PAN Updates: ಆಧಾರ್ಗೆ ಪ್ಯಾನ್ ನಂಬರ್ ಲಿಂಕ್ ಆಗಿಲ್ಲವಾ? ಮುಂದೇನು ಮಾಡಬೇಕು ನೀವು? ಇಲ್ಲಿದೆ ಮಾರ್ಗೋಪಾಯ
How To Make PAN Operative Again: ಆಧಾರ್ ನಂಬರ್ ಜೊತೆ ಪ್ಯಾನ್ ಲಿಂಕ್ ಮಾಡುವ ಗಡುವು ಮುಗಿದಿದ್ದು, ಲಿಂಕ್ ಆಗದ ಪ್ಯಾನ್ ನಿಷ್ಕ್ರಿಯಗೊಂಡಿವೆ. ಇಂಥ ಪ್ಯಾನ್ ಅನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶ ಇದೆ. ಈ ಬಗ್ಗೆ ಮಾಹಿತಿ...
ಆಧಾರ್ ನಂಬರ್ ಜೊತೆ ಪ್ಯಾನ್ ಲಿಂಕ್ ಮಾಡಬೇಕು (Linking PAN with Aadhaar Number) ಎಂದು ಸರ್ಕಾರ 2019ರಿಂದಲೇ ಅಪ್ಪಣೆ ಹೊರಡಿಸಿತ್ತು. 2023ರ ಜೂನ್ 30ಕ್ಕೆ ಕೊನೆಯ ಡೆಡ್ಲೈನ್ ಇತ್ತು. ವಾಯಿದೆ ಹೆಚ್ಚಿಸಬಹುದೆನ್ನುವ ನಿರೀಕ್ಷೆ ಹುಸಿಯಾಗಿದೆ. ಡೆಡ್ಲೈನ್ ಮುಗಿದುಹೋಗಿದೆ. ಆದಾಯ ತೆರಿಗೆ ಹೇಳಿದಂತೆ ಆಧಾರ್ ನಂಬರ್ಗೆ ಜೋಡಿತವಾಗದ ಪ್ಯಾನ್ ಕಾರ್ಡ್ಗಳು ನಿಷ್ಕ್ರಿಯಗೊಂಡಿವೆ. ಇಂಥ ಪ್ಯಾನ್ (Inoperative PAN) ಅನ್ನು ಬಳಸುವುದು ಅಪರಾಧವಾಗುತ್ತದೆ. ನಿಷ್ಕ್ರಿಯಗೊಂಡ ಪ್ಯಾನ್ ನಂಬರ್ ಬಳಕೆಯಿಂದ ಏನೇನು ತೊಂದರೆ ಆಗುತ್ತದೆ, ಪ್ಯಾನ್ ನಂಬರ್ ಮತ್ತೆ ಸಕ್ರಿಯಗೊಳಿಸಲು ದಾರಿಗಳೇನು, ಈ ಬಗ್ಗೆ ವಿವರ ಇಲ್ಲಿದೆ.
ನಿಷ್ಕ್ರಿಯಗೊಂಡ ಪ್ಯಾನ್ ಬಳಕೆಗೆ ಇರುವ ನಿರ್ಬಂಧಗಳು
ಆಧಾರ್ ನಂಬರ್ಗೆ ಲಿಂಕ್ ಆಗದ ಪ್ಯಾನ್ ಇದೀಗ ನಿಷ್ಕ್ರಿಯಗೊಂಡಿವೆ. ಈಗಾಗಲೇ ನೀವು ವಿವಿಧ ಬ್ಯಾಂಕುಗಳು, ಆದಾಯ ತೆರಿಗೆ ಇಲಾಖೆ ಇತ್ಯಾದಿ ಕಡೆ ಪ್ಯಾನ್ ಅನ್ನು ಕೊಟ್ಟಿದ್ದರೆ ಕೆಲವಿಷ್ಟು ಸಮಸ್ಯೆಗಳು ಬರಬಹುದು.
