RBI: ಸಹಕಾರಿ ಬ್ಯಾಂಕುಗಳಿಗೂ ಲೋನ್ ರೈಟಾಫ್, ರಾಜೀ ಸಂಧಾನಕ್ಕೆ ಸಿಗಲಿದೆ ಅವಕಾಶ; ಎನ್ಪಿಎ, ರೈಟ್ ಆಫ್, ಸಾಲಮನ್ನಾ ಏನು ವ್ಯತ್ಯಾಸ?
RBI Decision on NPA: ಈಗ ಸಹಕಾರಿ ಬ್ಯಾಂಕು ಮತ್ತು ಸಹಕಾರಿ ಸಂಸ್ಥೆಗಳಿಗೂ ಕೂಡ ಎನ್ಪಿಎ ಸಾಲಗಳನ್ನು ಕೈಬಿಡುವ ಅವಕಾಶ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಯೋಜಿಸಿದೆ. ಸಂಕಷ್ಟದ ಆಸ್ತಿಗಳ ಸಮಸ್ಯೆ ಇತ್ಯರ್ಥಕ್ಕೆ ರೂಪಿಸಿರುವ ಚೌಕಟ್ಟಿನ ವ್ಯಾಪ್ತಿಯನ್ನು ಹೆಚ್ಚಿಸಲು ಆರ್ಬಿಐ ನಿರ್ಧರಿಸಿದೆ.
ಮುಂಬೈ: ಎನ್ಪಿಎ ಅಥವಾ ಅನುತ್ಪಾದಕ ಸಾಲವು (NPA- Non Performing Assets) ಯಾವುದೇ ಬ್ಯಾಂಕುಗಳಿಗೆ ತಲೆನೋವಾಗುವ ಆಸ್ತಿ. ಇದರ ಹೊರೆ ಹೆಚ್ಚಿದಷ್ಟೂ ಬ್ಯಾಂಕುಗಳು ಬಳಲಿ ಬೆಂಡಾಗುತ್ತವೆ. ಮರುಪಾವತಿ ಆಗದೇ ಉಳಿದ ಸಾಲವನ್ನು ತಾಂತ್ರಿಕವಾಗಿ ಕೈಬಿಡಲು, ಅಂದರೆ ರೈಟ್ ಆಫ್ (Loan Write Off) ಮಾಡಲು ಬ್ಯಾಂಕುಗಳಿಗೆ ಅವಕಾಶ ಇದೆ. ಎಲ್ಲಾ ಬ್ಯಾಂಕುಗಳು ಹಾಗೆಯೇ ಮಾಡುತ್ತವೆ. ಆದರೆ ಸಹಕಾರಿ ಬ್ಯಾಂಕುಗಳಿಗೆ ಈ ಅವಕಾಶ ಇಲ್ಲ. ಅದರ ಕಡತಗಳಲ್ಲಿ ಇದು ನಷ್ಟ ಎಂದು ದಾಖಲಾಗುತ್ತಲೇ ಇರುತ್ತದೆ. ಈಗ ಸಹಕಾರಿ ಬ್ಯಾಂಕು ಮತ್ತು ಸಹಕಾರಿ ಸಂಸ್ಥೆಗಳಿಗೂ ಕೂಡ ಎನ್ಪಿಎ ಸಾಲಗಳನ್ನು ಕೈಬಿಡುವ ಅವಕಾಶ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಯೋಜಿಸಿದೆ. ಸಂಕಷ್ಟದ ಆಸ್ತಿಗಳ ಸಮಸ್ಯೆ ಇತ್ಯರ್ಥಕ್ಕೆ ರೂಪಿಸಿರುವ ಚೌಕಟ್ಟಿನ ವ್ಯಾಪ್ತಿಯನ್ನು ಹೆಚ್ಚಿಸಲು ಆರ್ಬಿಐ ನಿರ್ಧರಿಸಿದೆ. ಅದರಂತೆ ಅನುತ್ಪಾದಕ ಸಾಲವನ್ನು ತಾಂತ್ರಿಕವಾಗಿ ಕೈಬಿಡಲು ಮತ್ತು ಸಾಲ ಪಡೆದವರ ಜೊತೆ ಮರುಪಾವತಿಗೆ ರಾಜೀ ಸಂಧಾನ ಮಾಡಿಕೊಳ್ಳಲು ಎಲ್ಲಾ ಆರ್ಬಿಐ ನಿಯಂತ್ರಿತ ಸಂಸ್ಥೆಗಳಿಗೆ ಅವಕಾಶ ಇದೆ. ಇದರಲ್ಲಿ ಸಹಕಾರಿ ಸಂಸ್ಥೆಗಳೂ ಒಳಗೊಂಡಿರುತ್ತವೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ.
