ಸಿಗುತ್ತಾ? ನೀವು ತಿಳಿಯಬೇಕಾದ ಸಂಗತಿಗಳು
ಪಟ್ಟಿ ಮಾಡಲಾದ ಷೇರು ಅಥವ ಮ್ಯೂಚುಯಲ್ ಫಂಡ್ ಅನ್ನು 12 ತಿಂಗಳೊಳಗೆ ಮಾರಾಟ ಮಾಡಿದಾಗ, ಅದರ ಮೇಲಿನ ಲಾಭವನ್ನು ಅಲ್ಪಾವಧಿಯ ಬಂಡವಾಳ ಲಾಭ ತೆರಿಗೆ (STCG) ಎಂದು ಕರೆಯಲಾಗುತ್ತದೆ. ಇನ್ನು ಡೆಟ್ ಮ್ಯುಚುವಲ್ ಫಂಡ್ ಆದಲ್ಲಿ 36 ತಿಂಗಳ ನಂತರ ಮಾರಿದಾಗ ದೀರ್ಘಾವಧಿ ಲಾಭ ತೆರಿಗೆ ಅನ್ವಯ ಆಗುತ್ತದೆ.
ಎಲ್ಲಾ ಲಿಸ್ಟೆಡ್ ಷೇರುಗಳು, ಈಕ್ವಿಟಿ ಜೋಡಿತ ಮ್ಯೂಚುಯಲ್ ಫಂಡ್ಗಳು ಅಥವ ಶೂನ್ಯ ಕೂಪನ್ ಬಾಂಡ್ಗಳಿಗೆ ಅಲ್ಫಾವಧಿಯ ಬಂಡವಾಳ ಲಾಭದ ತೆರಿಗೆ ಅನ್ವಯ ಆಗುವ ಕಾಲದ ಮಿತಿ 12 ತಿಂಗಳು ಮಾತ್ರ. ಆದರೆ ಲಿಸ್ಟ್ ಆಗದ ಷೇರುಗಳಿಗೆ, ಭೂಮಿ ಅಥವ ಕಟ್ಟಡಗಳನ್ನು 24 ತಿಂಗಳ ಬಳಿಕ ಮಾರಿದರೆ ಮಾತ್ರ ದೀರ್ಘಾವಧಿ ಬಂಡವಾಳ ಲಾಭದ ತೆರಿಗೆ ಅನ್ವಯ ಆಗುತ್ತದೆ.
ಮೂರು ವರ್ಷಗಳ ಹಿಂದೆ (2020) ನೀವು ಯೂನಿಟ್ಗೆ 10 ರುಪಾಯಿ ಮೌಲ್ಯದಂತೆ 15ಸಾವಿರ ಯುನಿಟ್ ಮ್ಯೂಚುಯಲ್ ಫಂಡ್ಗಳನ್ನು ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ. ಈಗ 2023ರಲ್ಲಿ, ನಿಮ್ಮ ಮ್ಯೂಚುವಲ್ ಫಂಡ್ನ ಯೂನಿಟ್ನ ಮೌಲ್ಯ 10 ರೂನಿಂದ 30 ರುಪಾಯಿಗೆ ಏರಿದೆ ಎಂದು ಭಾವಿಸಿ. ಈಗ ಅವುಗಳನ್ನು ಮಾರಿದರೆ 4.5ಲಕ್ಷ ರೂಪಾಯಿ ಸಿಗುತ್ತದೆ. ಹಾಗಾಗಿ 1.5 ಲಕ್ಷ ರೂಪಾಯಿ ಹೂಡಿಕೆಗೆ 4.5 ಲಕ್ಷ ರೂಪಾಯಿ ಸಿಗುತ್ತದೆ. ಈ ವಹಿವಾಟಿನಿಂದ ನಿಮಗೆ 3ಲಕ್ಷ ರೂಪಾಯಿಗಳ ಬಂಡವಾಳ ಲಾಭ ಸಿಗುತ್ತದೆ. ಇಲ್ಲಿ 1ಲಕ್ಷ ರೂಪಾಯಿಗಿಂತ ಹೆಚ್ಚಿನ ಲಾಭದ ಮೇಲೆ ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು ವಿಧಿಸಲಾಗುತ್ತದೆ. ಆದ್ದರಿಂದ ನಾವು 2ಲಕ್ಷ ರೂಪಾಯಿ ಮೇಲೆ ಎಲ್ಟಿಸಿಜಿ ತೆರಿಗೆ ಬೀಳುತ್ತದೆ. ಎಲ್ಟಿಸಿಜಿ ಶೇ. 10ರಷ್ಟಿದೆ. ಅಂದರೆ ನೀವು 20,000 ರೂನಷ್ಟು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಆದಾಗ್ಯೂ ಬಂಡವಾಳ ಲಾಭ ತೆರಿಗೆಯನ್ನು ತಪ್ಪಿಸಲು ಮಾರ್ಗಗಳಿವೆ ಎಂದು ತಜ್ಞರು ಹೇಳುತ್ತಾರೆ. ನೀವು ಷೇರು ಅಥವ ಈಕ್ವಿಟಿ ಮ್ಯೂಚುಯಲ್ ಫಂಡ್ ಅನ್ನು ಮಾರಾಟ ಮಾಡಿ 1ಲಕ್ಷ ರೂಪಾಯಿಗಿಂತ ಹೆಚ್ಚಿನ ಲಾಭ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. ಆ ಹೆಚ್ಚುವರಿ ಲಾಭವನ್ನು ನೀವು ಮರುಹೂಡಿಕೆ ಮಾಡಬಹುದಾಗಿದೆ. ಉದಾಹರಣೆಗೆ, ಈ ಮೊತ್ತವನ್ನು ELSS ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಸೆಕ್ಷನ್ 80ಸಿಯ ಪ್ರಕಾರ ನೀವು ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ಆದರೆ ಇಲ್ಲಿಯೂ ನೀವು ಲಾಭ ಕಂಡಾಗ ಅದರ ಮೇಲೆ ಶೇ.10% LTCGಅನ್ನು ಪಾವತಿಸಬೇಕಾಗುತ್ತದೆ.
ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ (STCG) ತೆರಿಗೆ ಈಕ್ವಿಟಿಗಳಿಗೆ ಶೇ. 15ರಷ್ಟಿದೆ. ಅಂದರೆ ನೀವು 12 ತಿಂಗಳೊಳಗೆ ಷೇರು ಮಾರಿ ಗಳಿಸಿದ ಲಾಭಕ್ಕೆ ಈ ತೆರಿಗೆ ಅನ್ವಯ ಆಗುತ್ತದೆ.
(ಮಾಹಿತಿ ಕೃಪೆ: ಮನಿ9)
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Mon, 31 July 23