ತೆರಿಗೆ, ಶುಲ್ಕಗಳು ಲಾಭ ತಿಂದುಹಾಕೀತು ಜೋಕೆ; ಷೇರುಪೇಟೆಗೆ ಹೊಸಬರಾಗಿದ್ದರೆ ಈ ಟಿಪ್ಸ್ ತಿಳಿದಿರಿ

|

Updated on: May 22, 2024 | 12:18 PM

Things to remember before starting share trading: ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹೂಡಿಕೆ ಬೆಳೆದರೂ ಅದರಿಂದ ನಿಮಗೆ ಹೆಚ್ಚಿನ ಲಾಭ ಸಿಗದೇ ಹೋಗಬಹುದು. ಇದಕ್ಕೆ ಕಾರಣ ವಿವಿಧ ರೀತಿಯ ಶುಲ್ಕ ಮತ್ತು ತೆರಿಗೆಗಳ ಬಗ್ಗೆ ನಿಮಗೆ ಪೂರ್ವದಲ್ಲೇ ತಿಳಿಯದೇ ಹೋಗುವುದು. ನೀವು ಪ್ರತೀ ಬಾರಿ ಷೇರು ಖರೀದಿಸುವಾಗ ಬ್ರೋಕರ್ ಶುಲ್ಕವನ್ನು ವಿಧಿಸಲಾಗುತ್ತದೆ. ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಷೇರು ಮಾರುವಾಗ ಬ್ರೋಕರ್ ಶುಲ್ಕದ ಜೊತೆಗೆ ದಿನವೊಂದರಲ್ಲಿ ಡೆಪಾಸಿಟರಿ ಶುಲ್ಕ ಕೂಡ ವಿಧಿಸಲಾಗುತ್ತದೆ. ಇದರ ಬಗ್ಗೆ ಅರಿತು ನೀವು ಷೇರು ಟ್ರೇಡಿಂಗ್ ಮಾಡುವುದು ಉತ್ತಮ.

ತೆರಿಗೆ, ಶುಲ್ಕಗಳು ಲಾಭ ತಿಂದುಹಾಕೀತು ಜೋಕೆ; ಷೇರುಪೇಟೆಗೆ ಹೊಸಬರಾಗಿದ್ದರೆ ಈ ಟಿಪ್ಸ್ ತಿಳಿದಿರಿ
ಷೇರು ಮಾರುಕಟ್ಟೆ
Follow us on

ಭಾರತದ ಷೇರು ಮಾರುಕಟ್ಟೆ ಅದ್ವಿತೀಯ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಬಹಳಷ್ಟು ಹೊಸಬರು ಷೇರುಪೇಟೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಹೊಸ ಡೀಮ್ಯಾಟ್ ಖಾತೆಗಳ ಸಂಖ್ಯೆಯಲ್ಲಿ ಏರಿಕೆ ಆಗಿರುವುದು. ಷೇರು ವ್ಯವಹಾರದಿಂದ ಸಖತ್ ಲಾಭ ಗಳಿಸುವುದು ನೀವು ಭಾವಿಸಿದಷ್ಟು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಕಂಪನಿಗಳ ಷೇರುಗಳ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಯುತ್ತದೆ. ಈ ರೀತಿಯ ಷೇರು ಖರೀದಿ, ಮಾರಾಟ ಮಾಡುವುದಕ್ಕೆ ಷೇರ್ ಟ್ರೇಡಿಂಗ್ ಎನ್ನುವುದು. ಇದಕ್ಕೆ ಯಾವುದಾದರೋ ಬ್ರೋಕರ್ ಕಂಪನಿಗಳಲ್ಲಿ ಡೀಮ್ಯಾಟ್ ಅಕೌಂಟ್ ತೆರೆಯುತ್ತೀರಿ. ಎಸ್​ಬಿಐ ಸೆಕ್ಯೂರಿಟೀಸ್, ಎಚ್​ಡಿಎಫ್​ಸಿ ಇತ್ಯಾದಿ ಹಲವು ಸಂಸ್ಥೆಗಳು ಬ್ರೋಕರ್​ಗಳಾಗಿರುತ್ತವೆ. ಇವನ್ನು ಡೆಪಾಸಿಟರಿ ರೆಪೋಸಿಟರೀಸ್ ಎನ್ನುತ್ತಾರೆ. ಝೀರೋಧ ಕೈಟ್, ಪೇಟಿಎಂ ಮನಿ, ಗ್ರೋ ಇತ್ಯಾದಿ ಆ್ಯಪ್ ಆಧಾರಿತ ಡಿಸ್ಕೌಂಟ್ ಬ್ರೋಕರ್​ಗಳಲ್ಲೂ ಡೀಮ್ಯಾಟ್ ಅಕೌಂಟ್ ತೆರೆಯಬಹುದು.

