ನೀವು ಈಕ್ವಿಟಿ, ಠೇವಣಿ ಇತ್ಯಾದಿ ಕಡೆ ಸಾಕಷ್ಟು ಹೂಡಿಕೆ ಮಾಡಿರಬಹುದು. ಆದರೂ ನಿಮ್ಮ ಬಳಿ ಲೈಫ್ ಇನ್ಷೂರೆನ್ಸ್ ಅಥವಾ ಟರ್ಮ್ ಲೈಫ್ ಇನ್ಷೂರೆನ್ಸ್ (Term Life Insurance) ಇರುವುದು ಉತ್ತಮ ಎಂದು ಬಹಳಷ್ಟು ಹಣಕಾಸು ಸಲಹೆಗಾರರು ಅಭಿಪ್ರಾಯಪಡುತ್ತಾರೆ. ಇನ್ಷೂರೆನ್ಸ್ನಿಂದ ನಿಮ್ಮ ಹಣ ಈಕ್ವಿಟಿಯಲ್ಲಿಯಂತೆ ಮಿಂಚಿನಂತೆ ಬೆಳೆಯುವುದಿಲ್ಲವಾದರೂ ನಿಮ್ಮ ಕುಟುಂಬಕ್ಕೆ ಸುರಕ್ಷಾ ಕವಚದಂತೆ ಇರುತ್ತದೆ. ಆದ್ದರಿಂದ ಜೀವ ವಿಮೆಯನ್ನು ತಪ್ಪದೇ ಮಾಡಿಸುವುದು ಉತ್ತಮ.
ಈಗೇನೋ ನೀವು ಜೀವಂತ ಇದ್ದೀರಿ. ಚೆನ್ನಾಗಿ ಗಳಿಕೆ ಮಾಡುತ್ತಲೂ ಇದ್ದೀರಿ. ಈಗ ನೀವು ಮನೆ ಖರ್ಚುವೆಚ್ಚಗಳನ್ನೆಲ್ಲ ನೀವೇ ನೋಡಿಕೊಳ್ಳಬಹುದು. ಆದರೆ ಒಂದು ವೇಳೆ ನಾಳೆ ನಿಮಗೆ ಏನಾದರೂ ಆದರೆ? ಯಾರು ನಿಮ್ಮ ಸ್ಥಾನದಲ್ಲಿ ನಿಂತು ಮನೆ ಖರ್ಚು ವೆಚ್ಚ ನೋಡಿಕೊಳ್ಳುತ್ತಾರೆ? ಮಕ್ಕಳ ಶಾಲೆ ಫೀಸ್ ತುಂಬೋದು ಯಾರು? ಈ ಪ್ರಶ್ನೆಗೆ ಉತ್ತರವನ್ನು ಲೈಫ್ ಇನ್ಶೂರೆನ್ಸ್ ಕೊಡುತ್ತದೆ. ಅದರಲ್ಲೂ ಟರ್ಮ್ ಇನ್ಶುರೆನ್ಸ್ ಇದಕ್ಕೆ ಅತ್ಯಂತ ಸೂಕ್ತ. ತಜ್ಞರ ಪ್ರಕಾರ ನಿಮ್ಮ ಒಂದು ವರ್ಷದ ಆದಾಯದ ಹತ್ತು ಪಟ್ಟು ಹಣಕ್ಕೆ ಇನ್ಷೂರೆನ್ಸ್ ಕವರೇಜ್ ಮಾಡಿಸಿರಬೇಕು.
ಒಂದು ಟರ್ಮ್ ಇನ್ಶುರೆನ್ಸ್ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದರೆ ಕೆಲವು ಸಂಗತಿಗಳನ್ನು ನೀವು ಚೆಕ್ ಮಾಡಿಕೊಳ್ಳಬೇಕು. ನಿಮಗೆ ಅದರ ಬಗ್ಗೆ ಗೊತ್ತಿಲ್ಲ ಎಂದಾದರೆ, ಟರ್ಮ್ ಇನ್ಶುರೆನ್ಸ್ ಎಂದರೆ ಏನು ಮತ್ತು ಅದು ಯಾಕೆ ಮುಖ್ಯ ಎಂದು ತಿಳಿದುಕೊಳ್ಳಬೇಕು.