ಇಲ್ಲಿಯವರೆಗೂ ಎನ್ಪಿಎ ಸಾಲಗಳನ್ನು ರೈಟ್ ಮಾಡುವ ಮತ್ತು ರಾಜೀ ಸಂಧಾನ ಮಾಡಿಕೊಳ್ಳುವ ಅವಕಾಶ ಸ್ಕೆಡ್ಯೂಲ್ಡ್ ಕಮರ್ಷಿನ್ ಬ್ಯಾಂಕುಗಳು ಹಾಗೂ ಕೆಲ ಆಯ್ದ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್ಬಿಎಫ್ಸಿ) ಮಾತ್ರ ಇತ್ತು. ಈಗ ಈ ಅವಕಾಶ ಎಲ್ಲಾ ರೆಗ್ಯುಲೇಟೆಡ್ ಬ್ಯಾಂಕುಗಳಿಗೂ ಸಿಗಲಿದೆ. ಈ ಸಂಬಂಧ ಆರ್ಬಿಐ ಶೀಘ್ರದಲ್ಲೇ ಸಮಗ್ರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ.
ಎನ್ಪಿಎ ಎಂದರೆ ಏನು?
ಎನ್ಪಿಎ ಅಥವಾ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಎಂದರೆ ಅನುತ್ಪಾದಕ ಸಾಲ. ಒಂದು ಬ್ಯಾಂಕಿಗೆ ಆದಾಯ ತರದ ಸಾಲ ಇದು. ಈ ಸಾಲದಿಂದ ತನಗೆ ಯಾವುದೇ ಆದಾಯ ಸಿಗಬಹುದು ಎಂಬ ನಿರೀಕ್ಷೆಯನ್ನು ಬ್ಯಾಂಕು ಕೈಬಿಟ್ಟಿದ್ದರೆ ಅದು ಎನ್ಪಿಎ ಎನಿಸುತ್ತದೆ.
ಆರ್ಬಿಐ ನೀಡಿರುವ ಅಧಿಕೃತ ವಿವರಣೆ ಪ್ರಕಾರ ತಾಂತ್ರಿಕವಾಗಿ ಒಂದು ಸಾಲವು ಎನ್ಪಿಎ ಎನಿಸಿಕೊಳ್ಳಬೇಕಾದರೆ 90 ದಿನಗಳಿಂದ, ಅಂದರೆ 3 ತಿಂಗಳಿಂದ ಸಾಲದ ಬಡ್ಡಿ ಅಥವಾ ಅಸಲು ಯಾವುದೂ ಕೂಡ ಪಾವತಿಯಾಗದೇ ಹಾಗೇ ನಿಷ್ಕ್ರಿಯವಾಗಿದ್ದರೆ ಅದು ಅನುತ್ಪಾದಕ ಸಾಲ ಎನಿಸುತ್ತದೆ.
ಲೋನ್ ರೈಟ್ ಆಫ್ಗೂ ಸಾಲ ಮನ್ನಾಕ್ಕೂ ಏನು ವ್ಯತ್ಯಾಸ
ಒಂದು ಬ್ಯಾಂಕು ಸಾಲವನ್ನು ಕೈಬಿಟ್ಟಾಗ ಅಥವಾ ಲೋನ್ ರೈಟಾಫ್ ಮಾಡಿದಾಗ ಬಹಳ ಮಂದಿ ಇದನ್ನು ಸಾಲ ಮನ್ನಾ (Loan Waiver) ಎಂದೇ ತಪ್ಪಾಗಿ ಭಾವಿಸುವುದುಂಟು. ರೈಟ್ ಆಫ್ ಎಂಬುದು ಬ್ಯಾಂಕ್ನ ಕಡತಗಳ ಲೆಕ್ಕಾಚಾರಕ್ಕೆ ಬಳಸುವ ಪದವಷ್ಟೇ ಆಗಿರುತ್ತದೆ. ಆದಾಯ ತರದ ಈ ಆಸ್ತಿಯನ್ನು ತಾಂತ್ರಿಕವಾಗಿ ಪಕ್ಕಕ್ಕೆ ತೆಗೆದಿರಿಸಲಾಗುತ್ತದೆ ಅಷ್ಟೇ.