ಡೀಮ್ಯಾಟ್ ಅಕೌಂಟ್ ತೆರೆದ ಮೇಲೆ ನೀವು ಷೇರು ಖರೀದಿಸುವ ಮುನ್ನ ಕೆಲ ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮೊದಲನೆಯದು, ನೀವು ಷೇರುಗಳಲ್ಲಿ ಹೂಡಿಕೆಗೆಂದು ಲಂಪ್ಸಮ್ ಹಣ ಎಷ್ಟು ಇಟ್ಟಿದ್ದೀರಿ ಎಂಬುದು. ದೀರ್ಘಾವಧಿ ಹೂಡಿಕೆ ಮಾಡಬಯಸುತ್ತೀರಾ, ಅಥವಾ ಅಲ್ಪಾವಧಿಗೆ ಲಾಭ ಪಡೆಯಲು ಆಲೋಚಿಸುತ್ತಿರುವಿರಾ ಎಂಬುದು ಎರಡನೆಯದು. ಹಾಗೆಯೇ, ಷೇರು ಖರೀದಿಸಿದಾಗ ಮತ್ತು ಮಾರಿದಾಗ ವಿವಿಧ ಶುಲ್ಕಗಳಿಗೆ ಎಷ್ಟು ಹಣ ಕಡಿತಗೊಳ್ಳುತ್ತದೆ ಎಂಬುದೂ ಗೊತ್ತು ಮಾಡಿಕೊಂಡಿರಬೇಕು.

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳಿಂದ ವರ್ಷದಲ್ಲಿ ಶೇ. 20ರಷ್ಟು ರಿಟರ್ನ್; ಗೋಲ್ಡ್ ಬಾಂಡ್​ಗೂ ಇದಕ್ಕೂ ಏನು ವ್ಯತ್ಯಾಸ

ಯಾವ್ಯಾವ ಶುಲ್ಕಗಳನ್ನು ವಿಧಿಸಲಾಗುತ್ತದೆ?

ನೀವು ಷೇರು ಖರೀದಿಸುವಾಗ ಆರು ರೀತಿಯ ಶುಲ್ಕ ಮತ್ತು ತೆರಿಗೆಗಳು ಅನ್ವಯ ಆಗುತ್ತವೆ.

  1. ಬ್ರೋಕರ್ ಶುಲ್ಕ
  2. ಎಸ್​ಟಿಟಿ- ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್
  3. ಇಟಿಟಿ- ಎಕ್ಸ್​ಚೇಂಜ್ ಟ್ರಾನ್ಸಾಕ್ಷನ್ ಟ್ಯಾಕ್ಸ್
  4. ಜಿಎಸ್​ಟಿ ತೆರಿಗೆ
  5. ಸೆಬಿ ಟರ್ನೋವರ್ ಫೀ
  6. ಸ್ಟ್ಯಾಂಪ್ ಡ್ಯೂಟಿ

ಇಲ್ಲಿ ನೀವು ಒಂದು ಷೇರು ಖರೀದಿಸಿ, ಅಥವಾ ಲಕ್ಷ ಷೇರು ಖರೀದಿಸಿ, ಇಪತ್ತು ರುಪಾಯಿ ಬ್ರೋಕರ್ ಫೀ ಕಟ್ಟಲೇಬೇಕು. ಇದು ಬಹಳ ಮುಖ್ಯ. ನೀವು ಷೇರು ಮಾರುವಾಗ ಡೆಪಾಸಿಟರಿ ಸಂಸ್ಥೆಗಳಿಂದ 13.5 ರೂ ಶುಲ್ಕ ಅನ್ವಯ ಆಗುತ್ತದೆ. ಜೊತೆಗೆ ಬ್ರೋಕರ್ ಶುಲ್ಕವೂ ಅನ್ವಯ ಆಗುತ್ತದೆ. ಈ ವಿಚಾರವೂ ಬಹಳ ಮುಖ್ಯ. ಬೇರೆ ತೆರಿಗೆ ಮತ್ತು ಶುಲ್ಕಗಳನ್ನು ನೀವು ನಿರ್ಲಕ್ಷಿಸಬಹುದು. ಬ್ರೋಕರ್ ಶುಲ್ಕ ವಿಚಾರ ಯಾವಾಗಲೂ ನೆನಪಿನಲ್ಲಿರಲಿ. ಅಲ್ಪಮೊತ್ತದ ಹೂಡಿಕೆಯನ್ನು ಬೇರೆ ಬೇರೆ ಷೇರುಗಳಿಗೆ ಹಂಚಿಕೆ ಮಾಡಿದಾಗ ನಿಮಗೆ ಹೆಚ್ಚಿನ ಹೊರೆಯಾಗುತ್ತದೆ. ಸಾಧ್ಯವಾದಷ್ಟೂ ಕಡಿಮೆ ಕಂಪನಿಯ ಷೇರುಗಳನ್ನು ಆಯ್ದುಕೊಂಡು ಹೂಡಿಕೆ ಮಾಡಿ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಡೀಮ್ಯಾಟ್ ಅಕೌಂಟ್​ಗಳನ್ನು ಹೊಂದಿರಬಹುದಾ? ಅನುಕೂಲ, ಅನನುಕೂಲಗಳೇನು?