ಟರ್ಮ್ ಇನ್ಶುರೆನ್ಸ್ ಎಂಬುದು ಲೈಫ್ ಇನ್ಶುರೆನ್ಸ್‌ನ ಬೇಸಿಕ್ ಪ್ಲಾನ್. ಆದರೆ, ಇದು ಅತ್ಯಂತ ಪವರ್‌ಫುಲ್ ಪ್ರಾಡಕ್ಟ್. ಇದು ದೀರ್ಘ ಅವಧಿಯವರೆಗೆ ಕೈಗೆಟಕುವ ದರದಲ್ಲಿ ವಿಸ್ತೃತ ಕವರೇಜ್ ಒದಗಿಸುತ್ತದೆ. 10,20 ಅಥವಾ 30 ವರ್ಷಗಳವರೆಗೆ ಫಿಕ್ಸೆಡ್ ಟರ್ಮ್‌ಗೆ ಪ್ರತಿ ವರ್ಷ ಪ್ರೀಮಿಯಂ ಪೇ ಮಾಡಬೇಕು. ಪಾಲಿಸಿ ಅವಧಿಯಲ್ಲಿ ಏನಾದರೂ ದುರದೃಷ್ಟಕರ ಘಟನೆ ನಡೆದರೆ, ನಾಮಿನೇಟ್ ಮಾಡಿದ ಕುಟುಂಬದ ಸದಸ್ಯರಿಗೆ ಇನ್ಶುರೆನ್ಸ್ ಕವರೇಜ್ ಮೊತ್ತ ಸಿಗುತ್ತದೆ.
ಇದನ್ನೂ ಓದಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್ನ ಲಾಕ್ ಇನ್ ಅವಧಿ ಐದರಿಂದ ಮೂರು ವರ್ಷಕ್ಕೆ ಇಳಿಸಲು ಬ್ಯಾಂಕುಗಳು ಸಜ್ಜು
ಪ್ರತಿಯೊಬ್ಬರೂ ಟರ್ಮ್ ಇನ್ಶುರೆನ್ಸ್ ತೆಗೆದುಕೊಳ್ಳಬೇಕು. ವ್ಯಕ್ತಿಯ ಮರಣಾನಂತರ ಇದು ಕುಟುಂಬಕ್ಕೆ ಹಣಕಾಸು ಸುರಕ್ಷತೆಯನ್ನು ನೀಡುತ್ತದೆ. ಮನೆ ವೆಚ್ಚ, ಮಕ್ಕಳ ಶಿಕ್ಷಣ, ವಿವಾಹ ಮತ್ತು ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಈ ವಿಮೆ ಹಣವನ್ನು ಕುಟುಂಬವು ಬಳಸಬಹುದು. ಟರ್ಮ್ ಇನ್ಶುರೆನ್ಸ್ ಅತ್ಯಂತ ಮುಖ್ಯ. ಅದರಲ್ಲೂ, ಕುಟುಂಬದಲ್ಲಿ ನೀವೊಬ್ಬರೇ ಗಳಿಸುವವರಾಗಿದ್ದರೆ ಇದು ಅತ್ಯಂತ ಅಗತ್ಯ.
