Mutual Fund SIP: 10,000 ರೂ ಎಸ್​ಐಪಿಯಿಂದ 24 ವರ್ಷದಲ್ಲಿ 4.87 ಕೋಟಿ ರೂ ಲಾಭ; ಇದು ಎಸ್​ಬಿಐ ಕಾಂಟ್ರಾ ಫಂಡ್ ಧಮಾಕ

|

Updated on: Jul 09, 2023 | 3:19 PM

SBI Contra Fund: ಎಸ್​ಬಿಐನ ಕಾಂಟ್ರಾ ಫಂಡ್ ಸ್ಕೀಮ್ ಕಳೆದ 24 ವರ್ಷದಲ್ಲಿ ಶೇ. 19ರ ಸಿಎಜಿಆರ್ ದರದಲ್ಲಿ ಬೆಳೆದಿದೆ. ಅಗಿನಿಂದ ತಿಂಗಳಿಗೆ 10,000 ರೂ ಕಟ್ಟುತ್ತಾ ಬಂದಿದ್ದರೆ ಈಗ ಸಂಗ್ರಹವಾದ ಹಣ 4.87 ಕೋಟಿ ರೂ ಆಗುತ್ತಿತ್ತು.

Mutual Fund SIP: 10,000 ರೂ ಎಸ್​ಐಪಿಯಿಂದ 24 ವರ್ಷದಲ್ಲಿ 4.87 ಕೋಟಿ ರೂ ಲಾಭ; ಇದು ಎಸ್​ಬಿಐ ಕಾಂಟ್ರಾ ಫಂಡ್ ಧಮಾಕ
ಮ್ಯೂಚುವಲ್ ಫಂಡ್
Follow us on

ಅತಿಹೆಚ್ಚು ಲಾಭ ತಂದಿರುವ ಮ್ಯೂಚುವಲ್ ಫಂಡ್​ಗಳಲ್ಲಿ ಎಸ್​ಬಿಐ ಕಾಂಟ್ರಾ ಫಂಡ್ (SBI Contra Fund) ಕೂಡ ಒಂದು. 1999ರ ಜುಲೈ ಮೊದಲ ವಾರ ಶುರುವಾದ ಈ ಮ್ಯೂಚುವಲ್ ಫಂಡ್​ಗೆ 24 ವರ್ಷವಾಯಿತು. ಇದು ಶೇ. 19ರ ವಾರ್ಷಿಕ ದರದಲ್ಲಿ (CAGR) ಈ ಮ್ಯೂಚುವಲ್ ಫಂಡ್ ಬೆಳೆದಿದೆ. 24 ವರ್ಷದಲ್ಲಿ ಇದು ಹಲವು ಪಟ್ಟು ಬೆಳೆದಿದೆ. ಎಸ್​ಬಿಐ ಕಾಂಟ್ರಾ ಫಂಡ್​ನ ನ್ಯೂ ಫಂಡ್ ಆಫರ್​ನಲ್ಲಿ (NFO) ಆಗ ಯಾರಾದರೂ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಹಣ 65.20 ಲಕ್ಷಕ್ಕೆ ಏರುತ್ತಿತ್ತು. ಅಷ್ಟರಮಟ್ಟಿಗೆ ಈ ಮ್ಯುಚುವಲ್ ಫಂಡ್ ಹೂಡಿಕೆ ಮೌಲ್ಯವನ್ನು ವೃದ್ಧಿಸಿದೆ.

ಅದೇ ನೀವು ಎಸ್​ಬಿಐ ಕಾಂಟ್ರಾ ಫಂಡ್​ನಲ್ಲಿ ಎಸ್​ಐಪಿ ಯೋಜನೆಯಲ್ಲಿ ಹಣತೊಡಗಿಸಿದ್ದರೆ ಅದ್ಭುತ ಮೊತ್ತದ ಉಳಿತಾಯ ಹಣ ನಿಮ್ಮದಾಗಿರುತ್ತಿತ್ತು. ಸಿಸ್ಟಮ್ಯಾಟಿಕ್ ಇನ್​ವೆಸ್ಟ್​ಮೆಂಟ್ ಪ್ಲಾನ್​ಲ್ಲಿ (ಎಸ್​ಐಪಿ) ಪ್ರತೀ ತಿಂಗಳು ನೀವು 10,000 ರೂ ಹೂಡಿಕೆ ಮಾಡುತ್ತಾ ಬಂದಿದ್ದರೆ ಈ 24 ವರ್ಷದಲ್ಲಿ ಒಟ್ಟುಗೂಡುತ್ತಿದ್ದ ಸಂಪತ್ತು 4.87 ಕೋಟಿ ರೂ ಆಗುತ್ತಿತ್ತು. ಗಮನಿಸಿ, ತಿಂಗಳಿಗೆ 10,000 ರೂನಂತೆ ನೀವು 24 ವರ್ಷದಲ್ಲಿ ಕಟ್ಟುವ ಒಟ್ಟು ಮೊತ್ತ 28,80,000 ರೂ ಆಗುತ್ತದೆ. ಈ ನಿಮ್ಮ 28.8 ಲಕ್ಷ ರೂ ಮೊತ್ತ ಹೆಚ್ಚೂಕಡಿಮೆ 5 ಕೋಟಿಯಾಗಿ ಬೆಳೆದಿದೆ.

