ಅವಧಿಯೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ಏನೆಲ್ಲ ತೊಂದರೆ? ಇಲ್ಲಿದೆ ಮಾಹಿತಿ

| Updated By: Ganapathi Sharma

Updated on: Oct 19, 2022 | 12:21 PM

ತಿಂಗಳ ಕೊನೆಯ ಹಣಕಾಸಿನ ಒತ್ತಡದಲ್ಲಿ ಕ್ರೆಡಿಟ್ ಬಿಲ್ ಕಟ್ಟಲಾಗದೆ ಮಿಸ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಈ ಕೆಳಗಿನ ಅಂಶಗಳು ನಿಮ್ಮ ಗಮನದಲ್ಲಿರಲಿ.

ಅವಧಿಯೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ಏನೆಲ್ಲ ತೊಂದರೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ನಿಗದಿತ ದಿನಾಂಕ ಅಥವಾ ಅವಧಿಯ ಒಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವುದು (Credit Card Payment) ಗ್ರಾಹಕರ ಆದ್ಯತೆಯಾಗಿರಬೇಕು. ಇಲ್ಲವಾದಲ್ಲಿ ಹೆಚ್ಚಿನ ಶುಲ್ಕ, ಬಡ್ಡಿ (Interest Rate) ಪಾವತಿಸುವುದರ ಜತೆಗೆ ಇತರ ಸಮಸ್ಯೆಗಳಿಗೂ ಒಳಗಾಗಬೇಕಾಗುತ್ತದೆ. ಈ ಪರಿಣಾಮಗಳ ಬಗ್ಗೆ ಹೆಚ್ಚಿನವರಿಗೆ ಅರಿವಿರಬಹುದು. ಆದರೆ, ಅವಧಿಯೊಳಗೆ ಬಿಲ್ ಪಾವತಿ ಮಾಡುವುದು ಸಾಧ್ಯವಾಗದಿದ್ದರೆ ಎಷ್ಟು ಬಡ್ಡಿ ವಿಧಿಸುತ್ತಾರೆ? ಏನೇನು ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ ಎಂಬ ಸ್ಪಷ್ಟವಾದ ಮಾಹಿತಿ ಬಹುತೇಕರಲ್ಲಿ ಇಲ್ಲದೆಯೂ ಇರಬಹುದು. ತಿಂಗಳ ಕೊನೆಯ ಹಣಕಾಸಿನ ಒತ್ತಡದಲ್ಲಿ ಕ್ರೆಡಿಟ್ ಬಿಲ್ (Credit Bill) ಕಟ್ಟಲಾಗದೆ ಮಿಸ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಈ ಕೆಳಗಿನ ಅಂಶಗಳು ನಿಮ್ಮ ಗಮನದಲ್ಲಿರಲಿ.

ವಿಳಂಬ ಶುಲ್ಕ:

ನಿಗದಿತ ಅವಧಿಯ ನಂತರ ಕ್ರೆಡಿಟ್ ಬಿಲ್ ಪಾವತಿ ಮಾಡುವುದಾದರೆ ವಿಳಂಬ ಶುಲ್ಕ ತೆರಬೇಕಾಗುತ್ತದೆ. ಗಡುವು ಮುಕ್ತಾಯವಾದ ಮೂರು ದಿನಗಳ ಬಳಿಕ ಪಾವತಿಸುವುದಿದ್ದರೆ ಮಾತ್ರ ವಿಳಂಬ ಶುಲ್ಕ ವಿಧಿಸಬೇಕೆಂದು ಇತ್ತೀಚೆಗೆ ಆರ್​ಬಿಐ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆದಾಗ್ಯೂ, ಬಿಲ್ ಅನ್ನು ಸೂಕ್ತ ಸಮಯಕ್ಕೆ ಪಾವತಿ ಮಾಡುವುದೇ ಸೂಕ್ತ.