ಯುವಕರು ತಮ್ಮ ವೃತ್ತಿಯನ್ನು ಆರಂಭಿಸಿದಾಗಲೇ ಟರ್ಮ್ ಇನ್ಶುರೆನ್ಸ್ ತೆಗೆದುಕೊಳ್ಳಬೇಕು. ಕಡಿಮೆ ವಯಸ್ಸಿನಲ್ಲಿ ಇನ್ಶುರೆನ್ಸ್ ಖರೀದಿಸಿದರೆ ಪ್ರೀಮಿಯಂ ಕಡಿಮೆ ಇರುತ್ತದೆ. ಈ ಪ್ರೀಮಿಯಂಗಳು ಇಡೀ ಪಾಲಿಸಿ ಅವಧಿಯಲ್ಲಿ ಒಂದೇ ರೀತಿ ಇರುತ್ತವೆ. ಇಲ್ಲವಾದರೆ, ವಯಸ್ಸು ಹೆಚ್ಚುತ್ತಿದ್ದ ಹಾಗೆಯೇ ಪ್ರೀಮಿಯಂ ಗ್ರಾಫ್ ಕೂಡ ಏರಿಕೆಯಾಗುತ್ತದೆ. ಇದನ್ನು ಒಂದು ಉದಾಹರಣೆಯ ಮೂಲಕ ನೋಡೋಣ. ಪಾಲಿಸಿ ಬಜಾರ್ ವೆಬ್‌ಸೈಟ್ ಪ್ರಕಾರ, ನೀವು 25 ವರ್ಷದಲ್ಲಿ 1 ಕೋಟಿ ರೂ. ಐಸಿಐಸಿಐ ಪ್ರುಡೆನ್ಷಿಯಲ್‌ನ ಐಪ್ರೊಟೆಕ್ಟ್ ಸ್ಮಾರ್ಟ್ ಟರ್ಮ್ ಪ್ಲಾನ್ ಅನ್ನು ಖರೀದಿ ಮಾಡಿದರೆ, ವಾರ್ಷಿಕ ಪ್ರೀಮಿಯಂ 10,856 ರೂ. ಆಗಿರುತ್ತದೆ. ಆದರೆ, ಇದೇ ಪ್ಲಾನ್ ಅನ್ನು ನೀವು 33 ನೇ ವರ್ಷದಲ್ಲಿ ತೆಗೆದುಕೊಂಡರೆ ಅದಕ್ಕೆ 14,241 ರೂ. ಪ್ರೀಮಿಯಂ ಕಟ್ಟಬೇಕಾಗುತ್ತದೆ.
ಟರ್ಮ್ ಇನ್ಶುರೆನ್ಸ್‌ನಂತಹ ಶುದ್ಧ ಜೀವ ವಿಮೆಯನ್ನು ಜನರು ಯಾಕೆ ಖರೀದಿ ಮಾಡುವುದಿಲ್ಲ ಎಂದು ತಿಳಿದುಕೊಳ್ಳಬೇಕು. ವಾಸ್ತವಾಗಿ, ಟರ್ಮ್ ಇನ್ಶುರೆನ್ಸ್‌ನಲ್ಲಿ, ಪಾಲಿಸಿ ಮುಗಿಯುವವರೆಗೂ ನಾವು ಬದುಕಿದ್ದರೆ ನಮಗೆ ಏನೂ ಸಿಗುವುದಿಲ್ಲ. ಅಲ್ಲಿಯವರೆಗೆ ಹಾಕಿದ ಹಣವೆಲ್ಲ ಹೋಗಿಬಿಡುತ್ತದೆ. ಹೀಗಾಗಿ, ಯಾಕೆ ಟರ್ಮ್ ಇನ್ಶುರೆನ್ಸ್ ತಗೋಬೇಕು ಎಂಬ ಭಾವ ಜನರಲ್ಲಿದೆ. ಇದರಿಂದಾಗಿ, ಕಂಪನಿಗಳು ಹೆಚ್ಚಾಗಿ ಪ್ರೀಮಿಯಂ ವಾಪಸ್ ಬರುತ್ತದೆ ಅಥವಾ ಲೈಫ್ ಇನ್ಶುರೆನ್ಸ್‌ಗೆ ರಿಟರ್ನ್ಸ್ ಇದೆ ಎಂಬ ಭರವಸೆ ನೀಡಿ ವಿಮೆ ಮಾರಾಟ ಮಾಡಲಾಗುತ್ತಿದೆ. ಆದರೆ, ಇದು ಶುದ್ಧ ವಿಮೆ ಅಲ್ಲ. ಅಂದರೆ ರೆಗ್ಯುಲರ್ ಟರ್ಮ್ ಇನ್ಶುರೆನ್ಸ್ ಇದಲ್ಲ.
ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿ ಕ್ಲೇಮ್ ಮಾಡದಿದ್ದರೆ ಪ್ರೀಮಿಯಮ್ ಇಳಿಕೆ?: ಪ್ರಾಧಿಕಾರದ ಸುತ್ತೋಲೆಯ ಮುಖ್ಯಾಂಶಗಳು
ಈಗ ಸರಿಯಾದ ಟರ್ಮ್ ಇನ್ಶುರೆನ್ಸ್ ಆರಿಸಿಕೊಳ್ಳುವುದು ಹೇಗೆ ಅಂತ ನೋಡೋಣ. ಮೊದಲು, ನಿಮ್ಮ ಆದಾಯ, ಅಸೆಟ್‌ಗಳು ಮತ್ತು ಹಣಕಾಸಿನ ಜವಾಬ್ದಾರಿಗಳನ್ನು ವಿಶ್ಲೇಷಿಸಿಕೊಳ್ಳಿ. ನಿಮ್ಮ ಹಣಕಾಸಿನ ಜವಾಬ್ದಾರಿಗಳಿಗಿಂತ ಆದಾಯ ಮತ್ತು ಅಸೆಟ್‌ಗಳು ಕಡಿಮೆ ಇದೆ ಎಂದಾದರೆ, ನೀವು ಖಂಡಿತವಾಗಿಯೂ ಟರ್ಮ್ ಇನ್ಶುರೆನ್ಸ್ ಅನ್ನು ಖರೀದಿ ಮಾಡಬೇಕು. ಹಣಕಾಸು ಜವಾಬ್ದಾರಿಗಳು ಎಂದರೆ ಮನೆ ವೆಚ್ಚ, ಸಾಲ, ಮಕ್ಕಳ ಶಿಕ್ಷಣ ಮತ್ತು ನಿವೃತ್ತಿ ಗುರಿಗಳು ಸೇರಿರುತ್ತವೆ. ನೀವು ಇಲ್ಲದಿದ್ದರೆ ನಿಮ್ಮ ಅವಲಂಬಿತರ ಎಲ್ಲ ಅಗತ್ಯಗಳನ್ನೂ ಪೂರೈಸಲು ಟರ್ಮ್ ಇನ್ಶುರೆನ್ಸ್‌ನ ಕವರೇಜ್ ಸಾಕಷ್ಟಿರಬೇಕು. ಹೀಗಾಗಿ, ಲೈಫ್ ಕವರ್ ಅನ್ನು ಆಯ್ಕೆ ಮಾಡುವಾಗ, ಹಣದುಬ್ಬರವನ್ನೂ ಗಮನಿಸಿ. ಇಂದು ಸಾಕು ಎನಿಸಿದ ಹಣ ಮುಂದಿನ ಐದು ವರ್ಷಗಳಿಗೆ ಸಾಲದೇ ಇರಬಹುದು.
ಎಂದಿಗೂ ವಿಶ್ವಾಸಾರ್ಹ ಮತ್ತು ಆರ್ಥಿಕವಾಗಿ ಬಲವಾಗಿರುವ ವಿಮೆ ಕಂಪನಿಯನ್ನೇ ಆಯ್ಕೆ ಮಾಡಿಕೊಳ್ಳಿ. ಕಂಪನಿಯ ಕ್ಲೇಮ್ ಸೆಟಲ್ಮೆಂಟ್ ರೇಶಿಯೋ, ಕ್ಲೇಮ್ ಸೆಟಲ್‌ಮೆಂಟ್‌ನ ವೇಗ ಮತ್ತು ಗ್ರಾಹಕ ಸೇವೆಯನ್ನು ನೋಡಿ. ಟರ್ಮ್ ಇನ್ಶುರೆನ್ಸ್ ಖರೀದಿ ಮಾಡುವುದಕ್ಕೂ ಮೊದಲು, ಟರ್ಮ್‌ಗಳು, ನಿಯಮಗಳನ್ನು ಸರಿಯಾಗಿ ಓದಿಕೊಳ್ಳಿ ಮತ್ತು ಪಾಲಿಸಿ ಡಾಕ್ಯುಮೆಂಟ್‌ನಲ್ಲಿ ಯಾವುದು ಕವರ್ ಆಗಿಲ್ಲ ಎಂದು ನೋಡಿ. ಅನುಮಾನ ಇದ್ದರೆ, ಅದನ್ನು ವಿಮೆ ಕಂಪನಿಯ ಜೊತೆಗೆ ಚರ್ಚೆ ಮಾಡಿ.
