New IMPS Rules: ಫೆ. 1ರಿಂದ ಹೊಸ ಐಎಂಪಿಎಸ್ ನಿಯಮ; ಹಣ ಪಾವತಿ ವ್ಯವಸ್ಥೆ ಇನ್ನಷ್ಟು ಸರಳ ಹಾಗೂ ಉಪಯುಕ್ತ
Immediate Payment Service: ಇಮೀಡಿಯೇಟ್ ಪೇಮೆಂಟ್ ಸರ್ವಿಸ್ ಅಥವಾ ಐಎಂಪಿಎಸ್ ಪಾವತಿ ವಿಧಾನದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಬೆನಿಫಿಶಿಯರಿ ಸೇರಿಸದೆಯೇ ಐದು ಲಕ್ಷ ರೂವರೆಗೆ ಹಣ ವರ್ಗಾವಣೆ ಮಾಡಬಹುದು. ಫೆಬ್ರುವರಿ 1ರಿಂದ ಹೊಸ ಐಎಂಪಿಎಸ್ ಪಾವತಿ ನಿಯಮ ಜಾರಿಗೆ ಬರುತ್ತವೆ.
ನವದೆಹಲಿ, ಜನವರಿ 29: ಭಾರತದಲ್ಲಿ ಹಲವು ಆನ್ಲೈನ್ ಹಣ ಪಾವತಿ (digial payment method) ವಿಧಾನಗಳಿವೆ. ಯುಪಿಐ, ಎನ್ಇಎಫ್ಟಿ, ಐಎಂಪಿಎಸ್ ಇತ್ಯಾದಿಗಳೂ ಸೇರಿವೆ. ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಈಗಲೂ ಜನರು ಎನ್ಇಎಫ್ಟಿ, ಆರ್ಟಿಜಿಎಸ್ ಮತ್ತು ಐಎಂಪಿಎಸ್ ಉಪಯೋಗಿಸುತ್ತಾರೆ. ಐಎಂಪಿಎಸ್ ಅಥವಾ ಇಮೀಡಿಯೇಟ್ ಪೇಮೆಂಟ್ ಸರ್ವಿಸ್ (IMPS- Immediate Payment Services) ಮೂಲಕ ಕ್ಷಿಪ್ರವಾಗಿ ಹಣ ವರ್ಗಾವಣೆ ಮಾಡಬಹುದು. ಎನ್ಇಎಫ್ಟಿ, ಆರ್ಟಿಜಿಎಸ್ನಲ್ಲಿ ಹಣ ಕಳುಹಿಸಿದರೆ ತಲುಪಲು ಕೆಲ ಗಂಟೆಗಳಾಗಬಹುದು. ಆದರೆ, ಐಎಂಪಿಎಸ್ನಲ್ಲಿ ತತ್ಕ್ಷಣವೇ ಹಣ ವರ್ಗಾವಣೆ ಆಗುತ್ತದೆ. ಇದೀಗ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಐಎಂಪಿಎಸ್ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿದೆ.
ಎನ್ಇಎಫ್ಟಿ ಮತ್ತು ಐಎಂಪಿಎಸ್ನಲ್ಲಿ ಬೆನಿಫಿಶಿಯರಿ ಸೇರಿಸಬೇಕು. ಹಣ ಕಳುಹಿಸಲಾಗುವ ವ್ಯಕ್ತಿಯ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಇತ್ಯಾದಿ ಹಾಕಬೇಕು. ಆದರೆ, ಈಗ ಮಾಡಲಾಗಿರುವ ಹೊಸ ನಿಯಮದ ಪ್ರಕಾರ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್ಎಸ್ಸಿ ಕೋಡ್ ಹಾಕುವ ಅವಶ್ಯಕತೆ ಇಲ್ಲ. ಬೆನಿಫಿಶಿಯರಿ ಸೇರಿಸುವ ಅಗತ್ಯವೂ ಇಲ್ಲ. ಹಣ ಸ್ವೀಕರಿಸುವ ವ್ಯಕ್ತಿಯ ನೊಂದಾಯಿತ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಹೆಸರನ್ನು ಮಾತ್ರ ಹಾಕಿದರಾಯಿತು. ಈ ರೀತಿಯಾಗಿ 5 ಲಕ್ಷ ರೂವರೆಗಿನ ಹಣದ ವರ್ಗಾವಣೆ ಮಾಡಬಹುದು. ಫೆಬ್ರುವರಿ 1ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತದೆ.