ಇದನ್ನೂ ಓದಿ
Petrol Price on October 19: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?; ಇಲ್ಲಿದೆ ಮಾಹಿತಿ
Gold Price Today: ಚಿನ್ನದ ದರ 40 ರೂಪಾಯಿ ಇಳಿಕೆ, ಬೆಳ್ಳಿ ದರವೂ ಕುಸಿತ
Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್
SBI Interest Rate Hike: ಉಳಿತಾಯ ಖಾತೆ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ

ಹೆಚ್ಚು ಮೊತ್ತದ ಬಡ್ಡಿ:

ಕ್ರೆಡಿಟ್ ಬಿಲ್​ನ ಕನಿಷ್ಠ ಮೊತ್ತವನ್ನು ಗಡುವಿನ ಒಳಗೆ ಪಾವತಿ ಮಾಡದಿದ್ದರೆ ಒಟ್ಟು ಬಿಲ್​ ಮೇಲೆ ಗರಿಷ್ಠ ಬಡ್ಡಿ ವಿಧಿಸಲು ಬ್ಯಾಂಕ್​ಗಳಿಗೆ ಅವಕಾಶವಿದೆ. ಔಟ್​ಸ್ಟ್ಯಾಂಡಿಂಗ್ (ಬಾಕಿ ಇರಿಸಿಕೊಂಡಿರುವ ಬಿಲ್) ಮೊತ್ತಕ್ಕೆ ಮಾತ್ರ ಹೆಚ್ಚಿನ ಬಡ್ಡಿ ವಿಧಿಸಬಹುದಾಗಿದೆಯೇ ವಿನಃ ಬಾಕಿ ಇರುವ ಒಟ್ಟು ಮೊತ್ತಕ್ಕಲ್ಲ.

ಬಡ್ಡಿ ರಹಿತ ಕ್ರೆಡಿಟ್ ಅವಧಿ ರದ್ದಾಗಬಹುದು:

ಕ್ರೆಡಿಟ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ‘ಬಡ್ಡಿ ರಹಿತ ಕ್ರೆಡಿಟ್ ಅವಧಿಯನ್ನು (interest-free credit period)’ ಬ್ಯಾಂಕ್ ರದ್ದುಗೊಳಿಸಬಹುದಾಗಿದೆ. ‘ಬಡ್ಡಿ ರಹಿತ ಕ್ರೆಡಿಟ್ ಅವಧಿ’ 20ರಿಂದ 50 ದಿನಗಳವರೆಗೆ ಇರಬಹುದಾದ ಸೌಲಭ್ಯವಾಗಿದ್ದು, ಗ್ರಾಹಕರಿಗೆ ಬ್ಯಾಂಕ್ ನೀಡುತ್ತಿರುವ ಉತ್ತಮ ಕೊಡುಗೆಯಾಗಿದೆ.

ಇದನ್ನೂ ಓದಿ: Credit Score: ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸುವುದು ಹೇಗೆ? ಇಲ್ಲಿದೆ ಸಲಹೆ

ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ:

ಕ್ರೆಡಿಟ್ ಕಾರ್ಡ್ ಬಿಲ್ ಗಡುವಿನೊಳಗೆ ಪಾವತಿಸದಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಸಾಧ್ಯತೆ ಇದೆ. ಕ್ರೆಡಿಟ್ ಸ್ಕೋರ್ ಎಂಬುದು ನಮ್ಮ ಸಾಲ ಪಡೆಯುವಿಕೆಯ ಅಭ್ಯಾಸಕ್ಕೆ ಸಂಬಂಧಿಸಿದ 3 ಅಂಕಿಗಳ ಒಂದು ಸಂಖ್ಯೆ. ನಾವು ಎಷ್ಟು ಸಾಲ ಪಡೆದಿದ್ದೇವೆ, ಎಷ್ಟರ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿದ್ದೇವೆ ಎಂಬುದರ ಆಧಾರದಲ್ಲಿ ಈ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಇದರಲ್ಲಿ 300 ರಿಂದ 900 ರವರೆಗಿನ ಸ್ಕೋರ್ ನೀಡಲಾಗುತ್ತದೆ. ಇದು ವ್ಯಕ್ತಿಯ ಸಾಲಪಡೆಯಬಹುದಾದ ಅರ್ಹತೆಯನ್ನೂ ನಿರ್ಧರಿಸುತ್ತದೆ. 700 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಕ್ರೆಡಿಟ್ ಬಿಲ್ ಪಾವತಿಸದೇ ಈ ಸ್ಕೋರ್ ಕಡಿಮೆಯಾದರೆ ಭವಿಷ್ಯದಲ್ಲಿ ಸಾಲ ಪಡೆಯಬೇಕಾದ ಸಂದರ್ಭ ಬಂದಾಗ ಸಮಸ್ಯೆ ಎದುರಿಸಬೇಕಾಗಬಹುದು. ಸಾಲ ಸಿಗದೆಯೂ ಇರಬಹುದು.

