Mutual Fund: ಮ್ಯೂಚುವಲ್ ಫಂಡ್​ನಲ್ಲಿ ಎಸ್​ಐಪಿ ಹೂಡಿಕೆ ಮಾಡುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಲೇಬೇಡಿ

| Updated By: ಗಣಪತಿ ಶರ್ಮ

Updated on: Dec 31, 2022 | 1:08 PM

SIP investment; ಸಾಮಾನ್ಯವಾಗಿ ಎಸ್​​ಐಪಿ ಹೂಡಿಕೆ ಮಾಡುವಾಗ ಹೂಡಿಕೆದಾರರು ಮಾಡುವ ತಪ್ಪುಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ರೀತಿಯ ತಪ್ಪುಗಳನ್ನು ಮಾಡದೆ ಹೆಚ್ಚು ಗಳಿಸುವ ದೃಷ್ಟಿಯಿಂದ ಹೂಡಿಕೆದಾರರು ಗಮನಹರಿಸುವುದು ಉತ್ತಮ.

Mutual Fund: ಮ್ಯೂಚುವಲ್ ಫಂಡ್​ನಲ್ಲಿ ಎಸ್​ಐಪಿ ಹೂಡಿಕೆ ಮಾಡುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಲೇಬೇಡಿ
ಎಸ್​ಐಪಿ ಹೂಡಿಕೆ (ಸಾಂದರ್ಭಿಕ ಚಿತ್ರ)
Follow us on

ದೀರ್ಘಾವಧಿಗೆ ಉತ್ತಮ ರಿಟರ್ನ್ಸ್ ಪಡೆಯುವುದಕ್ಕಾಗಿ ಮ್ಯೂಚುವಲ್ ಫಂಡ್​​ಗಳಲ್ಲಿ (Mutual Fund) ವ್ಯವಸ್ಥಿತ ಹೂಡಿಕೆ ವಿಧಾನ ಅಥವಾ ಎಸ್​​ಐಪಿ (SIP) ವಿಧಾನದಲ್ಲಿ ಹೂಡಿಕೆ ಮಾಡುವುದು ಉತ್ತಮ ವಿಧಾನವಾಗಿದೆ. ಆದರೆ ಎಸ್​ಐಪಿಯಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಮಾಡುತ್ತಾ ಹೋಗದಿದ್ದರೆ ಉತ್ತಮ ರಿಟರ್ನ್ಸ್ ಪಡೆಯುವುದು ಕಷ್ಟ. ಹೆಸರೇ ಹೇಳುವಂತೆ ಇದು ವ್ಯವಸ್ಥಿತ ಹೂಡಿಕೆ ಯೋಜನೆ. ಇದನ್ನು ಅವ್ಯವಸ್ಥಿತವಾಗಿ ಮಾಡಿದರೆ ಅಥವಾ ಕೆಲವು ತಪ್ಪುಗಳನ್ನು ಮಾಡಿದರೆ ಹೆಚ್ಚಿನ ರಿಟರ್ನ್ಸ್ ಪಡೆಯುವುದು ಸಾಧ್ಯವಾಗದು. ಸಾಮಾನ್ಯವಾಗಿ ಎಸ್​​ಐಪಿ ಹೂಡಿಕೆ ಮಾಡುವಾಗ ಹೂಡಿಕೆದಾರರು ಮಾಡುವ ತಪ್ಪುಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ರೀತಿಯ ತಪ್ಪುಗಳನ್ನು ಮಾಡದೆ ಹೆಚ್ಚು ಗಳಿಸುವ ದೃಷ್ಟಿಯಿಂದ ಹೂಡಿಕೆದಾರರು ಗಮನಹರಿಸುವುದು ಉತ್ತಮ.

ತಡವಾಗಿ ಎಸ್​ಐಪಿ ಆರಂಭಿಸುವುದು

ಸಾಮಾನ್ಯವಾಗಿ ದೀರ್ಘಾವಧಿಗೆ ಎಸ್​ಐಪಿ ಹೂಡಿಕೆ ಮಾಡಿದಷ್ಟು ರಿಟರ್ನ್ಸ್ ಪ್ರಮಾಣ ಹೆಚ್ಚಿರುತ್ತದೆ. ಹೇಗೂ ಹೂಡಿಕೆ ಮಾಡುವ ಯೋಚನೆಯಲ್ಲಿದ್ದರೆ ಅದಕ್ಕಾಗಿ ಹೆಚ್ಚು ಸಮಯ ವ್ಯರ್ಥ ಮಾಡದೆ, ಯಾವುದು ಉತ್ತಮ ಮ್ಯೂಚುವಲ್ ಫಂಡ್ ಎಂದು ವಿಮರ್ಶಿಸಿ ತಕ್ಷಣವೇ ಹೂಡಿಕೆ ಆರಂಭಿಸುವುದು ಉತ್ತಮ.