ಒಂದು ಬ್ಯಾಂಕು ನಿಮ್ಮ ಸಾಲವನ್ನು ಕೈಬಿಟ್ಟಿತು ಎಂದರೆ ಅದು ನಿಮ್ಮ ಸಾಲ ಮನ್ನಾ ಮಾಡಿದಂತಲ್ಲ. ನೀವು ಸಾಲದ ಋಣದಿಂದ ಮುಕ್ತರಾದಂತಲ್ಲ. ನಿಮ್ಮ ಲೋನ್ ಅಕೌಂಟ್ ಜೀವಂತವಾಗಿರುತ್ತದೆ. ಕಾನೂನಾತ್ಮಕವಾಗಿ ನಿಮ್ಮ ಸಾಲವನ್ನು ಬ್ಯಾಂಕು ವಸೂಲಿ ಮಾಡಬಹುದು. ನೀವು ಯಾವುದಾದರೂ ಆಸ್ತಿಯನ್ನು ಅಡಮಾನವಾಗಿಟ್ಟಿದ್ದರೆ ಅದನ್ನು ಬಳಸಿ ಬ್ಯಾಂಕು ತನ್ನ ಹಣ ಪಡೆಯಬಹುದು.
ಇದನ್ನೂ ಓದಿ: e-RUPI: ಬ್ಯಾಂಕೇತರ ಸಂಸ್ಥೆಗಳಿಂದಲೂ ಇ-ರುಪೀ ವೋಚರ್ ವಿತರಣೆಗೆ ಅವಕಾಶ; ಏನಿದು ಇ-ರುಪೀ?
ಸಾಲ ಮನ್ನಾ ಅಥವಾ ಲೋನ್ ವೈವರ್ ಎಂದರೆ ಏನು?
ಸಾಲ ಮನ್ನಾ ಎಂಬುದು ತಾಂತ್ರಿಕವಾಗಿ ನೀವು ಸಾಲದ ಋಣದಿಂದ ಮುಕ್ತರಾದಂತೆ. ನಿಮ್ಮ ಲೋನ್ ಅಕೌಂಟ್ ಸಮಾಪ್ತಿ ಆಗುತ್ತದೆ. ಬ್ಯಾಂಕು ಮತ್ತೆ ನಿಮ್ಮಿಂದ ಸಾಲ ವಸೂಲಿ ಮಾಡಲು ಯತ್ನಿಸುವುದಿಲ್ಲ.
ಲೋನ್ ರೈಟ್ ಆಫ್ ಆದರೆ ನಿಮ್ಮ ಹಣಕಾಸು ವ್ಯವಹಾರಕ್ಕೆ ಕಪ್ಪುಚುಕ್ಕೆ
ಒಂದು ಬ್ಯಾಂಕು ನಿಮ್ಮ ಸಾಲವನ್ನು ಅನುತ್ಪಾದಕ ಆಸ್ತಿ ಎಂದು ವರ್ಗೀಕರಿಸಿಬಿಟ್ಟರೆ ಆಗ ಭವಿಷ್ಯದಲ್ಲಿ ನಿಮಗೆ ಬೇರೆ ಬ್ಯಾಂಕುಗಳು ಸಾಲ ಕೊಡಲು ನಿರಾಕರಿಸಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಪಾತಾಳ ತಲುಪಬಹುದು. ನೀವು ಯಾವುದಾದರೂ ಆಸ್ತಿಯನ್ನು ಅಡಮಾನವಾಗಿ ಇಟ್ಟು ಸೆಕ್ಯೂರ್ಡ್ ಲೋನ್ ಪಡೆಯಬಹುದು ಅಷ್ಟೇ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