ಲಂಪ್ಸಮ್ ಇದ್ದರೆ ಷೇರಿಗೆ ಹಾಕಿ, ಇಲ್ಲದಿದ್ದರೆ ಮ್ಯೂಚುವಲ್ ಫಂಡ್

ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಯುವುದು ಬೆಳಗ್ಗೆ 9:15ರಿಂದ ಮಧ್ಯಾಹ್ನ 3:30ರವರೆಗೆ. ನೀವು ಇಂಟ್ರಾಡೇ ಟ್ರೇಡಿಂಗ್ ಮಾಡುವುದಿದ್ದರೆ ಇಷ್ಟೂ ಸಮಯ ನೀವು ನಿರತರಾಗಿರಬೇಕು. ಇಲ್ಲದಿದ್ದರೆ ನೀವು ದೀರ್ಘಾವಧಿಗೆಂದು ಷೇರುಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ. ಒಂದಷ್ಟು ದಿನ ಕಂಪನಿಗಳ ಸಂಶೋಧನೆ ನಡೆಸಿ ಮುಂದಿನ ಐದು ಅಥವಾ ಹತ್ತು ವರ್ಷದಲ್ಲಿ ಯಾವೆಲ್ಲಾ ಕ್ಷೇತ್ರಗಳು ಬೆಳವಣಿಗೆ ಹೊಂದಬಹುದು, ಆ ಕ್ಷೇತ್ರದಲ್ಲಿ ಯಾವೆಲ್ಲಾ ಕಂಪನಿಗಳ ಪರಿಸ್ಥಿತಿ ಉತ್ತಮವಾಗಿದೆ ಎಂಬುದನ್ನು ಅವಲೋಕಿಸಿ ಐದಾರು ಕಂಪನಿಗಳನ್ನು ಆಯ್ದುಕೊಂಡು ಹೂಡಿಕೆ ಮಾಡಿರಿ. ಮಾರುಕಟ್ಟೆ ಏರಿಳಿತಕ್ಕೆ ಚಿಂತಿಸದಿರಿ.

ನಿಮ್ಮಲ್ಲಿ ಲಂಪ್ಸಮ್ ಹಣ ಇಲ್ಲ, ಷೇರುಗಳನ್ನು ಆಯ್ದುಕೊಳ್ಳಲು ಕಷ್ಟವಾಗುತ್ತದೆ ಎಂದನಿಸಿದರೆ ಮ್ಯೂಚುವಲ್ ಫಂಡ್ ಇದ್ದೇ ಇದೆ. ಕಳೆದ ಐದಾರು ವರ್ಷಗಳಲ್ಲಿ ಮ್ಯೂಚುವಲ್ ಫಂಡ್​ಗಳು ಶೇ. 10ರಿಂದ 40ರಷ್ಟು ಲಾಭ ತಂದಿವೆ. ಮ್ಯೂಚುವಲ್ ಫಂಡ್​ನಲ್ಲೂ ವಿವಿಧ ಶುಲ್ಕಗಳು ಇರುತ್ತವೆ. ಶೇ. 12 ಅಥವಾ ಅದಕ್ಕಿಂತ ಹೆಚ್ಚು ಲಾಭ ತರುವ ಫಂಡ್​ಗಳಿದ್ದರೆ ನಿಮಗೆ ಒಳ್ಳೆಯ ಆದಾಯ ಸಿಕ್ಕಂತಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