ಮಾರ್ಕೆಟ್‌ನಲ್ಲಿ ಹಲವು ಇನ್ಶುರೆನ್ಸ್ ಕಂಪನಿಗಳಿವೆ. ಪ್ರತಿಯೊಂದರಲ್ಲೂ ಪ್ರೀಮಿಯಂ ಮತ್ತು ಪ್ರಯೋಜನಗಳು ಬೇರೆ ಬೇರೆ ಇರುತ್ತವೆ. ಪ್ರೀಮಿಯಂ ಕಡಿಮೆ ಇದೆ ಎಂಬ ಒಂದೇ ಕಾರಣಕ್ಕೆ ಪಾಲಿಸಿ ಆರಿಸಿಕೊಳ್ಳಬೇಡಿ. ಬದಲಿಗೆ, ನೀವು ಪೇ ಮಾಡುತ್ತಿರುವ ಪ್ರೀಮಿಯಂಗೆ ಸರಿಯಾದ ಲೈಫ್ ಕವರ್ ಸಿಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ. ಸರಿಯಾದ ನಿರ್ಧಾರ ಮಾಡಲು ನೀವು ಇನ್ಶೂರೆನ್ಸ್ ಅಗ್ರಿಗೇಟರ್ ವೆಬ್‌ಸೈಟ್‌ಗಳಲ್ಲಿ ಹೋಲಿಕೆ ಮಾಡಬಹುದು.
ಇದನ್ನೂ ಓದಿ: ವಿಮಾ ಪಾಲಿಸಿ ನಿಯಮ ತಪ್ಪದೇ ಓದಿ; ರೋಗದಿಂದ ಸತ್ತರೂ ಹಣ ಕ್ಲೇಮ್ ಅಸಾಧ್ಯವಾಗಬಹುದು
ಹಲವು ಟರ್ಮ್ ಇನ್ಶುರೆನ್ಸ್ ಪ್ಲಾನ್‌ಗಳಲ್ಲಿ ಆಡ್ ಆನ್‌ಗಳು ಅಥವಾ ರೈಡರ್‌ಗಳು ಇರುತ್ತವೆ. ಕ್ರಿಟಿಕಲ್ ಇಲ್‌ನೆಸ್ ಕವರ್, ಆಕ್ಸಿಡೆಂಟಲ್ ಡೆತ್ ಬೆನಿಫಿಟ್, ಆಕ್ಸಿಡೆಂಟಲ್ ಪರ್ಮನೆಂಟ್ ಡಿಸಬಿಲಿಟಿ ಮತ್ತು ಇತರ ರೈಡರ್‌ಗಳಿದ್ದು, ಇವು ನಿಮ್ಮ ಕವರೇಜ್ ಅನ್ನು ಹೆಚ್ಚಿಸಬಲ್ಲದು. ನಿಮ್ಮ ಅಗತ್ಯಗಳನ್ನು ಆಧರಿಸಿ, ರೈಡರ್‌ಗಳನ್ನು ಸೇರಿಸಿಕೊಂಡು ನಿಮ್ಮ ಕವರೇಜ್ ಅನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.
