ನವದೆಹಲಿ, ಸೆಪ್ಟೆಂಬರ್ 30: ಅಂಚೆ ಕಚೇರಿಗಳ ಮೂಲಕ ನಡೆಸಲಾಗುವ ನ್ಯಾಷನಲ್ ಸ್ಮಾಲ್ ಸೇವಿಂಗ್ಸ್ ಯೋಜನೆಗಳ ಅಡಿಯಲ್ಲಿ ತೆರೆಯಲಾದ ವಿವಿಧ ಖಾತೆಗಳಿಗೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಬಡ್ಡಿದರದಲ್ಲಿ ಅಲ್ಲ, ನಿಯಮ ಪ್ರಕಾರ ಇಲ್ಲದ ಖಾತೆಗಳನ್ನು ರೆಗ್ಯುಲರೈಸ್ ಮಾಡುವ ದೃಷ್ಟಿಯಿಂದ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಕೆಲ ನಿಯಮ ಬದಲಾವಣೆ ಮಾಡಿ ಆಗಸ್ಟ್ ತಿಂಗಳಲ್ಲಿ ಸುತ್ತೋಲೆ ಹೊರಡಿಸಿದೆ. ಅದರ ಪ್ರಕಾರ, ಅಕ್ಟೋಬರ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ನಲ್ಲಿ ಒಬ್ಬರೇ ವ್ಯಕ್ತಿಯಿಂದ ಎರಡು ಖಾತೆಗಳನ್ನು ಶುರು ಮಾಡಲಾಗಿದ್ದರೆ ಮೊದಲು ತೆರೆದ ಖಾತೆಯನ್ನು ಮಾನ್ಯ ಮಾಡಲಾಗುತ್ತದೆ. ಎರಡನೇ ಖಾತೆಗೆ ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ನ ದರದ ಪ್ರಕಾರ ಬಡ್ಡಿ ಹಾಗೂ ಶೇ. 2ರಷ್ಟು ಹೆಚ್ಚುವರಿ ಬಡ್ಡಿಯನ್ನು ಕೊಡಲಾಗುತ್ತದೆ.
ಇಲ್ಲಿ ಎನ್ಎಸ್ಎಸ್ ಖಾತೆಗೆ ನಿಗದಿ ಮಾಡಲಾಗಿರುವ ವಾರ್ಷಿಕ ಠೇವಣಿ ಮಿತಿಯೊಳಗೆ ಇರುವ ಹಣಕ್ಕೆ ಮಾತ್ರವೇ ಬಡ್ಡಿ ಸಿಗುತ್ತದೆ. ಹೆಚ್ಚುವರಿ ಹಣವಿದ್ದರೆ ಬಡ್ಡಿ ಇಲ್ಲದೇ ಕೇವಲ ಅಸಲು ಹಣವನ್ನು ಹೂಡಿಕೆದಾರರಿಗೆ ಮರಳಿಸಲಾಗುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಮ್ಗಿಂತಲೂ ಒಂದೂವರೆ ಪಟ್ಟು ಹೆಚ್ಚು ಆದಾಯ; ಟ್ಯಾಕ್ಸ್ ಕಟ್ಟಬೇಕಿಲ್ಲ; ಇಲ್ಲಿದೆ ಎಸ್ಡಬ್ಲ್ಯುಪಿ ಟ್ರಿಕ್ಸ್
ಅಪ್ರಾಪ್ತರ ಹೆಸರಿನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ತೆರೆದಿದ್ದರೆ ಅದಕ್ಕೆ ರೆಗ್ಯುಲರ್ ಸ್ಕೀಮ್ ಪ್ರಕಾರ ಬಡ್ಡಿ ಸಿಗುವುದಿಲ್ಲ. ಇದನ್ನು ಇರೆಗ್ಯುಲರ್ ಅಕೌಂಟ್ ಎಂದು ಪರಿಗಣಿಸಲಾಗುತ್ತದೆ. ಸೇವಿಂಗ್ಸ್ ಅಕೌಂಟ್ನ ಬಡ್ಡಿದರ ಮಾತ್ರವೇ ಅನ್ವಯ ಆಗುತ್ತದೆ. ಮಗುವಿನ ವಯಸ್ಸು 18 ವರ್ಷ ಆದ ಬಳಿಕ ಆ ಖಾತೆಯು ರೆಗ್ಯುಲರ್ ಆಗುತ್ತದೆ. ಸರಿಯಾದ ಬಡ್ಡಿದರ ಅನ್ವಯ ಆಗುತ್ತದೆ. 18 ವರ್ಷ ವಯಸ್ಸಿನಿಂದಲೇ ಮೆಚ್ಯೂರಿಟಿ ಅವಧಿಯ ಲೆಕ್ಕ ಶುರುವಾಗುತ್ತದೆ.