- ಪ್ಯಾನ್ ನಿಷ್ಕ್ರಿಯಗೊಂಡಿರುವವರೆಗೂ ಐಟಿ ರಿಟರ್ನ್ ರೀಫಂಡ್ ನಿಮಗೆ ಸಿಗುವುದಿಲ್ಲ
- ಹೆಚ್ಚಿನ ಮೊತ್ತದ ಟಿಡಿಎಸ್ ಮತ್ತು ಟಿಸಿಎಸ್ ತೆರಿಗೆ ಅನ್ವಯ ಆಗುತ್ತದೆ.
- ಹೊಸ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ
- ಯಾವುದೇ ಬ್ಯಾಂಕ್ ಖಾತೆಗೆ ದಿನವೊಂದಕ್ಕೆ 50,000 ರೂ ಡೆಪಾಸಿಟ್ ಮಾಡಲು ಸಾಧ್ಯವಾಗುವುದಿಲ್ಲ.
- 50,000 ರೂಗಿಂತ ಹೆಚ್ಚಿನ ಮೊತ್ತದ ಬ್ಯಾಂಕ್ ವಹಿವಾಟು ಸಾಧ್ಯವಾಗುವುದಿಲ್ಲ.
- ಇನ್ಷೂರೆನ್ಸ್, ಮ್ಯೂಚುವಲ್ ಫಂಡ್ಗಳಿಗೆ 50,000 ರೂಗಿಂತ ಹೆಚ್ಚು ಮೊತ್ತದ ಕಂತು ಕಟ್ಟಲು ಆಗುವುದಿಲ್ಲ.
- ವಾಹನ, ಮೋಟಾ ಇನ್ಷೂರೆನ್ಸ್ ಖರೀದಿಸಲು ಆಗುವುದಿಲ್ಲ
- 10 ಲಕ್ಷಕ್ಕೂ ಹೆಚ್ಚು ಮೊತ್ತದ ಚಿರಾಸ್ತಿ ಖರೀದಿಸಲು ಸಾಧ್ಯವಿಲ್ಲ
- ಆರ್ಬಿಐ ಬಾಂಡ್, ಕಾರ್ಪೊರೇಟ್ ಬಾಂಡ್, ಡಿಬಂಚರ್ಗಳಲ್ಲಿ ಹೂಡಿಕೆ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: Investment Plans: ಮಹಿಳೆಯರೇ ಗಮನಿಸಿ: ಎನ್ಪಿಎಸ್, ಗೋಲ್ಡ್ ಇತ್ಯಾದಿ 5 ಹೂಡಿಕೆ ಆಯ್ಕೆಗಳು
ಪ್ಯಾನ್ ಮತ್ತೆ ಸಕ್ರಿಯಗೊಳಿಸುವ ವಿಧಾನಗಳು
2017ರ ಜುಲೈ ನಂತರ ಮಾಡಿಸಲಾದ ಪ್ಯಾನ್ಗೆ ಆಧಾರ್ ದಾಖಲೆ ಜೋಡಿಸುವುದು ಕಡ್ಡಾಯವಿತ್ತು. ಅಂಥ ಪ್ಯಾನ್ ನಂಬರ್ಗಳು ಬಹುತೇಕ ಆಧಾರ್ಗೆ ಲಿಂಕ್ ಆಗಿರುತ್ತವೆ. 2017ರ ಜುಲೈಗಿಂತ ಮುಂಚಿನ ಪ್ಯಾನ್ ನಂಬರ್ಗಳಲ್ಲಿ ಹೆಚ್ಚಿನವರು ಆಧಾರ್ಗೆ ಲಿಂಕ್ ಆಗಿಲ್ಲ. ಅನೇಕ ಡೂಪ್ಲಿಕೇಟ್ ಪ್ಯಾನ್ಗಳು ಅಸ್ತಿತ್ವದಲ್ಲಿದ್ದರಿಂದ ಪ್ಯಾನ್ ಮತ್ತು ಆಧಾರ್ ಜೋಡಿಸಬೇಕೆಂದು ಕಡ್ಡಾಯ ಮಾಡಲಾಯಿತು.