ನಿಮಗೆ ಯಾವುದಾದರೂ ರೋಗ ಇದ್ದರೆ ಅಥವಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ, ಪಾಲಿಸಿ ಖರೀದಿ ಮಾಡುವಾಗ ಅದನ್ನು ಇನ್ಶುರೆನ್ಸ್ ಕಂಪನಿಗೆ ತಿಳಿಸಿಬಿಡಿ. ಧೂಮಪಾನ ಮತ್ತು ಅಲ್ಕೋಹಾಲ್ ಸೇವನೆಯ ಹವ್ಯಾಸದ ಬಗ್ಗೆಯೂ ಮಾಹಿತಿ ನೀಡಿ. ಒಂದು ವೇಳೆ, ಪಾಲಿಸಿ ಸಮಯದಲ್ಲಿ ನೀವು ಧೂಮಪಾನ ಮಾಡುತ್ತಿಲ್ಲದಿದ್ದರೆ ಅಥವಾ ಅಲ್ಕೋಹಾಲ್ ಸೇವನೆ ಮಾಡುತ್ತಿಲ್ಲದಿದ್ದರೆ, ನಂತರ ಈ ಹವ್ಯಾಸ ಶುರು ಮಾಡಿಕೊಂಡಿದ್ದರೆ, ಈ ಬದಲಾವಣೆಯ ಬಗ್ಗೆ ಇನ್ಶುರೆನ್ಸ್ ಕಂಪನಿಗೆ ನೀವು ತಿಳಿಸಬೇಕಾಗುತ್ತದೆ. ನಿಖರವಾದ ಮಾಹಿತಿ ನೀಡದಿದ್ದರೆ, ಇನ್ಶುರೆನ್ಸ್ ಕಂಪನಿ ನಿಮ್ಮ ಕ್ಲೇಮ್ ರಿಜೆಕ್ಟ್ ಮಾಡಬಹುದು.
ಟರ್ಮ್ ಇನ್ಶುರೆನ್ಸ್ ನೀವು ಇಲ್ಲದಿದ್ದಾಗ ನಿಮ್ಮ ಕುಟುಂಬದ ಕಾಳಜಿ ವಹಿಸುತ್ತದೆ. ಹೀಗಾಗಿ, ಇದನ್ನು ಇಟ್ಟುಕೊಳ್ಳುವುದು ಅತ್ಯಂತ ಅಗತ್ಯ. ಈಗ, ಇನ್ನೂ ಕೆಲವು ಸಂಗತಿಗಳನ್ನು ನಾವು ತಿಳಿದುಕೊಳ್ಳೋಣ. ಇನ್ಶುರೆನ್ಸ್ ಖರೀದಿಸಿದ್ದೀರಿ ಎಂದ ಮಾತ್ರಕ್ಕೆ ನೀವು ನಿಮಗೆ ಬೇಕಾದ ಹಾಗೆ ಇರುವಂತಿಲ್ಲ. ಕಾಲ ಸರಿದಂತೆ, ಪರಿಸ್ಥಿತಿ ಬದಲಾಗುತ್ತಲೇ ಇರುತ್ತದೆ. ಹೀಗಾಗಿ, ಆಗಾಗ ನಿಮ್ಮ ಪಾಲಿಸಿಯನ್ನು ನೋಡುತ್ತಿರಬೇಕಾಗುತ್ತದೆ. ನಿಮ್ಮ ಆದಾಯ ಮತ್ತು ಜವಾಬ್ದಾರಿಗಳು ಹೆಚ್ಚಿದ ಹಾಗೆ, ನಿಮ್ಮ ಕವರೇಜ್ ಅನ್ನೂ ನೀವು ಹೆಚ್ಚಳ ಮಾಡುತ್ತಿರಬೇಕಾಗುತ್ತದೆ. ಹೂಡಿಕೆ ಆರಂಭಕ್ಕೂ ಮೊದಲು ಇನ್ಶುರೆನ್ಸ್ ತೆಗೆದುಕೊಳ್ಳಿ. ಟರ್ಮ್ ಇನ್ಶುರೆನ್ಸ್‌ನಲ್ಲಿ ಆದಾಯ ತೆರಿಗೆಯ 80ಸಿ ಅಡಿಯಲ್ಲಿ ತೆರಿಗೆ ಡಿಡಕ್ಷನ್ ಕೂಡಾ ಅಪ್ಲೈ ಆಗುತ್ತದೆ. ಒಂದೂವರೆ ಲಕ್ಷದವರೆಗೆ ಹೂಡಿಕೆಯ ಮೇಲೆ ಡಿಡಕ್ಷನ್ ಕ್ಲೇಮ್ ಮಾಡಿಕೊಳ್ಳಬಹುದು.
(ಮಾಹಿತಿ: ಮನಿ9)
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