ಇದನ್ನೂ ಓದಿ: Crore in 5 Years: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?
ಐಎಂಪಿಎಸ್ನಲ್ಲಿ ಹಣ ಕಳುಹಿಸುವಾಗ ಬ್ಯಾಂಕ್ ಖಾತೆ ಸರಿಯಾಗಿದೆಯಾ ಎಂಬುದನ್ನು ಪರಿಶೀಲಿಸಬಹುದು. ತಪ್ಪಾಗಿ ಹಣ ವರ್ಗಾವಣೆ ಆಗುವುದನ್ನು ತಪ್ಪಿಸಲು ಇದರಿಂದ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಮ್ಯಾಪಿಂಗ್ ಮಾಡುವಂತೆ ಎನ್ಪಿಸಿಐ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು. ಐಎಂಪಿಎಸ್ ಸೇವೆ ನಿತ್ಯ 24 ಗಂಟೆಯೂ ಲಭ್ಯ ಇರುತ್ತದೆ.
ಐಎಂಪಿಎಸ್ ಹೇಗೆ ಬಳಸುವುದು?
- ಮೊದಲಿಗೆ ನಿಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್ನ ಮೊಬೈಲ್ ಆ್ಯಪ್ಗೆ ಹೋಗಿ
- ಫಂಡ್ ಟ್ರಾನ್ಸ್ಫರ್ ಸೆಕ್ಷನ್ ಒತ್ತಿರಿ
- ಫಂಡ್ ಟ್ರಾನ್ಸ್ಫರ್ಗೆ ಆದ್ಯತಾ ವಿಧಾನವಾವಾಗಿ ಐಎಂಪಿಎಸ್ ಅನ್ನು ಆಯ್ಕೆ ಮಾಡಿ.
- ಹಣ ಸ್ವೀಕರಿಸುವವರು ಮೊಬೈಲ್ ನಂಬರ್ ಮತ್ತು ಅವರ ಬ್ಯಾಂಕ್ ಹೆಸರನ್ನು ನಮೂದಿಸಿ.
- ಐದು ಲಕ್ಷ ರೂ ಒಳಗಿನ ಹಣದ ಮೊತ್ತವನ್ನು ನಮೂದಿಸಿ.
- ಬಳಿಕ ಕನ್ಫರ್ಮ್ ಅನ್ನು ಒತ್ತಿರಿ
- ಒಟಿಪಿ ಪಡೆದು ಮುಂದುವರಿಯಿರಿ.
ಇದನ್ನೂ ಓದಿ: NPS: ಎನ್ಪಿಎಸ್ನಲ್ಲಿ ನಿಮ್ಮ ಹಣ ತೊಡಗಿಸಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಆನ್ಲೈನ್ನಲ್ಲಿ ಈ ಸ್ಕೀಮ್ ಪಡೆಯುವುದು ಹೇಗೆ?
ಒಂದು ಮೊಬೈಲ್ ನಂಬರ್ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಲಿಂಕ್ ಆಗಿದ್ದಿರಬಹುದು. ಯುಪಿಐನಲ್ಲಿ ಇರುವಂತೆ ಪ್ರೈಮರಿ ಖಾತೆ ಅಥವಾ ಡೀಫಾಲ್ಟ್ ಖಾತೆಯೊಂದನ್ನು ನಮೂದಿಸಲಾಗಿರುತ್ತದೆ. ಐಎಂಪಿಎಸ್ ಮೂಲಕ ಮೊಬೈಲ್ ನಂಬರ್ಗೆ ಹಣ ಕಳುಹಿಸಲಾದರೆ ಅದು ಡೀಫಾಲ್ಟ್ ಬ್ಯಾಂಕ್ ಖಾತೆಗೆ ಹೋಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