Mutual Funds: ಎಲ್ಲಾ ಎಸ್ಐಪಿಗಳು ಚಿನ್ನದ ಮೊಟ್ಟೆ ಕೊಡುವ ಕೋಳಿಗಳಲ್ಲ; ಹೂಡಿಕೆ ಮಾಡುವಾಗ ರಿಸ್ಕ್ ನೆನಪಿರಲಿ
ಮ್ಯೂಚುವಲ್ ಫಂಡ್ಗಳು ಶೇ. 20, ಶೇ. 30, ಶೇ. 40 ಲಾಭ ತಂದುಕೊಡುತ್ತವೆ ಎನ್ನುವಂತಹ ಮಾತುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕೇಳಿರುತ್ತೇವೆ. ಆ ಮಾತು ಕೇಳಿದರೆ ಯಾರಿಗಾದರೂ ಸರಿ ಮ್ಯುಚುವಲ್ ಫಂಡ್ ಮೇಲೆ ಭಾರೀ ನಿರೀಕ್ಷೆ ಮೂಡಬಹುದು. ಷೇರುಗಳ ಮೇಲೆ ಜೋಡಿತವಾಗಿರುವ ಫಂಡ್ಗಳು ಹೆಚ್ಚು ಲಾಭ ತರುತ್ತವೆಯಾದರೂ ನಷ್ಟದ ಅವಕಾಶವೂ ಹೆಚ್ಚಿರುತ್ತದೆ. ಈ ವಾಸ್ತವ ಸಂಗತಿ ಹೂಡಿಕೆದಾರರಿಗೆ ತಿಳಿದಿರಬೇಕು.
ಮ್ಯೂಚುವಲ್ ಫಂಡ್ ಮತ್ತು ಅವುಗಳ ಎಸ್ಐಪಿ (Mutual Fund SIP) ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಎಸ್ಐಪಿ ಮ್ಯಾಜಿಕ್ ಬಗ್ಗೆ ಬಹಳಷ್ಟು ಮಾತುಗಳನ್ನು ಕೇಳಿರಬಹುದು. ಎಸ್ಐಪಿ ಮೂಲಕ ತಿಂಗಳಿಗೆ 10,000 ರೂನಂತೆ 30 ವರ್ಷ ಹೂಡಿಕೆ ಮಾಡಿದರೆ ಮೂರರಿಂದ ಐದು ಕೋಟಿ ರೂ ಗಳಿಸಬಹುದು ಎಂದು ಹೇಳಲಾಗುತ್ತಿದೆ. ಯಾರಿಗಾದರೂ ಇದು ಅವರ ಜೀವನದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಬಹುದು. ಕೆಲ ಮ್ಯುಚುವಲ್ ಫಂಡ್ಗಳು ವರ್ಷಕ್ಕೆ ಶೇ. 25ರಷ್ಟು ಲಾಭ ತಂದಿರುವುದುಂಟು. ಆ ಲೆಕ್ಕದ ಪ್ರಕಾರ 30 ವರ್ಷಗಳ ನಮ್ಮ ಮಾಸಿಕ 10,000 ರ ಹೂಡಿಕೆ 80 ಕೋಟಿ ರೂ ಆಗಿಬಿಡುತ್ತದೆ. ಹೂಡಿಕೆ ಇಷ್ಟು ಸುಲಭವಾಗಿ ಬಿಟ್ಟರೆ ಜನರು ಕೆಲಸ ಮಾಡುವುದನ್ನೇ ಬಿಟ್ಟಿಯಾರು. ಮ್ಯೂಚುವಲ್ ಫಂಡ್ ಕೇಳಿದ್ದನ್ನು ಕೊಡುವ ಕಾಮಧೇನುವಲ್ಲ. ಎಲ್ಲಾ ಫಂಡ್ಗಳು ಚಿನ್ನದ ಮೊಟ್ಟೆ ಇಡುವ ಕೋಳಿಗಳಲ್ಲ ಎಂಬುದು ನೆನಪಿರಲಿ. ಎಲ್ಲಾ ಮ್ಯುಚುವಲ್ ಫಂಡ್ಗಳು ಶೇ. 10ಕ್ಕಿಂತ ಹೆಚ್ಚು ಲಾಭ ತಂದುಕೊಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಸಬ್ಜೆಕ್ಟ್ ಟು ಮಾರ್ಕೆಟ್ ರಿಸ್ಕ್ ಎಂಬ ಡಿಸ್ಕ್ಲೇಮರ್ ಹಾಕಲಾಗಿರುತ್ತದೆ.
