NPS: ನ್ಯಾಷನಲ್ ಪೆನ್ಷನ್ ಸ್ಕೀಮ್: 10 ಲಕ್ಷ ರೂ ಇದ್ದರೆ ಎಷ್ಟು ಪಿಂಚಣಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ
National Pension System: ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ 60 ವರ್ಷದ ಬಳಿಕ ಮಾಸಿಕ ಪೆನ್ಷನ್ ಪಡೆಯಬಹುದು. ನಿಧನ ಹೊಂದಿದ ಬಳಿಕ ಎನ್ಪಿಎಸ್ ಖಾತೆಯಲ್ಲಿರುವ ನಿಧಿ ಸಂಪೂರ್ಣ ನಾಮಿನಿಗೆ ಹೋಗುತ್ತದೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ...
ನ್ಯಾಷನಲ್ ಪೆನ್ಷನ್ ಸಿಸ್ಟಂ (National Pension System) ಸರ್ಕಾರ ರೂಪಿಸಿರುವ ಪಿಂಚಣಿ ಯೋಜನೆಗಳಲ್ಲಿ ಒಂದು. ಸರ್ಕಾರಿ ಉದ್ಯೋಗಿಗಳು ಮಾತ್ರವಲ್ಲದೇ ಯಾವುದೇ ಸಾರ್ವಜನಿಕರು ಈ ಯೋಜನೆ ಪಡೆಯಬಹುದು. ನ್ಯಾಷನಲ್ ಪೆನ್ಷನ್ ಸಿಸ್ಟಂನ ಹಣವನ್ನು ಈಕ್ವಿಟಿ ಮತ್ತಿತರ ಬಂಡವಾಳ ಮಾರುಕಟ್ಟೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಹೂಡಿಕೆ ಮಾಡಲಾಗುವ ಹಣವನ್ನು ಯಾವ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಸದಸ್ಯರೇ ನಿರ್ಧರಿಸಬಹುದು. ಇದು ಮಾರುಕಟ್ಟೆ ಜೋಡಿತ ಪೆನ್ಷನ್ ಸ್ಕೀಮ್.
ನೀವು 60 ವರ್ಷ ದಾಟಿದ ಬಳಿಕ ಪಿಂಚಣಿ ಪಡೆಯಲು ಆರಂಭಿಸಬಹುದು. 60 ವರ್ಷ ಬೇಡ ಇನ್ನೂ ತಡವಾಗಿ ಪಿಂಚಣಿ ಪಡೆಯಲೂ ಅವಕಾಶ ಇದೆ. ಆದರೆ, 60 ವರ್ಷ ದಾಟಿದ ಬಳಿಕ ನಿಮ್ಮ ಎನ್ಪಿಎಸ್ ಖಾತೆಯಲ್ಲಿ ಎಷ್ಟು ಹಣ ಇದೆಯೋ ಅದರ ಶೇ. 40 ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ವಿಮಾ ಸಂಸ್ಥೆಯಿಂದ ಪಿಂಚಣಿ ಸ್ಕೀಮ್ ಖರೀದಿಸಬೇಕು. ಪೂರ್ಣ ಮೊತ್ತ ಬೇಕಾದರೂ ಇದಕ್ಕೆ ವಿನಿಯೋಗಿಸಬಹುದು. ನಿಮಗೆ ಅಗತ್ಯಬಿದ್ದರೆ ಶೇ. 60ರಷ್ಟರವರೆಗೂ ಹಣವನ್ನು ಎನ್ಪಿಎಸ್ ಖಾತೆಯಿಂದ ಹಿಂಪಡೆಯಲು ಅವಕಾಶ ಇರುತ್ತದೆ.
ಎನ್ಪಿಎಸ್ ಸ್ಕೀಮ್ನಲ್ಲಿ ಎಷ್ಟು ಪಿಂಚಣಿ ಸಿಗುತ್ತದೆ?