ಕ್ರೆಡಿಟ್ ಮಿತಿಯಲ್ಲಿ ಕಡಿತ:

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಆಗಾಗ ವಿಳಂಬ ಮಾಡುವುದರಿಂದ ಕ್ರೆಡಿಟ್ ಮಿತಿ ಕಡಿಮೆಯಾಗಬಹುದು. ಇದು ಭವಿಷ್ಯದಲ್ಲಿ ಖರ್ಚು ಮಾಡುವ ಸಂದರ್ಭದಲ್ಲಿ ತೊಂದರೆ ಉಂಟುಮಾಡಬಹುದು.

ಕನಿಷ್ಠ ಮೊತ್ತ ಮಾತ್ರ ಪಾವತಿಸಿದರೆ ಸಾಲದು:

ಕ್ರೆಡಿಟ್ ಬಿಲ್​ನ ಕನಿಷ್ಠ ಮೊತ್ತ ಪಾವತಿಸಿದರೆ ಸಾಕು, ಔಟ್​ಸ್ಟ್ಯಾಂಡಿಂಗ್ ಮೊತ್ತವನ್ನಲ್ಲ ಎಂದು ಭಾವಿಸಿದ್ದರೆ ಇದು ತಪ್ಪು ಊಹೆಯಾಗಲಿದೆ. ಹೀಗೆ ಮಾಡಿದಲ್ಲಿ , ಔಟ್​ಸ್ಟ್ಯಾಂಡಿಂಗ್ ಮೊತ್ತದ ಮೇಲೆ ಬಡ್ಡಿ ತೆರಬೇಕಾಗಲಿದೆ. ಇಂಥ ಸಂದರ್ಭದಲ್ಲಿ ಬಡ್ಡಿ ವೆಚ್ಚವೇ ವಾರ್ಷಿಕ ಶೇಕಡಾ 45ರ ವರೆಗೂ ಹೆಚ್ಚಾಗಬಹುದು ಎನ್ನುತ್ತದೆ ಸಿಟಿ ಬ್ಯಾಂಕ್ ಜಾಲತಾಣ.

ಅಸಮಾಧಾನವಿದ್ದರೆ ಹೀಗೆ ಮಾಡಬಹುದು:

ಇಷ್ಟೆಲ್ಲ ಆಗಿಯೂ ನಿಮಗೆ ವಿಧಿಸಿದ ಶುಲ್ಕದ ಬಗ್ಗೆ ಅಸಮಾಧಾನವಿದ್ದರೆ ಕ್ರೆಡಿಟ್ ಕಾರ್ಡ್ ಅನ್ನು ಬ್ಯಾಂಕ್​ಗೆ ಮರಳಿಸಿ ಮುಕ್ತರಾಗುವುದಕ್ಕೂ ನೀವು ಅರ್ಹರು. ಬಾಕಿ ಇರುವ ಎಲ್ಲ ಮೊತ್ತವನ್ನು ಪಾವತಿಸಿ ಕಾರ್ಡ್ ಕ್ಲೋಸ್ ಮಾಡಲು ಮನವಿ ಸಲ್ಲಿಸಬಹುದು. ಇಂಥ ಸಂದರ್ಭದಲ್ಲಿ ಏಳು ದಿನಗಳ ಒಳಗೆ ನಿಮ್ಮ ಅರ್ಜಿಯ ಬಗ್ಗೆ ಬ್ಯಾಂಕ್​ಗಳು ಕ್ರಮ ಕೈಗೊಳ್ಳಬೇಕು ಎಂದು ಆರ್​ಬಿಐ ಕಡ್ಡಾಯಗೊಳಿಸಿದೆ. ನಿಗದಿತ ಅವಧಿಯಲ್ಲಿ ನಿಮ್ಮ ಅರ್ಜಿಯನ್ನು ಪೂರ್ಣಗೊಳಿಸುವುದು ಬ್ಯಾಂಕ್​ನಿಂದ ಸಾಧ್ಯವಾಗದಿದ್ದಲ್ಲಿ ಹೆಚ್ಚುವರಿ ದಿನಗಳಿಗೆ ಪ್ರತಿ ದಿನ 500 ರೂಪಾಯಿಯಂತೆ ಬ್ಯಾಂಕ್ ನಿಮಗೆ ದಂಡ ತೆರಬೇಕಾಗುತ್ತದೆ.

(ಮಾಹಿತಿ – ವಿವಿಧ ಮೂಲಗಳಿಂದ)

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Wed, 19 October 22