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪಿಪಿಎಫ್ ಖಾತೆ ತೆರೆಯಲು ಅವಕಾಶ ಇದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಅಕೌಂಟ್ಗಳನ್ನು ಶುರು ಮಾಡಿದ್ದರೆ ಆಗ ಪ್ರಾಥಮಿಕ ಅಕೌಂಟ್ಗೆ ರೆಗ್ಯುಲರ್ ಇಂಟರೆಸ್ಟ್ ಸಿಗುತ್ತದೆ. ಇತರ ಖಾತೆಗಳನ್ನು ಪ್ರೈಮರಿ ಅಕೌಂಟ್ನೊಂದಿಗೆ ವಿಲೀನ ಮಾಡಲಾಗುತ್ತದೆ. ಇಲ್ಲಿ ನೀವು ಪಿಪಿಎಫ್ಗೆ ವಾರ್ಷಿಕ ಹೂಡಿಕೆ ಮಿತಿ ಒಂದೂವರೆ ಲಕ್ಷ ರೂ ಇದೆ. ಬಹುಖಾತೆಗಳಿದ್ದು ಎಲ್ಲೆಡೆ ಮಾಡಲಾಗಿರುವ ಒಟ್ಟಾರೆ ಹೂಡಿಕೆಯು ಈ ಮಿತಿಗಿಂತ ಹೆಚ್ಚು ಇದ್ದಲ್ಲಿ, ಹೆಚ್ಚುವರಿ ಹಣವನ್ನು ಬಡ್ಡಿರಹಿತವಾಗಿ ಮರಳಿಸಲಾಗುತ್ತದೆ.
ಅನಿವಾಸಿ ಭಾರತೀಯರಿಗೆ ಈಗ ಪಿಪಿಎಫ್ ಸ್ಕೀಮ್ ಲಭ್ಯ ಇಲ್ಲ. ಆದರೆ, 1968ರ ಪಿಪಿಎಫ್ ಸ್ಕೀಮ್ ಅಡಿಯಲ್ಲಿ ಫಾರ್ಮ್ ಎಚ್ನಲ್ಲಿ ವಾಸಸ್ಥಳವನ್ನು ಕೇಳಲಾಗುತ್ತಿರಲಿಲ್ಲ. ಆಗ ಎನ್ಆರ್ಐಗಳೂ ಪಿಪಿಎಫ್ ಅಕೌಂಟ್ ತೆರೆಯಬಹುದಿತ್ತು. ಅಂಥ ಸಂದರ್ಭದಲ್ಲಿ ಎನ್ಆರ್ಐಗಳು ಪಿಪಿಎಫ್ ಖಾತೆ ತೆರೆದಿದ್ದರೂ ಅದನ್ನು ರೆಗ್ಯುಲರ್ ಅಕೌಂಟ್ ಎಂದು ಮಾನ್ಯ ಮಾಡಲಾಗುವುದಿಲ್ಲ. ಈಗಲೂ ಆ ಖಾತೆ ಸಕ್ರಿಯವಾಗಿದ್ದರೆ ಸೇವಿಂಗ್ಸ್ ಅಕೌಂಟ್ನ ಬಡ್ಡಿದರ ಮಾತ್ರವೇ ನೀಡಲಾಗುತ್ತದೆ. ಅಕ್ಟೋಬರ್ 1ರಿಂದ ಅದೂ ಕೂಡ ಸಿಗುವುದಿಲ್ಲ.
ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್, ಎಫ್ ಅಂಡ್ ಒ, ಮ್ಯೂಚುವಲ್ ಫಂಡ್ ಇತ್ಯಾದಿಗಳಿಗೆ ತೆರಿಗೆಯಲ್ಲಿ ಬದಲಾವಣೆ
ಸುಕನ್ಯ ಸಮೃದ್ಧಿ ಯೋಜನೆಯನ್ನು ಅಪ್ರಾಪ್ತ ವಯಸ್ಸಿನ ಹೆಣ್ಮಕ್ಕಳ ಹೆಸರಿನಲ್ಲಿ ಅವರ ಪಾಲಕರು ಆರಂಭಿಸಬಹುದು. ಆದರೆ, ಹೆಣ್ಮಗುವಿನ ತಂದೆ ಅಥವಾ ತಾಯಿಯನ್ನು ಸಹಜ ಪಾಲಕರೆಂದು ಪರಿಗಣಿಸಲಾಗುತ್ತದೆ. ಅಜ್ಜ ಅಥವಾ ಅಜ್ಜಿಯನ್ನು ನ್ಯಾಚುರಲ್ ಗಾರ್ಡಿಯನ್ ಎಂದು ಪರಿಗಣಿಸಲಾಗುವುದಿಲ್ಲ. ಒಂದು ವೇಳೆ ಇವರ ಹೆಸರಿನಲ್ಲಿ ಸುಕನ್ಯ ಸಮೃದ್ಧಿ ಅಕೌಂಟ್ ತೆರೆಯಲಾಗಿದ್ದರೆ ಅದನ್ನು ನ್ಯಾಚುರಲ್ ಗಾರ್ಡಿಯನ್ ಅಥವಾ ಲೀಗಲ್ ಗಾರ್ಡಿಯನ್ಗೆ ವರ್ಗಾಯಿಸಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