ಡಿವಿಡೆಂಡ್ ಬದಲು ಗ್ರೋಥ್ ಪ್ಲಾನ್​ಗಳನ್ನು ಆಯ್ದುಕೊಳ್ಳಿ

ಡಿವಿಡೆಂಡ್ (ಲಾಭಾಂಶ) ನೀಡುವ ಯೋಜನೆಗಳನ್ನು ಆಯ್ದುಕೊಳ್ಳುವುದರಿಂದಲೂ ದೀರ್ಘಾವಧಿಗೆ ಉತ್ತಮ ಬೆಳವಣಿಗೆ ಹೊಂದುವಂಥ ಪ್ಲಾನ್​ಗಳನ್ನು ಆಯ್ದುಕೊಳ್ಳಿ. ಡಿವಿಡೆಂಡ್​ ಯೋಜನೆಗಳಲ್ಲಾದರೆ ನೀವು ಅದನ್ನು ಪಡೆದು ಅನಿವಾರ್ಯಕ್ಕೆ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ ಅದರಿಂದ ದೀರ್ಘಾವಧಿಗೆ ನಿಮ್ಮ ಫಂಡ್​​ನಲ್ಲಿ ಹೆಚ್ಚು ಮೊತ್ತ ಉಳಿಯುವುದಿಲ್ಲ. ಆದರೆ, ಕಡಿಮೆ ರಿಸ್ಕ್​ನ ಹೆಚ್ಚು ಬೆಳವಣಿಗೆ ಹೊಂದುವಂಥ ಫಂಡ್​ಗಳನ್ನು ಆಯ್ಕೆ ಮಾಡಿದರೆ ಭರ್ಜರಿ ರಿಟರ್ನ್ಸ್ ಗಳಿಸಬಹುದು.

ಎಸ್​ಐಪಿ ಶಿಸ್ತು ಕಾಪಾಡದಿರುವುದು

ಎಸ್​ಐಪಿಯನ್ನು ವ್ಯವಸ್ಥಿತವಾಗಿ ಮಾಡದಿರುವುದು, ಎಸ್​ಐಪಿ ಮೊತ್ತ ಹೂಡಿಕೆ ತಪ್ಪಿಸುವುದು ಹೆಚ್ಚಿನವರು ಮಾಡುವ ತಪ್ಪು. ಮಾರುಕಟ್ಟೆ ಕುಸಿತದಲ್ಲಿದ್ದಾಗ ಆತಂಕಿತರಾಗಿ ಎಸ್​ಐಪಿ ತಪ್ಪಿಸುವುದು ಸರಿಯಲ್ಲ. ಇಂಥ ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ಸ್ ಸಿಗುವ ಸಾಧ್ಯತೆಗಳಿರುತ್ತವೆ ಎಂಬುದು ಗಮನದಲ್ಲಿರಲಿ. ಎಸ್​ಐಪಿ ಕಂತು ತಪ್ಪಿಸುವುದರಿಂದ ಆ ತಿಂಗಳ ಲಾಭ ಸಿಗದೇ ಹೋಗಬಹುದು.