ಮ್ಯುಚುವಲ್ ಫಂಡ್ ಹೇಗೆ ಕೆಲಸ ಮಾಡುತ್ತೆ?
ಮ್ಯುಚುವಲ್ ಫಂಡ್ ಕಂಪನಿಗಳು ಹಣವನ್ನು ವಿವಿಧ ಷೇರುಗಳು, ಡೆಟ್ಗಳು, ಬಾಂಡ್ಗಳು, ಚಿನ್ನ ಇತ್ಯಾದಿ ಕಡೆ ಹೂಡಿಕೆ ಮಾಡಬಹುದು. ಕೆಲ ಫಂಡ್ಗಳು ಷೇರುಗಳ ಮೇಲೆಯೇ ಹೆಚ್ಚು ಹೂಡಿಕೆ ಮಾಡಬಹುದು. ಕೆಲ ಫಂಡ್ಗಳು ಎಲ್ಲದರ ಮೇಲೂ ಹೂಡಿಕೆ ಮಾಡಬಹುದು. ಬಾಂಡ್ ಇತ್ಯಾದಿಗಳು ನಿಶ್ಚಿತ ಲಾಭ ತರುತ್ತವೆ. ಆದರೆ, ಷೇರುಗಳ ಬೆಲೆ ಹೀಗೇ ಎಂದು ಅಂದಾಜು ಮಾಡಲು ಕಷ್ಟಸಾಧ್ಯ.
ಇದನ್ನೂ ಓದಿ: ಜೀವನ ಭದ್ರತೆಗೆ ಎಷ್ಟು ಹಣ ಉಳಿಸಬೇಕು, ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಟಿಪ್ಸ್
ಷೇರುಗಳ ಬೆಲೆ ಏರಿಳಿತವನ್ನು ಪ್ರಭಾವಿಸುವ ಹಲವು ಅಂಶಗಳಿವೆ. ಆಂತರಿಕ, ಅಂತಾರಾಷ್ಟ್ರೀಯ ವಿದ್ಯಮಾನಗಳು, ಸರ್ಕಾರದ ಆದ್ಯತೆ, ವಿವಿಧ ವಲಯಗಳಲ್ಲಿನ ವ್ಯಾಪಾರ ಸಾಧನೆ, ಕಂಪನಿಗಳ ಆಡಳಿತ ವ್ಯವಸ್ಥೆ, ಕಂಪನಿಯ ಲಾಭ ಇತ್ಯಾದಿ ಸಾಕಷ್ಟು ಅಂಶಗಳು ಕೆಲಸ ಮಾಡುತ್ತವೆ. ಹೀಗಾಗಿ, ಷೇರುಗಳ ಮೇಲಿನ ಹೂಡಿಕೆ ಹೆಚ್ಚು ಲಾಭಕಾರಿಯಾಗಬಹುದಾದರೂ ರಿಸ್ಕ್ ಸಾಧ್ಯತೆ ಬಹಳ ಹೆಚ್ಚು.