ಇದೀಗ ಜೂನ್ 30ರ ಡೆಡ್ಲೈನ್ ಮುಗಿದು, ಆಧಾರ್ಗೆ ಲಿಂಕ್ ಅಗದ ಪ್ಯಾನ್ಗಳು ನಿಷ್ಕ್ರಿಯಗೊಂಡಿವೆ. ಆದರೆ, ಸಿಬಿಡಿಟಿ ಜೂನ್ 28ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ನಿಷ್ಕ್ರಿಯಗೊಂಡ ಪ್ಯಾನ್ ಅನ್ನು 30 ದಿನದಲ್ಲಿ ಮತ್ತೆ ಸಕ್ರಿಯಗೊಳಿಸುವ ಅವಕಾಶ ಇದೆ. ಇದಕ್ಕೆ 1,000 ರೂ ಶುಲ್ಕ ನೀಡಬೇಕಾಗುತ್ತದೆ. ಇದರ ಪ್ರಕ್ರಿಯೆ ವಿವರ ಇಲ್ಲಿದೆ…
ಇದನ್ನೂ ಓದಿ: Duplicate PAN: ಆನ್ಲೈನ್ನಲ್ಲಿ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ
- ಇನ್ಕಮ್ ಟ್ಯಾಕ್ಸ್ ಇ–ಫೈಲಿಂಗ್ ವೆಬ್ಸೈಟ್ಗೆ ಹೋಗಿ ಲಾಗಿನ್ ಆಗಿರಿ
- ಲಿಂಕ್ ಪ್ಯಾನ್ ವಿತ್ ಆಧಾರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ಕೇಳಲಾಗುವ ಅಗತ್ಯ ವಿವರ ತುಂಬಿರಿ
- ಇ–ಪೇ ಟ್ಯಾಕ್ಸ್ ಮೂಲಕ ಹಣ ಪಾವತಿ ಮಾಡಬೇಕಾಗುತ್ತದೆ
- ಪ್ಯಾನ್/ಟ್ಯಾನ್ ಅಡಿಯಲ್ಲಿ ಪ್ಯಾನ್ ನಂಬರ್ ನಮೂದಿಸಿ.
- ನಿಮ್ಮ ಮೊಬೈಲ್ ನಂಬರ್ ಹಾಕಿ, ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
- ನಂತರ, ಪ್ರೊಸೀಡ್ ಕ್ಲಿಕ್ ಮಾಡಿ
- 2023-24 ಅನ್ನು ಅಸೆಸ್ಮೆಂಟ್ ವರ್ಷವಾಗಿ ಆಯ್ಕೆ ಮಾಡಿ
- ಪೇಮೆಂಟ್ ಟೈಪ್ ಅನ್ನು ಅದರ್ ರಿಸಿಪ್ಟ್ಸ್ (500) ಎಂದು ಆಯ್ಕೆ ಮಾಡಿ
- ಪಾವತಿಸಬೇಕಾದ ಹಣ ಅಲ್ಲೇ ಕಾಣುತ್ತದೆ. ಕಂಟಿನ್ಯೂ ಕ್ಲಿಕ್ ಮಾಡಿ, ಹಣ ಪಾವತಿಸಿ
ಈ ಪ್ರಕ್ರಿಯೆ ಆಗಿ 30 ದಿನದಲ್ಲಿ ಪ್ಯಾನ್ ಮತ್ತೆ ಸಕ್ರಿಯಗೊಳ್ಳುತ್ತದೆ. ಅಗ ಯಥಾಪ್ರಕಾರ ಪ್ಯಾನ್ ಬಳಕೆ ಮಾಡಬಹುದು. ಅಲ್ಲಿಯವರೆಗೂ ಪ್ಯಾನ್ ಅನ್ನು ಎಲ್ಲಿಯೂ ಬಳಕೆಯಾಗದ ರೀತಿಯಲ್ಲಿ ಎಚ್ಚರ ವಹಿಸಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Tue, 4 July 23