ಇದು ಯಾವ ವಯಸ್ಸಿನಲ್ಲಿ ಎನ್ಪಿಎಸ್ ಪಿಂಚಣಿ ಆರಂಭಿಸುತ್ತೀರಿ, ಎಷ್ಟು ನಿಧಿಯನ್ನು ಎನ್ಪಿಎಸ್ನಲ್ಲಿ ಹೊಂದಿದ್ದೀರಿ ಎಂಬುದರ ಮೇಲೆ ಪಿಂಚಣಿ ಮೊತ್ತ ನಿಗದಿಯಾಗುತ್ತದೆ. ನೀವು ಲಂಪ್ಸಮ್ ಏನಾದರೂ ವಿತ್ಡ್ರಾ ಮಾಡಿ 10 ಲಕ್ಷ ರೂ ಹಣವು ಎನ್ಪಿಎಸ್ ಖಾತೆಯಲ್ಲಿ ಉಳಿದಿದ್ದರೆ ನಿಮಗೆ ತಿಂಗಳಿಗೆ 5,000 ರೂನಿಂದ 6,000 ರೂವರೆಗೂ ಪಿಂಚಣಿ ಸಿಗಬಹುದು.
ಇದನ್ನೂ ಓದಿ: FD vs PPF: ಎಫ್ಡಿ ಉತ್ತಮವೋ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಉತ್ತಮವೋ? ಇಲ್ಲೊಂದು ಹೋಲಿಕೆ
ನೀವು ಸಾಯುವವರೆಗೂ ಪಿಂಚಣಿ ಬರುತ್ತಿರುತ್ತದೆ. ನೀವು ನಿಧನ ಹೊಂದಿದ ಬಳಿಕ ನಾಮಿನಿಗೆ 10 ಲಕ್ಷ ರೂ ವರ್ಗವಾಗುತ್ತದೆ. ಇದರಲ್ಲೂ ಬೇರೆ ಬೇರೆ ಆಯ್ಕೆಗಳಿವೆ. ಇನ್ನೊಂದು ಆಯ್ಕೆಯಲ್ಲಿ ನೀವು ನಿಧನ ಹೊಂದಿದ ಬಳಿಕ ಸತಿ ಅಥವಾ ಪತಿಗೆ ಪಿಂಚಣಿ ಮುಂದುವರಿಯತ್ತಾ ಹೋಗುತ್ತದೆ. ಅವರೂ ಮೃತಪಟ್ಟಾಗ ನಾಮಿನಿಗೆ 10 ಲಕ್ಷ ರೂ ಸಿಗುತ್ತದೆ. ಮತ್ತೊಂದು ಆಯ್ಕೆಯಲ್ಲಿ, ಗಂಡ ಅಥವಾ ಹೆಂಡತಿ ಮತ್ತು ತಂದೆ, ತಾಯಿ ಇವರಿಗೆ ಪಿಂಚಣಿ ವರ್ಗವಾಗುತ್ತಾ ಹೋಗುತ್ತದೆ. ಅವರೆಲ್ಲರೂ ಮೃತಪಟ್ಟ ಬಳಿಕ ವಾರಸುದಾರರಿಗೆ ಮೂಲ ಹಣ ವರ್ಗಾವಣೆ ಆಗುತ್ತದೆ. ಇಲ್ಲಿ, ಮಾಸಿಕ ಪಿಂಚಣಿ ಹಣಕ್ಕೆ ತೆರಿಗೆ ಇರುತ್ತದೆ. ಸತ್ತ ಬಳಿಕ ಸಿಗುವ ಮೂಲನಿಧಿಗೆ ತೆರಿಗೆ ಇರುವುದಿಲ್ಲ.
ಎನ್ಪಿಎಸ್ ಖಾತೆಯನ್ನು ಪೋಸ್ಟ್ ಆಫೀಸ್ನಲ್ಲಿ ತೆರೆಯಬಹುದು. ಈ ಸ್ಕೀಮ್ನಲ್ಲಿ ಮಾಡುವ ಹೂಡಿಕೆಗೆ ತೆರಿಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