ಉದಾಹರಣೆಗೆ, ಪೇಟಿಎಂ ಸಂಸ್ಥೆ ಐಪಿಒಗೆ ಬಂದಾಗ ಅದರ ಹವಾ ಬೇರೆಯೇ ಮಟ್ಟದಲ್ಲಿತ್ತು. ಭಾರತದ ಅತ್ಯಂತ ಯಶಸ್ವಿ ಸ್ಟಾರ್ಟಪ್ಗಳಲ್ಲಿ ಮತ್ತು ಸ್ಟಾರ್ ಸ್ಟಾರ್ಟಪ್ಗಳಲ್ಲಿ ಅದೂ ಒಂದೆನಿಸಿತ್ತು. ಯುಪಿಐ ಪಾವತಿಗೆ ಮಾತ್ರ ಸೀಮಿತವಾಗದೇ ಆನ್ಲೈನ್ ಕಾಮರ್ಸ್ ಮಾರುಕಟ್ಟೆ ಸ್ಥಳ ಇತ್ಯಾದಿ ಬಹಳಷ್ಟು ಸೇವೆಗಳಿಗೆ ವಿಸ್ತರಿಸಿತ್ತು. ಅದು ಐಪಿಒಗೆ ಬಂದಾಗ ಜನರ ನಿರೀಕ್ಷೆ ಬಹಳವೇ ಹೆಚ್ಚಿತ್ತು. ಅಂತೆಯೇ ಅದರ ಷೇರು ಖರೀದಿಸಲು ಜನರು ಮುಗಿಬಿದ್ದಿದ್ದರು. ನಂತರ ಅದರ ಷೇರುಬೆಲೆ ಬಹುತೇಕ ಪ್ರಪಾತಕ್ಕೆ ಬಿದ್ದು ಹೋಗಿದೆ. ಈಗಲೂ ಕೂಡ ಅದು ಐಪಿಒ ಬೆಲೆಗಿಂತ ತೀರಾ ಕಡಿಮೆ ಇದೆ. ಆ ಷೇರಿನ ಮೇಲೆ ಹೂಡಿಕೆ ಮಾಡಿದವರು ಅದೆಷ್ಟು ಹಣ ನಷ್ಟ ಮಾಡಿಕೊಂಡಿರಬಹುದು ನೋಡಿ.
ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಓಡೋ ಕುದುರೆ ಗುರುತಿಸೋದು ಹೇಗೆ? ಇಪಿಎಸ್, ಪಿಇ ರೇಶಿಯೋ ಇತ್ಯಾದಿ ತಂತ್ರಗಳನ್ನು ತಿಳಿದಿರಿ
ಮಿರೇ, ಕ್ವಾಂಟ್ ನಿಪ್ಪೋನ್ ಇತ್ಯಾದಿ ಸಂಸ್ಥೆಗಳ ಮ್ಯುಚುವಲ್ ಫಂಡ್ಗಳು ಸಾಕಷ್ಟು ಹಣವನ್ನು ಪೇಟಿಎಂನಲ್ಲಿ ಹೂಡಿಕೆ ಮಾಡಿದ್ದವು. ಈ ಫಂಡ್ಗಳು ಅನುಭವಿಸುವ ನಷ್ಟವು ಗ್ರಾಹಕರಿಗೆ ವರ್ಗಾವಣೆ ಆಗುತ್ತದೆ. ಇಂಥ ಅಂಶಗಳೇ ಷೇರು ಮಾರುಕಟ್ಟೆಯಲ್ಲಿ ರಿಸ್ಕ್ ಸಾಧ್ಯತೆ ಹೆಚ್ಚಾಗಿಸುತ್ತವೆ. ಫಂಡ್ ಮ್ಯಾನೇಜರುಗಳು ಬ್ರಹ್ಮಜ್ಞಾನಿಗಳೇನೂ ಅಲ್ಲವಲ್ಲ… ಇದನ್ನು ತಿಳಿದು ಹೂಡಿಕೆದಾರರು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಹೀಗಾಗಿ, ಮ್ಯೂಚುವಲ್ ಫಂಡ್ ಮತ್ತು ಎಸ್ಐಪಿಯಲ್ಲಿ ಮಾಡಿದ ಹೂಡಿಕೆ ಎಲ್ಲವೂ ಶೇ. 10ಕ್ಕಿಂತ ಹೆಚ್ಚು ಲಾಭ ಮಾಡುತ್ತವೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