ಎಸ್​ಐಪಿ ಅರ್ಧಕ್ಕೆ ಸ್ಥಗಿತಗೊಳಿಸಿ ಮೊತ್ತ ಹಿಂಪಡೆಯುವುದು

ಹೂಡಿಕೆಯು ಕೆಲವು ತಿಂಗಳುಗಳ ವರೆಗೆ ಗಳಿಕೆ ಕಾಣದೇ ಇದ್ದಾಗ ಕೆಲವರು ಎಸ್​ಐಪಿ ಸ್ಥಗಿತಗೊಳಿಸಿ ಮೊತ್ತ ಹಿಂಪಡೆಯಲು ಮುಂದಾಗುತ್ತಾರೆ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಸರಿಯಾಗಿ ವಿವೇಚಿಸಿ ನಿರ್ಧಾರ ಕೈಗೊಂಡು ಒಂದು ಮ್ಯೂಚುವಲ್ ಫಂಡ್​​ನಲ್ಲಿ ಎಸ್​ಐಪಿ ಹೂಡಿಕೆ ಮಾಡುತ್ತಿದ್ದೀರಿ ಎಂದಾದರೆ, ಕೆಲವು ತಿಂಗಳುಗಳ ವರೆಗೆ ರಿಟರ್ನ್ಸ್ ಉತ್ತಮವಾಗಿಲ್ಲದಿದ್ದರೆ ಚಿಂತೆ ಬೇಡ. ಎಸ್​ಐಪಿ ಉದ್ದೇಶವೇ ದೀರ್ಘಾವಧಿಯ ಹೂಡಿಕೆಯಾದ್ದರಿಂದ ತಾಳ್ಮೆ ವಹಿಸಿ. ಕೆಲವು ವರ್ಷಗಳಲ್ಲಿ ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ಗಳಿಕೆ ನಿಮ್ಮದಾಗಬಹುದು. ಆದರೆ, ಹೂಡಿಕೆ ಮಾಡುವ ಮುನ್ನ ಸಲಹೆಗಾರರ ಜತೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಿ.

ಲಾಭ ಬರುತ್ತಿದೆ ಎಂದ ಕೂಡಲೇ ಹೆಚ್ಚೆಚ್ಚು ಹೂಡಿಕೆ ಮಾಡುವುದು

ಎಸ್​ಐಪಿಗೆ ಹೆಚ್ಚು ಲಾಭ ಬರುತ್ತಿದೆ ಎಂದು ಹೆಚ್ಚೆಚ್ಚು ಹೂಡಿಕೆ ಮಾಡುವುದು, ಎಸ್​ಐಪಿಗಳನ್ನು ಹೆಚ್ಚಿಸುವುದೂ ಸರಿಯಲ್ಲ. ಮಾರುಕಟ್ಟೆ ಹೆಚ್ಚು ಗಳಿಕೆಯಲ್ಲಿದ್ದಾಗೆ ಹೆಚ್ಚು ಹೂಡಿಕೆ ಮಾಡಿದರೆ ಮುಂದೊಮ್ಮೆ ಕುಸಿದಾಗ ನಿಮ್ಮ ಮೊತ್ತಕ್ಕೆ ಹೆಚ್ಚಿನ ರಿಟರ್ನ್ಸ್ ಬಾರದು ಎಂಬುದು ನೆನಪಿರಲಿ.

ಇದನ್ನೂ ಓದಿ: SIP Vs Lumpsum: ಲಂಸಮ್ ಅಥವಾ ಎಸ್​ಐಪಿ; 2023ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಯಾವುದು ಉತ್ತಮ? ತಜ್ಞರ ಸಲಹೆ ಇಲ್ಲಿದೆ

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ವ್ಯವಸ್ಥಿತವಾಗಿ ಎಸ್​ಐಪಿ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ಸ್ ಗಳಿಸಬಹುದು. ವೇತನ, ಆದಾಯ ಹೆಚ್ಚಳಕ್ಕನುಗುಣವಾಗಿ ಪ್ರತಿ ವರ್ಷ ಎಸ್​ಐಪಿ ಮೊತ್ತವನ್ನೂ ತುಸು ಹೆಚ್ಚಿಸುವುದೂ ಉತ್ತಮ ವಿಧಾನವಾಗಿದೆ. ಮೇಲೆ ಹೇಳಿದ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮ್ಯೂಚುವಲ್ ಫಂಡ್​ಗಳಲ್ಲಿ ಎಸ್​​ಐಪಿ ಹೂಡಿಕೆ ಮಾಡಿದರೆ ಖಂಡಿತವಾಗಿ ಹೆಚ್ಚು ರಿಟರ್ನ್ಸ್ ಪಡೆಯಬಹುದು.

(ವಿವಿಧ ಮೂಲಗಳ ಮಾಹಿತಿ ಆಧರಿಸಿ ಈ ವಿವರಗಳನ್ನು ನೀಡಲಾಗಿದೆ. ಮ್ಯೂಚುವಲ್ ಫಂಡ್​ಗಳಲ್ಲಿನ ಹೂಡಿಕೆ ಹಣಕಾಸು ಅಪಾಯಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಹೂಡಿಕೆ ಮಾಡುವ ಮುನ್ನ ತಜ್ಞರ ಜತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ)

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