ಇದನ್ನೂ ಓದಿBSE 148 Years: ಆಲದ ಮರದ ಕೆಳಗೆ ಶುರುವಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ 148 ವರ್ಷಗಳ ಇಂಟರೆಸ್ಟಿಂಗ್ ಇತಿಹಾಸ

ಎಸ್​ಬಿಐ ಕಾಂಟ್ರಾ ಫಂಡ್ ಕಳೆದ 3 ವರ್ಷದಲ್ಲಂತೂ ಅದ್ಭುತವಾಗಿ ಬೆಳೆದಿದೆ. ಇದರ ಡೈರೆಕ್ಟ್ ಪ್ಲಾನ್​ನಲ್ಲಿ ಕಳೆದ 3 ವರ್ಷದಲ್ಲಿ ಶೇ. 41.29ರ ವಾರ್ಷಕ ದರದಲ್ಲಿ ಹಣ ಬೆಳೆದಿದೆ. ದಿನೇಶ್ ಬಾಲಚಂದ್ರನ್ ಮತ್ತು ಮೋಹಿತ್ ಜೈನ್ ಅವರು ಇದರ ಫಂಡ್ ಮ್ಯಾನೇಜರ್​ಗಳಾಗಿದ್ದಾರೆ.

ಎಸ್​ಬಿಐ ಕಾಂಟ್ರಾ ಫಂಡ್ ಒಟ್ಟು 11,000 ಕೋಟಿ ರೂಗೂ ಹೆಚ್ಚು ಮೊತ್ತದ ಹೂಡಿಕೆಯನ್ನು ನಿಭಾಯಿಸುತ್ತದೆ. ಇದರ ಹಣವನ್ನು ಗೇಲ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರ, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕಾಗ್ನೈಜೆಂಟ್ ಟೆಕ್ನಾಲಜಿ, ಟಾರೆಂಟ್ ಪವರ್ ಲಿ, ಪವರ್ ಗ್ರಿಡ್ ಕಾರ್ಪೊರೇಷನ್, ಎಚ್​ಡಿಎಫ್​ಸಿ ಸಂಸ್ಥೆಗಳ ಷೇರುಗಳ ಮೇಲೆ ಹೂಡಿಕೆ ಮಾಡಲಾಗಿದೆ. ಈ ಬಹುತೇಕ ಷೇರುಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಸಿವೆ.

ಕಾಂಟ್ರಾ ಫಂಡ್​ಗಳೇಕೆ ಗಮನ ಸೆಳೆಯುತ್ತವೆ?

ಮ್ಯೂಚುವಲ್ ಫಂಡ್​ಗಳಲ್ಲಿ ಕಾಂಟ್ರಾ ಫಂಡ್​ಗಳ ವೈಶಿಷ್ಟ್ಯತೆ ತುಸು ಭಿನ್ನ. ಇವು ಅಲೆಗೆ ವಿರುದ್ಧವಾಗಿ ಈಜುವಂತಹವು. ಹೆಚ್ಚು ಟ್ರೆಂಡಿಂಗ್​ನಲ್ಲಿ ಇಲ್ಲದ ಆದರೆ ಭವಿಷ್ಯದಲ್ಲಿ ಬೆಳೆಯುವ ಅಗಾಧ ಶಕ್ತಿ ಹೊಂದಿರುವ ಸಂಸ್ಥೆಗಳ ಷೇರುಗಳ ಮೇಲೆ ಈ ಫಂಡ್​ನ ಹಣ ಹೂಡಿಕೆ ಆಗುತ್ತದೆ. ಈಗಿನ ಟ್ರೆಂಡ್​ಗಿಂತ ಮ್ಯಾಕ್ರೋ ಟ್ರೆಂಡ್ ಮುಖ್ಯ ಎಂದು ಭಾವಿಸುವವರು ಮತ್ತು ಹೆಚ್ಚು ರಿಸ್ಕ್ ಇದ್ದರೂ ಲಾಭ ಹೆಚ್ಚು ಇರುವ ಸಾಧ್ಯತೆಯನ್ನು ಕಾಣುವವರು ಇಂಥ ಫಂಡ್​ಗಳಲ್ಲಿ ಹಣ ತೊಡಗಿಸಿಕೊಳ್ಳುತ್ತಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Sun, 9 July 23